ಒಳಗುದಿ ( Inner anger ): ಓಶೋ 365 #Day 336

ಒಂದು ಬಗೆಯ ಕೋಪವನ್ನು ಅರ್ಥ ಮಾಡಿಕೊಳ್ಳಬಹುದು, ಏಕೆಂದರೆ ಅದು ಜನರಿಗೆ, ಸಂದರ್ಭಗಳಿಗೆ ಸಂಬಂಧಿಸಿದ್ದು. ಆದರೆ ಯಾವಾಗ ಈ ಕೋಪದ ತೋರಿಕೆಯ ಪದರವನ್ನು ನಾವು ಕಿತ್ತು ಆಚೆ ಎಸೆಯುತ್ತೇವೆಯೋ, ಆಗ ನಾವು ಥಟ್ಟನೇ ಕೋಪದ ಮೂಲ ಸ್ರೋತವನ್ನು ತಲುಪುತ್ತೇವೆ, ಅದು ಹೊರಗಿನ ಯಾವ ಸಂಗತಿಗೂ ಸಂಬಂಧಿಸಿದ್ದಲ್ಲ, ಅದು ಸರಳವಾಗಿ ನಿಮ್ಮದೇ ಒಂದು ಭಾಗ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ


    ನಿಜದ ಮನುಷ್ಯರು ಬಲ್ಲ
    ರಸವಿದ್ಯೆಯ ಬಗ್ಗೆ ಗಮನ ಹರಿಸು.
    ನಿನಗೆ ದಯಪಾಲಿಸಲಾಗಿರುವ ಕಷ್ಟಗಳನ್ನು
    ಒಮ್ಮೆ ಒಪ್ಪಿಕೊಂಡುಬಿಟ್ಟೆಯಾದರೆ
    ಹೊಸ ಬಾಗಿಲೊಂದು
    ತೆರೆದುಕೊಳ್ಳುತ್ತದೆ ತಾನೇ ತಾನಾಗಿ .

    ಕಠಿಣ ಪರಿಸ್ಥಿತಿಗಳನ್ನು,
    ಪರಿಚಿತ ಗೆಳೆಯನೊಬ್ಬನನು ಅಪ್ಪಿಕೊಳ್ಳುವಂತೆ
    ಸ್ವಾಗತಿಸು ತೋಳು ಚಾಚಿ,
    ಅವನು ತನ್ನ ಜೊತೆಗೆ ತಂದ ಯಾತನೆಗಳ
    ಪಕ್ಕೆ ಹಿಂಡಿ ತಮಾಷೆ ಮಾಡು.

    ದುಃಖಗಳು,
    ಚಿಂದಿ ಬಟ್ಟೆಯ ಕೌದಿಯ ಹಾಗೆ
    ಕಳಚಿಟ್ಟು ಬಿಡಬೇಕು ಬೇಕಾದಾಗ ಹೊದ್ದು.

    ಈ ಕಳಚುವಿಕೆ ಮತ್ತು
    ಅದರ ಕೆಳಗಿನ ಬೆತ್ತಲೆ ದೇಹಗಳೇ
    ಸಂಕಟದ ನಂತರ
    ಒದಗಿ ಬರುವ ಅಮೃತದ ಹನಿಗಳು

    ~ ರೂಮಿ

    ಕೆಲವು ಒತ್ತಡದ ಪ್ರಸಂಗಗಳಲ್ಲಿ ಮಾತ್ರ ನಮಗೆ ಕೋಪ ಬರುತ್ತದೆ ಎನ್ನುವುದನ್ನು ನಮಗೆ ಕಲಿಸಲಾಗಿದೆ. ಇದು ನಿಜವಲ್ಲ, ಹುಟ್ಟಿನಿಂದಲೇ ಕೋಪ ನಮ್ಮೊಂದಿಗಿದೆ, ಇದು ನಮ್ಮ ಭಾಗ. ಕೆಲವು ಸನ್ನಿವೇಶಗಳಲ್ಲಿ ಇದು ಹೊರಬರುತ್ತದೆ ಮತ್ತು ಕೆಲವು ಪ್ರಸಂಗಗಳಲ್ಲಿ ಕ್ರಿಯಾಶೀಲವಾಗಿರುವುದಿಲ್ಲ, ಆದರೆ ಅದು ನಮ್ಮೊಳಗೆ ಇರುವುದು ಮಾತ್ರ ನಿಜ.

    ಆದ್ದರಿಂದ ನಾವು ಈ ಸಂಬಂಧಿತ ಕೋಪವನ್ನು ಮೊದಲು ಡ್ರಾಪ್ ಮಾಡಬೇಕು, ಆಗ ನಾವು ಕೋಪದ ಮೂಲ ಸ್ರೋತವನ್ನು ತಲುಪುತ್ತೇವೆ, ಇದು ಯಾರಿಗೂ ಸಂಬಂಧಿತವಾದದ್ದಲ್ಲ, ಇದು ಹುಟ್ಟಿನೊಂದಿಗೆಯೇ ನಮ್ಮ ಜೊತೆ ಇರುವಂಥದು. ಇದನ್ನು ಯಾವತ್ತೂ ಮುಟ್ಟಿ ಮಾತನಾಡಿಸಲಾಗಿಲ್ಲ ಆದ್ದರಿಂದಲೇ ಇದನ್ನು ಅರ್ಥ ಮಾಡಿಕೊಳ್ಳುವುದು ಕಠಿಣ. ಸುಮ್ಮನೇ ಇದನ್ನು ಎತ್ತಿ ಬಿಸಾಕಿ, ಯಾರ ಮೇಲೂ ಅಲ್ಲ, ನಿಮ್ಮ ಹಾಸಿಗೆಯ ಮೇಲೆ, ಆಕಾಶದ ಮೇಲೆ, ದೇವರ ಮೇಲೆ, ನನ್ನ ಮೇಲೆ.

    ಪ್ರತೀ ಭಾವನೆಯೊಂದಿಗೂ ಹೀಗಾಗುತ್ತದೆ. ಪ್ರೀತಿಯ ಒಂದು ಭಾಗ ಇನ್ನೊಬ್ಬರಿಗೆ ಸಂಬಂಧಿಸಿದ್ದು. ಆಳವಾಗಿ ನೀವು ಪ್ರೀತಿಯನ್ನು ಪ್ರವೇಶಿಸಿದಾಗ, ಒಂದು ದಿನ ನೀವು ಪ್ರೀತಿಯ ಮೂಲ ಸ್ರೋತವನ್ನು ಯಾವುದನ್ನು ಇನ್ನೂ ಮುಟ್ಟಿ ಮಾತನಾಡಿಸಲಾಗಿಲ್ಲವೋ ಅದನ್ನು ತಲುಪುತ್ತೀರಿ. ಇದು ಯಾರ ಬಳಿಯೂ ಚಲಿಸುತ್ತಿಲ್ಲ, ಇದು ಸುಮ್ಮನೇ ನಿಮ್ಮ ಒಳಗೆ ಇದೆ ಅಷ್ಟೇ. ಎಲ್ಲ ಭಾವನೆಗಳ ವಿಷಯದಲ್ಲೂ ಇದು ನಿಜ, ಪ್ರತಿಯೊಂದಕ್ಕೂ ಎರಡು ಬದಿಗಳಿವೆ.

    ಒಂದು ಬದಿ, ನಿಮ್ಮ ಒಳೆಗೆ ಅಪ್ರಜ್ಞೆಯ ಸ್ಥಿತಿಯಲ್ಲಿ ಇರುವಂಥದು ಮತ್ತು ಆ ಆಳ ಪರದೆಯ ತೋರಿಕೆಯ ಬದಿ ಸಂಬಂಧಗಳಲ್ಲಿ ಕಾರ್ಯತತ್ಪರವಾಗಿರುವಂಥದು. ತೋರಿಕೆಯ ಮೇಲೆ ಅವಲಂಬಿತರಾಗಿರುವ ಜನ ತಮ್ಮ ಒಳಗಿನ ನಿಧಿಯನ್ನು ಸಂಪೂರ್ಣವಾಗಿ ಮರೆತುಬಿಡುತ್ತಾರೆ. ಯಾವಾಗ ನೀವು ಒಳಗಿನ ಕೋಪವನ್ನು ಕಿತ್ತು ಬಿಸಾಕುತ್ತೀರೋ ಆಗ ನೀವು ಒಳಗಿನ ಪ್ರೇಮದ ಜೊತೆ, ಒಳಗಿನ ಅಂತಃಕರಣದ ಜೊತೆ ಮುಖಾಮುಖಿಯಾಗುತ್ತೀರ. ಒಳಗಿನ ಕಸವನ್ನು ಕಿತ್ತು ಆಚೆ ಎಸೆದಾಗ ಮಾತ್ರ ನೀವು ಒಳಗಿನ ಬಂಗಾರದ ಸಂಪರ್ಕಕ್ಕೆ ಬರುತ್ತೀರ.

    ಒಮ್ಮೆ ಝೆನ್ ಮಾಸ್ಟರ್ ಬೋಕುಜು ಒಂದು ಊರಿನ ರಸ್ತೆಯಲ್ಲಿ ಹಾಯ್ದು ಹೋಗುವಾಗ ಅಚಾನಕ್ ಆಗಿ ಆಕ್ರಮಣ ಮಾಡಿದ ಮನುಷ್ಯನೊಬ್ಬ ಬಡಿಗೆಯಿಂದ ಮಾಸ್ಟರ್ ಮೇಲೆ ಪ್ರಹಾರ ಮಾಡಿದ. ಧಿಡೀರ್ ನೇ ನಡೆದ ಈ ಘಟನೆಯಿಂದ ಗಾಯಗೊಂಡ ಮಾಸ್ಟರ್ ಬೋಕುಜು ಕೆಳಗೆ ಬಿದ್ದ, ಬಡಿಗೆ ಕೂಡ ಆ ಮನುಷ್ಯನ ಕೈ ಜಾರಿ ಕೆಳೆಗೆ ಬಿದ್ದಿತು. ಸುತ್ತ ಜನ ಸೇರತೊಡಗಿದ್ದರಿಂದ ಆ ಮನುಷ್ಯ ಬಡಿಗೆಯನ್ನು ಅಲ್ಲೇ ಬಿಟ್ಟು ಓಡತೊಡಗಿದ.

    ಸಾವರಿಸಿಕೊಂಡು ಎದ್ದ ಬೋಕುಜು ಆ ಮನುಷ್ಯನ ಹಿಂದೆ ಬಡಗಿ ಹಿಡಿದುಕೊಂಡು ಕೂಗುತ್ತ ಓಡತೊಡಗಿದ, “ನಿಲ್ಲು ಓಡಬೇಡ, ನಿನ್ನ ಬಡಿಗೆ ತೆಗೆದುಕೋ “ಕೊನೆಗೂ ಬೋಕುಜು ಆ ಮನುಷ್ಯನನ್ನು ಹಿಡಿದ ಮತ್ತು ಬಡಿಗೆಯನ್ನು ಅವನ ಕೈಗೆ ಕೊಟ್ಟ.“

    ಈ ಘಟನೆಯನ್ನ ಆಶ್ಚರ್ಯದಿಂದ ನೋಡುತ್ತಿದ್ದ ಜನ, ಬೋಕುಜುನ ಸುತ್ತುವರೆದರು, “ಆ ಮನುಷ್ಯ ನಿನಗೆ ಎಷ್ಟು ಜೋರಾಗಿ ಹೊಡೆದ ಆದರೆ ನೀನು ಅವನ ಮೇಲೆ ಕೋಪ ಮಾಡಿಕೊಳ್ಳಲಿಲ್ಲ, ಯಾಕೆ ? “

    ಬೋಕುಜು ಉತ್ತರಿಸಿದ, “ ಅವನು ನನಗೆ ಹೊಡೆದ ಇದು ಮಾತ್ರ ನಿಜ. ಅವನು ಹೊಡೆದವ, ನಾನು ಹೊಡೆಸಿಕೊಂಡವ ಅಷ್ಟೇ. ಇದು ಹೇಗೆಂದರೆ ನೀವು ಕಾಡಿನಲ್ಲಿ ಹಾಯ್ದು ಹೋಗುವಾಗ ಮರದ ಕೊಂಬೆಯೊಂದು ಮುರಿದುಕೊಂಡು ನಿಮ್ಮ ಮೇಲೆ ಬೀಳುವಂತೆ. ಇದು ಅಷ್ಟೇ ಸಹಜ ಘಟನೆ. ಇದಕ್ಕೆ ಅಂಥ ಮಹತ್ವ ಏನಿಲ್ಲ. “

    ಆದರೆ ಜನರಿಗೆ ಬೋಕುಜುನ ಸಮಜಾಯಿಷಿ ಒಪ್ಪಿಗೆಯಾಗಲಿಲ್ಲ,

    “ ಆದರೆ ಮಾಸ್ಚರ್, ಮರದ ಕೊಂಬೆ ಮತ್ತು ಮನುಷ್ಯ ಬೇರೆ ಬೇರೆ ಅಲ್ಲವೆ ? ಮರದ ಕೊಂಬೆಗೆ ಬುದ್ಧಿ ಮನಸ್ಸುಗಳಿಲ್ಲ ಹಾಗಾಗಿ ನಾವು ಅದಕ್ಕೆ ಶಿಕ್ಷೆ ಕೊಡುವುದು ತರವಲ್ಲ, ಆದರೆ ಮನುಷ್ಯ ಆಲೋಚನೆ ಮಾಡಬಲ್ಲವನು. ಆ ಮನುಷ್ಯ ನಿನ್ನ ಮೇಲೆ ಮಾಡಿದ ಆಕ್ರಮಣ ಬುದ್ಧಿ ಪ್ರೇರಿತವಾದದ್ದು. “

    “ ಆದರೆ ನನಗೆ, ಈ ಮನುಷ್ಯನೂ ಮರದ ಕೊಂಬೆಯಂತೆ ಅವನಿಗೆ ಬುದ್ಧಿ ಮನಸ್ಸುಗಳಿದ್ದಾಗ್ಯೂ ಅವು ನಿಷ್ಕ್ರೀಯವಾದಂತಿವೆ. ಅವ ನನ್ನ ಮೇಲೆ ಥೇಟ್ ಮರದ ಕೊಂಬೆಯಂತೆ ಮುರಿದುಕೊಂಡು ಬಿದ್ದಿದ್ದಾನೆ , ಹಾಗಾಗಿ ಅವನಿಗೆ ಶಿಕ್ಷೆಕೊಡುವುದು ನನಗೆ ಆಗದು. ಈಗ ಆಗಿ ಹೋಗಿರುವುದಕ್ಕೆ ಅರ್ಥ ಹಚ್ಚುತ್ತ ಕೂಡುವುದು ನನ್ನಿಂದಾಗದು. “

    ಮಾಸ್ಟರ್ ಬೋಕುಜು ಸುತ್ತ ಸೇರಿದ ಜನರಿಗೆ ಸಮಾಧಾನ ಹೇಳಿದ.


    Unknown's avatar

    About ಅರಳಿ ಮರ

    ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

    Leave a Reply

    This site uses Akismet to reduce spam. Learn how your comment data is processed.