ಯಾವಾಗ ಚಾರ್ಲ್ಸ್ ಡಾರ್ವಿನ್ ತನ್ನ ವಿಕಾಸವಾದ ಮತ್ತು survival of the fittest ಸಿದ್ಧಾಂತವನ್ನು ಮಂಡಿಸಿದನೋ ಆಗಲೇ, ಇನ್ನೊಬ್ಬ ಮನುಷ್ಯ ರಷ್ಯಾದ Prince Kropotkin ಇದಕ್ಕೆ ತದ್ವಿರುದ್ಧವಾದ ವಾದವೊಂದನ್ನು ರೂಪಿಸುತ್ತಿದ್ದ : ವಿಕಾಸ ಸಾಧ್ಯವಾಗುವುದು ಸಹಕಾರದ ಮೂಲಕ ~ ಓಶೋ ರಜನೀಶ್ ಕನ್ನಡಕ್ಕೆ ಚಿದಂಬರ ನರೇಂದ್ರ
‘ಪ್ರೇಮದ ಹುಡುಕಾಟ’ ಕ್ಕೆ
ನಮ್ಮನ್ನು ಪೂರ್ಣವಾಗಿ ಪರಿವರ್ತನೆ ಮಾಡುವ ಶಕ್ತಿಯಿದೆ.
ಈ ಹುಡುಕಾಟದ ಹಾದಿಯಲ್ಲಿ ಪಕ್ವಗೊಳ್ಳದ
ಯಾವ ಸಾಧಕನ ಬಗ್ಗೆಯೂ
ನನಗೆ ಗೊತ್ತಿಲ್ಲ.
ಪ್ರೇಮದ ದಾರಿಯಲ್ಲಿ ನೀವು
ಮೊದಲ ಹೆಜ್ಜೆ ಇಟ್ಟ ಕ್ಷಣದಲ್ಲಿಯೇ
ಬದಲಾವಣೆಗಳು ಕಾಣಿಸಿಕೊಳ್ಳಲು ಶುರುವಾಗುತ್ತವೆ
ನಿಮ್ಮ ಒಳಗೂ ಮತ್ತು ಹೊರಗೂ.
~ ಶಮ್ಸ್ ತಬ್ರೀಝಿ
ಜನರಿಗೆ Prince Kropotkin ಬಗ್ಗೆ ಹೆಚ್ಚು ಗೊತ್ತಿಲ್ಲ ಮತ್ತು ಅವನ ವಾದ ಡಾರ್ವಿನ್ ನ ವಾದಕ್ಕಿಂತ ಹೆಚ್ಚು ಮೌಲ್ಯಯುತವಾದದ್ದು. ಕೊಂಚ ಸಮಯ ಹಿಡಿಯಬಹುದಾದರೂ ಅವನ ವಾದ ಡಾರ್ವಿನ್ ನ ವಾದವನ್ನು ಹಿಂದೆ ಹಾಕುವುದು ಖಚಿತ.
ಒಬ್ಬರ ವಿಕಾಸ ಬಿಕ್ಕಟುಗಳ ಮೂಲಕವೇ ಆಗುತ್ತದೆ ಎನ್ನುವ ವಿಚಾರವೇ ಹಿಂಸಾತ್ಮಕವಾದದ್ದು ; ಇದು ಬಹಳ ಹಗುರವಾದ ವಾದ. ನೀವು ಡಾರ್ವಿನ್ ಕಣ್ಣುಗಳ ಮೂಲಕ ನೋಡುವಿರಾದರೆ, ಬದುಕು ಕೇವಲ survival of the fittest, ಬಲಿಷ್ಠರ ಬದುಕುಳಿಯುವಿಕೆ ಮಾತ್ರ. ಮತ್ತು ಬಲಿಷ್ಠ ಎಂದರೆ ಯಾರು? ಅತ್ಯಂತ ವಿನಾಶಕಾರಿ, ಅತ್ಯಂತ ಆಕ್ರಮಣಕಾರಿಯಾದವರೇ ಬಲಿಷ್ಠರು. ಆದ್ದರಿಂದ ಬಲಿಷ್ಠ ಎನ್ನುವುದು ಮೌಲ್ಯರಹಿತವಾದದ್ದು; ಇದು ಮಾನವೀಯವೂ ಅಲ್ಲ – ಬಲಿಷ್ಠ ಎಂದರೆ ಹೆಚ್ಚು ಪ್ರಾಣಿಗಳ ಹಾಗೆ ಇರುವವರು. ಈ ವಾದದ ಪ್ರಕಾರ, ಕ್ರಿಸ್ತ ಬದುಕುಳಿಯಲಾರ, ಅವನು ಬಲಿಷ್ಠನಲ್ಲ. ಬುದ್ಧ ಬದುಕುಳಿಯಲಾರ, ಅವನು ಬಲಿಷ್ಠನಲ್ಲ. ಬುದ್ಧ ಮತ್ತು ಜೀಸಸ್ ಬಹಳ ಅಸಹಾಯಕ ವ್ಯಕ್ತಿಗಳು. ಅಲೆಕ್ಸಾಂಡರ್ ಬದುಕುಳಿಯುತ್ತಾನೆ, ಹಿಟ್ಲರ್ ಬದುಕುಳಿಯುತ್ತಾನೆ, ಸ್ಟಾಲಿನ್, ಮಾವೋ ಬದುಕುಳಿಯುತ್ತಾರೆ, ಇವರು ಬಲಿಷ್ಠ ಜನರು. ಆಗ ಕೇವಲ ಹಿಂಸೆ ಬದುಕುಳಿಯುತ್ತದೆ, ಪ್ರೇಮವಲ್ಲ. ಕೇವಲ ಕೊಲೆ ಬದುಕುಳಿಯುತ್ತದೆ, ಧ್ಯಾನವಲ್ಲ.
ಡಾರ್ವಿನ್ ನದು ಬದುಕಿನ ಕುರಿತಾದ ಅತ್ಯಂತ ಅಮಾನವೀಯ ಧ್ಯಾನ. ನೀವು ಕಾಡನ್ನು ಪ್ರವೇಶ ಮಾಡಿ ಡಾರ್ವಿನ್ ನ ಕಣ್ಣುಗಳ ಮೂಲಕ ನೋಡುವಿರಾದರೆ, ನೀವು ಎಲ್ಲೆಂದರಲ್ಲಿ ಸಂಘರ್ಷವನ್ನು ಕಾಣುವಿರಿ. ಇದು ದುಸ್ವಪ್ನ. ಮತ್ತು ನೀವು ಅದೇ ಕಾಡನ್ನು ಪ್ರವೇಶಿಸಿ Prince Kropotkin ನ ಕಣ್ಣುಗಳ ಮೂಲಕ ನೋಡುವುರಾದರೆ, ಅಲ್ಲೊಂದು ಪ್ರಚಂಡವಾದ ಸೌಹಾರ್ದವಿದೆ. ಈ ಜಾತಿಯ ಜೀವಿಗಳು ಅಪರೂಪದ ಆಳ ಸಹಕಾರದಲ್ಲಿ ಬದುಕುತ್ತಿವೆ, ಹೀಗಲ್ಲವಾಗಿದ್ದರೆ ಏನೂ ಬದುಕುಳಿಯುತ್ತಿರಲಿಲ್ಲ.
ಹಿಂಸೆ ಕೇವಲ ಭಾಗ ಮಾತ್ರ, ಅದುವೇ ಪೂರ್ಣವಲ್ಲ; ಅಲ್ಲಿ ಆಳದಲ್ಲೊಂದು ಸೌಹಾರ್ದವಿದೆ. ಮತ್ತು ಜೀವಿಗಳು ಹೆಚ್ಚು ಹೆಚ್ಚು ವಿಕಾಸ ಹೊಂದಿದಂತೆಲ್ಲ, ಅಲ್ಲಿ ಹೆಚ್ಚು ಹೆಚ್ಚು ಸಹಕಾರವಿದೆ. ಇದುವೇ ವಿಕಾಸದ ಏಣಿ.
********************************

