ಯಾವತ್ತೂ ಸಾಹಸಿಗಳಾಗಿಯೇ ಇರಿ. ಒಂದೇ ಒಂದು ಕ್ಷಣವೂ ಮರೆಯಬೇಡಿ, ಯಾರು ಬದುಕನ್ನು ಶೋಧಿಸುವರೋ ಬದುಕು ಅವರದಾಗುತ್ತದೆ ಎನ್ನುವುದನ್ನ. ಬದುಕು ಚಲನೆಯಿಲ್ಲದವರದಲ್ಲ; ಅದು ಚಲಿಸುತ್ತಲೇ ಇರುವವರಿಗೆ ಸಂಬಂಧಿಸಿದ್ದು. ಯಾವತ್ತೂ ನಿಂತ ನೀರಾಗಬೇಡಿ; ನದಿಯಂತೆ ಹರಿಯುತ್ತಲೇ ಇರಿ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಆವರಿಸಿಕೊಳ್ಳುತ್ತಿರುವ
ಬದಲಾವಣೆಯ ಹೊಸ ಗಾಳಿಯನ್ನು
ತಡೆದು ನಿಲ್ಲಿಸಬಯಸುವ
ನಿಮ್ಮ ಉತ್ಸಾಹವನ್ನ
ಸ್ವಲ್ಪ ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸಿ.
ಬದಲಾಗಿ ಬದುಕಿಗೆ,
ನಿಮ್ಮ ಮೂಲಕ
ಬಾಳುವ ಅವಕಾಶ ಮಾಡಿಕೊಡಿ.
ಬದಲಾವಣೆ ಎಂದರೆ
ಚಿಮ್ಮಲಾಗಿರುವ ಬದುಕಿನ ನಾಣ್ಯ.
ನಿಮ್ಮ ಬದುಕು
ತಲೆಕೆಳಗಾಗಿ ಬಿಡಬಹುದೆಂದು
ಗಾಬರಿಯಾಗಬೇಡಿ.
ಯಾರಿಗೆ ಗೊತ್ತು,
ಈಗ ನಿಮ್ಮೆಡೆ ಮುಖ ಮಾಡಿರುವ
ಬದುಕಿನ ಭಾಗ
ನೀವು ಬದುಕುತ್ತಿರುವ ಬದುಕಿನ ಭಾಗಕ್ಕಿಂತ
ಅದ್ಭುತವಾಗಿರಬಹುದು.
~ ಶಮ್ಸ್
ಮೈಂಡ್ ಗೆ ಯಾವತ್ತೂ ಹೊಸದರೊಂದಿಗೆ ಹೊಂದಾಣಿಕೆ ಕಷ್ಟ. ಅದು ಏನು ಎನ್ನುವುದನ್ನ ಅರ್ಥಮಾಡಿಕೊಳ್ಳುವುದು ಬದುಕಿಗೆ ಕಷ್ಟ, ಅದನ್ನ ಗುರುತಿಸುವುದು, ವಿಂಗಡಿಸುವುದು ಕಷ್ಟ. ಹೊಸದು ಎಂದರೆ ಮೈಂಡ್ ಗೆ ಅಚ್ಚರಿ. ಹೊಸದಕ್ಕೆ ಎದುರಾದಾಗ ಮೈಂಡ್ ತನ್ನ ಎಲ್ಲ ದಕ್ಷತೆಯನ್ನು (efficiency) ಕಳೆದುಕೊಳ್ಳುತ್ತದೆ.
ಹಿಂದಿನದಕ್ಕೆ, ಹಳೆಯದರ ಬಗ್ಗೆ, ಗೊತ್ತಿರುವುದರ ಜೊತೆ ಮೈಂಡ್ ಗೆ ಕೆಲಸ ಸುಲಭ, ಏಕೆಂದರೆ ಅವುಗಳ ಬಗ್ಗೆ, ಅವು ಏನು, ಎತ್ತ ಎನ್ನುವುದರ ಬಗ್ಗೆ ಮೈಂಡ್ ಗೆ ಗೊತ್ತು. ಗೊತ್ತಿರುವುದರ ಪರಿಧಿಯಲ್ಲಿ ಮೈಂಡ್ ನ ಕೆಲಸ ಪರಿಪೂರ್ಣ; ಆಗ ಅದು ಪರಿಚಿತ ದಾರಿಯಲ್ಲಿ ಪ್ರಯಾಣ ಮಾಡುತ್ತಿರುತ್ತದೆ. ಈ ದಾರಿಯಲ್ಲಿ ಅದು ಕತ್ತಲೆಯಲ್ಲೂ ಪ್ರಯಾಣ ಮಾಡಬಲ್ಲದು; ಪರಿಚಿತತೆ ಮೈಂಡ್ ನ ಹೆದರಿಕೆಯಿಂದ ದೂರ ಇರಿಸುತ್ತದೆ. ಹೊಸದು ಎದುರಾದಾಗಲೆಲ್ಲ ಮೈಂಡ್ ಹೆದರುತ್ತದೆ, ಬೆಳವಣಿಗೆಯನ್ನು ತಡೆಯುತ್ತದೆ. ಆದ್ದರಿಂದ ಮೈಂಡ್ ಹಳೆಯದಕ್ಕೆ ಅಂಟಿಕೊಳ್ಳುತ್ತ ಹೊಸದನ್ನು ಅವೋಯಿಡ್ ಮಾಡುತ್ತದೆ. ಮೈಂಡ್ ಗೆ ಹಳೆಯದು ಎಂದರೆ ಬದುಕು, ಹೊಸತು ಎಂದರೆ ಸಾವು. ಆದ್ದರಿಂದ ನಾವು ಮೈಂಡ್ ನ ಪಕ್ಕಕ್ಕಿರಿಸಬೇಕು.
ಬದುಕು ಯಾವತ್ತೂ ನಿಂತ ನೀರಲ್ಲ, ಅದು ಯಾವತ್ತೂ ಚಲನಶೀಲ. ಪ್ರತಿಯೊಂದು ಚೇಂಜ್ ಆಗುತ್ತಿರುತ್ತದೆ: ಇವತ್ತು ಇರುವುದು ನಾಳೆ ಇರದಿರಬಹುದು. ನೀವು ಮತ್ತೊಮ್ಮೆ ಅದನ್ನು ಎದುರುಗೊಳ್ಳಬಹುದು, ಯಾರಿಗೆ ಗೊತ್ತು ಅದು ಯಾವಾಗ ಎನ್ನುವುದು? ಬಹುಶಃ ತಿಂಗಳುಗಳಾಗಬಹುದು, ವರ್ಷಗಳಾಗಬಹುದು, ಜನ್ಮಗಳೇ ಆಗಬಹುದು. ಆದ್ದರಿಂದ ಯಾವಾಗ ಅವಕಾಶಗಳು ಬಾಗಿಲು ತಟ್ಟುತ್ತವೆಯೋ ಆಗ ಬಾಗಿಲು ತೆರೆದು ಸ್ವಾಗತಿಸಿ. ಇದು ನಿಮ್ಮ ಮೂಲಭೂತ ನಿಯಮವಾಗಲಿ. ಯಾವತ್ತೂ ಹಳೆಯದರ ಬದಲಿಗೆ ಹೊಸತನ್ನು ಆಯ್ಕೆ ಮಾಡಿಕೊಳ್ಳಿ.
ಒಮ್ಮೆ ಮಾಸ್ಟರ್ ಹೈಕೂಯಿನ್ ಮತ್ತು ಅವನ ಶಿಷ್ಯ ಹಯಾಕು ಬುಲೆಟ್ ಟ್ರೇನ್ ಮೂಲಕ ಕ್ಯೋಟೋ ದಿಂದ ಟೋಕಿಯೋ ಗೆ ಪ್ರಯಾಣ ಬೆಳೆಸಿದರು. ಪ್ರಯಾಣ ಕೇವಲ ಎರಡು ಗಂಟೆಯದು. ಅಕಸ್ಮಾತ್ ಅವರು ಕಾರ್ ಪ್ರಯಾಣ ಮಾಡಿದ್ದರೆ 6 ಗಂಟೆ ಬೇಕಾಗುತ್ತಿತ್ತು.
ಶಿಷ್ಯ ಹಯಾಕು, ಹೈಕೂಯಿನ್ ನ ಪ್ರಶ್ನೆ ಮಾಡಿದ, “ ಮಾಸ್ಟರ್, ಜ್ಞಾನೋದಯದ ಪ್ರಕ್ರಿಯೆಯೂ ಈ ಬುಲೆಟ್ ಟ್ರೇನ್ ನಂತೆ ವೇಗವಾಗಿ, ಸುಖಕರವಾಗಿ, ಶಾಂತವಾಗಿದ್ದರೆ ಎಷ್ಟು ಚೆನ್ನ? “
“ ಊಹೂಂ, ನನಗೇನೋ ಈ ದಾರಿಯನ್ನು ಕಾಲ್ನಡಿಗೆಯ ಮೂಲಕ ಕ್ರಮಿಸುವುದೇ ಇಷ್ಟ”
ಹೈಕೂಯಿನ್ ಉತ್ತರಿಸಿದ.
“ ಯಾಕೆ ಮಾಸ್ಟರ್? ಈ ಜಗತ್ತು ನಿಧಾನವಾಗಿ ಅರಳುವುದನ್ನ ಯಾಕೆ ಬಯಸುತ್ತೀರಿ? “ ಶಿಷ್ಯ ಹಯಾಕು ಆಶ್ಚರ್ಯದಿಂದ ಪ್ರಶ್ನಿಸಿದ.
“ ಯಾಕೆಂದರೆ, ಜ್ಞಾನೋದಯಕ್ಕಿಂತ ನನಗೆ ಶರತ್ಕಾಲದ ಹುಲ್ಲಿನ ವಾಸನೆ ಮತ್ತು ಜೀರುಂಡೆಗಳ ಚೀರಾಟ ಇಷ್ಟ “ ಮಾಸ್ಟರ್ ಹೈಕೂಯಿನ್ ಉತ್ತರಿಸಿದ.

