ಪ್ರತಿರೋಧ ಎನ್ನುವುದು ಒಂದು ಮೂಲಭೂತ ಸಮಸ್ಯೆ, ಮತ್ತು ಇದರ ಕಾರಣವಾಗಿಯೇ ಬೇರೆಲ್ಲ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ. ಒಮ್ಮೆ ನೀವು ಏನನ್ನಾದರೂ ವಿರೋಧಿಸಿಬಿಟ್ಟರೆ ಸಮಸ್ಯೆಯ ಸುಳಿಗೆ ಸಿಕ್ಕಿಹಾಕಿಕೊಂಡುಬಿಟ್ಟಂತೆ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಅಧಿಕಾರ ಚಲಾಯಿಸುವ ಹುಕಿ ಇಲ್ಲದಿರುವುದರಿಂದ
ಸಂತ ಭಾರಿ ಶಕ್ತಿಶಾಲಿ.
ಸದಾ ಅಧಿಕಾರದ ಚಿಂತೆ ಮಾಡುತ್ತಾರಾದ್ದರಿಂದ
ಸಾಮಾನ್ಯರು ನಿರಂತರ ವಂಚಿತರು.
ಸಂತ ಏನೂ ಮಾಡುವುದಿಲ್ಲವಾದರೂ
ಮಾಡಲು ಏನೂ ಉಳಿದಿರುವುದಿಲ್ಲ.
ಸಾಮಾನ್ಯರು ಸದಾ ಕೆಲಸದಲ್ಲಿ ನಿರತರಾದರೂ
ಮಾಡುವುದು ಮುಗಿಯುವುದೇ ಇಲ್ಲ.
ಅಂತಃಕರುಣಿ ಏನೋ ಮಾಡುತ್ತಾನಾದರೂ
ಏನೋ ಮಾಡುವುದು ಉಳಿದುಹೋಗಿರುತ್ತದೆ.
ನ್ಯಾಯವಂತ ಎಷ್ಟೋ ಮಾಡುತ್ತಾನಾದರೂ
ಎಷ್ಟೋ ಹಾಗೆಯೇ ಉಳಿಸಿರುತ್ತಾನೆ.
ಆಚಾರವಂತರು ಅಷ್ಟಿಷ್ಟು ಮಾಡುತ್ತಾರಾದರೂ
ಜನ ತಲೆದೂಗದಿದ್ದಾಗ, ತೋಳು ಮೇಲೇರಿಸುತ್ತಾರೆ.
ತಾವೋ ಮರೆಯಾದಾಗ ನ್ಯಾಯ ಉಳಿದುಕೊಳ್ಳುತ್ತದೆ.
ನ್ಯಾಯ ಮರೆಯಾದಾಗ ನೈತಿಕತೆ ಹುಟ್ಟಿಕೊಳ್ಳುತ್ತದೆ.
ನೈತಿಕತೆ ಮರೆಯಾದಾಗ ಆಚರಣೆಯ ಮರವಣಿಗೆ.
ಆಚರಣೆ, ನಂಬಿಕೆಯ ಹೊಟ್ಟು
ಅರಾಜಕತೆಯ ಆರಂಭ.
ಅಂತೆಯೇ ಸಂತನಿಗೆ
ಮೇಲ್ನೋಟಕ್ಕಿಂತ ಒಳನೋಟದಲ್ಲಿ ಆಸಕ್ತಿ.
ಹೂವಿಗಿಂತ ಹಣ್ಣಿನ ಬಗ್ಗೆ ಆಸ್ಥೆ.
ಸ್ವಂತ ಅಭಿಪ್ರಾಯಗಳಿಗಿಂತ
ನಿಜ ಸ್ಥಿತಿಯ ಮೇಲೆ ಹೆಚ್ಚು ಗಮನ.
ಅಂತೆಯೇ ಸಂತ
ಎಲ್ಲ ಭ್ರಮೆಗಳಿಂದ ಮುಕ್ತ.
~ ಲಾವೋತ್ಸೇ
ಜೀಸಸ್ ಹೇಳುತ್ತಾನೆ, “ Resist no evil “. ಕೇಡನ್ನು ಕೂಡ ವಿರೋಧಿಸಬಾರದು, ಏಕೆಂದರೆ ವಿರೋಧ ಎನ್ನುವುದೇ ಕೇಡು, ಪಾಪ. ನೀವು ಏನನ್ನಾದರೂ ವಿರೋಧಿಸುತ್ತೀರಾದರೆ ಅದರ ಅರ್ಥ, ನೀವು ಸಮಸ್ತದಿಂದ ನಿಮ್ಮನ್ನು ನೀವು ಬೇರ್ಪಡಿಸಿಕೊಳ್ಳುತ್ತಿದ್ದೀರಿ. ನೀವು ದ್ವೀಪ ಆಗಲು ಬಯಸುತ್ತಿದ್ದೀರಿ, ಪ್ರತ್ಯೇಕಗೊಂಡು, ವಿಭಜನೆಗೊಂಡು. ನೀವು ಖಂಡಿಸುತ್ತಿದ್ದೀರಿ, ಜಡ್ಜ್ ಮಾಡುತ್ತಿದ್ದೀರಿ, ಇದು ಹಾಗಲ್ಲ, ಅದು ಸರಿಯಲ್ಲ ಇತ್ಯಾದಿಯಾಗಿ. ಪ್ರತಿರೋಧ ಎಂದರೆ ನೀವು ಜಡ್ಜಮೆಂಟ್ ನ ಠೀವಿಯನ್ನು ಧರಿಸಿದ್ದೀರಿ.
ನೀವು ವಿರೋಧಿಸುತ್ತಿಲ್ಲವಾದರೆ, ನಿಮ್ಮ ಮತ್ತು ನಿಮ್ಮ ಸುತ್ತ ಹರಿದಾಡುತ್ತಿರುವ ಎನರ್ಜಿಯ ನಡುವೆ ಯಾವ ಪ್ರತ್ಯೇಕತೆಯಿಲ್ಲ. ಥಟ್ಟನೇ ನೀವು ಅದರೊಂದಿಗೆ ಒಂದಾಗಿದ್ದೀರಿ – ಎಷ್ಟೆಂದರೆ ನೀವು ಅದರೊಂದಿಗೆ ಇಲ್ಲ ಎನ್ನುವಷ್ಟು, ಕೇವಲ ಎನರ್ಜಿ ಮಾತ್ರ ಹರಿದಾಡುತ್ತಿದೆ. ಆದ್ದರಿಂದ ನಡೆಯುತ್ತಿರುವ ಸಂಗತಿಗಳೊಂದಿಗೆ ಸಹಕರಿಸಲು ಕಲಿಯಿರಿ, ಸಮಸ್ತವನ್ನು ಎದುರು ಹಾಕಿಕೊಳ್ಳಬೇಡಿ. ಸಮಸ್ತದೊಂದಿಗೆ ಹೆಜ್ದೆ ಹಾಕುವ ಮೂಲಕ ಪ್ರಚಂಡ ಹೊಸ ಎನರ್ಜಿಯನ್ನು ನೀವು ಫೀಲ್ ಮಾಡಿಕೊಳ್ಳಲು ಶುರು ಮಾಡುತ್ತೀರಿ, ಏಕೆಂದರೆ ಪ್ರತಿರೋಧದಲ್ಲಿ ನೀವು ಎನರ್ಜಿಯನ್ನು ಕಳೆದುಕೊಳ್ಳುತ್ತಿದ್ದೀರಿ. ಸಹಕಾರದಲ್ಲಿ ನೀವು ಎನರ್ಜಿಯನ್ನು ಹೀರಿಕೊಳ್ಳುತ್ತೀರಿ.
ಇದು ಬದುಕಿನೆಡೆಗೆ ಪೌರಸ್ತರ ದೃಷ್ಟಿಕೋನ. ಸ್ವೀಕರಿಸಿ, ವಿರೋಧಿಸಬೇಡಿ. ಶರಣಾಗಿ, ಯುದ್ಧಕ್ಕೆ ಮುಂದಾಗಬೇಡಿ. ಜಯಶಾಲಿಯಾಗಲು, ಮೊದಲಿಗರಾಗಲು ಪ್ರಯತ್ನಿಸಬೇಡಿ. ಲಾವೋತ್ಸೇ ಹೇಳುತ್ತಾನೆ, “ ನಾನು ಸೋಲನ್ನು ಒಪ್ಪಿಕೊಂಡಿರುವೆನಾದ್ದರಿಂದ ನನ್ನ ಸೋಲಿಸುವುದು ಸಾಧ್ಯವಿಲ್ಲ.” ಯಾರು ಗೆಲುವಿಗಾಗಿ ಹಪಹಪಿಸುತ್ತಿಲ್ಲವೋ ಅವರನ್ನು ಹೇಗೆ ಸೋಲಿಸುತ್ತೀರಿ? ಮಹತ್ವಾಕಾಂಕ್ಷೆಯೇ ಇಲ್ಲದವರನ್ನು ಹೇಗೆ ಸೋಲಿಸುತ್ತೀರಿ? ಸಾಯಲು ಸಿದ್ಧವಾಗಿರುವವರನ್ನು ಹೇಗೆ ಕೊಲ್ಲುತ್ತೀರಿ? ಇದು ಅಸಾಧ್ಯ. ಇಂಥ ಶರಣಾಗತಿಯ ಮೂಲಕ ವಿಜಯಕ್ಕೆ ಹತ್ತಿರವಾಗಬಹುದು.
ಇದು ನಿಮ್ಮ ಒಳನೋಟವಾಗಲಿ : ಪ್ರತಿರೋಧಕ್ಕಾಗಿ ಸಮಯ ವ್ಯರ್ಥ ಮಾಡಬೇಡಿ.

