ಪದಗಳ ಆಯ್ಕೆ, ವಿರುದ್ಧ ಭಾವಗಳನ್ನು ಒಳಗೊಂಡ ಪದಗಳ ಜೋಡಣೆ, ಅಸಹಾಯಕತೆ ಮತ್ತು ನೀತಿ ಎಲ್ಲವೂ ಬೆರೆತ ಹದವನ್ನು ಈ ವಚನದಲ್ಲಿ ಕಾಣಬಹುದು । ಓ.ಎಲ್.ನಾಗಭೂಷಣ ಸ್ವಾಮಿ
ಇನಿಯಂಗೆ ತವಕವಿಲ್ಲ ಎನಗೆ ಸೈರಣೆಯಿಲ್ಲ
ಮನದಿಚ್ಛೆಯನರಿವ ಸಖಿಯರಿಲ್ಲ
ಇನ್ನೇವೆನವ್ವಾ
ಮನುಮಥವೈರಿಯ ಅನುಭಾವದಲ್ಲಿ ಎನ್ನ ಮನ ಸಿಲುಕಿ ಬಿಡದು
ಇನ್ನೇನ ಮಾಡುವೆನೆಲೆ ಕರುಣವಿಲ್ಲದ ತಾಯೆ
ದಿನ ವೃಥಾ ಹೋಯಿತ್ತಾಗಿ
ಯೌವ್ವನ ಬೀಸರವಾಗದ ಮುನ್ನ ಪಿನಾಕಿಯ ನೆರಹವ್ವಾ ಶಂಭುಜಕ್ಕೇಶ್ವರನ
[ತವಕ-ಕಳವಳ, ಆತುರ, ಅಸಹನೆ, ತೀವ್ರತೆಗಳೆಲ್ಲವೂ ಬೆರೆತ ಆಸೆ; ಸೈರಣೆ-ಸಹನೆ; ಮನುಮಥವೈರಿ-ಮನ್ಮಥನ ಶತ್ರು, ಇನ್ನೇವೆ-ಇನ್ನು ಏವೆ, ಸಹಿಸಲಾರೆ, ಏನೂ ಮಾಡಲಾರೆ; ಶಿವ; ಬೀಸರ-ವ್ಯರ್ಥ; ಪಿನಾಕಿ-ತ್ರಿಶೂಲವನ್ನು ಹಿಡಿದವನು, ಶಿವನ ಬಿಲ್ಲಿನ ಹೆಸರು; ನೆರಹು-ಕೂಡಿಸು].
ಇನಿಯನಿಗೆ ಒಂದಿಷ್ಟೂ ತವಕವಿಲ್ಲ, ನನಗೆ ಸಹನೆ ಇಲ್ಲ. ನನ್ನ ಮನಸಿನ ಆಸೆಯನ್ನು ತಿಳಿಯಬಲ್ಲ ಸಖಿಯರು ಇಲ್ಲ. ನಾನು ಇನ್ನೇನೂ ಮಾಡಲಾರೆ. ನನ್ನ ಮನಸ್ಸು ಮನ್ಮಥವೈರಿಯೊಡನೆ ಒಂದಾಗಿದೆ, ಅವನ್ನು ಬಿಟ್ಟು ಬರುತ್ತಲೇ ಇಲ್ಲ. ಕರುಣವಿಲ್ಲದ ತಾಯೀ, ಇನ್ನೇನು ಮಾಡಲಿ. ದಿನಗಳು ವ್ಯರ್ಥವಾಗಿ ಹೋಗುತ್ತಿವೆ. ಆಯುಧ ಹಿಡಿದಿರುವ ಶಂಭುಜಕ್ಕೇಶ್ವರನೊಡನೆ ನನ್ನನ್ನು ಕೂಡಿಸು.
ಪದಗಳ ಆಯ್ಕೆ, ವಿರುದ್ಧ ಭಾವಗಳನ್ನು ಒಳಗೊಂಡ ಪದಗಳ ಜೋಡಣೆ, ಅಸಹಾಯಕತೆ ಮತ್ತು ನೀತಿ ಎಲ್ಲವೂ ಬೆರೆತ ಹದವನ್ನು ಈ ವಚನದಲ್ಲಿ ಕಾಣಬಹುದು. ಶಂಭುಜಕ್ಕೇಶ್ವರ ನನ್ನ ʻಇನಿಯʼ ನನಗೆ ರುಚಿಸುವವನು, ಸವಿಯಾದವನು. ಅವನಿಗೆ ನನ್ನೊಡನೆ ಒಂದಾಗುವ ʻತವಕʼವಿಲ್ಲ. ತವಕ ಅನ್ನುವ ಪದವೇ ಬಹಳ ನಿರ್ದಿಷ್ಟವಾಗಿ ಆತುರ, ಆಸೆ, ತೀವ್ರತೆ, ಕೂಡಲು ಆಗುತ್ತಿಲ್ಲವಲ್ಲಾ ಅನ್ನುವ ಅಸಹನೆ ಎಲ್ಲವನ್ನೂ ಒಳಗೊಂಡ ಮಾತು. ಇವೆಲ್ಲ ಗುಣ ಗಂಡಸಿಗೆ ಇರುತ್ತವೆ, ಇರಬೇಕು ಅನ್ನುವುದೊಂದು ಧೋರಣೆ. ಆದರೆ ಆ ಮೆಚ್ಚಿದ ಗಂಡು ಮನ್ಮಥನ ವೈರಿ. ತವಕ ಹುಟ್ಟಿಸುವ ಕಾಮ ದೇವನನ್ನು ಕೊಂದವನು. ನನಗೋ ಒಂದಿಷ್ಟೂ ಸಹನೆ ಉಳಿದಿಲ್ಲ. ಮನಸು ಅವನ ಅನುಭಾವದಲ್ಲಿ ʻಸಿಲುಕಿದೆʼ, ಅವನನ್ನು ʻಬಿಡದೆʼ ಅವನಲ್ಲೇ ಉಳಿದಿದೆ. ಮನಸು ಅಲ್ಲಿ, ಮೈ ಇಲ್ಲಿ ಆಗಿ ಚಡಪಡಿಸುತಿದ್ದೇನೆ. ಮನಸಿನ ಆಸೆ ಹೇಳಿಕೊಂಡರೆ ಅರಿಯುವ ಶಕ್ತಿ ಇರುವ ಗೆಳತಿಯರೂ ಇಲ್ಲ. ಅಮ್ಮನಾಗಿ ನಿನಗೂ ಕರುಣೆ ಇಲ್ಲ. ನನ್ನ ಯೌವನದ ದಿನಗಳು ವ್ಯರ್ಥವಾಗುತ್ತಿವೆ. ದಯವಿಟ್ಟು ಅವನೊಡನೆ ನನ್ನನ್ನು ಕೂಡಿಸು.
ವಿವರಿಸಿದರೆ ವಚನ ಹೇಳುತ್ತಿರುವ ಭಾವದ ತೀವ್ರತೆ ಹಾಳಾಗುತ್ತದೆ, ಆದರೂ ಗಮನಿಸಿ. ಅನುಭಾವ ಅನ್ನುವುದು ನಾನು ಅನ್ನುವ ಭಾವ ಇಲ್ಲವಾಗಿ ದೈವದೊಡನೆ, ಅಥವಾ ದೊಡ್ಡದಾದ ಅನುಭವವೊಂದರಲ್ಲಿ ಒಂದಾಗುವ ಸ್ಥಿತಿ. ಅದನ್ನು ಗಂಡು ಹೆಣ್ಣಿನ ಕೂಟದೊಡನೆ ಹೋಲಿಸಿ, ಹೂ ಬಾಣ, ಕಬ್ಬಿನ ಬಿಲ್ಲು, ದುಂಬಿಯ ಹೆದೆಯನ್ನು ಹೊಂದಿರುವ ಮನ್ಮಥನ ವೈರಿಯಾಗಿರುವ, ಮತ್ತು ಅವನದೇ ಆದ ಬಿಲ್ಲು ಅಥವಾ ತ್ರಿಶೂಲವನ್ನು ಹಿಡಿದ ಪ್ರಿಯನೊಡನೆ ನನ್ನ ಕೂಡಿಸು ಎಂದು ತಾಯಿಯನ್ನು ಕೇಳುತಿದ್ದಾಳೆ. ಅರಿಯಬಲ್ಲ ಗೆಳತಿಯರೂ ಇಲ್ಲ. ಅಮ್ಮನಿಗೂ ಕರುಣವಿಲ್ಲ. ಯಾಕೆಂದರೆ ಒಲ್ಲದ ಗಂಡು ನಿನಗೇಕೆ ಎಂದು ಬೋಧೆ ಮಾಡಿದಳೋ, ನೀತಿ ಪಾಠ ಹೇಳುವಳೋ…ನೀನು ಅಮ್ಮ,, ನಾನು ಮಗಳು ಆದರೂ ಪರವಾಗಿಲ್ಲ, ನನ್ನನ್ನು ಶಂಭುಜಕ್ಕೇಶ್ವರನೊಡನೆ ಕೂಡಿಸು ಎಂದು ಯಾಚಿಸುತಿದ್ದಾಳೆ ಈ ವಚನದ ಹೆಣ್ಣು ಪಾತ್ರ.
ಬಯಕೆ ತುಂಬಿದ ಮನಸು ಅನುಭವಿಸುವ ಅಸಹನೆ, ಇನಿಯನ ಉದಾಸೀನದಿಂದ ಹುಟ್ಟುವ ಚಡಪಡಿಕೆ, ಮನಸು ಅಲ್ಲಿ, ದೇಹ ಇಲ್ಲಿ ಆಗಿ ಸಹಾಯ ಕೇಳಬಾರದ ವ್ಯಕ್ತಿಯನ್ನೂ ಸಹಾಯಕೇಳುತಿದ್ದೇನಲ್ಲಾ ಅನ್ನುವ ಭಾವ ಇವನ್ನೆಲ್ಲ ಹೇಳುವುದರೊಡನೆ ಅನುಭಾವ ಮತ್ತು ಒಲುಮೆಯ ಕೂಟಗಳನ್ನು ಸಮಾನವಾಗಿ ಕಾಣುವ ದೃಷ್ಟಿ ಗಮನ ಸೆಳೆಯುತ್ತದೆ. ಅಲ್ಲಮ, ಅಕ್ಕ, ಬಸವ ಇವರ ವಚನಗಳಲ್ಲೂ ಒಲುಮೆಯ ಕೂಟ ಮತ್ತು ನಾನತ್ವ ಇಲ್ಲವಾಗುವ ಅನುಭಾವ ಸ್ಥಿತಿಗಳನ್ನು ಸಮಾನವಾಗಿ ಕಾಣುವುದನ್ನು ಗಮನಿಸಬಹುದು.
ಸತ್ಯಕ್ಕ
ಅನೇಕ ಜಾನಪದ ರಚನೆಗಳಲ್ಲಿ, ಮಧ್ಯಕಾಲೀನ ಕೃತಿಗಳಲ್ಲಿ ಸತ್ಯಕ್ಕನ ಪ್ರಸ್ತಾಪ ಬರುತ್ತದೆ. ಸತ್ಯಕ್ಕ ಇದ್ದ ಊರು ಶಿವಮೊಗ್ಗ ಜಿಲ್ಲೆಯ ಶಿರಾಳಕೊಪ್ಪದ ಬಳಿಯ ಹಿರೇಜಂಬೂರು. ಶಿವಭಕ್ತ ಮನೆಯ ಅಂಗಳ ಗುಡಿಸುವ ಕೆಲಸ ಮಾಡುತ್ತ ಶಿವನನ್ನಲ್ಲದೆ ಬೇರೆ ದೇವರನ್ನು ಪೂಜಿಸುವುದಿಲ್ಲ, ಬೇರೆ ದೇವರ ಹೆಸರು ಕೇಳುವುದಿಲ್ಲ ಎಂಬ ಛಲ ಆಕೆಯಲ್ಲಿತ್ತು ಎಂಬ ವಿವರಗಳಿವೆ. ಜಂಬೂರಿನ ಜಂಬುಕೇಶ್ವರ ದೇವಸ್ಥಾನದ ದೈವದ ಹೆಸರೇ ಶಂಭು ಜಕ್ಕೇಶ್ವರ ಆಗಿರಬಹುದೇ ಎಂಬ ಊಹೆ ಇದೆ. ಸತಿ-ಪತಿಯ ಭಾವದ ರಚನೆಗಳು, ಸಮಾಜದ ಡಾಂಬಿಕತೆಯ ಟೀಕೆ ಸತ್ಯಕ್ಕನವರ ವಚನಗಳಲ್ಲಿವೆ. ಶಂಬುಜಕ್ಕೇಶ್ವರ ಅಂಕಿತದ 27 ವಚನಗಳು ಪ್ರಕಟವಾಗಿವೆ.

