ಅಸ್ತಿತ್ವ ಒಂದು ಆರ್ಕೆಸ್ಟ್ರಾ ಇದ್ದಂತೆ ಮತ್ತು ನಾವು ಅದರ ಸ್ವರದೊಂದಿಗೆ ಯಾವತ್ತೂ ಒಂದಾಗಿರಬೇಕು. ಆದ್ದರಿಂದಲೇ ಸಂಗೀತ, ಮನುಷ್ಯನ ಮೈಂಡ್ ನ ಮತ್ತು ಮನುಷ್ಯನ ಹೃದಯವನ್ನ ಇಷ್ಟು ಪ್ರಭಾವಿಸಿರುವುದು. ಏಕೆಂದರೆ ಸುಂದರ ಸಂಗೀತ ನಿಮ್ಮನ್ನು ಸಾರ್ವತ್ರಿಕ ಸೌಹಾರ್ದದೊಂದಿಗೆ ಒಂದಾಗುವಂತೆ ಮಾಡುತ್ತದೆ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
,
ಯಾರೋ ನನ್ನ ಮನೆಗೆ
ಬ್ಯಾಂಡ್ ಒಂದನ್ನ ಕಳುಹಿಸಿದ್ದರು.
ಬೆಳಿಗ್ಗೆ ಐದು ಗಂಟೆಗೇ ಆ ಬ್ಯಾಂಡಿನವರು
ಸಂಗೀತ ಶುರುಹಚ್ಚಿಕೊಂಡರು.
ನನಗೇನೋ ಇದು ನನ್ನಿಂದ ಹಾಡಿಸಲು
ಭಗವಂತ ಮಾಡಿದ ಸಂಚು ಅನ್ನಿಸಿತು.
ಆಮೇಲೆ ಚಂದ್ರ ಮತ್ತು
ಕೆಲ ಮಧುರ ಧ್ವನಿಯ ನಕ್ಷತ್ರಗಳು
ನಮ್ಮನ್ನು ಕೂಡಿಕೊಂಡವು.
ಭೂತಾಯಿ ತನ್ನ ಹೊಟ್ಟೆಯನ್ನೇ
ನಗಾರಿಯಂತೆ ಬಾರಿಸಲು
ಅವಕಾಶ ಮಾಡಿಕೊಟ್ಟಳು ನಮಗೆ
ಇದೆಲ್ಲ ಏನು ಎನ್ನುವುದು ನನಗೆ
ಗೊತ್ತಾಗುವದಕ್ಕಿಂತ ಮುಂಚೆಯೇ ಅರಿವಾಯ್ತು,
ಮನುಷ್ಯ ಜಾತಿ
ಹಾಫಿಜ್ ನಂಥ ಹಳೆಯ ಸಂಗೀತ ಮಾಂತ್ರಿಕನಿಂದ
ಕೆಲ ಸಂಗೀತದ ಪಾಠಗಳನ್ನಷ್ಟೇ
ಕಲಿತಿದ್ದರೂ ಸಾಕಿತ್ತು…….
ತೇಲಾಡುತ್ತಿತ್ತು ಖುಶಿಯಲ್ಲಿ
– ಹಾಫಿಜ್
ಬಿಥೋವನ್, ಮೋಜಾರ್ಟ್ ಅಥವಾ ಯಾವುದೇ ಪೌರಸ್ತ ಶಾಸ್ತ್ರೀಯ ಸಂಗೀತವನ್ನು ಕೇಳುವಾಗ ನೀವು ಒಂದು ವಿಭಿನ್ನ ಜಗತ್ತನ್ನು ಪ್ರವೇಶ ಮಾಡುತ್ತೀರಿ ; ಆಗ ಸಂಪೂರ್ಣ ವಿಭಿನ್ನ ವಿನ್ಯಾಸ ರೂಪಗೊಳ್ಳುವುದು. ಆಗ ನೀವು ನಿಮ್ಮ ಆಲೋಚನೆಗಳ ಮಡುವಿನಲ್ಲಿ ಇಲ್ಲ – ನಿಮ್ಮ ವೆವ್ ಲೆಂತ್ ಈಗ ಬದಲಾಗಿದೆ. ಆ ಅಪೂರ್ವ ಸಂಗೀತ ಈಗ ನಿಮ್ಮನ್ನು ಆವರಿಸಿಕೊಂಡಿದೆ, ನಿಮ್ಮ ಹೃದಯವನ್ನು ಮೀಟತೊಡಗಿದೆ, ನೀವು ಕಳೆದುಕೊಂಡಿದ್ದ ಲಯದೊಂದಿಗೆ ಮತ್ತೆ ನಿಮ್ಮನ್ನು ಒಂದಾಗಿಸುತ್ತಿದ್ದೆ.
ಅಪೂರ್ವ ಸಂಗೀತದ ವ್ಯಾಖ್ಯಾನವೇ ಇದು : ಇದು ನಿಮಗೆ ನಿಮ್ಮ ಅಸ್ತಿತ್ವದ ಹೊಳಹುಗಳನ್ನ ನೆನಪು ಮಾಡಿಕೊಂಡುತ್ತದೆ, ಸಂಪೂರ್ಣವಾಗಿ, ಸಮಸ್ತದೊಂದಿಗೆ ಒಂದಾಗುತ್ತ – ಕೆಲವು ಕ್ಷಣಗಳ ಮಟ್ಟಿಗಾದರೂ ಸರಿ. ಆಗ ಒಂದು ಮಹಾ ಸಮಾಧಾನ ನಿಮ್ಮೊಳಗೆ ನೆಲೆಯಾಗುತ್ತದೆ ಮತ್ತು ನಿಮ್ಮ ಹೃದಯ ಆನಂದದಲ್ಲಿ ಲೀನವಾಗುತ್ತದೆ. ಏನಾಗಿದೆಯೆಂದು ನಿಮಗೆ ಗೊತ್ತಾಗದಿರಬಹುದು ಆದರೆ, ಗ್ರೇಟ್ ಮಾಸ್ಟರ್, ಮಹಾ ಸಂಗೀತಗಾರ ನಿಮ್ಮ ಮೂಲಭೂತ ಸಂಗತಿಯನ್ನು ಮೀಟುತ್ತ ನುಡಿಸುತ್ತಿದ್ದಾರೆ. ಮೂಲಭೂತ ವಿಷಯವೆಂದರೆ ಅಸ್ತಿತ್ವಕ್ಕೆ ತನ್ನದೇ ಆದ ರಿದಂ ಇದೆ , ಮತ್ತು ನೀವು ಆ ರಿದಂಗೆ ಅನುಗುಣವಾಗಿ ಸಂಗೀತವನ್ನು ಸೃಷ್ಟಿಸಬಲ್ಲಿರಾದರೆ , ಆ ಸಂಗೀತವನ್ನು ಕೇಳಿಸಿಕೊಳ್ಳುವ ಎಲ್ಲರೂ ಅದರೊಳಗೆ ಒಂದಾಗುತ್ತ ಹೋಗುತ್ತಾರೆ.
ಮತ್ತು ಇದನ್ನು ಹಲವಾರು ರೀತಿಯಲ್ಲಿ ಸಾಧಿಸಬಹುದು. ಉದಾಹರಣೆಗೆ, ನೀವು ಜಲಪಾತವೊಂದರ ಹತ್ತಿರ ಕುಳಿತಿರುವಿರಾದರೆ, ಸುಮ್ಮನೇ ಜಲಪಾತದ ಸದ್ದನ್ನು ತಾದಾತ್ಮ್ಯತೆಯಿಂದ ಕೇಳಿಸಿಕೊಳ್ಳುತ್ತ ಅದರೊಂದಿಗೆ ಒಂದಾಗಿ. ನಿಮ್ಮ ಕಣ್ಣುಗಳನ್ನ ಮುಚ್ಚಿಕೊಳ್ಳುತ್ತ ಜಲಪಾತದೊಂದಿಗೆ ಒಂದಾಗಿರುವ ಭಾವವನ್ನು ಅನುಭವಿಸಿ – ಧುಮುಕುತ್ತಿರುವ ನೀರಿನೊಂದಿಗೆ ಒಂದಾಗಿ. ಮತ್ತು ಆಗ ಕೆಲವು ಕ್ಷಣಗಳು ಒದಗಿಬರುತ್ತವೆ, ಕೆಲವೇ ಕೆಲವು ಕ್ಷಣಗಳು, ಥಟ್ಟನೇ ನಿಮಗೆ ಜಲಪಾತವೇ ನೀವಾಗಿರುವ ಅನುಭವಾಗುತ್ತದೆ. ಇಂಥ ಕೆಲವು ಕ್ಷಣಗಳ ಮೂಲಕವೇ ಮಹಾ ಆನಂದ ಹುಟ್ಟಿಕೊಳ್ಳುತ್ತದೆ . ಹಕ್ಕಿಗಳ ಚಿಲಿಪಿಲಿ ಕೇಳಿಸಿಕೊಳ್ಳುತ್ತ ಇಂಥದೇ ಅನುಭವದೊಂದಿಗೆ ಒಂದಾಗಿ.
******************************

