ಒಳಿತು ಮತ್ತು ಕೆಡುಕುಗಳ ಹೋರಾಟವೆಂದೇ ನಮ್ಮ ಇಡೀ ನಾಗರಿಕತೆಯ ಕಥೆಯನ್ನು ವಿವರಿಸಬಹುದು. ಇಂಥ ಹೋರಾಟವೇ ಅನಗತ್ಯವೆಂದು ಚೌಡಯ್ಯನವರ ವಚನ ಹೇಳುವಂತೆ ತೋರುತ್ತದೆ…। ಓ.ಎಲ್.ನಾಗಭೂಷಣ ಸ್ವಾಮಿ
ಕಲ್ಲಿನಲ್ಲಿ ಕಠಿಣ
ಖುಲ್ಲರಲ್ಲಿ ದುರ್ಗುಣ
ಬಲ್ಲವರಲ್ಲಿ ಸುಗುಣ ಉಂಟೆಂದೆಲ್ಲರೂ ಬಲ್ಲರು
ಇಂತೀ ಇವು ಎಲ್ಲರ ಗುಣ
ಅಲ್ಲಿಗಲ್ಲಿಗೆ ಸರಿಯೆಂದು ಗೆಲ್ಲ ಸೋಲಕ್ಕೆ ಹೋರದೆ
ನಿಜವೆಲ್ಲಿತ್ತು ಅಲ್ಲಿಯೆ ಸುಖವೆಂದನಂಬಿಗ ಚೌಡಯ್ಯ (ಸಂ.೬, ವ.೧೦೧)
(ಖುಲ್ಲರಲ್ಲಿ-ದುಷ್ಟರಲ್ಲಿ)
ಅಂಬಿಗ ಚೌಡಯ್ಯನವರ ವಚನ. ಕಲ್ಲಿನಲ್ಲಿ ಕಾಠಿಣ್ಯವಿದೆ, ಕೆಟ್ಟವರಲ್ಲಿ ದುರ್ಗುಣ ಇದೆ, ಬಲ್ಲವರಲ್ಲಿ ಸದ್ಗುಣ ಇದೆ ಅನ್ನುವುದು ಎಲ್ಲರಿಗೂ ಗೊತ್ತಲ್ಲವೇ? ಸರಿ ಮತ್ತೆ. ಇದು ಸರಿ, ಅದು ತಪ್ಪು ಎಂಬ ಹೋರಾಟವೇಕೆ? ಇರುವ ನಿಜವನ್ನು ಇರುವಂತೆ ಒಪ್ಪಿದಾಗಲೇ ಸುಖ ಅಲ್ಲವೇ?
ಗೆಲ್ಲುವ ಹಟ ಇದೆಯಲ್ಲ ಅದೇ ಸುಖಕ್ಕೆ ತೊಡಕು. ಲೋಕವನ್ನು ಬದಲಾಯಿಸಬೇಕೆಂಬ ಹಟವೂ ಅಷ್ಟೇ. ಎರಡೂ ಹೋರಾಟಗಳೇ. ಹೋರಾಟ ಇದ್ದಾಗ ಸುಖ ಎಲ್ಲಿರುತ್ತದೆ. `ಅಲ್ಲಿಗಲ್ಲಿಗೆ ಸರಿ’ ಇರುವುದೆಲ್ಲ ಇರುವ ಹಾಗೆ ಇದೆ, ಅದೇ ಸತ್ಯ ಎಂದು ಒಪ್ಪಿಕೊಂಡರೆ ಸಾಕು. ಆದರೆ ಅದೇ ಅತ್ಯಂತ ಕಷ್ಟದ ಕೆಲಸವೂ ಹೌದಲ್ಲವೇ? ನಮ್ಮ ಶಿಕ್ಷಣ, ಸಂಸ್ಕೃತಿ, ಧರ್ಮ ಎಲ್ಲವೂ ಇರುವುದನ್ನು ಇನ್ನು ಹೇಗೋ ಮಾಡಲು ಪ್ರಯತ್ನಿಸುವುದನ್ನೇ ಕಲಿಸುತ್ತವೆ! ಒಳಿತು ಮತ್ತು ಕೆಡುಕುಗಳ ಹೋರಾಟವೆಂದೇ ನಮ್ಮ ಇಡೀ ನಾಗರಿಕತೆಯ ಕಥೆಯನ್ನು ವಿವರಿಸಬಹುದು. ಇಂಥ ಹೋರಾಟವೇ ಅನಗತ್ಯವೆಂದು ಚೌಡಯ್ಯನವರ ವಚನ ಹೇಳುವಂತೆ ತೋರುತ್ತದೆ. ಅಥವಾ ಒಳಿತು-ಕೆಡುಕು ಅನ್ನುವುದು ನಾವು ನೋಡುವ ಕೋನ, ನಮ್ಮ ನಿಲುವನ್ನು ಅವಲಂಬಿಸಿದ್ದು, ಗೆಲ್ಲುವ ಆಸೆಯಿಂದ ಪ್ರಚೋದನೆ ಘರ್ಷಣೆ ಹುಟ್ಟುತ್ತದೆ. ಭಕ್ತಿ ಅನ್ನುವುದು ಏನೋ ಆಗುವ ಆಸೆಗಿಂತ ಅಂತಂಗದಲ್ಲಿ, ಬಹಿರಂಗದಲ್ಲಿ ಸಂಘರ್ಷವಿಲ್ಲದೆ ʻಇರುವುದನ್ನುʼ ಅಪೇಕ್ಷಿಸುವ ಮನೋಧರ್ಮವಾಗಿ ಕಾಣುತ್ತದೆ. ಸ್ವಾರಸ್ಯದ ಮಾತೆಂದರೆ ನಿಜವೆಲ್ಲಿತ್ತು ಅಲ್ಲಿಯೇ ಸುಖ ಅನ್ನುವ ಸಾಲು ಖುಲ್ಲರಲ್ಲೂ ನಿಜವಿದ್ದರೆ ಅದನ್ನು ಒಪ್ಪುವುದೇ ಸರಿ ಎಂದೂ ಹೇಳುವಂತೆ ತೋರುತ್ತದೆ.
ಅಂಬಿಗರ ಚೌಡಯ್ಯ
ಇವರ ೨೭೮ ವಚನಗಳು ದೊರೆತಿವೆ. ಅಂಬಿಗ ಚೌಡಯ್ಯ ಎಂಬುದೇ ವಚನಾಂಕಿತ. ಬದುಕಿನ ವಿವರಗಳು ತಿಳಿದಿಲ್ಲ.

