ಅನಾಮಧೇಯತೆ (Nameless) : ಓಶೋ 365 #Day 352

ಯಾವುದನ್ನು ಹೆಸರು ಹಿಡಿದು ಗುರುತಿಸಲು ಸಾಧ್ಯವಾಗುವುದಿಲ್ಲವೋ ಅದು ತಾವೋ, ಹೆಸರಿಲ್ಲದಿರುವುದರ ಹೆಸರು – ದೇವರು ಅಥವಾ ಧರ್ಮ, ಅಥವಾ ಸತ್ಯ ಇತ್ಯಾದಿಗಳಂತೆ. ಅವು ಕೇವಲ ಮಾನವ ಅಸಹಾಯಕತೆಗಳಿಗೆ ಇರುವ ಹೆಸರುಗಳು ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ



ನನ್ನ ಮಾತು ತುಂಬಾ ಸರಳ
ತಿಳಿಯಲು ಮತ್ತು ಬಳಸಲು ಕೂಡ.
ಆದರೂ ಜನ ಹಿಂಜರಿಯುತ್ತಾರೆ.

ನನ್ನ ಮಾತು ಪೂರ್ವಜರಿಂದ,
ಕೃತಿ ಸಾಧನೆಯಿಂದ, ಸಿದ್ಧಿಯಿಂದ.
ಇವುಗಳ ಅನುಪಸ್ಥಿತಿ
ನನ್ನ ಗೈರು ಹಾಜರಿ ಕೂಡ.

ಅನಾಮಧೇಯತೆಯೇ
ನನ್ನ ವಿಳಾಸ.

~ ಲಾವೋತ್ಸೇ

ಏನೋ ಕೂಗಿ ಕರೆಯಬೇಕು; ಅದಕ್ಕೊಂದು ಹೆಸರು ಇಡಬೇಕು. ಅಜ್ಞಾತ ಕ್ಕೆ ( Unknown) ಇಡಲಾಗಿರುವ ಅತ್ಯಂತ ಸುಂದರ ಹೆಸರು ತಾವೋ, ಏಕೆಂದರೆ ಇದು ಸಂಪೂರ್ಣವಾಗಿ ಅರ್ಥವಿಲ್ಲದ್ದು. ದೇವರು ಎನ್ನುವ ಪದ ಬಹಳ ಅರ್ಥಪೂರ್ಣತೆಯನ್ನು ಗಳಿಸಿಕೊಂಡಿದೆ, ಆದ್ದರಿಂದಲೇ ಅದು ತನ್ನ ಮಹತ್ವವನ್ನು ಕಳೆದುಕೊಂಡಿದೆ.

ದೇವರನ್ನು ಆರಾಧಿಸಬಹುದು ಆದರೆ ತಾವೋ ನ ಪೂಜಿಸುವುದು ಸಾಧ್ಯವಿಲ್ಲ; ಏಕೆಂದರೆ ಇದಕ್ಕೆ ಯಾವ ರೂಹು (image) ಇಲ್ಲ. ನೀವು ಕಲ್ಲನ್ನು ಪೂಜಿಸದಿರಬಹುದು, ಆದರೆ ಒಮ್ಮೆ ನೀವು ಅದನ್ನು ದೇವರು ಎಂದು ಗುರುತಿಸಿದರೆ, ನಿಮ್ಮೊಳಗೆ ಒಂದು ಸೂಕ್ಷ್ಮ ಇಮೇಜ್ ಹುಟ್ಟಿಕೊಳ್ಳುವುದು : ಜಗತ್ತನ್ನು ಕಂಟ್ರೋಲ್ ಮಾಡುತ್ತ, ಬಂಗಾರದ ಕಿರೀಟ ಧರಿಸಿ ಕುಳಿತಿರುವ ವ್ಯಕ್ತಿ, ಎಲ್ಲರಿಗೂ ಪಿತೃ ಸಮಾನನಾದ ಬಿಳಿ ಗಡ್ಡದ ಬಹಳ ವಿವೇಕಿ ವ್ಯಕ್ತಿ ಇತ್ಯಾದಿಯಾಗಿ. ಆದರೆ ತಾವೋ ಎಂದಾಗ ಅಲ್ಲಿ ಇಮೇಜ್ ಇಲ್ಲ. ಈ ಹೆಸರಿನ ಸೌಂದರ್ಯವೇ ಅದು, ಇದು ನಿಮಗೆ ಯಾವ ಸುಳಿವನ್ನೂ ಕೊಡುವುದಿಲ್ಲ, ಕಲ್ಪನೆ ಮಾಡಿಕೊಳ್ಳಲು ಯಾವ ಅವಕಾಶವನ್ನೂ ನೀಡುವುದಿಲ್ಲ.

ಅಜ್ಞಾತಕ್ಕೆ ನೀಡಲಾಗಿರುವ ಅತ್ಯಂತ ಅಪರೂಪದ ಹೆಸರು ಎಂದರೆ ತಾವೋ. ಅದಕ್ಕೆ ಯಾವ ಅರ್ಥವಿಲ್ಲವಾದ್ದರಿಂದ ಅದು ಮಹತ್ವಪೂರ್ಣ. ಇದಕ್ಕೆ ಇರಬಹುದಾದ ಅರ್ಥವೆಂದರೆ way, ಗುರಿಯನ್ನು ತಲುಪುವ way ಅಲ್ಲ, ಆದರೆ the way things are.

ಸ್ವರ್ಗದ ಅತ್ಯಂತ ಪ್ರಸಿದ್ಧ ಕೆಫೆಯಲ್ಲಿ ಒಂದು ಮಧ್ಯಾಹ್ನ, ಬುದ್ಧ, ಕನ್ಫ್ಯೂಷಿಯಸ್ ಮತ್ತು ಲಾವೋತ್ಸೇ ಹರಟುತ್ತ ಕುಳಿತಿದ್ದರು. ಅಷ್ಟರಲ್ಲಿಯೇ ಸರ್ವರ್ ಅಲ್ಲಿಗೆ ಮೂರು ಗ್ಲಾಸ್ ‘ಲೈಫ್ ಜ್ಯೂಸ್’ ತೆಗೆದುಕೊಂಡುಬಂದು ಆ ಮೂವರು ತತ್ವಜ್ಞಾನಿಗಳಿಗೂ ಆಫರ್ ಮಾಡಿದ.

ಬುದ್ಧ ಕೂಡಲೇ ಕಣ್ಣು ಮುಚ್ಚಿಕೊಂಡು ಲೈಫ್ ಒಂದು ವಿಪತ್ತು ಎನ್ನುತ್ತ ಲೈಫ್ ಜ್ಯೂಸ್ ಕುಡಿಯಲು ನಿರಾಕರಿಸಿದ.

ಯೋಚನೆಯಲ್ಲಿ ಬಿದ್ದ ಕನ್ಫ್ಯೂಷಿಯಸ್ ಅರ್ಧ ಕಣ್ಣು ಮುಚ್ಚಿ ಲೈಫ್ ಜ್ಯೂಸ್ ನ ಗ್ಲಾಸ್ ಎತ್ತಿಕೊಂಡು ಒಂದು ಗುಟಕು ಜ್ಯೂಸ್ ಕುಡಿದು ಘೋಷಿಸಿದ, ಬುದ್ಧ ಹೇಳಿದ್ದು ನಿಜ, ಲೈಫ್ ಒಂದು ವಿಪತ್ತು. ಕನ್ಫ್ಯೂಷಿಯಸ್ ಮಧ್ಯಮಮಾರ್ಗಿ, ಸೈಂಟಿಫಿಕ್ ಮನೋಭಾವದ ಮನುಷ್ಯ, ಯಾವುದನ್ನು ಪರೀಕ್ಷೆ ಮಾಡದೇ ಒಪ್ಪಿಕೊಳ್ಳುವವನಲ್ಲ. ಆದ್ದರಿಂದಲೇ ಅವನು ಲೈಫ್ ಜ್ಯೂಸ್ ನ ಒಂದು ಗುಟುಕು ಕುಡಿದ ಮೇಲಷ್ಟೇ ತನ್ನ ತೀರ್ಮಾನ ಘೋಷಿಸಿದ.

ಸರ್ವರ್, ಲಾವೋತ್ಸೇ ಯ ಮುಂದೆ ಗ್ಲಾಸ್ ತಂದು ಇಟ್ಟಾಗ, ಲಾವೋತ್ಸೇ ಮೂರು ಗ್ಲಾಸ್ ಲೈಫ್ ಜ್ಯೂಸ್ ಕುಡಿದು ಮುಗಿಸಿ, ಕುಣಿಯಲು ಶುರು ಮಾಡಿದ. ಪೂರ್ತಿ ಕುಡಿದು ಅನುಭವಿಸದೇ ಯಾವ ತೀರ್ಮಾನವನ್ನೂ ಹೇಳಲಿಕ್ಕಾಗದು ಎನ್ನುವುದು ಅವನ ತಿಳುವಳಿಕೆಯಾಗಿತ್ತು. “ ನೀನು ಏನು ಹೇಳುತ್ತೀಯ ಲಾವೋತ್ಸೇ ?” ಬುದ್ಧ ಮತ್ತು ಕನ್ಫ್ಯೂಷಿಯಸ್ ಕುತೂಹಲದಿಂದ ಲಾವೋತ್ಸೇಯನ್ನು ಪ್ರಶ್ನೆ ಮಾಡಿದರು.

“ ನಾನು ಹಾಡುತ್ತಿರುವುದು, ಕುಣಿಯುತ್ತಿರುವುದೇ ನನ್ನ ಉತ್ತರ. ಯಾವುದೇ ಒಂದು ಸಂಗತಿಯನ್ನ ಪೂರ್ಣವಾಗಿ ಅನುಭವಿಸದೇ ಯಾವ ತೀರ್ಮಾನವನ್ನೂ ಮಾಡಬಾರದು. ಹಾಗೇ ನೋಡಿದರೆ ಪೂರ್ತಿಯಾಗಿ ಅನುಭವಿಸಿದ ಮೇಲೂ ಏನೂ ಹೇಳಲಿಕ್ಕಾಗುವುದಿಲ್ಲ, ಏಕೆಂದರೆ ನಿಮ್ಮ ಅನುಭವವನ್ನ ಪದಗಳಲ್ಲಿ ಹಿಡಿದಿಡುವುದು ಅಸಾಧ್ಯ.

ಬುದ್ಧ ಒಂದು ತುದಿಯಾದರೆ ಲಾವೋತ್ಸೇ ಇನ್ನೂಂದು ತುದಿ. ಅವನು ಪೂರ್ಣ ಬದುಕನ್ನ ಅನುಭವಿಸಿದವನು, ಬದುಕಿನ ಮೂರೂ ಆಯಾಮಗಳನ್ನು ಬದುಕಿದವನು.

********************************

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.