ರಹಸ್ಯ (secret) : ಓಶೋ 365 #Day 361

ರಹಸ್ಯಕ್ಕೆ ಕಿವಿಗೊಡಿ; ಅದನ್ನು ನಿರಾಕರಿಸಬೇಡಿ. ಇಂಥ ಯಾವುದೂ ಇಲ್ಲ ಎಂದು ಯಾವ ಪೂರ್ವಾಲೋಚನೆ ಇಲ್ಲದೇ ಹೇಳಬೇಡಿ. ಈ ಭೂಮಿಯ ಮೇಲೆ ಪ್ರಜ್ಞಾಪೂರ್ವಕವಾಗಿ ಬದುಕಿರುವ ಪ್ರತಿಯೊಬ್ಬರೂ ರಹಸ್ಯಗಳನ್ನು ಒಪ್ಪಿಕೊಂಡಿದ್ದಾರೆ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ


ನಮ್ಮೊಳಗಿನ ದಿವ್ಯ ಶಕ್ತಿಗಳನ್ನು
ಹೇಗೆ ಕಂಡುಕೊಳ್ಳುವುದು?

ಪ್ರತಿಮೆ, ರೂಪಕಗಳ ಮೂಲಕ
ಉತ್ತರ ಹುಡುಕುವ ಪ್ರಯತ್ನ
ವ್ಯರ್ಥ ಎಂಬುದು ಸಿದ್ಧವಾಗಿ ಹೋಗಿದೆ.

ಕಾಮ ಹೇಗಿರತ್ತೆ ಎಂಬ ಮಗುವಿನ ಪ್ರಶ್ನೆಗೆ
ಸಿಹಿಯಾಗಿರತ್ತೆ, ಸಕ್ಕರೆಯ ಬೊಂಬೆಯಂತೆ
ಎಂದು ಉತ್ತರಿಸಿದರೆ ಹೇಗೆ?

ಇಂಥ ನಿಗೂಢಗಳ ಬಗ್ಗೆ ನೀವು ಏನೇ ಹೇಳಿ
ನನಗೆ ಗೊತ್ತು ಎಂಬ ಉತ್ತರ
ಮತ್ತು
ನನಗೆ ಗೊತ್ತಿಲ್ಲ ಎಂಬ ಉತ್ತರ ಮಾತ್ರ
ಸತ್ಯಕ್ಕೆ ಹತ್ತಿರವಾದ ಉತ್ತರಗಳು

ಎರಡೂ ಉತ್ತರಗಳಲ್ಲಿ ಅಂಥ ಸುಳ್ಳೆನಿಲ್ಲ.

  • ರೂಮಿ.

ಕಣ್ಣಿಗೆ ಕಾಣುವುದಷ್ಟೇ ಜಗತ್ತು ಅಲ್ಲ. ಕಣ್ಣಿಗೆ ಕಾಣದ್ದು ಕೂಡ ಇದೆ, ಮತ್ತು ಇದು ಹೆಚ್ಚು ಮಹತ್ವದ್ದು. ಏಕೆಂದರೆ ಇದು ಹೆಚ್ಚು ಆಳವಾಗಿರುವಂಥದು. ಕಾಣದ್ದು ಸಮುದ್ರವಾದರೆ, ಕಾಣುವುದು ಅದರೊಳಗಿನ ಅಲೆಗಳು. ಯಾವತ್ತಾದರೂ ವಿಚಿತ್ರವೊಂದು ಸಂಭವಿಸಿದಾಗ ಅದನ್ನು ನಿರಾಕರಿಸ ಬೇಡಿ ಮತ್ತು ಅದಕ್ಕೆ ನಿಮ್ಮನ್ನು ಕ್ಲೋಸ್ ಮಾಡಿಕೊಳ್ಳಬೇಡಿ. ತೆರೆದುಕೊಂಡಿರಿ ; ಅದು ಒಳಗೆ ಬರಲು ಅವಕಾಶ ಮಾಡಿಕೊಡಿ. ಮತ್ತು ರಹಸ್ಯ ಪ್ರತಿದಿನ ಬಾಗಿಲು ತಟ್ಟುವ ಎಷ್ಟೋ ಎಷ್ಟೋ ಕ್ಷಣಗಳಿವೆ.

ಥಟ್ಟನೇ ಪಕ್ಷಿಯೊಂದು ಕೂಗಲು ಶುರು ಮಾಡುತ್ತದೆ: ಅದನ್ನು ಕೇಳಿ, ಮತ್ತು ಹೃದಯಪೂರ್ವಕವಾಗಿ ಕೇಳಿ. ಅದನ್ನು ವಿಶ್ಲೇಷಿಸುತ್ತ ಕುಳಿತು ಬಿಡಬೇಡಿ. ಮೌನವಾಗಿರಿ, ಸಾಧ್ಯವಾದಷ್ಟು ಆಳಕ್ಕೆ ಅದು ನಿಮ್ಮನ್ನು ಪೆನಿಟ್ರೇಟ್ ಮಾಡಲಿ. ನಿಮ್ಮ ಆಲೋಚನೆಗಳ ಮೂಲಕ ಅದಕ್ಕೆ ಅಡ್ಡಗಾಲಾಗಬೇಡಿ. ಅದಕ್ಕೆ ಸಂಪೂರ್ಣ ಅವಕಾಶ ಮಾಡಿಕೊಡಿ. ಅದನ್ನು ಅನುಭವಿಸಿ – ಅದರ ಬಗ್ಗೆ ಆಲೋಚಿಸಬೇಡಿ.

ಬೆಳಬೆಳಿಗ್ಗೆ ನೀವು ಗುಲಾಬಿಯನ್ನು ಎದುರುಗೊಂಡಿರುವುದರಿಂದ ಇಡೀ ದಿನ ನಿಮಗೆ ವಿಭಿನ್ನ ಅನುಭವವಾಗುತ್ತಿರಬಹುದು. ನಿಮ್ಮ ಬದುಕಿನ ಬದಲಾವಣೆ ಶುರುವಾಗುತ್ತಿದೆ. ಒಬ್ಬರು ಸೀಕರ್ ಆಗುವ ವಿಧಾನ ಇದು. ಅವರು ಅಸ್ತಿತ್ವದ ಪೂರ್ಣ ಚೆಲುವನ್ನು ಹೀರಿಕೊಳ್ಳಬೇಕು, ಅದರ ಪೂರ್ಣ ಖುಶಿಯನ್ನ, ತುಂಬಿ ತುಳುಕುತ್ತಿರುವ ಅದರ ಅನುಗ್ರಹವನ್ನ. ಸೂಫೀ ಹಾಫಿಜ್ ಹೇಳುತ್ತಾನೆ.

ಪ್ರೇಮಿಗಳು,
ತಮ್ಮ ನಡುವಿನ ರಹಸ್ಯಗಳನ್ನ
ಹಂಚಿಕೊಳ್ಳುವುದಿಲ್ಲ ಯಾರೊಂದಿಗೂ.

ಒಬ್ಬರು ಇನ್ನೊಬ್ಬರ
ನಾಚಿಕೆಯ ಜಾಗಗಳಲ್ಲಿರುವ ಗುರುತುಗಳನ್ನ
ಎಣಿಸಿಟ್ಟುಕೊಳ್ಳುತ್ತಾರೆನೋ ಹೌದು,
ಆದರೆ ಒಪ್ಪಿಸುವುದಿಲ್ಲ
ಆ ಲೆಕ್ಕವನ್ನು ಯಾರಿಗೂ.

ಭಗವಂತ ಮತ್ತು ನಾನು
ಇದಕ್ಕಿಂತಲೂ ಹೆಚ್ಚಿನ ಸಲಿಗೆಗಾಗಿ
ಸಹಿ ಮಾಡಿದ್ದೆವೆ, ಒಪ್ಪಂದವೊಂದಕ್ಕೆ.

ಆದರೆ ಅದರಲ್ಲೊಂದು ಷರತ್ತು ಇದೆ,
ಭಗವಂತನ ಸುಂದರ
ಖಾಸಗಿ ರಹಸ್ಯಗಳ ನಕಾಶೆಯನ್ನು
ಬಹಿರಂಗಪಡಿಸಬಾರದೆಂದು
ಯಾರೂ
ಬೇಕಾಬಿಟ್ಟಿಯಾಗಿ.


Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.