ಪ್ರೇಮ ಅವಶ್ಯಕವಾಗಿ ಒಂದು ವಿನೀತ ಭಾವ – ಇದರ ಹೊರತಾಗಿ ಬೇರೆ ಯಾವ ನಮ್ರತೆಯೂ ಇಲ್ಲ. ಪ್ರೇಮದ ಹೊರತಾಗಿ ನಮ್ರತೆಯನ್ನು ಬೆಳೆಸಿಕೊಳ್ಳುವೆವಾಗರೆ, ಇದು ಅಹಂ ನ ಇನ್ನೊಂದು ತಂತ್ರ ಮಾತ್ರ ~ಓಶೋ ರಜನೀಶ್! ಕನ್ನಡಕ್ಕೆ: ಚಿದಂಬರ ನರೇಂದ್ರ
ಸದಾ ತಮ್ಮ ಮೊಣಕಾಲ ಮೇಲೆ
ವಿನೀತರಾಗಿರುವ ಸಂತರು
ಆ ದಿವ್ಯ ಅನಾಹುತಕ್ಕೆ ಕಾಯುತ್ತ
ಗದ್ಗದಿತರಾಗಿರುವುದನ್ನು ಕಂಡು
ಆಶ್ಚರ್ಯವಾಗಬಹುದು
ಸಾಮಾನ್ಯ ಜನರಿಗೆ.
ಆದರೆ ಇದು
ಒಂದು ಶಿಷ್ಟಾಚಾರ ಮಾತ್ರ.
ದೇವಸ್ಥಾನ, ಮಸೀದಿ ಪ್ರವೇಶಿಸುವಾಗ
ಚಪ್ಪಲಿ ಹೊರಗೆ ಬಿಟ್ಟು
ಹೋಗುವುದಿಲ್ಲವೆ ಜನ, ಹಾಗೆ.
ದೇಹ ಮತ್ತು
ಮನಸ್ಸಿನ ವಿಷಯವೂ ಹಾಗೆಯೇ.
ತಾವು ಯಾವ ಚಪ್ಪಲಿಗಳ ಮೇಲೆ
ನಿಂತಿದ್ದೇವೆ ಎನ್ನುವುದರ ಅರಿವು
ಆಗುತ್ತಿದ್ದಂತೆಯೇ
ಹೊರಗೆಸೆದು ಬಿಡುತ್ತಾರೆ ಸಂತರು
ಚಪ್ಪಲಿಗಳನ್ನೆಲ್ಲ.
ಇದು ಶಿಷ್ಟಾಚಾರ ಅಷ್ಟೇ
ಇದು ಗೊತ್ತು ಸಂತರಾದವರಿಗೆ.
~ ಹಾಫಿಜ್
ಯಾವಾಗ ಪ್ರೇಮ ಕಾರಣವಾಗಿ ನಮ್ರತೆ ಸಹಜವಾಗಿ ಹೊರಹೊಮ್ಮುತ್ತದೆಯೋ ಆಗ ಅದು ಅಪಾರ ಸುಂದರ. ಆದ್ದರಿಂದ ಅಸ್ತಿತ್ವದೊಂದಿಗೆ ಪ್ರೇಮದಲ್ಲಿರಿ – ಮತ್ತು ಇದರ ಶುರುವಾತು ಎಂದರೆ ಸ್ವತಃ ನಿಮ್ಮನ್ನೇ ನೀವು ಮೊದಲು ಪ್ರೀತಿಸಿಕೊಳ್ಳುವುದು.
ಒಮ್ಮೆ ನೀವು ನಿಮ್ಮ ಜೊತೆ ಪ್ರೇಮದಲ್ಲಿರುವಿರಾದರೆ, ಆಗ ಬಹಳಷ್ಟು ಜನರ ಜೊತೆಗೆ ಈ ಭಾವವನ್ನು ಹಂಚಿಕೊಳ್ಳುವಿರಿ, ಮತ್ತು ನಿಧಾನವಾಗಿ ಈ ವಲಯ ಹೆಚ್ಚುತ್ತಲೇ ಹೋಗುವುದು. ಒಂದು ದಿನ ಥಟ್ಟನೇ ಈ ವಲಯದಲ್ಲಿ ಇಡೀ ಅಸ್ತಿತ್ವ ಒಳಗೊಂಡಿರುವುದು ನಿಮ್ಮ ಗಮನಕ್ಕೆ ಬರುವುದು. ಈಗ ಪ್ರೇಮ ಯಾವ ನಿರ್ದಿಷ್ಟ ವ್ಯಕ್ತಿಯೊಡನೆ ಮಾತ್ರ ಇರುವ ಸಂಗತಿಯಲ್ಲ. ಈಗ ಪ್ರೇಮ ನಿಮ್ಮ ಮೂಲಕ ಸುಮ್ಮನೇ ಹರಿಯುತ್ತಿದೆ, ಯಾರು ಬೇಕಾದರೂ ಇದನ್ನು ಸ್ವೀಕರಿಸಬಹುದು. ಸ್ವೀಕರಿಸಲು ಯಾರೂ ಇಲ್ಲದಿರುವಾಗಲೂ ಈ ಹರಿವು ಮುಂದುವರೆಯುತ್ತಿರುತ್ತದೆ.
ಆಗ ಪ್ರೇಮ, ಸಂಬಂಧ ಮಾತ್ರವಲ್ಲ, ಅದು ಇರುವಿಕೆಯ ಒಂದು ಸ್ಥಿತಿ. ಮತ್ತು ಇಂಥ ಇರುವಿಕೆಯ ಸ್ಥಿತಿಯಲ್ಲಿಯೇ ಇರುತ್ತದೆ ನಮ್ರತೆ, ನಿಜವಾದ ನಮ್ರತೆ. ಜೀಸಸ್ ವಿನೀತನಾಗಿರುವುದು ಈ ಬಗೆಯಲ್ಲಿ; ಪೋಪ್ ಈ ಬಗೆಯಲ್ಲಿ ವಿನೀತರಲ್ಲ. ನಾವು ಬಡತನವನ್ನು ಹೊಂದುತ್ತ ಈ ಬಗ್ಗೆ ಅಹಂ ಬೆಳೆಸಿಕೊಳ್ಳಬಹುದು, ಅಥವಾ ನಮ್ರತೆಯನ್ನು ಹೊಂದುತ್ತ ಈ ಬಗ್ಗೆ ಅಹಂ ಬೆಳೆಸಿಕೊಳ್ಳಬಹುದು. ನನಗೆ, ನಿಜವಾದ ನಮ್ರತೆ, ಪ್ರೇಮದ ಪರಿಮಳದಂತೆ ಹೊರಹೊಮ್ಮಿದ್ದು ಮಾತ್ರ. ಇದನ್ನು ಬೆಳೆಸಿಕೊಳ್ಳುವುದು ಸಾಧ್ಯವಿಲ್ಲ, ಇದನ್ನು ಪ್ರ್ಯಾಕ್ಟೀಸ್ ಮಾಡುವುದು ಸಾಧ್ಯವಿಲ್ಲ, ಇದನ್ನು ಕಲಿಯುವ ಯಾವ ರೀತಿಯೂ ಇಲ್ಲ. ನೀವು ಪ್ರೇಮದ ವಲಯವನ್ನು ಪ್ರವೇಶಿಸಬೇಕು ಮತ್ತು ಒಂದು ದಿನ ಥಟ್ಟನೇ ಪ್ರೇಮ ಹೂವಾಗಿರುವುದು, ವಸಂತ ಅವತರಿಸಿರುವುದು, ಪ್ರೇಮ ಅರಳಿರುವುದು ಮತ್ತು ಹಿಂದೆಂದೂ ಇರದ ಪರಿಮಳವೊಂದು ಹಬ್ಬಿಕೊಂಡಿರುವುದು ನಿಮ್ಮ ಗಮನಕ್ಕೆ ಬರುವುದು. ಈಗ ನೀವು ನಿಜವಾಗಿ ವಿನೀತರು.
*********************************

