ಜಾತಿಯೂ ಸೇರಿದ ಹಾಗೆ ಮೇಲು ಕೀಳು ಅನ್ನುವ ವಿಂಗಡಣೆಯೂ ನಾವೇ ಮಾಡಿಕೊಂಡದದೇ ಹೊರತು ಸಹಜವಲ್ಲ, ನಿಜವಲ್ಲ. ಈ ತಿಳಿವಳಿಕೆ ನಮ್ಮ ಹೃದ್ಗತ, ಮನೋಗತ, ಭಾವಗತವಾಗಿ ನಮ್ಮನ್ನೆಲ್ಲ ಆವರಿಸಿಕೊಳ್ಳುವುದನ್ನೇ ಜ್ಞಾನೋದಯ ಎಂದು ಈ ವಚನ ಹೇಳುತ್ತಿದೆ…। ಓ.ಎಲ್.ನಾಗಭೂಷಣ ಸ್ವಾಮಿ
ಧರೆಗೆ ಸೂತಕವುಂಟೆ
ವಾರಿಧಿಗೆ ಹೊಲೆಯುಂಟೆ
ಉರಿವ ಅನಲಂಗೆ ಜಾತಿಭೇದವುಂಟೆ
ಹರಿದು ಚರಿಸುವ ಅನಿಲಂಗೆ ಸೀಮೆಯುಂಟೆ
ಆಕಾಶಕ್ಕೆ ದಾರಿ ಮೇರೆಯುಂಟೆ
[ಇನಿತ]ರಿಂದಲೊದಗಿದ ಘಟವನು ಆರು ಹೊಲ್ಲೆಂಬರು
ಸಾರವು ಕರ್ಮ, ಕೂಡಲಚೆನ್ನಸಂಗಮದೇವಾ ನಿಮ್ಮ ಶರಣಂಗೆ
(ವಾರಿಧಿ-ಸಮುದ್ರ; ಅನಲ-ಬೆಂಕಿ; ಅನಿಲ-ಗಾಳಿ; ಘಟ-ದೇಹ; ಇನಿತರಿಂದ-ಇವಿಷ್ಟರಿಂದ; ಹೊಲ್ಲೆಂಬರು-ಅಶುದ್ಧವನ್ನುವರು; ಸಾರವು-ಹತ್ತಿರ ಬಾರವು)
ಭೂಮಿಗೆ ಸೂತಕವಿದೆಯೇ, ಸಮುದ್ರಕ್ಕೆ ಸೂತಕವಿದೆಯೇ, ಬೆಂಕಿ ಜಾತಿಬೇಧ ಮಾಡುತ್ತದೆಯೇ, ಗಾಳಿಗೆ ಗಡಿ ರೇಖೆಗಳಿವೆಯೇ, ಆಕಾಶಕ್ಕೆ ದಾರಿಯಾಗಲೀ ಮಿತಿಯಾಗಲೀ ಇದೆಯೇ? ಭೂಮಿ, ನೀರು, ಬೆಂಕಿ, ಗಾಳಿ, ಆಕಾಶ ಅನ್ನುವ ಐದು ಮೂಲ ಸಾಮಗ್ರಿಗಳಿಗೇ ಯಾವ ಭೇದ ಭಾವವೂ ಇಲ್ಲ. ಹಾಗಿರುವಾಗ ಈ ಮೂಲ ವಸ್ತುಗಳಿಂದ ಆಗಿರುವ ಮನುಷ್ಯ ದೇಹಗಳಲ್ಲಿ ಹೊಲೆ, ಮುಟ್ಟಬಾರದು ಅನ್ನುವಂಥ ಸೂತಕ ಯಾಕೆ? ಕೂಡಲಚೆನ್ನಸಂಗಮದೇವನ ಶರಣರಿಗೆ ಯಾವ ಕರ್ಮವೂ ಇಲ್ಲ.
ಸೂತಕ, ಮೈಲಿಗೆ, ಮುಟ್ಟಬಾರದು ಅನ್ನುವಂಥ ನಿಷೇಧಗಳೆಲ್ಲ ಮನುಷ್ಯರು ಮಾಡಿಕೊಂಡದ್ದು. ಮನುಷ್ಯರೆಲ್ಲರೂ ರೂಪುಗೊಳ್ಳುವುದಕ್ಕೆ ಕಾರಣವಾದ ಮೂಲ ಸಾಮಗ್ರಿಗಳಿವೆಯಲ್ಲ ಅವು ಇಂಥ ಬೇಧ ಭಾವ ತೋರಿಸುವುದಿಲ್ಲ. ಜಾತಿಯೂ ಸೇರಿದ ಹಾಗೆ ಮೇಲು ಕೀಳು ಅನ್ನುವ ವಿಂಗಡಣೆಯೂ ನಾವೇ ಮಾಡಿಕೊಂಡದದೇ ಹೊರತು ಸಹಜವಲ್ಲ, ನಿಜವಲ್ಲ. ಈ ತಿಳಿವಳಿಕೆ ನಮ್ಮ ಹೃದ್ಗತ, ಮನೋಗತ, ಭಾವಗತವಾಗಿ ನಮ್ಮನ್ನೆಲ್ಲ ಆವರಿಸಿಕೊಳ್ಳುವುದನ್ನೇ ಜ್ಞಾನೋದಯ ಎಂದು ಈ ವಚನ ಹೇಳುತ್ತಿದೆ.
ಚೆನ್ನಬಸವಣ್ಣ
ಬಸವಣ್ಣನವರ ಸೋದರಳಿಯ, ಅಂದರೆ ಬಸವಣ್ಣನವರ ಸಹೋದರಿ ಅಕ್ಕನಾಗಮ್ಮನವರ ಮಗ. ಇವರ ೧೭೬೩ ವಚನ ದೊರೆತಿವೆ. ಕೂಡಲಚೆನ್ನಸಂಗ ಎಂಬುದು ಅವರ ವಚನಾಂಕಿತ.ಲಿಂಗಾಯತ/ವೀರಶೈವ ಮತಧರ್ಮಶಾಸ್ತ್ರದ ತಾತ್ವಿಕ ಅಂಶಗಳನ್ನು ನಿರೂಪಿಸಿದ್ದು ಇವರ ಹೆಚ್ಚುಗಾರಿಕೆ. ಆಗಮಗಳಲ್ಲಿರುವ ಷಟ್‌ಸ್ಥಲಗಳ ಚಿಂತನೆಯನ್ನು ಸಮನ್ವಯಗೊಳಿಸಿ ಲಿಂಗಾಯತ/ವೀರಶೈವ ಮತಧರ್ಮ ಸಿದ್ಧಾಂತವನ್ನು ನಿರೂಪಿಸಿದ ಖ್ಯಾತಿ ಚೆನ್ನಬಸವಣ್ಣನವರದ್ದು.

