ಖುಶಿಗೆ ( happiness) ಮನೆಯಿದೆ ಆದರೆ ಆನಂದಕ್ಕೆ ( bliss) ಮನೆಯಿಲ್ಲ. ಅತೃಪ್ತಿಗೆ ಮನೆಯಿದೆ ಆದರೆ ಆನಂದಕ್ಕೆ ಇಲ್ಲ. ಆನಂದ, ಎಲ್ಲಿಯೂ ಬೇರುಗಳಿರದ ಬೆಳ್ಳಿಮೋಡದಂತೆ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಒಮ್ಮೆ ನನ್ನ ಮನೆ ಹೇಳಿತು.
“ಬಿಟ್ಟು ಹೋಗಬೇಡ ನನ್ನ
ನನ್ನೊಳಗೆ ನಿನ್ನ ಪರಂಪರೆಯೇ ಅಡಗಿದೆ.”
ರಸ್ತೆ ಹೇಳುತ್ತದೆ
“ಬಾ, ನನ್ನ ಹಿಂಬಾಲಿಸು
ನಾನು ನಿನ್ನ ಭವಿಷ್ಯ”
ಮನೆ ಮತ್ತು ರಸ್ತೆಗೆ
ಏನು ಗೊತ್ತು?
ನನಗೆ ಇತಿಹಾಸದ ಪರಿವಿಲ್ಲ
ಭವಿಷ್ಯದ ಭಯವಿಲ್ಲವೆಂದು.
ಇರುವಿಕೆಯಲ್ಲಿಯೂ
ನಾನು ಜಂಗಮ
ಹೋಗುವಿಕೆಯಲ್ಲಿಯೂ
ಸ್ಥಾವರ.
ಪ್ರೀತಿ ಮತ್ತು ಸಾವು
ಮಾತ್ರ
ಇದನ್ನು ಬದಲಾಯಿಸಬಲ್ಲದು.
~ ಖಲೀಲ್ ಜಿಬ್ರಾನ್
ನೀವು ಬೇರುಗಳನ್ನು ಕಂಡುಕೊಂಡ ಕ್ಷಣದಲ್ಲಿಯೇ ಆನಂದ ಮಾಯವಾಗುತ್ತದೆ ಮತ್ತು ನೀವು ನೆಲಕ್ಕೆ ಅಂಟಿಕೊಳ್ಳಲು ಶುರು ಮಾಡುತ್ತೀರ. ಮನೆ ಎಂದರೆ ಸುರಕ್ಷತೆ, ಆರಾಮ, ಸೌಲಭ್ಯ. ಮತ್ತು ಕೊನೆಗೆ ಈ ಎಲ್ಲ ಸಂಗತಿಗಳನ್ನು ಒಟ್ಟು ಮಾಡಿ ಹೇಳುವುದಾದರೆ, ಮನೆ ಎಂದರೆ ಸಾವು. ನೀವು ಹೆಚ್ಚು ಜೀವಂತಿಕೆಯಿಂದ ಇದ್ದಷ್ಟು ಹೆಚ್ಚು ಮನೆಯಿಂದ ಹೊರತಾಗುತ್ತೀರಿ.
Seeker ಎನ್ನುವುದರ ಮೂಲ ಅರ್ಥ ಇದು. ಹೀಗೆಂದರೆ ಬದುಕನ್ನು ಅಪಾಯಕಾರಿಯಾಗಿ ಬದುಕುವುದು, ಅಸುರಕ್ಷಿತವಾಗಿ ಬದುಕುವುದು, ನಾಳೆ ಏನು ಎನ್ನುವುದು ಗೊತ್ತಿಲ್ಲದಿರುವಂತೆ ಬದುಕುವುದು. ಹೀಗೆಂದರೆ ಯಾವತ್ತೂ ಲಭ್ಯವಾಗಿರುವುದು ಮತ್ತು ಯಾವತ್ತೂ ಬೆರಗಿಗೆ ತೆರೆದುಕೊಂಡಿರುವುದು. ನಿಮಗೆ ಅಚ್ಚರಿಗೊಳ್ಳುವುದು ಸಾಧ್ಯವಾಗುವುದಾದರೆ ನೀವು ಜೀವಂತವಾಗಿದ್ದೀರಿ. ಅಚ್ಚರಿ ( wonder) ಮತ್ತು ಅಲೆಮಾರಿತನ ( wander) ಒಂದೇ ಮೂಲದಿಂದ ಬಂದಿರುವಂಥವು. ಜಡಗೊಂಡ ( fixed) ಮೈಂಡ್ ಗೆ ಅಚ್ಚರಿ ಸಾಧ್ಯವಿಲ್ಲ, ಏಕೆಂದರೆ ಅದಕ್ಕೆ ಅಲೆಮಾರಿತನವೂ ಅಸಾಧ್ಯ. ಆದ್ದರಿಂದ ಮೋಡಗಳಂತೆ ಅಲೆಮಾರಿಯಾಗಿ, ಆಗ ಪ್ರತಿಕ್ಷಣ ಅನಂತ ಅಚ್ಚರಿಗಳ ತಾಣವಾಗುವುದು. ಯಾವತ್ತೂ ಅನಿಕೇತನವಾಗಿರಿ, ಮನೆಯಿಲ್ಲದಿರುವುದೆಂದರೆ, ಮನೆಯೊಳಗೆ ವಾಸ ಮಾಡಬೇಡಿ ಎಂದಲ್ಲ. ಹಾಗೆಂದರೆ ಯಾವುದಕ್ಕೂ ಅಂಟಿಕೊಳ್ಳಬೇಡಿ ಎಂದು ಅರ್ಥ. ನೀವು ಅರಮನೆಯಲ್ಲಿ ವಾಸ ಮಾಡುತ್ತಿದ್ದರೂ ಅದಕ್ಕೆ ಅಂಟಿಕೊಳ್ಳಬೇಡಿ. ಬಿಟ್ಟು ಹೋಗುವ ಗಳಿಗೆ ಎದುರಾದರೆ, ಹಿಂದೆ ನೋಡದಂತೆ ನೀವು ಬಿಟ್ಟು ಹೋಗಲು ಸಿದ್ಧರಾಗಿರಬೇಕು. ಯಾವುದೂ ನಿಮ್ಮನ್ನು ಕಟ್ಟಿಹಾಕಬಾರದು. ನೀವು ಎಲ್ಲವನ್ನೂ ಬಳಸಿ, ಎಲ್ಲವನ್ನೂ ಆನಂದಿಸಿ ಆದರೆ ಯಾವುದಕ್ಕೂ ಅಂಟಿಕೊಳ್ಳಬೇಡಿ.
ಒಂದು ಸಂಜೆ ಝೆನ್ ಮಾಸ್ಟರ್ ರಾಜನ ಅರಮನೆಗೆ ಬಂದ. ಅವನ ಪ್ರಖರ ತೇಜಸ್ಸಿಗೆ ಬೆರಗಾದ ಅರಮನೆಯ ಕಾವಲುಗಾರರು, ಮಾಸ್ಟರ್ ನ ತಡೆಯುವ ಸಾಹಸ ಮಾಡಲಿಲ್ಲ.
ಮಾಸ್ಟರ್ ಸೀದಾ ರಾಜನ ಆಸ್ಥಾನದ ಒಳಗೆ ನುಗ್ಗಿ , ರಾಜನ ಎದುರು ಬಂದು ನಿಂತ. ಮಂತ್ರಾಲೋಚನೆಯಲ್ಲಿ ಮಗ್ನನಾಗಿದ್ದ ರಾಜ, ಮಾಸ್ಟರ್ ನನ್ನು ಗುರುತಿಸಿ, ಅರಮನೆಗೆ ಸ್ವಾಗತಿಸಿದ.
“ಸ್ವಾಗತ ಮಾಸ್ಟರ್, ನನ್ನಿಂದೇನಾಗಬೇಕು? ಅಪ್ಪಣೆಯಾಗಲಿ”
“ಮಹಾರಾಜ ಈ ರಾತ್ರಿಯನ್ನು ನಾನು ನಿನ್ನ ಈ ಛತ್ರದಲ್ಲಿ ಕಳೆಯಬಹುದೆ ? “
ಮಾಸ್ಟರ್ ನ ಮಾತು ಕೇಳಿ ರಾಜನಿಗೆ ಆಶ್ಚರ್ಯವಾಯಿತು, ಜೊತೆಗೆ ಇದು ಅಪಮಾನ ಕೊಡ ಅನಿಸಿತು.
“ಮಾಸ್ಟರ್, ಇದು ಛತ್ರವಲ್ಲ, ನನ್ನ ಅರಮನೆ”
ರಾಜ ಸಿಟ್ಟಿನಿಂದ ಉತ್ತರಿಸಿದ.
ಮಾಸ್ಟರ್ ಸೌಜನ್ಯದಿಂದ ರಾಜನಿಗೆ ಉತ್ತರಿಸಿದ.
“ ಮಹಾರಾಜ, ಒಂದು ಪ್ರಶ್ನೆ ಕೇಳಲಾ?
ನಿನಗಿಂತ ಮೊದಲು ಈ ಅರಮನೆ ಯಾರ ಸ್ವತ್ತಾಗಿತ್ತು? “
“ಯಾಕೆ? ನನ್ನ ಅಪ್ಪನದು. ಆದರೆ ಈಗ ಅವನು ಸತ್ತು ಹೋಗಿದ್ದಾನೆ”
“ಹೌದಾ, ಹಾಗಾದರೆ ನಿನ್ನ ಅಪ್ಪನಿಗಿಂತಲೂ ಮೊದಲು? “
ಮಾಸ್ಟರ್ ಮತ್ತೆ ಪ್ರಶ್ನೆ ಕೇಳಿದ.
“ಸಹಜವಾಗಿ ನನ್ನ ಅಜ್ಜನದು. ಆದರೆ ಅವನೂ ತೀರಿ ಹೋಗಿದ್ದಾನೆ” ಎಂದ ರಾಜ.
“ ಯಾವ ಕಟ್ಟಡದಲ್ಲಿ ಜನ ಕೆಲವು ದಿನ ಮಾತ್ರ ಉಳಿದುಕೊಳ್ಳುತ್ತಾರೋ, ಆ ಕಟ್ಟಡವನ್ನ ಯಾವ ಹೆಸರಿನಿಂದ ಕರೆಯುತ್ತೀ? ಅರಮನೆಯಾ? ಛತ್ರನಾ ? “
ಮಾಸ್ಟರ್ ಪ್ರಶ್ನೆಗೆ ರಾಜನ ಬಳಿ ಉತ್ತರವಿರಲಿಲ್ಲ.
*******************************

