ಬದುಕು, ತನ್ನಷ್ಟಕ್ಕೆ ತಾನು ತಟಸ್ಥ, ನಾವು ಅದನ್ನ ಸುಂದರವಾಗಿಸುತ್ತೇವೆ, ಅಥವಾ ಕುರೂಪಿಯಾಗಿಸುತ್ತೇವೆ; ಬದುಕು ನಮ್ಮ ಎನರ್ಜಿಯ ಕಾರಣವೇ ರೂಪಿತವಾಗುವ ಸಂಗತಿ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಪ್ರೇಮಿ
ಮಧುಶಾಲೆಯಲ್ಲಿ ಕಾಲಿಟ್ಟಾಗ
ಇಡೀ ಮಧುಶಾಲೆಯೇ
ಅವನ ಆರಾಧನಾ ಮಂದಿರವಾಗುವುದು
ಆದರೆ ಕುಡುಕನಿಗೆ
ಮಧುಶಾಲೆ
ಕೇವಲ ಸಾರಾಯಿ ಅಂಗಡಿ.
ನಮ್ಮ ವಿಶೇಷತೆಯನ್ನು ನಿರ್ಧರಿಸುವುದು
ನಮ್ಮ ಹೃದಯವೇ ಹೊರತು
ರೂಪ, ಚೆಹರೆಗಳಲ್ಲ.
ಸೂಫಿಗೆ
ಯಾರನ್ನಾದರೂ ದಿಟ್ಟಿಸುವುದೆಂದರೆ
ಎರಡೂ ಕಣ್ಣುಗಳನ್ನು ಮುಚ್ಚುವುದು
ಒಳಗಣ್ಣನ್ನು ತೆರೆದು
ಹೃದಯವನ್ನು ತಾಕುವುದು
~ ಶಮ್ಸ್
ನೀವು ಬದುಕಿನೊಳಗೆ ಚೆಲುವನ್ನು ಸುರಿಯುವಿರಾದರೆ, ಅದು ಸುಂದರವಾಗುತ್ತದೆ. ನೀವು ಸುಮ್ಮನೇ ಕುಳಿತುಕೊಂಡು, ಬದುಕು ತಾನು ಚೆಲುವನ್ನು ಕೂಡಿಕೊಂಡು ನಿಮಗೆ ಸಾಧ್ಯವಾಗಬೇಕು ಎಂದು ಬಯಸಿದರೆ, ಅದು ಸಾಧ್ಯವಿಲ್ಲ. ನೀವು ಚೆಲುವನ್ನು ಸೃಷ್ಟಿಸಬೇಕು. ಚೆಲುವು, ಬಂಡೆಯಂತೆ ವಸ್ತುವಲ್ಲ. ಚೆಲುವನ್ನು ನಾವು ಸೃಷ್ಟಿ ಮಾಡಬೇಕು ನೀವು ವಾಸ್ತವಕ್ಕೆ ದೃಷ್ಟಿಯನ್ನು ಸಾಧ್ಯ ಮಾಡಬೇಕು, ಬಣ್ಣವನ್ನು ಸಾಧ್ಯಮಾಡಬೇಕು. ನೀವು ವಾಸ್ತವಕ್ಕೆ ಹಾಡನ್ನ, ಸಂಗೀತವನ್ನ ಸಾಧ್ಯಮಾಡಬೇಕು, ಆಗ ಅದು ಸುಂದರ.
ಹಾಗಾಗಿ, ಯಾವಾಗೆಲ್ಲ ನೀವು ಚೆಲುವನ್ನು ಸೃಷ್ಟಿಮಾಡುವ ಕೆಲಸದಲ್ಲಿ ಪಾಲ್ಗೊಳ್ಳುತ್ತೀರೋ ಆಗ ಚೆಲುವು ಇದೆ, ಹಾಗೆ ಮಾಡದೇ ಹೋದಾಗ ಚೆಲುವು ಕಾಣೆಯಾಗುತ್ತದೆ. ಚೆಲುವು ಒಂದು ಸೃಷ್ಟಿ, ಹಾಗೆಯೇ ಕುರೂಪವೂ ಕೂಡ. ಖುಶಿ ಒಂದು ಸೃಷ್ಟಿ, ಹಾಗೆಯೇ ದುಃಖವೂ ಕೂಡ. ನೀವು ಯಾವುದನ್ನು ಸೃಷ್ಟಿಸುತ್ತೀರೋ ಅದನ್ನು ಮಾತ್ರ ಪಡೆಯುತ್ತೀರಿ, ಮತ್ತು ಇದನ್ನು ಬಿಟ್ಟು ಬೇರೆ ಏನನ್ನೂ ಪಡೆಯುವುದಿಲ್ಲ. ಕರ್ಮದ ಇಡೀ ತತ್ವಜ್ಞಾನವೇ ಇದು : ನೀವು ಮಾಡಿದ ಸಂಗತಿಯೇ ವಾಪಸ್ ಬಂದು ನಿಮ್ಮನ್ನು ತಲುಪುತ್ತದೆ. ಬದುಕು ಒಂದು ಖಾಲೀ ಕ್ಯಾನವಾಸು ಮಾತ್ರ – ಅದರ ಮೇಲೆ ನೀವು ಸುಂದರ ದೃಶ್ಯಗಳನ್ನು ಚಿತ್ರಿಸಬಹುದು ಅಥವಾ ಕರಾಳ ಸೈತಾನರನ್ನೂ, ಅಪಾಯಕಾರಿ ಜನರನ್ನೂ ಚಿತ್ತಿರಸಬಹುದು. ಇದು ನಿಮಗೆ ಬಿಟ್ಟದ್ದು. ನೀವು ಸುಂದರ ಸ್ವಪ್ನವನ್ನಾಗಲೀ ಅಥವಾ ದುಸ್ವಪ್ನವನ್ನಾಗಲೀ ಸೃಷ್ಟಿ ಮಾಡಬಹುದು.
ಒಮ್ಮೆ ಇದು ನಿಮಗೆ ಅರ್ಥವಾಯಿತೆಂದರೆ, ಮುಂದೆ ಸಂಗತಿಗಳು ಬಹಳ ಸರಳ. ನೀವು ಮಾಸ್ಟರ್, ಇದು ನಿಮ್ಮ ಜವಾಬ್ದಾರಿ. ಸಾಧಾರಣವಾಗಿ ನಾವು ಯೋಚಿಸುವುದೇನೆಂದರೆ, ಬದುಕಿಗೆ ಒಂದು ವಸ್ತುನಿಷ್ಟ ಚೆಲುವು ಮತ್ತು ಒಂದು ವಸ್ತುವಿಷ್ಟ ಕುರೂಪ ಇದೆ ಎಂದು. ಇಲ್ಲ! ಬದುಕು ಒಂದು ಅವಕಾಶ ಮಾತ್ರ. ನಿಮಗೆ ಬೇಕಾದ ಎಲ್ಲವನ್ನೂ ಅದು ನಿಮಗೆ ನೀಡುತ್ತದೆ: ಈಗ ಅದನ್ನು ನೀವೇ ಸೃಷ್ಟಿಸಿಕೊಳ್ಳಬೇಕು ! ಇದು ಸ್ವಯಂ ಸೃಷ್ಟಿಯ ವ್ಯವಹಾರ.
ಒಬ್ಬ ರೈತ ತಾನು ಹುಟ್ಟಿದ ಹಳ್ಳಿ ಬಿಟ್ಟು ಹತ್ತಿರದ ಇನ್ನೊಂದು ಊರಿಗೆ ಗಂಟು ಮೂಟೆ ಕಟ್ಟಿಕೊಂಡು ವಲಸೆ ಹೋದ. ಹೊಸ ಊರು ಹೇಗೋ ಏನೋ ಎಂದು ಚಿಂತೆಗೊಳಗಾದ ಆ ಮನುಷ್ಯ, ಈ ಬಗ್ಗೆ ವಿಚಾರಿಸಲು ಅಲ್ಲೇ ವಾಸವಾಗಿದ್ದ ಝೆನ್ ಮಾಸ್ಟರ್ ಬಳಿ ಹೋದ.
ರೈತ : ಮಾಸ್ಟರ್ ಈ ಊರಿನ ಜನ ಹೇಗೆ? ಈ ಊರು ನನಗೆ ಇಷ್ಟ ಆಗಬಹುದಾ?
ಮಾಸ್ಟರ್ : ನೀನು ಮೊದಲು ಇದ್ದ ಊರಿನಲ್ಲಿ ಜನ ಹೇಗಿದ್ದರು?
ರೈತ : ತುಂಬ ಕೆಟ್ಚ ಜನ ಮಾಸ್ಟರ್, ಹೊಟ್ಟೆ ಕಿಚ್ಚಿನವರು, ಮೋಸಗಾರರು, ಕಳ್ಳರು.
ಮಾಸ್ಟರ್ : ಓಹ್ ಹಾಗಾ? ಇಲ್ಲಿಯೂ ಎಲ್ಲ ಅಂಥವರೆ.
ಕೆಲ ದಿನಗಳ ನಂತರ ಇನ್ನೊಬ್ಬ ರೈತ, ಇನ್ನೊಂದು ಊರಿನಿಂದ ಅದೇ ಊರಿಗೆ ಬಂದು, ಝೆನ್ ಮಾಸ್ಟರ್ ಗೆ ಅದೇ ಪ್ರಶ್ನೆ ಕೇಳಿದ.
ರೈತ : ಮಾಸ್ಟರ್ ಈ ಊರಿನ ಜನ ಹೇಗೆ? ಈ ಊರು ನನಗೆ ಇಷ್ಟ ಆಗಬಹುದಾ?
ಮಾಸ್ಟರ್ : ನೀನು ಮೊದಲು ಇದ್ದ ಊರಿನಲ್ಲಿ ಜನ ಹೇಗಿದ್ದರು?
ರೈತ : ತುಂಬ ಒಳ್ಳೆ ಜನ ಮಾಸ್ಟರ್, ಒಬ್ಬರಿಗೊಬ್ಬರು ಬಹಳ ಸಹಾಯ ಮಾಡುತ್ತಾರೆ, ಸದಾ ತಮ್ಮ ತಮ್ಮ ಕೆಲಸ ಮಾಡುತ್ತ, ಹಾಡುತ್ತ, ಕುಣಿಯುತ್ತ ಖುಷಿಯಾಗಿರ್ತಾರೆ.
ಮಾಸ್ಟರ್ : ಓಹ್ ಹಾಗಾ? ಇಲ್ಲಿಯೂ ಎಲ್ಲ ಅಂಥವರೆ.
********************************

