ವಚನ ವೈವಿಧ್ಯ#9 : ಇಲ್ಲಿಯೇ ಇದ್ದಾರೆ-ಸಕಳೇಶ ಮಾದರಸ

ನಾವು ಯಾವ ಊರಿನಲ್ಲಿ, ದೇಶದಲ್ಲಿ ಇದ್ದೇವೆ ಅನ್ನುವುದಕ್ಕಿಂತ ನಾವು ಇರುವಲ್ಲಿ ಎಂಥ ಸಂಬಂಧಗಳನ್ನು ಕಟ್ಟಿಕೊಂಡಿದ್ದೇವೆ, ಆ ಬಂಧಗಳಿಂದ ನಮ್ಮನ್ನು ನಾವು ಹೇಗೆ ಅರಿತುಕೊಳ್ಳುತ್ತೇವೆ ಅನ್ನುವುದು ಮುಖ್ಯವೆಂದು ಈ ವಚನ ಹೇಳುವಂತಿದೆ । ಓ.ಎಲ್.ನಾಗಭೂಷಣ ಸ್ವಾಮಿ

ಇದಿರೆನ್ನ ಹಳಿವವರು ಮತಿಯ ಬೆಳಗುವರು
ಮನದ ಕಾಳಿಕೆಯ ಕಳೆವವರೆನ್ನ ನಂಟರು
ದುರಾಚಾರದಲ್ಲಿ ನಡೆವವರು ಕನ್ನಡಿ ಎನಗೆ
ಹೇಯೋಪಾದಿಯ ತೋರುವವರು.
ಇದು ಕಾರಣ
ನಾನನ್ಯ ದೇಶಕ್ಕೆ ಹೋಗೆನು.
ಸಕಳೇಶ್ವರದೇವರ ತೋರುವರೊಳರಿಲ್ಲಿಯೆ (ಸಂ.೯, ವ.೩೬೭)

[ಇದಿರೆನ್ನ-ಎದುರಿನಲ್ಲಿ ನನ್ನ; ಕಾಳಿಕೆ=ಕಲ್ಮಶ; ಹೇಯ-ತೊರೆಯಬೇಕಾದ ಗುಣ; ಉಪಾದಿ-ಮೋಸ, ವಂಚನೆ;  ತೋರುವವರೊಳರಿಲ್ಲಿಯೆ-ತೋರುವವರು ಇದ್ದಾರೆ ಇಲ್ಲಿಯೇ]

ಯಾರು ನನ್ನೆದುರಿಗೇ ನನ್ನನ್ನು ಬೈಯುತ್ತಾರೊ ಅವರು ನನ್ನ ಬುದ್ಧಿ ಬೆಳಗುವ ಹಾಗೆ ಮಾಡುತ್ತಾರೆ. ಮನಸಿನ ಕಲ್ಮಶ ತೊಳೆಯುವ ನಂಟರು ಅವರು. ಕೆಟ್ಟದಾಗಿ ನಡೆದುಕೊಳ್ಳುವವರು ಕನ್ನಡಿಯ ಹಾಗೆ ನನ್ನೊಳೇ ಇರುವ ನೀಗಿಕೊಳ್ಳಬೇಕಾದ ಗುಣಗಳನ್ನು ತೋರುತ್ತಾರೆ. ಹಾಗಾಗಿ ನಾನು ಬೇರೆಯ ದೇಶಕ್ಕೆ, ಊರಿಗೆ ಹೋಗುವುದಿಲ್ಲ. ಸಕಳೇಶ್ವರನನ್ನು ತೋರಿಸುವವರು ಇಲ್ಲಿಯೇ ಇದ್ದಾರೆ.

ಬೇರೆಯ ಊರಿಗೆ ಹೋಗಿ ನೆಲೆಸುವ ಆಸೆಯಾದರೂ ಯಾಕೆ- ಬೇರೆಯ ಜನ, ಬೇರೆಯ ವಾತಾವರಣ, ಬೇರೆಯ ರೀತಿಯ ಬದುಕಿನ ಆಸೆಯೇ ಅದಕ್ಕೆ ಕಾರಣ.  ಆದರೆ, ಸಕಲೇಶಮಾದರಸರ ವಚನ ಹೇಳುವುದೇ ಬೇರೆ. ಎಲ್ಲಿ ಹೋದರೂ ನನ್ನ ಟೀಕಿಸುವವರು, ನಿಂದಿಸುವವರು ಇದ್ದೇ ಇರುತ್ತಾರೆ. ಅವರು ನನ್ನ ಮತಿಯನ್ನು ಬೆಳಗುತ್ತಾರೆ. ಅವರು ನನ್ನ ಮನಸ್ಸಿನ ಕಲ್ಮಶ (ಕಾಳಿಕೆ)ಯನ್ನು ಕಳೆಯುವ ನಂಟರು. ಎಲ್ಲಿಗೆ ಹೋದರೂ ದುರಾಚಾರಿಗಳು ಇದ್ದೇ ಇರುತ್ತಾರೆ. ಅವರು ನನ್ನೊಳಗೇ ಇರುವ ಕೆಡುಕಿಗೆ ಕನ್ನಡಿ ಹಿಡಿಯುತ್ತಾರೆ. ಇಲ್ಲಿ ಇರುವ ನಿಂದಕರು, ನಂಟರು, ದುಷ್ಟರು ಬೇರೆ ಊರಲ್ಲಿಯೂ ಇರುತ್ತಾರೆ, ಅಲ್ಲವೇ? ನನ್ನನ್ನು ನನಗೇ ತೋರುವವರು ಇಲ್ಲೇ ಇರುವಾಗ ಅನ್ಯದೇಶಕ್ಕೆ ಹೋಗಲೊಲ್ಲೆ.

ಕೊಲೆ, ಸುಳ್ಳು, ಮೋಸ, ದ್ರೋಹ, ಅತ್ಯಾಚಾರ, ಇಂಥ ಸಲ್ಲದ ನಡವಳಿಕೆಯನ್ನು ಸೂಚಿಸುವ ಪದಗಳು ಎಲ್ಲ ಮನುಷ್ಯ ಭಾಷೆಗಳಲ್ಲೂ ಇದ್ದೇ ಇವೆ. ಅಂದರೆ ನಾವಿರದ ಇನ್ನೊಂದು ಊರು, ದೇಶ, ಭಾಷೆ ಈಗ ಇರುವ ಊರಿಗಿಂತ ಉತ್ತಮ ಅನ್ನುವುದು ಭ್ರಮೆ. ನಾವು ಯಾವ ಊರಿನಲ್ಲಿ, ದೇಶದಲ್ಲಿ ಇದ್ದೇವೆ ಅನ್ನುವುದಕ್ಕಿಂತ ನಾವು ಇರುವಲ್ಲಿ ಎಂಥ ಸಂಬಂಧಗಳನ್ನು ಕಟ್ಟಿಕೊಂಡಿದ್ದೇವೆ, ಆ ಬಂಧಗಳಿಂದ ನಮ್ಮನ್ನು ನಾವು ಹೇಗೆ ಅರಿತುಕೊಳ್ಳುತ್ತೇವೆ ಅನ್ನುವುದು ಮುಖ್ಯವೆಂದು ಈ ವಚನ ಹೇಳುವಂತಿದೆ.


ಸಕಳೇಶ ಮಾದರಸ

ಸಕಳೇಶ ಮಾದರಸರ ೧೩೫ ವಚನಗಳು ಪ್ರಕಟವಾಗಿವೆ. ಸಕಳೇಶ್ವರ ಎಂಬುದು ವಚನಾಂಕಿತ. ಇವರನ್ನು ಕುರಿತು ಅನೇಕ ಮಧ್ಯಕಾಲೀನ ಕೃತಿಗಳು ಉಲ್ಲೇಖ ಮಾಡುತ್ತವೆ.   ಸಂಗೀತಜ್ಞ,  ವೀಣಾದಿ ವಾದ್ಯಗಳ ಕಲಾವಿದ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.