ಸುಮ್ಮನೇ ಗೋಡೆಯತ್ತ ಮುಖಮಾಡಿ. ಗೋಡೆ ಬಹಳ ಸುಂದರವಾದದ್ದು, ಬೇರೆ ಎಲ್ಲೂ ಹೋಗಬೇಕಿಲ್ಲ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಬೋಧಿಧರ್ಮ ಸತತ ಒಂಭತ್ತು ವರ್ಷ ಗೋಡೆಯತ್ತ ಮುಖ ಮಾಡಿ ಕುಳಿತಿದ್ದ, ಬೇರೆ ಏನನ್ನೂ ಮಾಡದೇ. ಅವನ ಕಾಲುಗಳು ಬತ್ತಿಹೋಗಿದ್ದವಂತೆ. ನನಗೆ ಇದು ಸಾಂಕೇತಿಕ. ಸರಳವಾಗಿ ಇದರ ಅರ್ಥ ಅವನ ಎಲ್ಲ ಚಲನೆಗಳು ಬತ್ತಿ ಹೋಗಿದ್ದವು, ಏಕೆಂದರೆ ಅವನ ಎಲ್ಲ ಪ್ರೇರಣೆಗಳು ಬತ್ತಿ ಹೋಗಿದ್ದವು. ಅವನೊಳಗೆ ಚಲನೆಯ, ಗುರಿ ಮುಟ್ಟುವ ಯಾವ ಪ್ರೇರಣೆಯೂ ಇರಲಿಲ್ಲ, ಆದರೆ ಹೀಗೆ ಮಾಡುವ ಮೂಲಕ ಅವನು ಅಸಾಧಾರಣವನ್ನು ಮುಟ್ಟಿದ. ಬೋಧಿಧರ್ಮ, ಈ ನೆಲದ ಮೇಲೆ ಓಡಾಡಿದ ಅಪರೂಪ ಆತ್ಮಗಳಲ್ಲಿ ಒಬ್ಬ. ಏನನ್ನೂ ಮಾಡದೇ, ಯಾವ ತಂತ್ರ, ಯಾವ ವಿಧಾನವನ್ನು ಬಳಸದೇ, ಸುಮ್ಮನೇ ಗೋಡೆಯನ್ನು ನೋಡುತ್ತ ಕುಳಿತು ಅವನು ಎಲ್ಲವನ್ನೂ ಸಾಧಿಸಿದ.
ಆದ್ದರಿಂದ ನೀವು ಸುಮ್ಮನೇ ಗೋಡೆಯನ್ನು ನೋಡುತ್ತ ಕುಳಿತುಕೊಳ್ಳಿ. ಗೋಡೆ ಬಹಳ ಸುಂದರವಾದದ್ದು. ಎಲ್ಲೂ ಹೋಗುವುದು ಬೇಡ. ಯಾವ ಚಿತ್ರವನ್ನೂ ಕಲ್ಪಿಸಿಕೊಳ್ಳುವುದು ಬೇಡ; ಸುಮ್ಮನೇ ಒಂದು ಖಾಲೀ ಗೋಡೆ ಮಾತ್ರ. ಯಾವಾಗ ಗೋಡೆಯ ಮೇಲೆ ಏನೂ ಇರುವುದಿಲ್ಲವೋ ಆಗ ನಿಧಾನವಾಗಿ ನಿಮ್ಮ ನೋಡುವ ಕುತೂಹಲ ಮಾಯವಾಗುತ್ತದೆ. ಸುಮ್ಮನೇ ಖಾಲಿ ಗೋಡೆಗೆ ಎದುರಾಗುವ ಮೂಲಕ ಸಮಾನಾಂತರವಾಗಿ ನಿಮ್ಮೊಳಗೂ ಖಾಲೀತನ ಹುಟ್ಟಿಕೊಳ್ಳುತ್ತದೆ. ಆ ಗೋಡೆಗೆ ಸಮಾನಾಂತರವಾಗಿ ನಿಮ್ಮೊಳಗೆ ಯಾವ ಆಲೋಚನೆಗಳೂ ಇಲ್ಲದ ಇನ್ನೊಂದು ಗೋಡೆ ಎದ್ದು ನಿಲ್ಲುತ್ತದೆ.
ನಿಮ್ಮ ಮನಸ್ಸನ್ನು ಮುಕ್ತವಾಗಿಟ್ಟುಕೊಳ್ಳಿ ಮತ್ತು ಸಂಭ್ರಮಿಸಿ. ಸ್ಮೈಲ್ ಮಾಡಿ; ಒಂದು ರಾಗವನ್ನು ಗುಣುಗುಣಿಸಿ ಅಥವಾ ಓಲಾಡಿ, ಕೆಲವೊಮ್ಮೆ ಡಾನ್ಸ್ ಮಾಡಿ – ಆದರೆ ಗೋಡೆಗೆ ಮುಖಾಮುಖಿಯಾಗಿಯೇ ಇರಿ; ಇದು ನಿಮ್ಮ ಧ್ಯಾನದ ಉದ್ದೇಶವಾಗಲಿ.
ಒಮ್ಮೆ ಯಾರೋ ಒಬ್ಬರು ರೂಮಿಯನ್ನು ಪ್ರಶ್ನೆ ಮಾಡಿದರು.
ಪ್ರಾರ್ಥನೆ ಮಾಡುವುದರಿಂದ ನೀನು ಏನು ಗಳಿಸುತ್ತೀಯಾ?
ರೂಮಿ ಉತ್ತರಿಸಿದ……
“ಪ್ರಾರ್ಥನೆ ಮಾಡುವುದರಿಂದ ಬಹುತೇಕ ನಾನು ಏನೂ ಗಳಿಸುವುದಿಲ್ಲ, ಬದಲಾಗಿ ಪ್ರಾರ್ಥನೆಯಲ್ಲಿ ನಾನು ಕಳೆದುಕೊಂಡಿದ್ದೇ ಹೆಚ್ಚು”.
ಹೀಗೆ ಹೇಳುತ್ತ ಭಗವಂತನ ಪ್ರಾರ್ಥನೆಯಲ್ಲಿ ತಾನು ಕಳೆದುಕೊಂಡ ಸಂಗತಿಗಳ ಪಟ್ಟಿ ಕೊಟ್ಟ.
ನಾನು ನನ್ನ ಅಭಿಮಾನವನ್ನು ಕಳೆದುಕೊಂಡೆ.
ನಾನು ನನ್ನ ದುರಹಂಕಾರವನ್ನು ಕಳೆದುಕೊಂಡೆ.
ನಾನು ನನ್ನ ದುರಾಸೆಯನ್ನು ಕಳೆದುಕೊಂಡೆ.
ನಾನು ನನ್ನ ತುಡಿತವನ್ನ ಕಳೆದುಕೊಂಡೆ.
ನಾನು “ನನ್ನ” ಕ್ರೋಧವನ್ನು ಕಳೆದುಕೊಂಡೆ.
ನಾನು ನನ್ನ ಕಾಮವನ್ನು ಕಳೆದುಕೊಂಡೆ.
ನಾನು ಸುಳ್ಳು ಹೇಳುವ ಸುಖವನ್ನು ಕಳೆದುಕೊಂಡೆ.
ನಾನು ಪಾಪದ ರುಚಿಯನ್ನು ಕಳೆದುಕೊಂಡೆ.
ನಾನು ಅಸಹನೆಯನ್ನ ಕಳೆದುಕೊಂಡೆ.
ನಾನು ಹತಾಶೆ ಮತ್ತು ನಿರುತ್ಸಾಹವನ್ನು ಕಳೆದುಕೊಂಡೆ.
ಕೆಲವೊಮ್ಮೆ ನಾವು ಗಳಿಸಲಿಕ್ಕಾಗಿ ಅಲ್ಲ ನಮ್ಮ ಅಧ್ಯಾತ್ಮಿಕ ಹಾದಿಯಲ್ಲಿ ಅಡಚಣೆ ಉಂಟುಮಾಡುತ್ತಿರುವ ಸಂಗತಿಗಳನ್ನು ಕಳೆದುಕೊಳ್ಳಲು ಪ್ರಾರ್ಥನೆ ಮಾಡುತ್ತೇವೆ.
ಪ್ರಾರ್ರ್ಥನೆ ಕಲಿಸುತ್ತದೆ, ಗಟ್ಟಿಗೊಳಿಸುತ್ತದೆ ಮತ್ತು ಸಂತೈಸುತ್ತದೆ.
ಪ್ರಾರ್ಥನೆ, ನಮ್ಮನ್ನು ಭಗವಂತನೊಂದಿಗೆ ಒಂದುಗೂಡಿಸುವ ಏಕೈಕ ದಾರಿ.

