ವಚನ ವೈವಿಧ್ಯ#11: ಬಲ್ಲವರಿಗೆ ಗೆಲುವು ಸೋಲು ಎಂಬುದಿಲ್ಲ-ಸಗರದ ಬೊಮ್ಮಣ್ಣ

ಗೆಲ್ಲಬೇಕೆಂಬ ಆತಂಕಕ್ಕೆ ಸಿಲುಕಿರುವ, ಮಾಡಬಹುದಾಗಿದ್ದರೂ ಮಾಡದೆ ಹೋದ ಕೆಲಸಗಳ ಬಗ್ಗೆಯೇ ಚಿಂತೆಮಾಡುತ್ತ ನರಳುವವರಿಗೆ ಔಷಧದಂಥ ಮಾತು ಇಲ್ಲಿದೆ । ಓ.ಎಲ್.ನಾಗಭೂಷಣ ಸ್ವಾಮಿ

ಗೆಲ್ಲ ಸೋಲ ಬಲ್ಲವರಿಗೇಕೆ
ಅದು ಬೆಳ್ಳರ ಗುಣ
ಪಥವೆಲ್ಲರಲ್ಲಿ ನಿಹಿತನಾಗಿ
ಅತಿಶಯದ ವಿಷಯದಲ್ಲಿ ಗತನಾಗದೆ
ಸರ್ವವನರಿತು ಗತಮಯಕ್ಕೆ ಅತೀತನಾಗು
ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ

(ಬಲ್ಲವರು-ತಿಳಿದವರು; ಬೆಳ್ಳರ-ದಡ್ಡರ; ನಿಹಿತನಾಗಿ-ಒಳಗಾಗಿ, ಅತಿಶಯದ ವಿಷಯ-ಹಿರಿತನ, ಪ್ರಾಮುಖ್ಯ; ಗತನಾಗದೆ-ಕಳೆದು ಹೋಗದೆ; ಗತಮಯ-ಆಗಿ ಹೋದದ್ದು; ಅತೀತನಾಗು-ಮೀರು)

ಬಲ್ಲವರು ಗೆಲುವು ಸೋಲು ಎಂಬುದರ ಬಗ್ಗೆ ತಲೆಕೆಡಿಸಿಕೊಳ್ಳಬಾರದು. ಹಾಗೆ ಚಿಂತೆ ಮಾಡುವುದು ಮೂರ್ಖರ (ಬೆಳ್ಳರ) ಗುಣ. ಸರಿಯಾದ ದಾರಿ ಹಿಡಿದು, ಎಲ್ಲರೊಡನೆ ಒಂದಾಗಿ ಸಾಗಬೇಕು. ಯಾವ ವಿಷಯದಲ್ಲೂ ಮುಳುಗಿ ಕಳೆದುಹೋಗಬಾರದು. ಎಲ್ಲವನ್ನೂ ಅರಿಯಬೇಕು, ಗತಕಾಲದ ಚಿಂತೆಯಲ್ಲಿ ಮುಳುಗದೆ ಅದಕ್ಕೆ ಅತೀತನಾಗಬೇಕು, ಇದು ಬದುಕುವ ದಾರಿ.

ಗೆಲ್ಲಬೇಕೆಂಬ ಆತಂಕಕ್ಕೆ ಸಿಲುಕಿರುವ, ಮಾಡಬಹುದಾಗಿದ್ದರೂ ಮಾಡದೆ ಹೋದ ಕೆಲಸಗಳ ಬಗ್ಗೆಯೇ ಚಿಂತೆಮಾಡುತ್ತ ನರಳುವವರಿಗೆ ಔಷಧದಂಥ ಮಾತು ಇಲ್ಲಿದೆ. ಈ ವಚನದಲ್ಲಿ ನಿಹಿತನಾಗಿ, ಅತಿಶಯ ವಿಷಯ, ಗತಮಯ ಅನ್ನುವ ಬಳಕೆಗಳು ಗಮನಸೆಳೆಯುತ್ತವೆ. `ನಿಹಿತ’ ಎಂದರೆ `ಇಡಲ್ಪಡು’ ಎಂದು ಅರ್ಥವಾಗುತ್ತದೆ. ನಡೆಯುವ ಬದುಕಿನ ದಾರಿಗೆ ಒಳಗಾಗಿ ಹೊಂದಿಕೊಂಡು ಹೋಗು ಅನ್ನುವ ಭಾವ ಮೂಡುತ್ತದೆ. ಗೆಲ್ಲಬೇಕೆಂದು ಹೋರಾಡುವುದು ಸೋಲಿಗೆ ಭಯಪಡುವುದು ದಡ್ಡರ ಸ್ವಭಾವ ಅನ್ನುವ ಮಾತೂ ಇದೆ. ಅತಿಶಯವಿಷಯ ಅನ್ನುವ ಮಾತು ಕಾಮಾಸಕ್ತಿಯನ್ನೂ ಒಳಗೊಂಡ ಹಾಗೆ ಯಾವುದೇ ಒಂದು ವಿಷಯದ ಬಗ್ಗೆ ಅತಿಯಾಗಿ ಗೀಳಿಗೆ ಒಳಗಾಗುವ ಅನ್ನುವ ಅರ್ಥವನ್ನೂ ನೀಡುತ್ತದೆ. ಗತಕಾಲದ ನೆನಪುಗಳಿಂದ ಬಿಡಿಸಿಕೊಳ್ಳದಿದ್ದರೆ ಮನಸು, ಬುದ್ಧಿ, ವ್ಯಕ್ತಿತ್ವಗಳಿಗೆ ಬಿಡುಗಡೆ, ಸ್ವಾತಂತ್ರ್ಯ ದೊರೆಯುವುದು ಅಸಾಧ್ಯ.


ಸಗರದ ಬೊಮ್ಮಣ್ಣ

ಕಲ್ಬುರ್ಗಿ ಜಿಲ್ಲೆಯ ಸಗರದ ವಚನಕಾರ; ಇವರ ೮೨೦ ವಚನಗಳು ಪ್ರಕಟವಾಗಿವೆ. ʻಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾʼ ವಚನಾಂಕಿತ. ಶಿವನಲ್ಲದೆ ಅನ್ಯ ದೈವವಿಲ್ಲವೆಂಬ ಉಗ್ರನಿಷ್ಠೆಯಲ್ಲಿ ಜೈನರೊಡನೆ ಹೋರಾಡಿದ ಪ್ರಸ್ತಾಪಗಳಿವೆ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.