ಪ್ರೀತಿ ಸಹನಶೀಲ, ಮತ್ತು ಬಾಕಿ ಎಲ್ಲಕ್ಕೂ ಅಸಹನೆ. ಉತ್ಕಟತೆಗೆ ಅಸಹನೆ, ಪ್ರೀತಿ ಗೆ ಮಾತ್ರ ಸಹನೆ. ಮತ್ತು ಪ್ರೇಮಮಯಿಯಾಗುವುದೆಂದರೆ ಸಹನಶೀಲರಾಗುವುದು ಮತ್ತು ಸಹನಶೀಲರಾಗುವುದೆಂದರೆ ಪ್ರಾರ್ಥನೆ ಮಾಡುವುದು ಎನ್ನುವುದು ಒಮ್ಮೆ ನಿಮಗೆ ಅರ್ಥವಾಯಿತೆಂದರೆ ಬಾಕಿ ಎಲ್ಲವೂ ನಿಮಗೆ ಅರ್ಥವಾಗುತ್ತದೆ. ಕಾಯುವುದು ಹೇಗೆ ಎನ್ನುವುದನ್ನು ನಾವು ಕಲಿಯಬೇಕು ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಸಹನೆಯ ಅರ್ಥ
ತುಟಿ ಕಚ್ಚಿಹಿಡಿದು, ಉಸಿರು ಬಿಗಿಹಿಡಿದು
ಅಥವಾ ಅನಾಸಕ್ತರಾಗಿ
ನಡೆಯುತ್ತಿರುವುದನ್ನ ನೋಡುತ್ತ ಕೂಡುವುದಲ್ಲ.
ಬದಲಾಗಿ ಸಹನೆಯೆಂದರೆ,
ನಡೆಯುತ್ತಿರುವ ಘಟನೆಯ, ಕ್ರಿಯೆಯ
ಕೊನೆಯನ್ನು ಸೂಕ್ಷ್ಮವಾಗಿ ಗಮನಿಸುವುದು.
ಸಹನೆಯೆಂದರೆ,
ಮುಳ್ಳನ್ನು ನೋಡುತ್ತ, ಗುಲಾಬಿಯನ್ನು ಕಾಣುವುದು.
ರಾತ್ರಿಯನ್ನು ನೋಡುತ್ತ, ಪ್ರಭಾತವನ್ನು ಕಾಣುವುದು.
ಅಸಹನೆಗೆ ಸಮೀಪ ದೃಷ್ಟಿ ದೋಷ,
ದೂರದ್ದನ್ನು ಗಮನಿಸುವ ಸಾಮರ್ಥ್ಯವಿಲ್ಲ.
ನಿಜದ ಪ್ರೇಮಿಗಳಿಗೆ ಮಾತ್ರ ಅಪಾರ ಸಹನೆ,
ಅವರಿಗೆ ಗೊತ್ತು
ಬಿದಿಗೆ ಚಂದ್ರ ಪೂರ್ಣನಾಗಲು
ಕಾಯಬೇಕೆಂದು.
~ ಶಮ್ಸ್
ಕೆಲವು ಸಂಗತಿಗಳನ್ನು ಮಾಡುವುದು ಅಸಾಧ್ಯ ಅವು ತಾವೇ ತಾವಾಗಿ ಸಂಭವಿಸಬೇಕು. ಮತ್ತು ನಾವು ಕೆಲವು ಸಂಗತಿಗಳನ್ನು ಖಂಡಿತ ಮಾಡಬಹುದು ಆದರೆ ಅವು ಲೌಕಿಕಕ್ಕೆ ಸಂಬಂಧಿಸಿದವು. ಯಾವು ಸಂಗತಿಗಳನ್ನು ಮಾಡುವುದು ಅಸಾಧ್ಯವೋ ಅವು ದೈವಕ್ಕೆ, ಇನ್ನೊಂದು ಜಗತ್ತಿಗೆ ಸಂಬಂಧಿಸಿದವು, ಅಥವಾ ನೀವು ಇದಕ್ಕೆ ಬೇರೆ ಏನೋ ಹೆಸರು ಇಡಬಹುದು. ಆದರೆ ಯಾವ ಸಂಗತಿಗಳನ್ನು ಮಾಡುವುದು ಸಾಧ್ಯವಿಲ್ಲವೋ ಅವು ಮಾತ್ರ ನೈಜ ಸಂಗತಿಗಳು. ಅವು ನಿಮ್ಮ ಜೊತೆ ಸಂಭವಿಸುತ್ತವೆ, ನೀವು ಅವುಗಳನ್ನು ಸ್ವೀಕರಿಸುವವರಾಗಿರುತ್ತೀರಿ – ಮತ್ತು ಇದೇ ಶರಣಾಗತಿಯ ಅರ್ಥ.
ಸ್ವೀಕರಿಸುವವರಾಗಿ…. ಸಹನಶೀಲರಾಗಿ…ಮತ್ತು ಸುಮ್ಮನೇ ಕಾಯಿರಿ. ಆಳ ಪ್ರೇಮದೊಂದಿಗೆ, ಪ್ರಾರ್ಥನಾಮಯಿಯಾಗಿ, ಕೃತಜ್ಞತೆಯಿಂದ ಕಾಯಿರಿ – ಈಗಾಗಲೇ ಸಂಭವಿಸಿರುವುದಕ್ಕೆ ಕೃತಜ್ಞರಾಗುತ್ತ ಮತ್ತು ಮುಂದೆ ಸಂಭವಿಸಲಿರುವುದನ್ನು ಸಹನೆಯಿಂದ ಕಾಯುತ್ತ. ಸಾಧಾರಣವಾಗಿ ಮನುಷ್ಯನ ಮೈಂಡ್ ಇದಕ್ಕೆ ವಿಪರೀತವಾದದ್ದನ್ನು ಮಾಡುತ್ತದೆ. ಅದು ಯಾವಾಗಲೂ ಇನ್ನೂ ಆಗದಿರುವುದರ ಬಗ್ಗೆ ಹಳಹಳಿಸುತ್ತಿರುತ್ತದೆ ಮತ್ತು ಅದಕ್ಕೆ ಯಾವಾಗಲೂ ಈ ಬಗ್ಗೆ ಅಸಹನೆ. ಅದು ಯಾವತ್ತೂ ಆಕ್ಷೇಪಣೆ ಮಾಡುತ್ತಿರುತ್ತದೆ ಯಾವ ಕೃತಜ್ಞತೆಯನ್ನೂ ತೋರದೆ. ಅದಕ್ಕೆ ಯಾವಾಗಲೂ ಬೇಕು ಎನ್ನುವ ಬಯಕೆ ಮತ್ತು ಅದು ಅದು ಯಾವತ್ತೂ ಸ್ವೀಕರಿಸುವ ಸಾಮರ್ಥ್ಯವನ್ನು ಸೃಷ್ಟಿ ಮಾಡಿಕೊಳ್ಳುವುದಿಲ್ಲ. ನಿಮ್ಮೊಳಗೆ ಸ್ವೀಕರಿಸುವ ಸಾಮರ್ಥ್ಯ ಇರದಿರುವಾಗ ನಿಮ್ಮ ಬಯಸುವಿಕೆ ವ್ಯರ್ಥ ಪ್ರಯತ್ನ.

