ಯಾವಾಗ ಇಬ್ಬರು ಪ್ರೀತಿಯಲ್ಲಿರುತ್ತಾರೋ ಆಗ ಅವರು ಸ್ವತಂತ್ರ ವ್ಯಕ್ತಿಗಳಾಗಿರುತ್ತಾರೆ. ಅವರಿಗೆ ಸ್ವಾತಂತ್ರ್ಯವಿದೆ ; ಪ್ರೀತಿ ಕರ್ತವ್ಯವಲ್ಲ. ಅವರ ಸ್ವಾತಂತ್ರ್ಯದ ಕಾರಣವಾಗಿಯೇ ಅವರ ಮಧ್ಯೆ ಕೊಡುಕೊಳ್ಳುವಿಕೆ ಸಾಧ್ಯವಾಗುತ್ತದೆ, ಮತ್ತು ನಿರಾಕರಣೆಗೆ ಕೂಡ, ಅವರು ಸ್ವತಂತ್ರರು~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಕೂಡಿ ಹುಟ್ಟಿದವರು ನೀವು
ಕೂಡಿಯೇ ಬಾಳುವಿರಿ, ಕೊನೆಯ ತನಕ.
ಬಿಳೀ ರೆಕ್ಕೆಯ ಸಾವಿನ ಹಕ್ಕಿ
ನಿಮ್ಮ ಕಾಲವ ಕುಕ್ಕಿ
ಚೂರು ಚೂರು ಮಾಡುವಾಗಲೂ
ಕೈ ಹಿಡಿದುಕೊಂಡೇ ಇರುವಿರಿ ಕೊನೆಯ ತನಕ.
ಹೌದು,
ಭಗವಂತ ನೆನಪಿಸಿಕೊಳ್ಳಲೂ ನಿರಾಕರಿಸುವ ನೆನಪುಗಳಲ್ಲಿ
ನೀವು ಹತ್ತಿರ, ಒಬ್ಬರಿಗೊಬ್ಬರು.
ಆದರೆ ಈ ಕೂಡಿರುವಿಕೆಯ ನಡುವೆ ಇರಲಿ
ಕೊಂಚ ಬೆಳಕಿಗೆ ದಾರಿ.
ಕುಣಿಯಲಿ ಸಾಂಗವಾಗಿ ನಿಮ್ಮ ನಡುವೆ
ಸ್ವರ್ಗ ಸೀಮೆಯ ಗಾಳಿ.
ಪ್ರೇಮಿಸಿ ಮೈದುಂಬಿ, ಆದರೆ
ಕಟ್ಟಿ ಹಾಕದಿರಿ ಒಬ್ಬರನ್ನೊಬ್ಬರು.
ಆತ್ಮದ ತೀರಗಳ ನಡುವೆ ಹರಿಯಲಿ
ತೀರದ ಸಾಗರದಂತೆ ಪ್ರೇಮ.
ಒಬ್ಬರು ಇನ್ನೊಬ್ಬರ ಬಟ್ಟಲುಗಳನ್ನ ತುಂಬಿ
ಆದರೆ ಹಚ್ಚದಿರಿ ತುಟಿ ಮಾತ್ರ, ಒಂದೇ ಬಟ್ಟಲಿಗೆ.
ಹಂಚಿಕೊಳ್ಳಿ ನಿಮ್ಮ ನಿಮ್ಮ ರೊಟ್ಟಿಗಳ
ಆದರೆ ಕೈ ಹಾಕದಿರಿ ಮಾತ್ರ ಒಂದೇ
ರೊಟ್ಟಿಯ ತುಣುಕಿಗೆ.
ಕೂಡಿ ಹಾಡಿ, ಕೂಡಿ ಕುಣಿಯಿರಿ
ಕೂಡಿ ಖುಷಿಯ ಉತ್ತುಂಗವನ್ನು ಮುಟ್ಟಿ,
ಆದರೆ ಕದಲದಿರಿ ಮಾತ್ರ
ನಿಮ್ಮ ನಿಮ್ಮ ನೆಲವ ಬಿಟ್ಟು.
ಸ್ವರ ವಾದ್ಯದ ತಂತಿಗಳ ನಡುವೆ
ಅಂತರವಿರುವಾಗಲೂ ಅವು
ಹಾಡುವಂತೆ ಒಂದೇ ರಾಗ.
ಹಂಚಿಕೊಳ್ಳಿ ಹೃದಯಗಳನ್ನು ಪ್ರೀತಿಗೆ,
ಆದರೆ ಸುಪರ್ದಿಗಲ್ಲ.
ಬದುಕಿಗೆ ಮಾತ್ರ ಗೊತ್ತು
ನಿಮ್ಮ ಹೃದಯಗಳನ್ನು ಹಿಡಿದಿಡುವ ಗುಟ್ಟು.
ಹತ್ತಿರ ನಿಂತರೂ
ಒತ್ತಿಕೊಳ್ಳದಿರಿ ಒಬ್ಬರನ್ನೊಬ್ಬರು.
ನಿಲ್ಲಿ ದೇವಾಲಯದ ಕಂಬಗಳಂತೆ,
ನಡುವೆ ಇರಲಿ ಒಂದು ದಿವ್ಯ ಅವಕಾಶ.
ಮಹಾಮರಗಳು ಬೆಳೆಯುವುದಿಲ್ಲ
ಒಂದು ಇನ್ನೊಂದರ ನೆರಳಿನಲ್ಲಿ.
ಪ್ರವಾದಿ / ಖಲೀಲ್ ಜಿಬ್ರಾನ್
ಪ್ರೀತಿಯಲ್ಲಿರುವವರು ಪರಸ್ಪರರಿಗೆ Yes ಹೇಳುತ್ತಿದ್ದಾರೆಂದರೆ, ಅದು ಅವರ ನಿರ್ಧಾರ – ಇದು ಕಟ್ಟುಪಾಡು ಅಲ್ಲ, ಇದು ಯಾವುದೇ ನಿರೀಕ್ಷೆಗಳ ಪೂರ್ತಿ ಅಲ್ಲ. ನಿಮಗೆ ಪ್ರೀತಿ ಕೊಡುವುದು ಖುಶಿಯ ವಿಷಯವಾಗಿರುವುದರಿಂದ ನೀವು ಕೊಡುತ್ತಿದ್ದೀರಿ. ಮತ್ತು ಯಾವ ಪ್ರಾಮಿಸ್, ಯಾವ ಒಪ್ಪಂದ ಇಲ್ಲವಾದ್ದರಿಂದ ಯಾವ ಗಳಿಗೆಯಲ್ಲೂ ನೀವು ಹಿಂದೆ ಸರಿಯಬಹುದು. ಸ್ವಾತಂತ್ರ್ಯದ ಕಾರಣವಾಗಿ ನೀವು ಭೇಟಿಯಾಗುತ್ತಿರುವುದರಿಂದ, ಸ್ವಾತಂತ್ರ್ಯದ ಕಾರಣವಾಗಿ ನೀವು ಪ್ರೀತಿಸುತ್ತಿರುವುದರಿಂದ, ನೀವು ಇಬ್ಬರೂ ಸ್ವತಂತ್ರ ವ್ಯಕ್ತಿಗಳಾಗಿಯೇ ಉಳಿಯುತ್ತೀರಿ. ಇದೇ ಪ್ರೀತಿಯ ಚೆಲುವು.
ಇದು ಕೇವಲ ಪ್ರೀತಿಯ ಚೆಲುವು ಅಲ್ಲ, ಪ್ರೀತಿಗಿಂತ ಹೆಚ್ಚಾಗಿ ಇದು ಸ್ವಾತಂತ್ರ್ಯದ ಚೆಲುವು. ಸೌಂದರ್ಯದ ಮೂಲ ಧಾತು ಸ್ವಾತಂತ್ರ್ಯ, ಪ್ರೀತಿ ಏನಿದ್ದರೂ ಸೆಕಂಡರಿ. ಸ್ವಾತಂತ್ರ್ಯದ ಜೊತೆ ಪ್ರೀತಿಯೂ ಸುಂದರ, ಏಕೆಂದರೆ ಸ್ವಾತಂತ್ರ್ಯ ಸುಂದರ. ಒಮ್ಮೆ ಸ್ವಾತಂತ್ರ್ಯ ಇಲ್ಲವಾದಾಗ ಪ್ರೀತಿಯೂ ಕುರೂಪವಾಗುತ್ತದೆ. ಆಗ, ಇದು ಏನಾಯಿತು ಎಂದು ನಿಮಗೆ ಆಶ್ಚರ್ಯವಾಗುತ್ತದೆ. ಎಲ್ಲ ಚೆಲುವು ಎಲ್ಲಿ ಹೋಯಿತು?
ಒಮ್ಮೆ ಯಾರೋ ಮಾರ್ಕ್ ಟ್ವೈನ್ ನ ಕೇಳಿದರಂತೆ, “ ಖುಶಿಯಾಗಿರುವುದಕ್ಕೆ ಮನುಷ್ಯನಿಗೆ ಏನು ಬೇಕು” ಅಂತ.
ಅದಕ್ಕೆ ಮಾರ್ಕ್ ಕೊಟ್ಚ ಉತ್ತರ, “ನಾವು ನಮ್ಮ ತಂದೆ ತಾಯಿಯರನ್ನ ಸರಿಯಾಗಿ ಆಯ್ಕೆ ಮಾಡಿಕೊಳ್ಳ ಬೇಕು” ಅಂತ.
ಇದು ಅಸಾಧ್ಯ, ಏಕೆಂದರೆ ಇದು ಈಗಾಗಲೇ ಆಗಿ ಹೋಗಿದೆ. ತಂದೆ ತಾಯಿಯರನ್ನು ಆಯ್ಕೆ ಮಾಡಿಕೊಳ್ಳುವುದು ಹೇಗೆ ಸಾಧ್ಯ? ಹಾಗಾದರೆ ನಾವು ನಮ್ಮ ಸಮಾಜವನ್ನಾದರೂ ಆಯ್ಕೆ ಮಾಡಿಕೊಳ್ಳಬೇಕು. ಇದೂ ಕೂಡ ಅಸಾಧ್ಯ, ಏಕೆಂದರೆ ಇದಕ್ಕೆ ದೊಡ್ಡ ಕ್ರಾಂತಿಯೇ ಬೇಕಾಗಬಹುದು. ಹೌದು ಇದು ಬೇಕು ಕೂಡ ಆದರೆ ಮೊದಲು ಅತೀ ಸುಲಭವಾಗಿ ನಿಮಗೆ ಸಾಧ್ಯವಾಗಬಹುದಾದದ್ದು ನಿಮ್ಮ ಸ್ವಂತದ ಬದಲಾವಣೆ.
ಸ್ವಂತದ ಬದಲಾವಣೆ ಮಾತ್ರ ಸಧ್ಯದ ಭರವಸೆ. ಆದರೆ ಅಹಂಗೆ ಈ ಜವಾಬ್ದಾರಿಯನ್ನು ಹೊತ್ತುಕೊಳ್ಳುವ ಆಸಕ್ತಿ ಇಲ್ಲ. ಅದು ಯಾವಾಗಲೂ ಇನ್ನೊಬ್ಬರನ್ನು ದೂಷಿಸುತ್ತಿರುತ್ತದೆ. ಯಾವಾಗ ನೀವು ಇನ್ನೊಬ್ಬರ ಮೇಲೆ ಜವಾಬ್ದಾರಿಯನ್ನ ವಹಿಸುತ್ತೀರೋ ಆಗ ನೀವು ನಿಮ್ಮ ಸ್ವಾತಂತ್ರ್ಯವನ್ನೂ ಅವರಿಗೆ ಹಸ್ತಾಂತರ ಮಾಡಿಬಿಡುತ್ತೀರಿ. ನಿಮಗೆ ನೆನಪಿರಲಿ ಜವಾಬ್ದಾರರಾಗುವುದೆಂದರೆ ಸ್ವತಂತ್ರರಾಗುವುದು. ಬದಲಾವಣೆಯ ಜವಾಬ್ದಾರಿಯನ್ನ ಇನ್ನೊಬ್ಬರಿಗೆ ವಹಿಸುವುದೆಂದರೆ ಕೈದಿಗಳಾಗುವುದು.
*******************************

