ವಚನ ವೈವಿಧ್ಯ#7 : ಯಾಕೆ ಇದನ್ನೆಲ್ಲ ಕಲಿಸಲಿಲ್ಲ-ಮೋಳಿಗೆ ಮಾರಯ್ಯ

ಕೆಡುಕು-ಒಳಿತು ಅನ್ನುವ ವ್ಯತ್ಯಾಸವನ್ನು ಕಲಿಯಬೇಕಾದದ್ದು, ಒಳಿತನ್ನು ಬೆಳೆಸಿಕೊಳ್ಳಬೇಕಾದದ್ದು ಮನುಷ್ಯರದೇ ಹೊಣೆ ಎನ್ನುವಂತಿದೆ ಈ ವಚನ । ಓ.ಎಲ್.ನಾಗಭೂಷಣ ಸ್ವಾಮಿ

ಕಚ್ಚುವ ಹಾವ ಹಿಡಿವುದಕ್ಕೆ ಗಾರುಡವ ಕಲಿಸಿದುದಿಲ್ಲ
ಕುತ್ತುವ ಹಸುವಿನ ಕೊಂಬ ಹಿಡಿಯ ಕಲಿಸಿದುದಿಲ್ಲ
ಇದು ನಿನಗೆ ದಿಂಡೆಯತನವೊ ನಿರಂಗ ನಿಃಕಳಂಕ ಮಲ್ಲಿಕಾರ್ಜುನಾ (ಸಂ.೮, ವ.೧೬೨೧)

[ಗಾರುಡ-ಹಾವಿನ ವಿಷವನ್ನು ಇಲ್ಲವಾಗಿಸುವ ಗರುಡ ಮಂತ್ರ, ದಿಂಡೆ-ಬಂಡೆ, ಮರದ ಬೊಡ್ಡೆ, ರೂಕ್ಷತೆ, ತುಂಟತನ; ನಿರಂಗ-ದೇಹವಿರದ]

ಮನುಷ್ಯನನ್ನು ದೇವರೇ ಸೃಷ್ಟಿಮಾಡಿದ ಎಂದುಕೊಂಡರೆ,  ಅವನು ಏನೇನನ್ನೂ ಕಲಿಸದೆ ನಮ್ಮನ್ನೆಲ್ಲ ಸೃಷ್ಟಿಮಾಡಿ ಭೂಮಿಗೆ ಕಳುಹಿಸಿಬಿಟ್ಟಿದ್ದಾನೆ. ಕಚ್ಚಲು ಬರುವ ಹಾವನ್ನು ಪಳಗಿಸಲು ಗರುಡ ಮಂತ್ರವನ್ನು ಮನುಷ್ಯರಿಗೆ ಕಲಿಸಲಿಲ್ಲ, ತಿವಿಯಲು ಬರುವ ಹಸುವಿನ ಕೊಂಬು ಹಿಡಿದು ಬಗ್ಗಿಸಲು ಕಲಿಸಲಿಲ್ಲ. ಹೀಗೆ ಬದುಕಲು ಅಗತ್ಯವಾದ ವಿದ್ಯೆ ಕಲಿಸದೆ ಇದ್ದದ್ದು ದೇವರ ದಿಂಡಿಗತನವೋ?

ದಿಣ್ಡೆ ಎಂಬ ಮಾತಿಗೆ ಬಂಡೆ, ಮರದ ಬೊಡ್ಡೆ ಅನ್ನುವ ಅರ್ಥಗಳಲ್ಲದೆ ರೂಕ್ಷತೆ, ತುಂಟತನ ಅನ್ನುವ ಅರ್ಥಗಳೂ ಇವೆ. ಕೇಡಿನಿಂದ ಪಾರಾಗುವುದು, ಕೇಡನ್ನು ಪಳಗಿಸುವುದು ಇದೇ ನಾವು ಕಲಿಯಬೇಕಾದದ್ದು, ದೇವರು ನಮಗೆ ಕಲಿಸದೆ ಇರುವುದು! ದೇವರು ನಿರಂಗ, ದೇಹವಿಲ್ಲದವನು. ಸಾವಿಲ್ಲದ, ಕೇಡಿಲ್ಲದ, ರೂಪವಿರದ ಶಕ್ತಿ. ಅಥವಾ ಅವನು ಬಂಡೆಯಂತೆ ಇರುವವನು. ಅವನಿಗೆ ಒಳಿತು, ಕೆಡುಕು ಎರಡೂ ಇಲ್ಲ. ಕಲಿಸಬೇಕಾದುದನ್ನು ಕಲಿಸದೆ, ನೀವೇ ಕಲಿತುಕೊಳ್ಳಿ ಎಂದು ನಮ್ಮ ಪಾಡಿಗೆ ನಮ್ಮನ್ನು ಬಿಟ್ಟು ತುಂಟನಂತೆ ಸುಮ್ಮನೆ ಇದ್ದಾನೆ.  ಸೃಷ್ಟಿಯಲ್ಲಿ ಒಳಿತು ಕೆಡುಕು ಎರಡೂ ಇಲ್ಲ. ನಿಸರ್ಗವೂ ನಿರ್ಗುಣವಾದದ್ದು. ವಿಷ, ತಿವಿಯುವ ಕೊಂಬು ಇವು ಹಾವಿಗೆ, ಗೂಳಿಗೆ ಸಹಜ, ಮತ್ತು ಅಗತ್ಯ. ಕೆಡುಕು-ಒಳಿತು ಅನ್ನುವ ವ್ಯತ್ಯಾಸವನ್ನು ಕಲಿಯಬೇಕಾದದ್ದು, ಒಳಿತನ್ನು ಬೆಳೆಸಿಕೊಳ್ಳಬೇಕಾದದ್ದು ಮನುಷ್ಯರದೇ ಹೊಣೆ ಎನ್ನುವಂತಿದೆ ಈ ವಚನ.


ಮೋಳಿಗೆ ಮಾರಯ್ಯ

ಮೋಳಿಗೆ ಎಂದರೆ ಕಟ್ಟಿಗೆಯ ಹೊರೆ ಎಂಬ ವಿವರಣೆ ದೊರೆಯುತ್ತದೆ. ೮೨೦ ವಚನಗಳು ದೊರೆತಿವೆ. ವಚನಾಂಕಿತ- ನಿಃಕಳಂಕ ಮಲ್ಲಿಕಾರ್ಜುನ. ಮಾರಯ್ಯನವರು ಕಲ್ಯಾಣಕ್ಕೆ ವಲಸೆ ಬಂದ ಕಾಶ್ಮೀರ ಪ್ರಾಂತದ ಅರಸರೆಂಬ ಐತಿಹ್ಯವಿದೆ. ಅವರ ಹೆಸರು, ಮತ್ತು ಅರಸುತನ ಕುರಿತ ಶಾಸನಾಧಾರಗಳು ಇದ್ದಂತಿಲ್ಲ. ಕನ್ನಡದ ವಾಕ್ಯ ರಚನೆಯ ವಿಶಿಷ್ಟ ಬಳಕೆಯನ್ನು ಇವರ ವಚನಗಳಲ್ಲಿ ಕಾಣಬಹುದು.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.