ಕುರುಹು ಮುಖ್ಯವಲ್ಲ, ಅರಿವು ಮುಖ್ಯ ಅನ್ನುವ ತಿಳಿವಳಿಕೆ ಬರುವುದು ಎಷ್ಟು ಕಷ್ಟ! । ಓ.ಎಲ್.ನಾಗಭೂಷಣ ಸ್ವಾಮಿ
ಗಿಣಿಯಿಲ್ಲದ ಪಂಜರ ಹಲವು ಮಾತನಾಡಬಲ್ಲುದೆ
ದೇವರಿಲ್ಲದ ದೇಗುಲಕ್ಕೆ ಮಂತ್ರ, ಅಭಿಷೇಕವುಂಟೆ
ಅರಿವು ನಷ್ಟವಾಗಿ ಕುರುಹಿನ ಹಾವಚೆಯ
ನಾನರಿಯೆನೆಂದನಂಬಿಗ ಚೌಡಯ್ಯ
(ಕುರುಹು-ಗುರುತು, ಇಷ್ಟಲಿಂಗ; ಹಾವಚೆ-ಪಾಚಿ)
ಪಂಜರದೊಳಗಿನ ಗಿಣಿ ಮಾತಾಡಬಲ್ಲುದೇ ಹೊರತು ಪಂಜರ ಮಾತಾಡಲಾರದು. ಪೂಜೆ ಅಭಿಷೇಕ ಎಲ್ಲ ನಡೆಯುವುದು ದೇವಸ್ಥಾನದಲ್ಲಿರುವ ದೇವರಿಗೇ ಹೊರತು ದೇವಸ್ಥಾನಕ್ಕಲ್ಲ. ಅರಿವು ಇರದಿದ್ದರೆ ಕುರುಹು ಅನ್ನುವ ಗುರುತು ಕೇವಲ ಪಾಚಿ, ಕಾಲಿಟ್ಟರೆ ಜಾರುವ ಪಾಚಿ ಅಷ್ಟೇ. ಅರಿವು ಜೀವಂತ, ಕುರುಹು ನಾವು ಕೊಟ್ಟುಕೊಂಡ ಗುರುತಿನ ಅರ್ಥ.
ನಾವು ಬದುಕುತ್ತಿರುವ ಕಾಲದಲ್ಲಿ ಜಾತಿ, ಭಾಷೆ, ಧರ್ಮ ಇಂತ ಕುರುಹುಗಳೇ ಮುಖ್ಯವೆಂದು ಭಾವಿಸಿ ಸಂಕಟಕೊಡುತ್ತಾ ಸಂಕಟಪಡುತ್ತಾ ಇದ್ದೇವೆ. ಇಷ್ಟಲಿಂಗ, ಜನಿವಾರ, ಇತ್ಯಾದಿ ಯಾವುದೇ ಕುರುಹು ಇರಲಿ ಅದಕ್ಕೆ ಅರ್ಥ ಕೊಡುವವರು ನಾವೇ. ಕುರುಹು ಮುಖ್ಯವಲ್ಲ, ಅರಿವು ಮುಖ್ಯ ಅನ್ನುವ ತಿಳಿವಳಿಕೆ ಬರುವುದು ಎಷ್ಟು ಕಷ್ಟ. ಕವಿಯನ್ನು ನಿಂದಿಸದೆ ಕಾವ್ಯವನ್ನು ಟೀಕಿಸುವುದು, ವ್ಯಕ್ತಿಯನ್ನು ಹೀಗಳೆಯದೆ ವ್ಯಕ್ತಿ ಮಾಡಿದ ಕಾರ್ಯದ ಸರಿ ತಪ್ಪು ಕುರಿತು ಮಾತಾಡುವುದು ನಾವೆಲ್ಲ ಬೆಳಸಿಕೊಳ್ಳಬೇಕಾದ ಪ್ರಬುದ್ಧತೆ. ಕುರುಹನ್ನೇ ಮುಖ್ಯವೆಂದು ತಿಳಿದು ನಡೆಸುವ ರಾಜಕಾರಣದ ಮಿತಿಯನ್ನೂ ಈ ವಚನ ಹೇಳುವಂತಿದೆ. ಇಷ್ಟಲಿಂಗವೂ ಸೇರಿದಂತೆ ರಾಷ್ಟ್ರೀಯತೆಯೂ ಸೇರಿದಂತೆ ಎಲ್ಲ ಬಗೆಯ ಕುರುಹುಗಳನ್ನೇ ಮುಖ್ಯವೆಂದು ತಿಳಿದು ಬದುಕು ಸಾಗಿಸುವುದೆಂದರೆ ಪಾಚಿಯ ಮೇಲೆ ಕಾಲಿಟ್ಟು ನಡೆದ ಹಾಗೆ. ಅದರಿಂದ ಘಾಸಿಯಾಗುವುದು ತಪ್ಪದು. ಅರಿವನ್ನು ಕಳೆದುಕೊಂಡು ಬರಿಯ ಕುರುಹು ಮಾತ್ರ ನೆಚ್ಚಿಕೊಂಡಿದ್ದರೆ ಅದು ದೇವರಿಲ್ಲದ ದೇಗುಲ, ಗಿಣಿ ಇರದ ಪಂಜರಗಳನ್ನು ಮಾತ್ರ ಇಟ್ಟುಕೊಂಡಿರುವಂತೆ.
ಅಂಬಿಗರ ಚೌಡಯ್ಯ
೨೭೮ ವಚನಗಳು ದೊರೆತಿವೆ. ಅಂಬಿಗ ಚೌಡಯ್ಯ ಎಂಬುದೇ ವಚನಾಂಕಿತ. ಬದುಕಿನ ವಿವರಗಳು ತಿಳಿದಿಲ್ಲ.

