ಬದ್ಧತೆಯನ್ನ ಒತ್ತಾಯಪೂರ್ವಕವಾಗಿ ಹೇರೋದಕ್ಕೆ ಆಗಲ್ಲ. ಜನರು ಖುಶಿಯಿಂದ ಇರುವ ಹಾಗೆ ನೋಡಿಕೊಳ್ಳಿ, ಆಗ ಅವರು ನಿಮ್ಮ ಹೊರತಾಗಿ ಬೇರೆ ಯಾವ ಸಂಬಂಧದ ಬಗ್ಗೆಯೂ ಯೋಚಿಸೋದಿಲ್ಲ. ಆದರೂ ಕೆಲವೊಮ್ಮೆ ಕೆಲವರು ಎಂಥ ಕಷ್ಟ ಕೊಡ್ತಾರೆ ಅಂದ್ರೆ, ಇಚ್ಛೆಯಿಲ್ಲದಿದ್ದರೂ ಜನ ಬೇರೆ ಸಂಬಂಧಗಳ ಬಗ್ಗೆ ಯೋಚಿಸಲು ಶುರು ಮಾಡ್ತಾರೆ – ಇಲ್ಲಿಂದ ಪಾರಾಗಿ ಓಡಿ ಹೋಗೋಕೆ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ನಿಜವಾದ ಪ್ರೇಮದ್ದು
ಮಹಾ ಭಿಡೆ ಸ್ವಭಾವ, ಸತ್ಯಕ್ಕೂ
ಮುಜುಗರ ಉಂಟು ಮಾಡುವ
ಅಪ್ಪಟ ಪ್ರಾಮಾಣಿಕತೆ, ಆದರೆ
ಅಪರೂಪಕ್ಕೆ ಮಾತ್ರ ನಮ್ಮ ಅವಶ್ಯಕತೆಗಳನ್ನು
ತುರ್ತಾಗಿ ತೃಪ್ತಿಪಡಿಸುವ
ಭಾವನಾತ್ಮಕ ಜಾಗ.
ಪ್ರೇಮಕ್ಕೆ ನಮ್ಮನ್ನು
ಅಪಾಯದಿಂದ ಪಾರು ಮಾಡುವಲ್ಲಿ,
ನಮ್ಮ ಸಮಸ್ಯೆಗಳನ್ನು ಪರಿಹರಿಸುವಲ್ಲಿ,
ನಿರಂತರ ಆನಂದದ ಸ್ಥಿತಿಯನ್ನು ಸಾಧ್ಯ ಮಾಡುವಲ್ಲಿ,
ನಮ್ಮ ಸುರಕ್ಷತೆಯನ್ನು ಖಚಿತಪಡಿಸುವಲ್ಲಿ,
ಯಾವ ಆಸಕ್ತಿಯೂ ಇಲ್ಲ.
ಪ್ರೇಮಕ್ಕೆ,
ನಮ್ಮನ್ನು ಎಲ್ಲ ಬಂಧನಗಳಿಂದ
ಬಿಡುಗಡೆಗೊಳಿಸುವದರಲ್ಲಿ ಮಾತ್ರ ಮುತುವರ್ಜಿ
ನಮ್ಮ ಸಮಯ ಮತ್ತು ಬದ್ಧತೆಗಳಲ್ಲಿ
ಮಾತ್ರ ನಿರೀಕ್ಷೆ.
ಬಹುತೇಕರು
ಬಯಸುತ್ತಾರೆ ಪ್ರೇಮವನ್ನು
ಔಷಧಿ ಎಂಬಂತೆ, ಮಾದಕ ದ್ರವ್ಯ ಎಂಬಂತೆ
ತಕ್ಷಣದ ನಶೆಗಾಗಿ,
ಮರೆಯುವುದಕ್ಕಾಗಿ ಸುತ್ತಣ ಲೋಕವನ್ನು.
ಆದರೆ ಒಂದಾಗಿಸಬಯಸುತ್ತದೆ
ಪ್ರೇಮ ನಮ್ಮನ್ನು ಬದುಕಿನೊಂದಿಗೆ……
ಓಡಿ ಹೋಗುವ ಹೇಡಿಗಳಿಗೆ
ಸದಾ ಸವಾಲಾಗುತ್ತ.
~ Bell Hooks
ಗಂಡು ಹೆಣ್ಣಿನ ಸಂಬಂಧದ ವಿಷಯದಲ್ಲಿ ಇದು ಬಹಳ ಮೂಲಭೂತವಾದ ಸಮಸ್ಯೆ. ಗಂಡಿಗೆ ಪ್ರೀತಿಗಿಂತ ಸ್ವಾತಂತ್ರ್ಯದ ಅವಶ್ಯಕತೆ ಇದ್ದರೆ, ಹೆಣ್ಣಿಗೆ ಸ್ವಾತಂತ್ರ್ಯಕ್ಕಿಂತ ಪ್ರೀತಿಯ ಮೇಲೆ ಹೆಚ್ಚು ಅಕ್ಕರೆ. ಜಗತ್ತಿನ ಪ್ರತಿ ಜೋಡಿಗೂ ಈ ಸಮಸ್ಯೆ ಕಾಡುತ್ತದೆ. ಹೆಣ್ಣಿಗೆ ಸ್ವಾತಂತ್ರ್ಯದ ಬಗ್ಗೆ ಚಿಂತೆಯೇ ಇಲ್ಲ. ಇನ್ನೊಬ್ಬರು ತನಗೆ ಗುಲಾಮರಾಗುವರಾದರೆ ತಾನೂ ಅವರಿಗೆ ಗುಲಾಮಳಾಗಲು ಆಕೆ ಸಿದ್ಧ. ಇನ್ನೊಬ್ಬರು ತನಗೆ ಬದ್ಧರಾಗುವರಾದರೆ ತಾನೂ ಅವರಿಗೆ ಬದ್ಧಳಾಗಲು ಆಕೆಗೆ ಒಪ್ಪಿಗೆ. ಇನ್ನೊಬರು ಕತ್ತಲು ಜೈಲಿನಲ್ಲಿರಲು ಸಿದ್ಧರಾಗಿದ್ದರೆ ತಾನೂ ಜೈಲಿನ ಸರಳುಗಳ ಹಿಂದೆ ಇರಲು ಆಕೆ ಸಿದ್ಧ.
ಆದರೆ ಗಂಡು, ತನ್ನ ಸ್ವಾತಂತ್ರ್ಯಕ್ಕೆ ಧಕ್ಕೆ ಬರುವುದಾದರೆ ಪ್ರೀತಿಯನ್ನೂ ತ್ಯಾಗ ಮಾಡಲು ಸಿದ್ಧ. ಅವನು ಮುಕ್ತ ಆಕಾಶದ ಕೆಳಗೆ ಇರಲು ಸಿದ್ಧ, ತಾನು ಒಬ್ಬನೇ ಆದರೂ ಸರಿ. ಅವನು ಪ್ರೇಮ ಸಂಬಂಧಕ್ಕೆ ಸಿದ್ಧನಾಗಿರುವನಾದರೂ ಅದು ಕರಾಳ ಜೈಲಾಗುವುದು ಅವನಿಗೆ ಒಪ್ಪಿಗೆ ಇಲ್ಲ.
ಸಂಬಂಧಗಳಲ್ಲಿ ಅತೀ ಹೆಚ್ಚಿನ ಬದ್ಧತೆಯನ್ನು ನಿರೀಕ್ಷಿಸುವುದು , ಅತೀ ಹೆಚ್ಚಿನ ಸ್ವಾತಂತ್ರ್ಯವನ್ನು ಬಯಸುವುದು ಎರಡು ಕೂಡ ಅಪ್ರಬದ್ಧ. ಎಲ್ಲೋ ಒಂದು ಕಡೆ ಇಬ್ಬರೂ ರಾಜಿ ಮಾಡಿಕೊಳ್ಳಬೇಕು. ಮತ್ತು ಈ ರಾಜಿ ಇಬ್ಬರಿಗೂ ಗೌರವಯುತವಾಗಿರಬೇಕು. ಗಂಡಿಗೆ ಸ್ವಾತಂತ್ರ್ಯ ಹೆಚ್ಚು ಇಷ್ಟವಾದರೆ, ಹೆಣ್ಣು ಅವನಿಂದ ಹೆಚ್ಚಿನ ಬದ್ಧತೆಯನ್ನು ನಿರೀಕ್ಷಿಸಬಾರದು, ಹೆಣ್ಣಿಗೆ ಕಮಿಟ್ ಮೆಂಟ್ ಇಷ್ಟವೆಂದು ಗೊತ್ತಾದಾಗ ಗಂಡು ಕೂಡ ತನ್ನ ಸ್ವಾತಂತ್ರ್ಯದ ಬಯಕೆಯನ್ನು ಕಡಿಮೆ ಮಾಡಿಕೊಳ್ಳಬೇಕು. ನೀವು ಪ್ರೀತಿಸುವಿರಾದರೆ, ಸ್ವಲ್ಪ ತ್ಯಾಗಕ್ಕೆ ನೀವು ಸಿದ್ಧರಾಗಬೇಕು. ಪ್ರೀತಿಯಿಲ್ಲವಾದರೆ ಪ್ರತ್ಯೇಕವಾಗುವುದೇ ಒಳ್ಳೆಯದು.
ನಸ್ರುದ್ದೀನ್ ದಂಪತಿ ಮತ್ತೆ ಜಗಳ ಮಾಡುತ್ತಿದ್ದರು.
ಹೆಂಡತಿ : ನನ್ನ ಮದುವೆ ಯಾರಾದರೂ ತಿಳುವಳಿಕೆಯಿರುವ ಮನುಷ್ಯನ ಜೊತೆ ಆಗಿದ್ದರೆ ಒಳ್ಳೆಯದಿತ್ತು.
ನಸ್ರುದ್ದೀನ್ : ತಿಳುವಳಿಕೆಯಿರುವ ಯಾರೂ ನಿನ್ನಂಥ ಜಗಳಗಂಟಿಯನ್ನು ಮದುವೆಯಾಗುವುದಿಲ್ಲ.
ಹೆಂಡತಿ : ನನಗೆ ಇದನ್ನೇ ಸಾಬೀತು ಮಾಡಬೇಕಿತ್ತು, ನೀನು ತಿಳುವಳಿಕೆ ಇಲ್ಲದ ಮನುಷ್ಯ ಅಂತ.
*********************************

