ಸೃಜನಶೀಲತೆ, ಆಹಾರದಂತೆ, ಮತ್ತು ಸೃಜನಶೀಲತೆ ಇಲ್ಲದೇ ಇರುವ ಜನ ಬೆಳವಣಿಗೆ ಹೊಂದುವುದು ಬಹಳ ಅಪರೂಪ, ಏಕೆಂದರೆ ಅವರು ಹಸಿವೆಯಿಂದ ಬಳಲುತ್ತಿರುತ್ತಾರೆ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಭಗವಂತನ ಸೃಷ್ಟಿಯಲ್ಲಿ
ಮನುಷ್ಯನ ಸ್ಥಾನ ಅನನ್ಯ.
“ ನನ್ನ ಚೇತನವನ್ನೇ
ಮನುಷ್ಯನಿಗಾಗಿ ಧಾರೆ ಎರೆದಿದ್ದೆನೆ “
ಎನ್ನುತ್ತಾನೆ ಭಗವಂತ.
ಭೂಮಿಯ ಮೇಲೆ ಭಗವಂತನ ರಾಯಭಾರಿಗಳನ್ನಾಗಿ
ನಮ್ಮನ್ನು (ಯಾವ ವಿನಾಯತಿಯೂ ಇಲ್ಲದೆ)
ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.
ಆದರೆ
ಯಾವತ್ತಾದರೂ ನಾವು
ಭಗವಂತನ ಪ್ರತಿನಿಧಿಗಳ ಹಾಗೆ ವರ್ತಿಸಿದ್ದೀವಾ?
ನೆನಪಿರಲಿ
ನಮ್ಮೊಳಗಿನ ದಿವ್ಯ ಚೇತನವನ್ನು ಕಂಡುಕೊಳ್ಳುವುದು
ಮತ್ತು ಅದನ್ನು ಜೀವಿಸುವುದು
ಮಾತ್ರ
ಭಗವಂತನಿಗೆ ನಾವು ಸಲ್ಲಿಸಬಹುದಾದ
ನಿಜವಾದ ಕೃತಜ್ಞತೆ.
~ ಶಮ್ಸ್
ನಾವು ಏನನ್ನಾದರೂ ಸೃಷ್ಟಿಸಿದಾಗಲೇ ದೇವರಿಗೆ ಹತ್ತಿರವಾಗೋದು. ದೇವರು ಸೃಷ್ಟಿಕರ್ತನಾದರೆ, ಸೃಜನಶೀಲರಾಗುವುದು ದೇವರ ಇರುವಿಕೆಯಲ್ಲಿ ಪಾಲ್ಗೊಂಡಂತೆ. ನಾವು ಇಡೀ ಬ್ರಹ್ಮಾಂಡವನ್ನು ಸೃಷ್ಟಿಸಲಾರೆವು, ಆದರೆ ನಾವು ಒಂದು ಪುಟ್ಟ ಪೇಂಟಿಂಗ್ ಸೃಷ್ಟಿಸಬಹುದು – ಸಣ್ಣ ಸಣ್ಣ ಸಂಗತಿಗಳನ್ನು ಸೃಷ್ಟಿಸಬಹುದು. ಮತ್ತು ಬೃಹತ್ ಸಂಗತಿಯನ್ನು ಸೃಷ್ಟಿಸುವುದು ಮತ್ತು ಚಿಕ್ಕ ಸಂಗತಿಯನ್ನು ಸೃಷ್ಟಿಸುವುದರಲ್ಲಿ ಅಂಥ ವ್ಯತ್ಯಾಸವೇನಿಲ್ಲ. ಸೃಜನಶೀಲತೆ ಯಾವುದರಲ್ಲೂ ವ್ಯತ್ಯಾಸ ಮಾಡುವುದಿಲ್ಲ.
ಆದ್ದರಿಂದ ಸೃಜನಶೀಲತೆಗೆ ಕ್ವಾಂಟಿಟಿಯ ಬಗ್ಗೆ ಕಾಳಜಿ ಇಲ್ಲ, ಅದರ ಕಾಳಜಿ ಏನೇ ಇದ್ದರೂ ಅದು ಕ್ವಾಲಿಟಿಯ ಬಗ್ಗೆ. ಮತ್ತು ನಿಮ್ಮ ಸೃಜನಶೀಲತೆಯ ಬಗ್ಗೆ ಬೇರೆಯವರು ಏನೆನ್ನುತ್ತಾರೆ ಎನ್ನುವುದರ ಬಗ್ಗೆ ಅದಕ್ಕೆ ಕಾಳಜಿಯಿಲ್ಲ – ಅದು ಅಪ್ರಸ್ತುತ. ನಿಮಗೆ ನಿಮ್ಮ ಕೆಲಸ ಖುಶಿ ಕೊಡುತ್ತಿದೆಯಾದರೆ ಅಷ್ಟು ಸಾಕು; ನಿಮಗೆ ನಿಮ್ಮ ಪಾಲಿನ ಸಂಬಳ ಆಗಲೇ ಸಂದಾಯವಾದಂತೆ.

