ಪ್ರತಿಶತ ತೊಂಭತ್ತರಷ್ಟು ಭಾಷೆ ಕೇವಲ ಸಂಬಂಧಗಳನ್ನು ಅವೊಯಿಡ್ ಮಾಡಲು ಇರುವಂಥದು. ಸಂಬಂಧಗಳಿಂದ ಹೊರತಾಬೇಕೆಂದು ನಾವು ಪದಗಳ ಗೊಡೆಯನ್ನು ಕಟ್ಟಿಕೊಂಡು ಅದರ ಹಿಂದೆ ಅವಿತುಕೊಳ್ಳುತ್ತೇವೆ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ನಮ್ಮ ಬಹಳಷ್ಟು ಸಮಸ್ಯೆಗಳು
ಶುರುವಾಗೋದೇ
ಭಾಷಾ ಶಾಸ್ತ್ರದಲ್ಲಿನ ಗೊಂದಲಗಳಿಂದಾಗಿ
ಮತ್ತು ಕೆಲವು
ಸಾಮಾನ್ಯ ತಪ್ಪು ತಿಳುವಳಿಕೆಗಳಿಂದಾಗಿ.
ಶಬ್ದಗಳನ್ನು
ಕೇವಲ ಅರ್ಥದ ಮುಖ ನೋಡಿ ಬಳಸಬೇಡಿ.
ಪ್ರೇಮದ ಅಖಾಡಾದಲ್ಲಿ ಕಾಲಿಟ್ಟಾಗ
ನಾವು ಕಲಿತಿರುವ ಭಾಷೆ
ಕಳೆದುಕೊಳ್ಳುತ್ತದೆ ತನ್ನ ಅಸ್ತಿತ್ವವನ್ನು.
ಯಾವುದನ್ನ ಶಬ್ದಗಳ ಮೂಲಕ
ಹೇಳಲಾಗುವುದಿಲ್ಲವೋ
ಅವನ್ನೆಲ್ಲ ಅರ್ಥಮಾಡಿಕೊಳ್ಳಲಾಗುತ್ತದೆ
ಮೌನದ ಮೂಲಕ.
~ ಶಮ್ಸ್
ನೀವು ದುಃಖದಲ್ಲಿರುವಿರಾದರೆ, ಅದನ್ನು ಹೇಳಿ ಏನು ಉಪಯೋಗ? ದುಃಖವನ್ನು ಅನುಭವಿಸಿ, ನಿಮ್ಮ ದುಃಖ ನಿಜವಾದರೆ ಜನರಿಗೆ ಭಾಷೆಯ ಹೊರತಾಗಿಯೂ ಅದು ಅರ್ಥವಾಗುವುದು. ನಿಮಗೆ ತುಂಬ ಖುಶಿಯಾಗಿದೆಯೆಂದರೆ, ಅದನ್ನು ಹೇಳಿ ಏನು ಪ್ರಯೋಜನ?, ಖುಶಿಯನ್ನು ಪೂರ್ತಿಯಾಗಿ ಅನುಭವಿಸಿ! ಮತ್ತು ಈ ಖುಶಿ ಇಟಾಲಿಯನ್ ಅಲ್ಲ, ಇಂಗ್ಲೀಷ್ ಅಲ್ಲ, ಜರ್ಮನ್ ಅಲ್ಲ, ನಿಮ್ಮ ಖುಶಿ ನಿಜವಾಗಿದ್ದಾಗ ಅದು ಎಲ್ಲರಿಗೂ ಅರ್ಥವಾಗುವುದು. ನೀವು ಖುಶಿಯಾಗಿದ್ದಾಗ ಡಾನ್ಸ್ ಮಾಡಿ, ಎಲ್ಲರಿಗೂ ನಿಮ್ಮ ಖುಶಿ ಗೊತ್ತಾಗುತ್ತದೆ. ನಿಮಗೆ ಕೋಪ ಬಂದಿದೆಯಾದರೆ ಅದನ್ನು ಹೇಳಿ ಏನು ಪ್ರಯೋಜನ, ನೀವು ಯಾರನ್ನಾದರೂ ಹೊಡೆದಾಗ ನಿಮ್ಮ ಕೋಪ ಅವರಿಗೆ ಅರ್ಥವಾಗುತ್ತದೆ, ಇದು ಹೆಚ್ಚು ಸಾಚಾ, ಹೆಚ್ಚು ವಾಸ್ತವ. ಜನರಿಗೆ ನಿಮಗೆ ಕೋಪ ಬಂದಿದೆ ಎನ್ನುವುದು ತಕ್ಷಣ ಗೊತ್ತಾಗುತ್ತದೆ.
ನಾವು ನಿಜವಾಗಿ ಏನು ಹೇಳಬಾರದು ಎಂದು ಬಯಸುತ್ತೇವೆಯೋ ಅದನ್ನು ಹೇಳಲು ಬಳಸುವ ವಿಧಾನ, ಭಾಷೆಯ ಬಳಕೆ. ಉದಾಹರಣೆಗೆ, ನನಗೆ ನಿನ್ನ ಮೇಲೆ ಸಿಟ್ಟು ಬಂದಿದೆ ಆದರೆ ಅದನ್ನು ತೋರಿಸಲು ನನಗೆ ಇಷ್ಟವಿಲ್ಲ, ಆಗ ನಾನು “ನನಗೆ ಕೋಪ ಬಂದಿದೆ” ಎಂದು ಹೇಳುತ್ತೇನೆ. ಇದು ಕೋಪವನ್ನು ವ್ಯಕ್ತಪಡಿಸುವ ನಿರ್ವಿರ್ಯ ವಿಧಾನ. ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ, ಆದರೆ ನನಗೆ ನಿಜವಾಗಿ ಅದನ್ನು ಹೇಳಲು ಇಷ್ಟವಿಲ್ಲ. ಆಗ ನಾನು ಸರಳವಾಗಿ “ ಆಯ್ ಲವ್ ಯೂ” ಎಂದು ಹೇಳುತ್ತೇನೆ. ಇವು ಕೇವಲ ಪದಗಳು. ನಾನು ನಿನ್ನ ನಿಜವಾಗಿ ಪ್ರೀತಿಸುತ್ತೇನೆಯಾದರೆ, ಅದನ್ನು ಇನ್ನೂ ಹೆಚ್ಚು ವಾಸ್ತವವಾಗಿ ನಾನು ಅಭಿವ್ಯಕ್ತಿಸುತ್ತೇನೆ, ಯಾಕೆ ಕೇವಲ ಪದಗಳು?
ಹಾವಭಾವಗಳ ಮೂಲಕ, ಮುಖಭಾವದ ಮೂಲಕ, ದೇಹಭಾವದ ಮೂಲಕ, ಸ್ಪರ್ಶದ ಮೂಲಕ ಅಭಿವ್ಯಕ್ತಿಸುವುದನ್ನ ರೂಢಿ ಮಾಡಿಕೊಳ್ಳಿ, ಕೇವಲ ಭಾಷೆಯ ಮೂಲಕ ಅಲ್ಲ. ಆಗ ನಿಮಗೆ ಇನ್ನೂ ಹೆಚ್ಚಿನ ಆನಂದ ಸಾಧ್ಯವಾಗುವುದು, ಏಕೆಂದರೆ ಆಗ ನಿಮ್ಮಲ್ಲಿ ಹೊಸ ಭಾವಗಳಿಗೆ, ಹೊಸ ಸೃಷ್ಟಿಗೆ ಅವಕಾಶವಿದೆ.
*******************************

