ಎಷ್ಟು ತೀವ್ರವಾದ ಬಯಕೆಯನ್ನು ಹೊಂದಿ ಎಂದರೆ ಆ ಬಯಕೆಯ ಬೆಂಕಿಯೇ ನಿಮ್ಮನ್ನು ಸಂಪೂರ್ಣವಾಗಿ ಸುಟ್ಟು ನಾಶಮಾಡಿಬಿಡಬೇಕು, ಮತ್ತು ಏನೂ ಉಳಿದುಕೊಳ್ಳಬಾರದು ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಬಣ್ಣ ಕಾರಣ ಕಣ್ಣ ಕುರುಡಿಗೆ
ಕಿವಿಯ ಕಿವುಡಿಗೆ ಶಬ್ದವು.
ಸ್ವಾದ, ಪರಿಮಳ, ರುಚಿಗೆ ಕಂಟಕ
ಹೊಳಹು ಬುದ್ಧಿಗೆ ವೈರಿಯು.
ಜೂಜು, ಬೇಟೆ, ಮನದ ಸೊಕ್ಕು
ಬಯಕೆ, ಭಯಕೆ ಬೀಜವು.
ಕಣ್ಣು ಕಂಡ ಬೆರಗ ಸೋಸಿ
ಚೆಲುವ ಬಸಿಯಿತು ಮಮತೆಯು
ಬೆಳಕ ಕಳಚಿ ಇರುಳ ರಮಿಸಿ
ಸಂತ ಜಗಕೆ ತಾಯಿಯು.
~ ಲಾವೋತ್ಸೇ
ಬಯಕೆಗೆ ಎರಡು ರೂಪ ಇರಬಹುದು : ನೀವು ಒಂದು ಸಂಗತಿಯನ್ನು ಬಯಸಬಹುದು ಆದರೆ ಅದರಿಂದ ಯಾವತ್ತೂ ದೂರವಾಗಿರುತ್ತ. ನೀವು ಆ ಬಯಕೆಯನ್ನು ಡ್ರಾಪ್ ಮಾಡಬಹುದು ಅಥವಾ ಪೂರ್ಣ ಮಾಡಿಕೊಳ್ಳಬಹುದು ಆದರೆ ಯಾವತ್ತೂ ಅದರಿಂದ ಪ್ರತ್ಯೇಕವಾಗಿರುತ್ತ. ಬಯಕೆ ಪೂರ್ಣಗೊಳ್ಳದಿದ್ದಾಗ ನೀವು ಹತಾಶರಾಗುತ್ತೀರಿ, ಆದರೆ ನೀವು ಬಯಕೆಗೆ ಅಂಟಿಕೊಳ್ಳದಿರುವುದರಿಂದ, ಈ ಬಯಕೆ ಕೇವಲ ಆಕಸ್ಮಿಕ ಮಾತ್ರ.
“ಅಭೀಪ್ಸೆ” ಎಂದರೆ ಬಯಕೆ ಈಗ ನಿಮ್ಮ ಆತ್ಮದ ಭಾಗವಾಗಿದೆ. ಅದನ್ನು ಡ್ರಾಪ್ ಮಾಡುವುದು ನಿಮಗೆ ಸಾಧ್ಯವಾಗುವುದಿಲ್ಲ. ನೀವು ಹಾಗೆನಾದರೂ ಮಾಡುವ ಪ್ರಯತ್ನ ಮಾಡಿದಿರಾದರೆ ನೀವು ಅದರಲ್ಲಿಯೇ ಮುಳುಗಿಹೋಗುತ್ತೀರಿ. ಅದು ನಿಮ್ಮ ಅಸ್ತಿತ್ವದ ಭಾಗವಾದಾಗ, ಬಯಕೆಯಿಂದ ಸೆಪರೇಟ್ ಆಗುವುದು ನಿಮಗೆ ಸಾಧ್ಯವಾಗುವುದಿಲ್ಲ. ಆಗ ಅದಕ್ಕೆ ಒಂದು ಅಪೂರ್ವವಾದ ಚೆಲುವು ಪ್ರಾಪ್ತವಾಗುತ್ತದೆ. ಆಗ ಅದು ಹೊಸ ಆಯಾಮವನ್ನು ಧರಿಸಿ ಕಾಲಾತೀತವನ್ನು ಪ್ರವೇಶ ಮಾಡುತ್ತದೆ.
ಒಂದು ದಿನ ರಾಬಿಯಾ ಬಸ್ರಾದ ರಸ್ತೆಯಲ್ಲಿ, ಒಂದು ಕೈಯಲ್ಲಿ ಬೆಂಕಿಯ ಪಂಜು ಮತ್ತು ಇನ್ನೊಂದು ಕೈಯಲ್ಲಿ ನೀರಿನ ಬಿಂದಿಗೆ ಹಿಡಿದುಕೊಂಡು ಓಡುತ್ತಿದ್ದಳು.
“ಯಾಕೆ ಹೀಗೆ ಓಡುತ್ತಿದ್ದೀಯ ರಾಬಿಯಾ ಏನದು ನಿನ್ನ ಕೈಯಲ್ಲಿ? “
ದಾರಿಹೋಕರು ಪ್ರಶ್ನೆ ಮಾಡಿದಾಗ, ಉತ್ತರಿಸಿದಳು ರಾಬಿಯಾ,
“ ನಾನು ನರಕದ ವಿಷಮ ಜ್ವಾಲೆಗಳನ್ನು ಆರಿಸಬೇಕು, ಸ್ವರ್ಗದ ಎಲ್ಲ ಐಷಾರಾಮಕ್ಕೆ ಬೆಂಕಿ ಹಚ್ಚಬೇಕು. ಅವು ನಾನು ಅಲ್ಲಾಹ್ ನ ಬಳಿ ಹೋಗುವ ದಾರಿಯನ್ನ ಮುಚ್ಚಿಹಾಕಿವೆ. ನಾನು ನರಕದ ಭಯದಿಂದಾಗಿ ಅಥವಾ ಸ್ವರ್ಗದ ಬಯಕೆಗಾಗಿ ಅಲ್ಲಾಹ್ ನನ್ನು ಆರಾಧಿಸುವುದಿಲ್ಲ. ನನ್ನ ಆರಾಧನೆ ಕೇವಲ ಅಲ್ಲಾಹ್ ನ ಪ್ರೇಮದ ಕಾರಣವಾಗಿ.

