ತಿಳುವಳಿಕೆ ( Understanding): ಓಶೋ 365 #Day 360

ಪ್ರೇಮಿಗಳು ಬೇರೆಯಾಗಬಹುದು, ಆದರೆ ಪರಸ್ಪರರ ಸಂಗಾತದಲ್ಲಿ ಸಾಧ್ಯವಾದ ತಿಳುವಳಿಕೆ ಇಬ್ಬರಿಗೂ ಉಡುಗೊರೆ ಇದ್ದಂತೆ. ನೀವು ಒಬ್ಬರನ್ನು ಪ್ರೀತಿಸುತ್ತಿದ್ದೀರಾದರೆ, ಅವನಿಗೆ ಅಥವಾ ಅವಳಿಗೆ ನೀವು ಕೊಡಬಹುದಾದ ಉಡುಗೊರೆ ಎಂದರೆ ಒಂದಿಷ್ಟು ತಿಳುವಳಿಕೆ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ


ಈ ನದಿಯ ಒಳಗಿರುವ ಚಂದ್ರ
ಕೇವಲ ಪ್ರತಿಬಿಂಬವಲ್ಲ.

ನದಿಯ ತಳದಿಂದಲೇ ಚಂದ್ರ ಸಂಭಾಷಣೆ.

ನಾನು ಈ ನದಿಯೊಂದಿಗೆ
ಸತತವಾಗಿ ಮಾತನಾಡುತ್ತ
ಪ್ರಯಾಣ ಮಾಡುತ್ತಿದ್ದೇನೆ.

ಯಾವುದು ಮೇಲಿದೆಯೋ
ನದಿಯ ಹೊರಗಿರುವಂತೆ ಕಾಣುತ್ತಿದೆಯೋ
ಆ ಎಲ್ಲವೂ ಮನೆ ಮಾಡಿಕೊಂಡಿರುವುದು
ನದಿಯ ಒಳಗೆ.
ನೀವೂ ಒಂದಾಗಿ
ಇಲ್ಲಿ ಅಥವಾ ಅಲ್ಲಿ ನಿಮಗಿಷ್ಟವಾದಂತೆ.

ಇದು ನದಿಗಳ ನದಿ
ಮತ್ತು ನಿರಂತರ ಸಂಭಾಷಣೆಯ
ಅಪರೂಪದ ಮೌನ.

~ ರೂಮಿ

ಪರಸ್ಪರ ಮಾತನಾಡಿ, ಮತ್ತು ಕೆಲವೊಮ್ಮೆ ನಿಮ್ಮ ಸಂಗಾತಿಗೆ ಏಕಾಂತ ಅವಶ್ಯಕ ಎನ್ನುವುದನ್ನು ತಿಳಿದುಕೊಳ್ಳಿ. ಇದು ಸಮಸ್ಯೆ : ಇಂಥದೊಂದು ಅವಶ್ಯಕತೆ ಇಬ್ಬರಿಗೂ ಏಕ ಕಾಲದಲ್ಲಿ ಇರದಿರಬಹುದು. ಕೆಲವೊಮ್ಮೆ ನಿಮಗೆ ಅವಳ ಸಂಗಾತ ಬೇಕೆನಿಸುವಾಗ ಅವಳಿಗೆ ಏಕಾಂತದ ಅವಶ್ಯಕತೆ ಇರಬಹುದು – ಈ ಕುರಿತು ಏನು ಮಾಡುವುದೂ ಸಾಧ್ಯವಿಲ್ಲ. ಅವಳ ಅವಶ್ಯಕತೆಯನ್ನು ಅರ್ಥ ಮಾಡಿಕೊಂಡು ನೀವು ಅವಳಿಗೆ ಏಕಾಂತವನ್ನು ಸಾಧ್ಯ ಮಾಡಬೇಕು. ಕೆಲವೊಮ್ಮೆ ನಿಮಗೆ ಏಕಾಂತ ಬೇಕಾಗಿರಬಹುದು ಮತ್ತು ಅವಳಿಗೆ ನಿಮ್ಮ ಸಂಗೀತ, ಆಗ ನೀವು ನಿಮ್ಮ ಅಸಹಾಯಕತೆಯನ್ನು ಅರ್ಥಮಾಡಿಸಬೇಕು.

ಹೆಚ್ಚು ಹೆಚ್ಚು ತಿಳುವಳಿಕೆಯನ್ನು ನಿಮ್ಮ ನಡುವೆ ಸೃಷ್ಟಿ ಮಾಡಿಕೊಳ್ಳುತ್ತ ಹೋಗಿ. ಪ್ರೇಮಿಗಳು ಮಿಸ್ ಮಾಡಿಕೊಳ್ಳುವುದು ಇದನ್ನೇ : ಅವರ ನಡುವೆ ಪ್ರೇಮವೆನೋ ಸಾಕಷ್ಟಿದೆ ಆದರೆ ಇರಬೇಕಾದಷ್ಟು ತಿಳುವಳಿಕೆ ಇಲ್ಲ. ಹಾಗಾಗಿಯೇ ತಪ್ಪುತಿಳುವಳಿಕೆಯ ಬಂಡೆಗೆ ಅಪ್ಪಳಿಸಿ ಅವರ ಪ್ರೇಮ ನಾಶವಾಗುತ್ತದೆ. ತಿಳುವಳಿಕೆಯ ಹೊರತಾಗಿ ಪ್ರೇಮ ಬದುಕುವುದು ಸಾಧ್ಯವಿಲ್ಲ. ಒಂಟಿಯಾಗಿ ಪ್ರೇಮ, ಬಹಳ ಮೂರ್ಖ ; ಆದರೆ ತಿಳುವಳಿಕೆ ಇದ್ದಾಗ ಪ್ರೇಮ ಬಹುಕಾಲ ಬದುಕಬಹುದು, ಅಪಾರ ಖುಶಿಯ, ಹಲವಾರು ಸುಂದರ ಕ್ಷಣಗಳ ಅದ್ಭುತ ಬದುಕು, ಅಪರೂಪದ ಕಾವ್ಯಾತ್ಮಕ ಬದುಕು. ಆದರೆ ಇದೆಲ್ಲ ಸಾಧ್ಯವಾಗುವುದು ತಿಳುವಳಿಕೆ ಇದ್ದಾಗ ಮಾತ್ರ.

ಪ್ರೇಮ ನಿಮಗೆ ಒಂದು ಚಿಕ್ಕ ಮಧುಚಂದ್ರವನ್ನು ಸಾಧ್ಯ ಮಾಡಬಹುದು ಅಷ್ಟೇ. ಆದರೆ ಕೇವಲ ತಿಳುವಳಿಕೆಯಿಂದ ಮಾತ್ರ ಆಳವಾದ ಆಪ್ತತೆ ( deep intimacy) ಸಾಧ್ಯ. ಮತ್ತು ಪ್ರತಿ ಮಧುಚಂದ್ರದ ನಂತರ ಖಿನ್ನತೆ, ಕೋಪ, ಹತಾಶೆ ಜೊತೆಗೂಡುತ್ತವೆ. ನಿಮ್ಮ ತಿಳುವಳಿಕೆಯಲ್ಲಿ ಬೆಳವಣಿಗೆ ಸಾಧ್ಯವಾಗದಿದ್ದರೆ ಯಾವ ಮಧುಚಂದ್ರವೂ ನಿಮಗೆ ಸಹಾಯ ಮಾಡುವುದಿಲ್ಲ; ಆಗ ಅದು ಕೇವಲ ಮಾದಕ ಪೇಯದಂತೆ. ಆದ್ದರಿಂದ ಹೆಚ್ಚಿನ ತಿಳುವಳಿಕೆಗಾಗಿ ಪ್ರಯತ್ನಿಸಿ. ಮತ್ತು ಒಂದೊಮ್ಮೆ ನೀವು ಬೇರೆ ಬೇರೆಯಾದರೆ, ತಿಳುವಳಿಕೆಯಾದರೂ ನಿಮ್ಮ ಬಳಿ ಉಳಿದುಕೊಳ್ಳುತ್ತದೆ, ಮತ್ತು ಇದು ಪ್ರೇಮ ನಿಮ್ಮಿಬ್ಬರಿಗೂ ಕೊಡಮಾಡಿರುವ ಉಡುಗೊರೆ.


Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.