ಅಲ್ಪ ಸಂತುಷ್ಟರು (Living at the minimum): ಓಶೋ 365 #Day 350

ಮನುಷ್ಯರಿಗೆ ತಮ್ಮ ಸಾಮರ್ಥ್ಯದ ಬಗ್ಗೆ ಪೂರ್ಣ ಅರಿವಿಲ್ಲ, ಅವರು ತಮ್ಮ ಸಾಮರ್ಥ್ಯದ ಕನಿಷ್ಟವನ್ನು ಮಾತ್ರ ಬಳಸುತ್ತ ಬದುಕುತ್ತಾರೆ. ಈಗ ಮನೋವಿಜ್ಞಾನಿಗಳು ಹೇಳುವುದೇನೆಂದರೆ, ಜೀನಿಯಸ್ ಗಳು ಕೂಡ ತಮ್ಮ ಬುದ್ಧಿಮತ್ತೆಯ 15% ಪ್ರತಿಶತ ಮಾತ್ರ ಬಳಸುತ್ತಾರೆ – ಪರಿಸ್ಥಿತಿ ಹೀಗಿರುವಾಗ ಸಾಮಾನ್ಯರ, ಸಾಧಾರಣ ಜನ ಹೇಗೆ ಬದುಕುತ್ತಿರಬಹುದು? ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ


    ಪ್ರೇಮದಲ್ಲಿ
    ಇದು ಹೀಗೇ ಎಂದು ಹೇಳುವ ನಿಯಮಗಳಿಲ್ಲ,
    ಯಾರು ಹೆಚ್ಚು ಪ್ರೇಮಿಸುತ್ತಾರೆ
    ಯಾರು ಕಡಿಮೆ ಎನ್ನುವ ಸಂಶಯಗಳಿಲ್ಲ,
    ಯಾರು ಉನ್ಮತ್ತರು, ಯಾರು ಸ್ಥಿತಪ್ರಜ್ಞರು
    ಎನ್ನುವ ತಮಾಷೆಗಳಿಲ್ಲ.

    ಪ್ರೇಮದಲ್ಲಿ,
    ಶಾಸ್ತ್ರಗಳನ್ನು ಬಾಯಿಪಾಠ ಮಾಡಿ ಒಪ್ಪಿಸುವ
    ಜಾಣತನವಿಲ್ಲ,
    ಗುರುಗಳಿಲ್ಲ, ಶಿಷ್ಯರಿಲ್ಲ,

    ಇರುವುದೆಲ್ಲ, ಕೇವಲ
    ತುಂಟ ಕಾಲೆಳೆದಾಟ,
    ಅರ್ಥಗಳಿಲ್ಲದ ಹರಟೆ, ಸಲ್ಲಾಪ
    ಹೊಟ್ಟೆ ತುಂಬ ನಗು ಮತ್ತು
    ಮೈದುಂಬಿ ಕುಣಿತ.

    ಒಡೆದು ಚೂರು ಚೂರಾದಾಗ ಕುಣಿಯಿರಿ,
    ಸರಪಳಿಗಳನ್ನು ಕತ್ತರಿಸಿ ಮುಕ್ತರಾದಾಗ ಕುಣಿಯಿರಿ,
    ಜಗಳ, ಹೋರಾಟಗಳ ನಡುವೆ ಕುಣಿಯಿರಿ,
    ನಿಮ್ಮ ರಕ್ತದ ಕಣ ಕಣದಲ್ಲಿ ಕುಣಿಯಿರಿ
    ಎಲ್ಲದರಿಂದ ಪಾರಾದಾಗ ಕುಣಿಯಿರಿ,

    ಕುಣಿಯಿರಿ, ಕುಣಿಯಿರಿ, ಕುಣಿಯಿರಿ

    ~ ರೂಮಿ

    ಸಾಮಾನ್ಯ ಜನ ತಮ್ಮ ಬುದ್ಧಿಮತ್ತೆಯ 5-7% ಪ್ರತಿಶತ ಮಾತ್ರ ಉಪಯೋಗ ಮಾಡುತ್ತಾರಂತೆ. ಇದು ಬುದ್ಧಿಮತ್ತೆ ವಿಷಯವಾಯ್ತು, ಪ್ರೇಮದ ಸಾಮರ್ಥ್ಯದ ಬಗ್ಗೆ ಯಾರೂ ಯೋಚನೆ ಮಾಡಿಲ್ಲ. ನಾನು ಜನರನ್ನು ಗಮನಿಸಿದಾಗ, ಬಹಳ ಅಪರೂಪಕ್ಕೆ ಅವರು ತಮ್ಮ ಲವ್ ಎನರ್ಜಿಯನ್ನು ಬಳಸುತ್ತಾರೆ, ಮತ್ತು ಇದು ಅವರ ನೈಜ ಖುಶಿಯ ಮೂಲ.

    ನಾವು ಏಳರಿಂದ ಹದಿನೈದು ಪ್ರತಿಶತ ಮಾತ್ರ ನಮ್ಮ ಬುದ್ಧಿಮತ್ತೆಯ ಸಾಧ್ಯತೆಯನ್ನು ಉಪಯೋಗ ಮಾಡುತ್ತೇವೆ. ಆದ್ದರಿಂದ ನಮ್ಮ ಮಹಾ ಜೀನಿಯಸ್ ಗಳು ಕೂಡ ತಮ್ಮ ಬುದ್ಧಿಮತ್ತೆಯ ಕನಿಷ್ಟ ಮಟ್ಟವನ್ನು ಮಾತ್ರ ಉಪಯೋಗ ಮಾಡುತ್ತಿದ್ದಾರೆ ; ಪ್ರತಿಶತ ಎಂಭತ್ತೈದರಷ್ಟು ಬುದ್ಧಿಮತ್ತೆ ವ್ಯರ್ಥವಾಗಿ ಹೋಗುತ್ತಿದೆ; ಇದನ್ನು ಅವರು ಯಾವತ್ತೂ ಬಳಸಿಲ್ಲ. 100% ತಮ್ಮ ಸಾಮರ್ಥ್ಯವನ್ನು ಬಳಸಿದರೆ ಏನಾಗಬಹುದೆಂಬ ಕಲ್ಪನೆ ಯಾರಿಗೂ ಇಲ್ಲ.

    ಮತ್ತು ನಾವು ನಮ್ಮ ಪ್ರೇಮದ ಸಾಮರ್ಥ್ಯದ 5% ವನ್ನೂ ಉಪಯೋಗ ಮಾಡುತ್ತಿಲ್ಲ. ಪ್ರೇಮದ ವಿಷಯದಲ್ಲಿ ನಾವು ನಾಟಕ ಮಾಡುತ್ತ ಹೋಗುತ್ತೇವೆಯೇ ಹೊರತು ನಾವು ನಮ್ಮ ಪ್ರೇಮದ ಸಾಮರ್ಥ್ಯವನ್ನು ಬಳಸಿಕೊಳ್ಳುವುದಿಲ್ಲ. ಬುದ್ಧಿಮತ್ತೆ ನಿಮ್ಮನ್ನು ಹೊರಗಿನ ವಾಸ್ತವಕ್ಕೆ ಹತ್ತಿರವಾಗಿಸುತ್ತದೆಯಾದರೆ, ಪ್ರೇಮ ನಿಮ್ಮನ್ನು ಒಳಗಿನ ವಾಸ್ತವದೊಂದಿಗೆ ಒಂದಾಗಿಸುತ್ತದೆ. ಇದನ್ನು ಹೊರತುಪಡಿಸಿ ಬೇರೆ ದಾರಿ ಇಲ್ಲ ; ಅಂತರಂಗವನ್ನು ಅರ್ಥ ಮಾಡಿಕೊಳ್ಳುವ ಏಕೈಕ ದಾರಿ, ಪ್ರೇಮ

    ನಸ್ರುದ್ದೀನ್ ಭಾವಿ ಮದುವೆ ಗಂಡಿನ ಕೈ ಕುಲುಕಿ ಅಭಿನಂದನೆ ಹೇಳಿದ.

    “ ನಿನ್ನ ಜೀವನದ ಅತ್ಯಂತ ನೆಮ್ಮದಿಯ ದಿನದ ಶುಭಾಶಯ ಗೆಳೆಯ “

    “ ಆದರೆ ನಸ್ರುದ್ದೀನ್ ನನ್ನ ಮದುವೆ ಇರೋದು ನಾಳೆ “
    ಗೆಳೆಯ ತಬ್ಬಿಬ್ಬಾದ.

    “ ಗೊತ್ತು, ಅದಕ್ಕೇ ಈ ದಿನ ಅತ್ಯಂತ ನೆಮ್ಮದಿಯ ದಿನ ಅಂತ ವಿಶ್ ಮಾಡಿದ್ದು “

    ನಸ್ರುದ್ದೀನ್ ಗಂಭೀರವಾಗಿ ಉತ್ತರಿಸಿದ.


    Unknown's avatar

    About ಅರಳಿ ಮರ

    ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

    Leave a Reply

    This site uses Akismet to reduce spam. Learn how your comment data is processed.