ಈ ವಚನ ವಿವರಿಸಲಾಗದ ಅನುಭವವನ್ನು ಮಾತಿನಲ್ಲಿ ಹಿಡಿದಿಡುವ ಪ್ರಯತ್ನ ಮಾಡುತ್ತಿದೆ... । ಓ.ಎಲ್.ನಾಗಭೂಷಣ ಸ್ವಾಮಿ
ಆತನ ಬೆರಸಿದ ಕೂಟವನೇನೆಂದು ಹೇಳುವೆನವ್ವಾ
ಹೇಳಲೂಬಾರದು ಕೇಳಲೂಬಾರದು
ಏನ ಹೇಳುವೆನವ್ವಾ
ಶಿಖಿ ಕರ್ಪೂರ ಬೆರಸಿದಂತೆ
ಮಹಾಲಿಂಗ ಗಜೇಶ್ವರನ ಕೂಡಿದ ಕೂಟವ ಹೇಳಲು ಬಾರದವ್ವಾ (ಸಂ.೭, ವ.೨೦೩)
(ಬೆರಸಿದ-ಬೆರೆತ, ಒಂದಾಗಿ ಹೋದ; ಹೇಳಲೂ ಬಾರದು ಕೇಳಲೂ ಬಾರದು-ಹೇಳಲೂ ಸಾಧ್ಯವಿಲ್ಲ, ಕೇಳಲು ಸಾಧ್ಯವಿಲ್ಲ; ಶಿಖಿ-ಜ್ವಾಲೆ; ಕೂಟ-ಮಿಲನ)
ಅವ್ವಾ, ಅವನೊಡನೆ ಕೂಡಿದ ಕೂಟ ಹೇಗಿತ್ತೆಂದು ಹೇಗೆ ಹೇಳಲಿ. ಅದನ್ನು ಹೇಳಲೂ ಆಗದು, ಕೇಳಲೂ ಆಗದು. ಬೆಂಕಿಯ ಜ್ವಾಲೆ ಮತ್ತು ಕರ್ಪೂರ ಕೂಡಿದ ಹಾಗಿತ್ತು. ಮಹಾಲಿಂಗ ಗಜೇಶ್ವರನನ್ನು ಕೂಡಿದ ಪರಿಯನ್ನು ಹೇಳಲು ಆಗುವುದೇ ಇಲ್ಲ.
ವಚನಕಾರರಲ್ಲಿ ಉರಿಲಿಂಗದೇವ ಮತ್ತು ಗಜೇಶ ಮಸಣಯ್ಯ ತಮ್ಮನ್ನು ತಾವು ಹೆಣ್ಣೆಂದು ಭಾವಿಸಿಕೊಂಡು, ನಂಬಿಕೊಂಡು ವಚನಗಳನ್ನು ಬರೆದವರು. ಗಂಡು ಹೆಣ್ಣಿನ ಮಿಲನದ ದೈಹಿಕವಿವರವನ್ನಲ್ಲ ಅನುಭವವನ್ನು ಭಾಷೆಯಲ್ಲಿ ವಿವರಿಸಲು ಆಗುವುದಿಲ್ಲ. ಮಿಲನವು ದೈವದೊಡನೆ ಒಂದಾದ ಅನುಭವಕ್ಕೆ ರೂಪಕ ಮಾತ್ರ. ಬೆಂಕಿಯ ಜ್ವಾಲೆಯೊಡನೆ ಒಂದಾದ ತಕ್ಷಣ ಕರ್ಪೂರ ಇಲ್ಲವಾಗುತ್ತದೆ, ಹಾಗೇ ಮಿಲನದಲ್ಲಿ ಎರಡು ಜೀವಗಳೂ ತಮ್ಮ ತನವನ್ನು ಕ್ಷಣದ ಮಟ್ಟಿಗಾದರೂ ಕಳೆದುಕೊಂಡು ಅನುಭವವೇ ತಾವಾಗಿರುವುದನ್ನು ಮಾತಿನಲ್ಲಿ ಹೇಳುವುದು, ಕೇಳಿ ತಿಳಿಯುವುದು ಅಸಾಧ್ಯ.
ಈ ವಚನ ವಿವರಿಸಲಾಗದ ಅನುಭವವನ್ನು ಮಾತಿನಲ್ಲಿ ಹಿಡಿದಿಡುವ ಪ್ರಯತ್ನ ಮಾಡುತ್ತಿದೆ.
ಗಜೇಶ ಮಸಣಯ್ಯ
ಈ ವಚನಕಾರರ ಮಹಲಿಂಗ ಗಜೇಶ್ವರಾ ಅಂಕಿತದ 70 ವಚನಗಳು ಪ್ರಕಟವಾಗಿವೆ. ಈಗಿನ ವಿಜಯಪುರದಿಂದ ೬೦ ಮೈಲು ದೂರದ ಅಕ್ಕಲಕೋಟೆಗೆ ಸಮೀಪದಲ್ಲಿರುವ ಕರಜಿಗೆ ಗ್ರಾಮದವರು. ಅಲ್ಲಿಗೆ ಹತ್ತಿರದ ಮನಹಳ್ಳಿಯಲ್ಲಿ ಮಸಣಯ್ಯನ ದೇವಾಲಯವಿದ್ದು ವರ್ಷಕ್ಕೊಮ್ಮೆ ಜಾತ್ರೆ ನಡೆಯುತ್ತದೆ. ಅಲ್ಲೇ ಹತ್ತಿರದ ಹಳ್ಳದ ಬಳಿಯಲ್ಲಿ ಮಸಣಯ್ಯ ಪೂಜೆ ಮಾಡುತ್ತಿದ್ದರು. ಪೂಜೆಯಲ್ಲಿ ಮೈಮರೆತಿರುವಾಗ ಕಾಡುಪ್ರಾಣಿ, ಗುಡುಗು,ಸಿಡಿಲು ಕೂಡ ಗಮನಕ್ಕೆ ಬರುತ್ತಿರಲಿಲ್ಲವೆಂಬ ಕಥೆ ಇದೆ. ಗಜೇಶ ಮಸಣಯ್ಯನವರ ವಚನಗಳಲ್ಲಿ ಮಧುರಭಾವ ಮುಖ್ಯವಾಗಿದೆ.

