ನಿಮ್ಮ ಒಳಗೆ ಏನೋ ಅರಳಿದಾಗ, ಆ ಸಂಗತಿಯನ್ನು ಬೌದ್ಧಿಕವಾಗಿ ಪರೀಕ್ಷಿಸಲು ಹೋಗಬೇಡಿ. ಹಾಗೇನಾದರೂ ಮಾಡಿದಿರಾದರೆ ನೀವು ಹೂವನ್ನು ಕೊಲ್ಲುತ್ತೀರಿ. ಒಳಗೆ ಏನಿದೆಯೆಂದು ನೋಡಲು ನೀವು ಹೂವಿನ ದಳಗಳನ್ನು ಹರಿಯುವಿರಾದರೆ, ಈ ವಿಭಜನೆಯಲ್ಲಿಯೇ ಹೂವು ನಾಶವಾಗುತ್ತದೆ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಒಮ್ಮೊಮ್ಮೆ
ಮೀನುಗಳು ಮೌನದ ಭಾಷೆಯಲ್ಲಿ
ನನ್ನನ್ನು ಮಾತಿಗೆಳೆಯುತ್ತವೆ.
ಎದುರಾದೊಡನೇ
ಇಬ್ಬರ ಕಣ್ಣುಗಳು ಒಂದಾಗಿ
ಮಂದಹಾಸ ಬೀರಿ
ಮಾತಾನಾಡತೊಡಗುತ್ತವೆ.
ಹೇ, ಹಾಫಿಜ್
ನಮ್ಮ ಸಂತೋಷದ ಗುಟ್ಟು
ನಿನಗೆ ಗೊತ್ತಿದೆ ಅಂತ ಕಾಣತ್ತೆ,
ಈ ನೆಲ, ಮನಸ್ಸು, ಸಾಲ
ಜೀವನಾಂಶ ಮತ್ತು ಎಲ್ಲ ಬಂಧನಗಳಿಂದ
ಧ್ಯಾನ ಹೇಗೆ ನಿನ್ನನ್ನು
ಮುಕ್ತಗೊಳಿಸಬಲ್ಲದು ಎಂಬ
ರಹಸ್ಯವನ್ನ ತಿಳಿದುಕೊಂಡಿದ್ದೀಯಾ.
ಮತ್ತು ನಮ್ಮ ಹಾಗೇ
ಸದಾ ಮತ್ತನಾಗಿ ಈಜುವುದನ್ನು
ಕಲಿತುಕೊಂಡಿದ್ದೀಯಾ.
– ಹಾಫಿಜ್
ವ್ಯಂಗ್ಯ ಏನೆಂದರೆ, ನೀವು ಹೂವಿನ ಬಗ್ಗೆ ತಿಳಿದುಕೊಳ್ಳಲು ಅದರ ದಳಗಳನ್ನು ಹರಿಯುವಿರಾದರೆ ನಿಮಗೆ ಹೂವು ಎಂದೂ ಅರ್ಥವಾಗುವುದಿಲ್ಲ, ಬದಲಾಗಿ ಬಹುಶಃ ನಿಮಗೆ ಹೂವಿನ ರಾಸಾಯನಿಕ ಸಂರಚನೆಯ ಬಗ್ಗೆ ಗೊತ್ತಾಗಬಹುದು, ಅದರ ಭೌತಿಕ ಲಕ್ಷಣಗಳ ಬಗ್ಗೆ, ಬಣ್ಣ, ಪರಿಮಳದ ಬಗ್ಗೆ ಗೊತ್ತಾಗಬಹುದು ಆದರೆ ನಿಮಗೆ ಹೂವಿನ ಚೆಲುವು ಅರ್ಥವಾಗುವುದಿಲ್ಲ. ನೀವು ಹೂವನ್ನು ವಿಭಜಿಸಿದ ಗಳಿಗೆಯಲ್ಲಿಯೇ ನೀವು ಹೂವಿನ ಚೆಲುವನ್ನು ನಾಶಮಾಡಿಬಿಟ್ಟಿರಿ. ಈಗ ಉಳಿದಿರುವುದು ಹೂವಿನ ನೆನಪು ಮಾತ್ರ ಹೂವು ಅಲ್ಲ. ಮತ್ತು ನಿಮಗೆ ಏನಾದರೂ ಹೊವಿನ ಬಗ್ಗೆ ಗೊತ್ತಾಗಿರುವುದಾದರೆ, ಅದು ಸತ್ತ ಹೂವಿನ ಬಗ್ಗೆಯೇ ಹೊರತು ಜೀವಂತ ಹೂವಿನ ಬಗ್ಗೆ ಅಲ್ಲ. ಮತ್ತು ಹೂವಿನ ಜೀವಂತಿಕೆಯೇ ಅದರ ನೈಜ ಚೆಲುವು ; ಆ ಜೀವಂತ ಹೂವು ಅರಳುತ್ತಿತ್ತು, ಪರಿಮಳ ಹೊರಸೂಸುತ್ತಿತ್ತು. ನಿಮ್ಮ ಒಳಗಿನ ಅರಳುವಿಕೆಯ ವಿಷಯವೂ ಹೀಗೆಯೇ.
ಧ್ಯಾನ ನಿಮ್ಮ ಒಳಗೆ ಹಲವಾರು ಅವಕಾಶಗಳನ್ನು ಸಾಧ್ಯಮಾಡುತ್ತದೆ. ಆದರೆ ನೀವು ಅದರ ಬಗ್ಗೆ ಬೌದ್ಧಿಕವಾಗಿ ವಿಚಾರ ಮಾಡುವಿರಾದರೆ, ಇದು ಏನು? ಇದು ಹೇಗಾಯಿತು? ಇದರ ಅರ್ಥ ಏನು? ಇತ್ಯಾದಿಯಾಗಿ…. ನೀವು ಇಲ್ಲಿ ನಿಮ್ಮ ಮೈಂಡ್ ನ ಎಳೆದುಕೊಂಡು ಬರುತ್ತೀರಿ. ಮತ್ತು ಮೈಂಡ್ ವಿಷಮಯವಾದದ್ದು. ಆಗ ನೀವು ಹೂವಿಗೆ ನೀರೆರೆಯುವುದರ ಬದಲಾಗಿ ವಿಷ ಉಣಿಸುತ್ತೀರಿ. ಧ್ಯಾನ, ಮೈಂಡ್ ಗೆ ತೀರ ವಿರುದ್ಧವಾದ ಆಯಾಮ. ಆದ್ದರಿಂದ ಇಲ್ಲಿ ಮೈಂಡ್ ಗೆ ಕೆಲಸ ಕೊಡಬೇಡಿ, ಸುಮ್ಮನೇ ಆಗುತ್ತಿರುವುದನ್ನು ಆನಂದಿಸಿ! ಇವು ಬಹಳ ಸುಂದರ ಅನುಭವಗಳು. ಮಹತ್ತರವಾದ ಇಂಥ ಹೆಚ್ಚು ಹೆಚ್ಚು ಅನುಭವಗಳು ನಿಮಗೆ ಒದಗಿ ಬರಲಿವೆ – ಇದು ಕೇವಲ ಶುರುವಾತು. ಯಾವಾಗಲೂ ಈ ಅನುಭವಗಳಿಗೆ ತೆರೆದುಕೊಂಡಿರಿ.
ಶಿಷ್ಯನೊಬ್ಬ ಝೆನ್ ಮಾಸ್ಟರ್ ಹತ್ತಿರ, ಒಂದು ದೂರು ತೆಗೆದುಕೊಂಡು ಬಂದ.
“ಮಾಸ್ಟರ್, ನನಗೆ ಧ್ಯಾನದಲ್ಲಿ ತುಂಬ ತೊಂದರೆಗಳಾಗುತ್ತಿವೆ. ಧ್ಯಾನಕ್ಕೆ ಕೂತಾಗಲೆಲ್ಲ ವಿಪರೀತ ಕಾಲು ನೋಯುತ್ತದೆ, ನಿದ್ದೆ ಬಂದ ಹಾಗಾಗುತ್ತದೆ. ಬಹಳ ಚಿಂತೆಯಾಗುತ್ತಿದೆ. ಏನು ಮಾಡಲಿ? “
“ಗಾಬರಿ ಬೇಡ, ಎಲ್ಲ ಸರಿ ಹೋಗುತ್ತದೆ” ಮಾಸ್ಟರ್ ಉತ್ತರಿಸಿದ.
ಎರಡು ಮೂರು ತಿಂಗಳುಗಳ ನಂತರ ಶಿಷ್ಯ ವಾಪಸ್ ಬಂದ,
“ ಮಾಸ್ಟರ್, ಈಗ ಧ್ಯಾನದಲ್ಲಿ ಅದ್ಭುತ ಅನುಭವಗಳಾಗುತ್ತಿವೆ, ತುಂಬ ಎಚ್ಚರದ ಸ್ಥಿತಿ ಅನಿಸುತ್ತಿದೆ. ಎಷ್ಟು ಶಾಂತ, ಎಷ್ಟು ಜೀವಂತಿಕೆಯ ಸ್ಥಿತಿ ಇದು “
ಮಾಸ್ಟರ್ ಸಾವಧಾನವಾಗಿ ಉತ್ತರಿಸಿದ “ಗಾಬರಿ ಬೇಡ, ಎಲ್ಲ ಸರಿ ಹೋಗುತ್ತದೆ”
********************************

