ವಚನ ವೈವಿಧ್ಯ#18:  ಹೂವು-ಪರಿಮಳ, ಮಾತು-ನೀತಿ: ಸಗರದ ಬೊಮ್ಮಣ್ಣ

ಈ ವಚನದ ಪ್ರತಿಯೊಂದು ಸಾಲನ್ನೂ ಸಮರ್ಪಕವಾಗಿ ವಿವರಿಸುವುದು ಕಷ್ಟ. ಒದಗು ಅನ್ನುವ ತೀರ ಸಾಮಾನ್ಯ ಅನಿಸುವ ಪದವನ್ನು ಯಾವ ಅರ್ಥದಲ್ಲಿ ಬಳಸಿರಬಹುದು ಎಂಬ ಪ್ರಶ್ನೆಗೆ ಸುಲಭವಾದ ಉತ್ತರ ಇರಲಾರದು. ಆದರೂ ಒಟ್ಟಾರೆ ಭಾವ ಸ್ಪಷ್ಟವಾಗುತ್ತದೆ । ಓ.ಎಲ್.ನಾಗಭೂಷಣ ಸ್ವಾಮಿ

ಹೂವಕೊಯ್ಯುವರಲ್ಲದೆ
ಹೂವಿನ ಗಂಧವ ಕೊಯ್ದವರುಂಟೆ
ಅಯ್ಯಾ
ಮಾತನಾಡುವರಲ್ಲದೆ
ಮಾತಿನ ಭೇದದ ವಾಸನೆಯ ಕಂಡವರುಂಟೆ
ಅಯ್ಯಾ
ಇದು ನೀತಿಯ ಒದಗು
ಕ್ರೀಯ ನಿಹಿತವಾಗಿ ಮಾಡುವಲ್ಲಿ ಭಾವಶುದ್ಧವಾಗಿರಬೇಕು
ಮಾತನರಿದಾಡುವಲ್ಲಿ ಮಾತಿನ ರೀತಿಗೆ ತಾ ಒದಗು ನಿಹಿತವಾಗಿರಬೇಕು
ಅದು ಕೂಟಸ್ಥ ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ (ಸಂ.೯,ವ.೫೯೨)

[ಒದಗು-ಕೈವಶ ಮತ್ತು ನೆರವಾಗು; ವಾಸನೆ-ನೆನಪು; ಕ್ರೀ-ಧಾರ್ಮಿಕ ಮತ್ತು ನೈತಿಕ ಆಚರಣೆಗಳು, ಕ್ರಿಯೆ; ನಿಹಿತ-ತುಂಬಿರು, ಭರಿತ; ಕೂಟಸ್ಥ-ಐಕ್ಯ ಸ್ಥಿತಿ, ಕೂಟದಲ್ಲಿ ನೆಲೆಯಾದ, ಒಂದಾದ ಸ್ಥಿತಿ]

ಹೂವನ್ನು ಕೊಯ್ಯುವವರು ಇದ್ದಾರೆಯೇ ಹೊರತು ಹೂವಿನ ಪರಿಮಳವನ್ನು ಕೊಯ್ದವರು ಇದ್ದಾರೆಯೇ? ಮಾತನಾಡುವವರು ಇದ್ದಾರೆಯೇ ಹೊರತು ಮಾತಿನೊಳಗಿರುವ ʻವಾಸನೆʼಯನ್ನು ಕಂಡವರು ಇದ್ದಾರೆಯೇ? ಇದು ನೀತಿಗೆ ಕೈವಶವಾಗುವ ಸಂಗತಿ. ಯಾವುದೇ ಆಚರಣೆಯನ್ನು ಅಚ್ಚುಕಟ್ಟಾಗಿ, ಪೂರ್ಣವಾಗಿ ಮಾಡುವಾಗ ಭಾವವು ಶುದ್ಧವಾಗಿರಬೇಕು. ಮಾತನ್ನು ಅರಿತು ಆಡುವಾಗ ಮಾತಿನ ರೀತಿಗೆ ನೆರವಾಗುವ ಹಾಗೆ ನಡತೆ ಇರಬೇಕು. ಇದು ಕೂಟಸ್ಥ, ಅಥವಾ ಐಕ್ಯದಲ್ಲಿ ನೆಲೆಯಾದವರ ಸ್ಥಿತಿ.

ಈ ವಚನದ ಪ್ರತಿಯೊಂದು ಸಾಲನ್ನೂ ಸಮರ್ಪಕವಾಗಿ ವಿವರಿಸುವುದು ಕಷ್ಟ. ಒದಗು ಅನ್ನುವ ತೀರ ಸಾಮಾನ್ಯ ಅನಿಸುವ ಪದವನ್ನು ಯಾವ ಅರ್ಥದಲ್ಲಿ ಬಳಸಿರಬಹುದು ಎಂಬ ಪ್ರಶ್ನೆಗೆ ಸುಲಭವಾದ ಉತ್ತರ ಇರಲಾರದು. ಆದರೂ ಒಟ್ಟಾರೆ ಭಾವ ಸ್ಪಷ್ಟವಾಗುತ್ತದೆ. ಹೂವು-ಪರಿಮಳ, ಮಾತು-ವಾಸನೆ (ನೆನಪು, ಪೂರ್ವದ ಜ್ಞಾನ, ಬಯಕೆ), ಮಾತು-ಕ್ರಿಯೆ, ಮಾತು-ರೀತಿ, ಮಾತು-ನೀತಿಗಳ ಸಂಬಂಧದ ಹೆಣಿಗೆ ವಚನದಲ್ಲಿದೆ ಅನಿಸುತ್ತದೆ.

ಹೂವನ್ನು ಕೊಯ್ದು ನಮ್ಮ ವಶಮಾಡಿಕೊಳ್ಳುವ ಹಾಗೆ ಮಾತು ವಶವಾಗದು. ಮಾತಿಗೆ ಕಾರಣವಾದ ಅನುಭವ, ನೆನಪು, ಮಾತಿನೊಳಗೆ ಅಡಗಿರುವ ಬಯಕೆ, ಪೂರ್ವಜನ್ಮದ ಸ್ಮೃತಿ ಇವೆಲ್ಲ ಅರಿವಾಗುವುದು ಕಷ್ಟ. ಮಾತು ನೀತಿಗೆ ಹೊಂದುವಂತಿರಬೇಕು.

ಇನ್ನೊಂದು ಹೆಜ್ಜೆ ಮುಂದಿಟ್ಟರೆ ಕೂಟಸ್ಥರು, ಅಂದರೆ ದೈವದ ಅನುಭವದಲ್ಲಿ ಒಂದಾಗಿ ಅಲ್ಲೇ ನೆಲೆ ನಿಂತವರು, ಆ ಕಾರಣಕ್ಕೇ ಮಾತಾಡಲು ಸಾಧ್ಯವಿಲ್ಲ. ಮಾತಾಡಿದರೆ ಅವರು ಬೇರೆ, ದೇವರು ಬೇರೆ ಅಂತಾಗುತ್ತದೆ. ಕೂಟದ ಅನುಭವ ಅವರ ಮಾತಿಲ್ಲದ ಕ್ರಿಯೆಗಳ ಮೂಲಕವಷ್ಟೇ ತಿಳಿಯಬೇಕಾದದ್ದು.

ಹೀಗೆ ಮಾತು-ಅನುಭವ-ಮೌನ, ಕ್ರಿಯೆ-ಆಚರಣೆಗಳ ಸಂಬಂಧ ಪರಿಶೀಲಿಸುವಂತಿದೆ. ವಚನಗಳಲ್ಲಿ ಬರುವ ಕ್ರೀ ಎಂಬ ಪದ ಧಾರ್ಮಿಕ ಮತ್ತು ಸ್ವ ಇಚ್ಛೆಯಿಂದ ನಡೆಸುವ ನೈತಿಕ ಕ್ರಿಯೆಗಳನ್ನು ಸೂಚಿಸುತ್ತದೆ. ಕ್ರೀ ಕಾಣುತ್ತದೆ, ಕೂಟದ ಅನುಭವ ಕಾಣದು; ಹೂವು ಕಂಡು ಪರಿಮಳ ಕಾಣದೆ ಕೇವಲ ವ್ಯಕ್ತವಾಗುವ ಹಾಗೆ. ಅದು ಮಾತು ಅನ್ನುವ ಗಾಳಿಗೆ ಸಿಕ್ಕದು. ಅರಿವಿಗೆ ಮಾತ್ರ ಒದಗುವುದು ಅನ್ನುವ ವಿವರಣೆ ಈ ವಚನಕ್ಕೆ ಇರಬಹುದು.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.