ಬೇಕುಗಳು ತೀರಿದಾಗ ಅರಳುತ್ತದೆ ಪ್ರೇಮ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಯಾರು ಅವರು
ನನ್ನ ಆಟ ಕೆಡಿಸುತ್ತಿರುವವರು?
ನಾನು ಬಲಕ್ಕೆ ಬಿಟ್ಟ ಬಾಣ
ಎಡಕ್ಕೆ ಹೇಗೆ ಬಂತು?
ಜಿಂಕೆಯ ಬೆನ್ನುಹತ್ತಿದವನ
ಹಂದಿ ಯಾಕೆ ಅಟ್ಟಿಸಿಕೊಂಡು ಬಂತು?
ಅಂಗಡಿಗೆ ಹೊರಟವನ ಕಾಲುಗಳನ್ನ
ಜೈಲಿನತ್ತ ಹೊರಳಿಸಿದವರು ಯಾರು?
ಕೆಡವಲಿಕ್ಕೆ ಎಂದು ತೆರೆದ ಗುಂಡಿಯಲ್ಲಿ
ನಾನೇ ಜಾರಿ ಬಿದ್ದದ್ದು ಹೇಗೆ?
ಯಾರಿಗೋ ನಮ್ಮ ಆಟ ಹಿಡಿಸುತ್ತಿಲ್ಲ.
ಅದಕ್ಕೇ, ನಮಗೆ ಇರಲೇಬೇಕು
ನಮ್ಮ ಬೇಕುಗಳ ಬಗ್ಗೆ ಪುಟ್ಟ
ಸಂಶಯ.
~ ರೂಮಿ
ಬೇಕುಗಳು ಮಾಯವಾದಾಗ ಮಾತ್ರ ಪ್ರೇಮ ಅರಳುತ್ತದೆ. ಪ್ರೇಮ, ರಾಜ ಮತ್ತು ರಾಣಿಯರ ನಡುವೆ ಮಾತ್ರ ಸಂಭವಿಸುವಂಥದು. ಏಕೆಂದರೆ ಇಬ್ಬರಿಗೂ ಬೇಕುಗಳು ಬೇಕಿಲ್ಲ.
ಪ್ರೇಮ, ಜಗತ್ತಿನಲ್ಲಿಯೇ ಅತ್ಯಂತ ಐಷಾರಾಮಿ ಸಂಗತಿ. ಇದು need ಅಲ್ಲ – ಇದು ಕೊನೆಯ ಐಷಾರಾಮಿ, ಆತ್ಯಂತಿಕ ಐಷಾರಾಮಿ. ಇದು ನಿಮ್ಮ ಬೇಕುಗಳ ಭಾಗವಾಗಿದ್ದರೆ, ಬಾಕಿ ಎಲ್ಲ ಬೇಕುಗಳಂತೆಯೇ ಇದೂ ಕೂಡ; ಆಹಾರ ಬೇಕು, ವಸತಿ ಬೇಕು, ಬಟ್ಟೆ ಬೇಕು, ಅದು ಬೇಕು ಇದು ಬೇಕು. ಆಗ ಪ್ರೇಮ ಕೂಡ ಈ ಜಗತ್ತಿನ ಭಾಗವೇ. ಯಾವಾಗ ನಿಮಗೆ ಬೇಕುಗಳ ಹಂಗಿಲ್ಲವೋ, ಯಾವಾಗ ನೀವು ಎನರ್ಜಿಯ ಹರಿವಿನೊಂದಿಗೆ ಒಂದಾಗಿದ್ದೀರೋ, ಯಾವಾಗ ನೀವು ಹಂಚಿಕೊಳ್ಳಲು ಸಿದ್ಧರಾಗಿರುವಿರೋ, ಮತ್ತು ಎನರ್ಜಿಯ ಹರಿವಿನೊಂದಿಗೆ ಒಂದಾಗಿರುವ ಇನ್ನೊಬ್ಬರು ನಿಮ್ಮ ಜೊತೆ ಹಂಚಿಕೊಳ್ಳಲು ತಯಾರಾಗಿರುವರೋ, ಆಗ ನೀವಿಬ್ಬರೂ ನಿಮ್ಮ ಎನರ್ಜಿಗಳನ್ನು ಪ್ರೇಮ ದೇವತೆಗೆ ಸಮರ್ಪಿಸುತ್ತೀರಿ.
ಮತ್ತು ಪ್ರೇಮ ಪಕ್ಕಾ ಐಷಾರಾಮಿ, ಏಕೆಂದರೆ ಇದು ಉದ್ದೇಶರಹಿತವಾದದ್ದು. ಇದು ಅಂತರ್ಗತವಾದದ್ದು – ಇದು ಇನ್ನೊಂದನ್ನು ತಲುಪುವ ದಾರಿಯಲ್ಲ. It is a great play, ಒಂದು ಲೀಲೆ.

