ನಿಮ್ಮ ಕಲ್ಪನಾಶಕ್ತಿ ಒಂದು ಸಂಗತಿಯನ್ನಂತೂ ಖಂಡಿತ ಮಾಡುತ್ತದೆ: ಅದು ನರಕವನ್ನು ಸೃಷ್ಟಿ ಮಾಡುತ್ತದೆ ಅಥವಾ ಸ್ವರ್ಗವನ್ನು. ಕಲ್ಪನಾಶಕ್ತಿ ಯಾವತ್ತಿಗೂ ಸ್ಥಿರವಾದ ಸಂಗತಿ, ಅದು ಯಾವತ್ತೂ ದ್ವಂದ್ವವನ್ನು ಹುಟ್ಟುಹಾಕುವುದಿಲ್ಲ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಬದುಕು
ನಮಗೆ ನೀಡಲಾಗಿರುವ
ತಾತ್ಕಾಲಿಕ ಸಾಲ ಮಾತ್ರ,
ಸತ್ಯದ ಒಂದು ಕಚ್ಚಾ ನಕಲು ಪ್ರತಿ.
ಮಕ್ಕಳಿಗೆ ಮಾತ್ರ
ನಿಜದಂತೆ ಕಾಣುತ್ತವೆ ಆಟಿಗೆಗಳು.
ಆದರೂ ಕೆಲವರಿಗೆ
ಆಟಿಗೆಗಳೆಂದರೆ ಮೋಹ,
ಇನ್ನೂ ಕೆಲವರಿಗೆ ತಾತ್ಸಾರ
ಹೊರಗೆ ಎಸೆದುಬಿಡುತ್ತಾರೆ,
ಮುರಿದು ಹಾಕಿಬಿಡುತ್ತಾರೆ.
ಈ ಬದುಕಿನಲ್ಲಿ
ಎಲ್ಲ ಅತಿಗಳಿಂದಲೂ ದೂರವಿರಿ,
ಇಲ್ಲವಾದರೆ
ಒಳಗಿನ ಸಮತೋಲನಕ್ಕೆ ಧಕ್ಕೆ.
ಕಣ್ಣು ಮುಚ್ಚಿ ತೆಗೆಯುವುದರಲ್ಲಿ
ಒಂದು ಅತಿ
ಇನ್ನೊಂದಾಗುತ್ತದೆ.
ಸೂಫಿಗಳು
ಸದಾ ಮಧ್ಯಮ ಸ್ಥಿತಿಯಲ್ಲಿ
ನಿರ್ಲಿಪ್ತರು, ಸಮಾಧಾನಿಗಳು
ಮತ್ತು
ಪ್ರೇಮದಲ್ಲಿ ನಿರತರು.
~ ಶಮ್ಸ್
ಕಲ್ಪನಾಶಕ್ತಿ ಯಾವತ್ತೂ ಲಾಜಿಕಲ್, ಮತ್ತು ವಾಸ್ತವ ಯಾವಾಗಲೂ ತರ್ಕರಹಿತ. ಆದ್ದರಿಂದ ಯಾವಾಗಲೂ ವಾಸ್ತವಕ್ಕೆ ಎರಡು ಧ್ರುವಗಳು, ಮತ್ತು ಇದು ವಾಸ್ತವದ ಒಂದು ಗುಣಲಕ್ಷಣ ಕೂಡ. ವಾಸ್ತವಕ್ಕೆ ಎರಡು ಧ್ರುವಗಳು ಇರದಿದ್ದರೆ ಅದು ಮೈಂಡ್ ನ ಸೃಷ್ಟಿ.
ಯಾವತ್ತೂ ಮೈಂಡ್ ಸುರಕ್ಷಿತವಾಗಿರಲು ಬಯಸುತ್ತದೆ ಮತ್ತು ಯಾವಾಗಲೂ ಅದು ಸ್ಥಿರವಾದ ಸಂಗತಿಗಳನ್ನು ಹುಟ್ಟುಹಾಕುತ್ತದೆ. ಬದುಕು ಬಹಳ ಅಸ್ಥಿರವಾದದ್ದು ಮತ್ತು ವಿರೋಧಾಭಾಸಗಳಿಂದ ಕೂಡಿಕೊಂಡಿರುವಂಥದು. ಅದು ಹಾಗಿರಲೇ ಬೇಕು, ಅದು ದ್ವಂದ್ವಗಳ ಮೂಲಕವೇ ಅಸ್ತಿತ್ವದಲ್ಲಿ ಇರುವಂಥದು. ಬದುಕು ಅಸ್ತಿತ್ವದಲ್ಲಿ ಇರುವುದು ಸಾವಿನ ಮೂಲಕವೇ, ಆದ್ದರಿಂದ ಯಾವಾಗ ನೀವು ಹೆಚ್ಚು ಜೀವಂತಿಕೆಯನ್ನು ಅನುಭವಿಸುತ್ತೀರೋ ಆಗ ನಿಮಗೆ ಸಾವಿನ ಅನುಭವವೂ ಆಗುತ್ತಿರುತ್ತದೆ. ಬದುಕಿನ ಯಾವುದೇ ಅಪೂರ್ವ ಕ್ಷಣ, ಸಾವಿನ ಅಪೂರ್ವ ಕ್ಷಣವೂ ಹೌದು. ಅಪೂರ್ವ ಖುಶಿಯ ಕ್ಷಣ, ದುಃಖದ ಅಪೂರ್ವ ಕ್ಷಣವೂ ಹೌದು. ಇದು ಹಾಗಿರಲೇ ಬೇಕು.
ಆದ್ದರಿಂದ ಇದು ನಿಮಗೆ ಯಾವತ್ತಿಗೂ ನೆನಪಿಪಿರಲಿ : ಯಾವಾಗ ನಿಮಗೆ ದ್ವಂದ್ವದ ಅನುಭವವಾಗುತ್ತದೆಯೋ – ಪರಸ್ಪರ ವಿರುದ್ಧವಾದ, ತಾಳೆಯಾಗದ ಎರಡು ಸಂಗತಿಗಳು ಜೊತೆಯಾಗಿ ಸಂಭವಿಸುತ್ತಿವೆಯೋ ಅದು ವಾಸ್ತವದ ಸಂಗತಿ; ಅದನ್ನು ಕಲ್ಪಿಸಿಕೊಳ್ಳುವುದೂ ಸಾಧ್ಯವಿಲ್ಲ. ಕಲ್ಪನಾಶಕ್ತಿ ಯಾವತ್ತೂ ಅಷ್ಟು ತರ್ಕರಹಿತವಲ್ಲ.
ಒಂದು ದಿನ ಪರ ಊರಿನಿಂದ ಬಂದಿದ್ದ ಒಬ್ಬ ಮನುಷ್ಯ ನಸ್ರುದ್ದೀನ್ ಜೊತೆ ಮಾತನಾಡುತ್ತಿದ್ದ,
“ ನಾನು ದೊಡ್ಡ ಶ್ರೀಮಂತ ಆದರೆ ತುಂಬ ದುಃಖ ಮತ್ತು ಶೋಚನೀಯ ಪರಿಸ್ಥಿತಿಯಲ್ಲಿರುವ ಮನುಷ್ಯ. ಈ ಹಣ ಹಿಡಿದುಕೊಂಡು ಸುಖ ಮತ್ತು ಸಂತೋಷ ಹುಡುಕುತ್ತಾ ಊರೂರು ಅಲೆಯುತ್ತಿದ್ದೇನೆ ಆದರೆ ಯಾವ ಪ್ರಯೋಜನವೂ ಆಗಿಲ್ಲ. “
ಆ ಮನುಷ್ಯ ಇನ್ನೂ ಮಾತು ಮುಗಿಸಿರಲಿಲ್ಲ, ನಸ್ರುದ್ದೀನ್ ಆ ಮನುಷ್ಯನ ಕೈಯ್ಯಲಿದ್ದ ಹಣದ ಗಂಟು ಕಸಿದುಕೊಂಡು ಓಡತೊಡಗಿದ. ಆ ಮನುಷ್ಯ, ನಸ್ರುದ್ದೀನ್ ನ ಹಿಂದೆ ಕಳ್ಳ ಕಳ್ಳ ಎಂದು ಕೂಗುತ್ತ ಬೆನ್ನುಹತ್ತಿದ.
ಸ್ವಲ್ಪ ದೂರ ಹೋದ ಮೇಲೆ ನಸ್ರುದ್ದೀನ್ ಹಣದ ಗಂಟನ್ನು ರಸ್ತೆಯ ಮೇಲೆ ಎಸೆದು, ಅಲ್ಲಿಯೇ ಮರದ ಹಿಂದೆ ಅಡಗಿಕೊಂಡು ಆ ಮನುಷ್ಯನನ್ನು ಗಮನಿಸತೊಡಗಿದ.
ರಸ್ತೆಗುಂಟ ಓಡಿಬಂದ ಮನುಷ್ಯ, ರಸ್ತೆಯ ಮೇಲೆ ಅನಾಥವಾಗಿ ಬಿದ್ದಿದ್ದ ಹಣದ ಗಂಟು ಕಂಡು ಸಂತೋಷಭರಿತನಾದ. ಅವನ ಕಣ್ಣುಗಳಿಂದ ಆನಂದಭಾಷ್ಪ ಹರಿಯತೊಡಗಿತ್ತು. ಹಣದ ಗಂಟು ಸಿಕ್ಕ ಖುಶಿಯಲ್ಲಿ ಆ ಮನುಷ್ಯ ಸಂತೋಷದಿಂದ ಕುಣಿಯತೊಡಗಿದ.
ಇದನ್ನೆಲ್ಲ ಅಡಗಿಕೊಂಡು ನೋಡುತ್ತಿದ್ದ ನಸ್ರುದ್ದೀನ್ ಮನಸ್ಸಿನಲ್ಲೇ ಅಂದುಕೊಂಡ,
“ ಮನುಷ್ಯನ ದುಃಖವನ್ನು ನೀಗಿಸಲು ಇದೂ ಒಂದು ವಿಧಾನ “

