ತಂದೆ ತಾಯಿ ( Parenthood): ಓಶೋ 365 #Day 337

ನೀವು ನಿಮ್ಮ ತಂದೆ ತಾಯಿ ನಿಮ್ಮ ಮೇಲೆ ಹೊರೆಸಿದ ವಿಧಾನವನ್ನೇ ಫಾಲೋ ಮಾಡುತ್ತೀರಿ. ಇದು ಸಮಸ್ಯೆ ಆದರೆ ಇದನ್ನು ನಾವು ಗಮನಿಸುವುದೇ ಇಲ್ಲ: ನೀವು ನಿಮ್ಮ ತಂದೆ ತಾಯಿಯನ್ನ ಸಹಿಸಿಕೊಳ್ಳುವುದಿಲ್ಲವಾದರೂ ಅವರ ವಿಧಾನವನ್ನೇ ಫಾಲೋ ಮಾಡುತ್ತೀರಿ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ


ಸೂಲಗಿತ್ತಿಗೆ ಚೆನ್ನಾಗಿ ಗೊತ್ತು.
ಹೆರಿಗೆ ಬೇನೆ ಶುರುವಾಗದ ಹೊರತು
ಮಗು ಹೊರ ಬರುವ ದಾರಿ
ಪೂರ್ತಿಯಾಗಿ ತೆರೆದುಕೊಳ್ಳುವುದಿಲ್ಲ
ಮತ್ತು ತಾಯಿ, ಮಗುವಿಗೆ ಜನ್ಮ ನೀಡುವುದು
ಸಾಧ್ಯವಾಗುವುದಿಲ್ಲ.

ಪ್ರತೀ ಹೊಸ ಹುಟ್ಟಿನ ದಾರಿ
ಯಾತನೆ ಮತ್ತು ಸಂಕಷ್ಟಗಳ ಮೂಲಕವೇ,
ಹೇಗೆ ಗಟ್ಟಿಯಾಗಲು ಮಡಿಕೆ
ಬೆಂಕಿಯ ಶಾಖ ಹಾಯ್ದು ಬರಬೇಕೋ ಹಾಗೆ.

ನೋವು ಮಾತ್ರ
ಪ್ರೇಮವನ್ನು ಪರಿಪೂರ್ಣವಾಗಿಸಬಲ್ಲದು.

~ ಶಮ್ಸ್

ತಂದೆ ತಾಯಿ ಕೊಂಚ ತಿಳುವಳಿಕೆಯುಳ್ಳವರಾದರೆ, ಈ ಜಗತ್ತು ಸಂಪೂರ್ಣವಾಗಿ ಬೇರೆಯೇ ಇರುತ್ತಿತ್ತು. ಆದರೆ ಹಾಗಿಲ್ಲ, ಮತ್ತು ಅವರಿಗೆ ತಿಳಿ ಹೇಳುವುದು ಯಾರಿಗೂ ಸಾಧ್ಯವಿಲ್ಲ ಏಕೆಂದರೆ ಅವರು ಅಷ್ಟು ಪ್ರೇಮಮಯಿಗಳು, ಇದು ಸಮಸ್ಯೆ. ಅವರ ಪ್ರೇಮದ ಹಿಂದೆ ಎಷ್ಟೋ ಪ್ರೇಮವಲ್ಲದ ಸಂಗತಿಗಳು ಅಡಗಿಕೊಂಡಿವೆ. ಎಷ್ಟೋ ಪ್ರೇಮವಲ್ಲದ ಸಂಗತಿಗಳಿಗೆ ಪ್ರೇಮ ಶರಣಾಗತಿಯ ತಾಣವಾಗಿದೆ.

ನಿಮ್ಮ ತಂದೆ ತಾಯಿ ಅತ್ಯಂತ ಪ್ರೇಮಮಯಿಗಳಾಗಿರಬಹುದು, ಆಗಿರಬೇಕು ಕೂಡ. ನಿಮಗೆ ಖುಶಿಯ ಬದುಕನ್ನು ಕಟ್ಟಿಕೊಡುತ್ತಿದ್ದೇವೆ ಎಂದು ಅವರು ತಿಳಿದುಕೊಂಡಿರಬಹುದು. ಆದರೆ ಯಾರೂ ಯಾರನ್ನೂ ಖುಶಿ ಪಡಿಸುವುದು ಸಾಧ್ಯವಿಲ್ಲ, ಯಾರಿಗೂ ಸಾಧ್ಯವಿಲ್ಲ.

ಆದ್ದರಿಂದ ನಿಮ್ಮ ಮಕ್ಕಳಿಗೆ ಸ್ವತಂತ್ರವಾಗಿ ಬೆಳೆಯಲು ಅವಕಾಶ ಮಾಡಿಕೊಡಿ. ಹೌದು ಇದು ರಿಸ್ಕೀ ವಿಷಯ ಆದರೆ ಏನು ಮಾಡಲಿಕ್ಕಾಗುತ್ತದೆ? ಬದುಕು ರಿಸ್ಕೀ, ಆದರೆ ಪ್ರತೀ ಬೆಳವಣಿಗೆಯೂ ಅಪಾಯ ಮತ್ತು ರಿಸ್ಕ್ ಮೂಲಕವೇ. ಅವರನ್ನು ತುಂಬ ರಕ್ಷಣಾತ್ಮಕವಾಗಿ ಬೆಳೆಸಲು ಹೋಗಬೇಡಿ ಇಲ್ಲವಾದರೆ ಅವರು ನಿರುಪಯೋಗಿ ಆಗಿಬಿಡುತ್ತಾರೆ. ಆದಷ್ಟು ಮಕ್ಕಳು ವೈಲ್ಡ್ ಆಗಿರಲಿ, ಬದುಕಿನಲ್ಲಿ ಸಂಘರ್ಷ ಮಾಡಲಿ. ಅವರು ತಮ್ಮ ಪಾಡಿಗೆ ತಾವು ಬೆಳೆಯಲಿ, ಮುಂದೆ ಅವರು ನಿಮಗೆ ಕೃತಜ್ಞರಾಗಿರುತ್ತಾರೆ. ಮುಂದೆ ಅವರ ಜೀವಂತಿಕೆಯನ್ನು ಗಮನಿಸಿ ನಿಮಗೂ ಖುಷಿಯಾಗುತ್ತದೆ.

ನಸ್ರುದ್ದೀನ್ ನ ಮಗ ಉಂಡಾಡಿ ಗುಂಡ. ವಯಸ್ಸಿಗೆ ಬಂದರೂ ಯಾವ ಕೆಲಸ ಮಾಡದೇ ಓಡಾಡಿಕೊಂಡಿದ್ದ. ನಸ್ರುದ್ದೀನ್ ಗೆ ಮಗನಿಗೆ ಬುದ್ಧಿ ಹೇಳಿ ಹೇಳಿ ಸಾಕಾಗಿ ಹೋಗಿತ್ತು. ಒಂದು ದಿನ ಮಗ ನಸ್ರುದ್ದೀನ್ ನ ಹತ್ತಿರ ಬಂದು ಸಲಹೆ ಕೇಳಿದ.

“ ಅಪ್ಪ, ನನಗೆ ಫುಟ್ ಬಾಲ್ ಮತ್ತು ಪೇಂಟಿಂಗ್ ಎಂದರೆ ಬಹಳ ಇಷ್ಟ. ಈ ಎರಡರಲ್ಲಿ ಯಾವುದನ್ನ ವೃತ್ತಿಯಾಗಿ ತೆಗೆದುಕೊಳ್ಳಲಿ? “

“ ನೀನು ಕೆಲಸ ಮಾಡಲು ನಿರ್ಧರಿಸಿದ್ದು ಸಂತೋಷ, ನೀನು ಫುಟ್ ಬಾಲ್ ನ್ನೇ ಕರೀಯರ್ ಆಗಿ ತೆಗೆದುಕೋ “
ನಸ್ರುದ್ದೀನ್ ಮಗನಿಗೆ ಸಲಹೆ ನೀಡಿದ.

“ ನೀನು ನನ್ನ ಫುಟ್ ಬಾಲ್ ಆಟ ನೋಡೀದ್ದೀಯಾ? ಚೆನ್ನಾಗಿ ಆಡುತ್ತೇನೆ ಅಲ್ವಾ “
ಮಗ ಖುಶಿಯಿಂದ ಕೇಳಿದ.

“ ಇಲ್ಲ ಆದರೆ ನಾನು ನಿನ್ನ ಪೇಂಟಿಂಗ್ ನೋಡಿದ್ದೀನಿ “
ನಸ್ರುದ್ದೀನ್ ಗಂಭೀರವಾಗಿ ಮಗನಿಗೆ ಉತ್ತರಿಸಿದ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.