ಯಾವತ್ತೂ ಒಂದು ಸಂಗತಿ ನೆನಪಿರಲಿ ; ನೀವು ಹೇಗೋ ಹಾಗೆಯೇ ಬಾಕಿ ಎಲ್ಲರೂ, ನೀವು ಈಗಾಗಲೇ ಹುಚ್ಚರು. ಹ್ಯುಮ್ಯಾನಿಟಗೂ ಹುಚ್ಚು; ಈ ಭೂಮಿ ಒಂದು ಹುಚ್ಚರ ತಂಗುದಾಣ. ಆದ್ದರಿಂದ ನೀವು ಈಗ ವಿವೇಕಿಗಳಾಗಬಹುದೇ ಹೊರತು ಹುಚ್ಚರಾಗುವುದಿಲ್ಲ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ದಾರಿ ಎಲ್ಲಿಗೆ ಕರದೊಯ್ಯಬಹುದು
ಎನ್ನುವ ಆತಂಕದಿಂದ ದೂರವಿರಿ.
ಬದಲಾಗಿ ನೀವು ಇಡಲು ಮುಂದಾಗುತ್ತಿರುವ
ಮೂದಲ ಹೆಜ್ಜೆಯ ಮೇಲೆ ಮಾತ್ರ
ಧ್ಯಾನವನ್ನು ಕೇಂದ್ರೀಕರಿಸಿ.
ಬದುಕಿನ ಪ್ರಯಾಣದಲ್ಲಿ
ಮೊದಲ ಹೆಜ್ಜೆ ಮಾತ್ರ ಅತ್ಯಂತ ಕಠಿಣ ಭಾಗ
ಅದನ್ನು ಸರಿಯಾಗಿ ನಿಭಾಯಿಸುವುದೊಂದೆ
ನಿಮ್ಮ ಮುಂದಿರುವ ಜವಾಬ್ದಾರಿ.
ಈ ಹೆಜ್ಜೆ ಇಟ್ಟಾದ ಮೇಲೆ
ಎಲ್ಲವನ್ನೂ
ಪ್ರಯಾಣದ ಸಹಜತೆಗೆ ಬಿಟ್ಟು ಬಿಡಿ
ಬಾಕಿ ಎಲ್ಲ ನಿಮ್ಮನ್ನು ಹಿಂಬಾಲಿಸುತ್ತದೆ.
ಹರಿವಿನ ಜೊತೆ ಹರಿಯಬೇಡಿ
ನೀವೇ ಹರಿವಾಗಿ.
~ ಶಮ್ಸ್
ನಿಮಗೆ ವಿವೇಕಿಗಳಾಗುವ ಕುರಿತು ಭಯ, ಆದರೆ ಅದು ಬೇರೆ ಮಾತು, ಆದರೆ ಹುಚ್ಚರಾಗುವ ಬಗ್ಗೆ ನಿಮಗೆ ಭಯ ಬೇಡ, ಏಕೆಂದರೆ ಈಗಿರುವುದಕ್ಕಿಂತಲೂ ಕೆಟ್ಟದ್ದು ಬೇರೆ ಏನಾಗುವುದಿದೆ? ಕೆಟ್ಟದ್ದು ಈಗಾಗಲೇ ಆಗಿ ಹೋಗಿದೆ! ನಾವು ಅತ್ಯಂತ ಕೆಟ್ಟ ನರಕದಲ್ಲಿ ಬದುಕುತ್ತಿದ್ದೇವೆ. ನೀವು ಈಗಾಗಲೇ ನರಕದಲ್ಲಿರುವುದರಿಂದ ನಿಮ್ಮ ಮುಂದಿನ ಹೆಜ್ಜೆ ಸ್ವರ್ಗದಲ್ಲಿ ಬೀಳುವ ಅವಕಾಶಗಳೇ ಹೆಚ್ಚು.
ಆದರೆ ಜನರಿಗೆ ಭಯ, ಏಕೆಂದರೆ ಈಗ ಅವರು ಯಾವ ಬದುಕನ್ನು ಬಾಳುತ್ತಿದ್ದಾರೋ ಅದನ್ನೇ ಅವರು ನಾರ್ಮಲ್ ಎಂದುಕೊಂಡು ಬಿಟ್ಟಿದ್ದಾರೆ. ಯಾರೂ ನಾರ್ಮಲ್ ಅಲ್ಲ. ಅಪರೂಪಕ್ಕೆ ಮಾತ್ರ ಬುದ್ಧ ಮತ್ತು ಜೀಸಸ್ ರಂಥ ನಾರ್ಮಲ್ ಜನರನ್ನ ನಾವು ಕಾಣಬಹುದು. ಬಾಕಿ ಎಲ್ಲರೂ ಅಬ್ನಾರ್ಮಲ್. ಇಂಥವರೇ ಬಹುಸಂಖ್ಯಾತರು ಆದ್ದರಿಂದ ಅವರು ತಮ್ಮನ್ನ ನಾರ್ಮಲ್ ಎಂದುಕೊಂಡಿದ್ದಾರೆ. ; ಅವರಿಗೆ ಜೀಸಸ್ ಅಬ್ನಾರ್ಮಲ್ ಆಗಿ ಕಾಣಿಸುತ್ತಾನೆ. ಮತ್ತು ಸಹಜವಾಗಿ ಬಹುಸಂಖ್ಯಾತರೇ ಯಾರು ನಾರ್ಮಲ್, ಯಾರು ಅಲ್ಲ ಎನ್ನುವುದನ್ನು ತೀರ್ಮಾನಿಸುತ್ತಾರೆ. ಇದು ವಿಚಿತ್ರ ಜಗತ್ತು : ಇಲ್ಲಿ ನಾರ್ಮಲ್ ಜನ ಅಬ್ನಾರ್ಮಲ್ ಆಗಿ ಕಾಣಿಸುತ್ತಾರೆ ಮತ್ತು ಅಬ್ನಾರ್ಮಲ್ ಜನ ನಾರ್ಮಲ್ ಆಗಿ.
ಜನರನ್ನು ಗಮನಿಸಿ, ನಿಮ್ಮ ಮೈಂಡ್ ನ ಗಮನಿಸಿ : ಅದು ಕೋತಿಯ ಹಾಗೆ, ಹುಚ್ಚು ಕೋತಿಯ ಹಾಗೆ. ಮೂವತ್ತು ನಿಮಿಷ ನಿಮ್ಮ ಮೈಂಡ್ ನಲ್ಲಿ ಏನು ಬರತ್ತೋ ಅದನ್ನು ಬರೆಯುತ್ತ ಹೋಗಿ ಮತ್ತು ಅದನ್ನು ಯಾರಿಗಾದರೂ ತೋರಿಸಿ. ಯಾರೂ ನಿಮಗೆ ಹುಚ್ಚರು ಎನ್ನುವ ಸರ್ಟಿಫಿಕೇಟ್ ಕೊಡಬಹುದು! ಹೆದರಬೇಡಿ. ನಿಮ್ಮ ಭಾವನಗಳಿಗನುಸಾರವಾಗಿ ನಡೆಯಿರಿ . ಭಾವನೆಗಳ ಕರೆಗೆ ಕಿವಿಯಾಗಿ, ಆ ಸುಳಿವುಗಳ ಬೆನ್ನು ಹತ್ತಿ. ನೀವೇನಾದರೂ ಮಾಯವಾಗುತ್ತೀರಾದರೆ, ಮಾಯವಾಗಿ! ನೀವು ಕಳೆದುಕೊಳ್ಳುವುದು ಏನಿದೆ?
ತನ್ನ ನೂರು ವರ್ಷದ ತಂದೆಯನ್ನ ನರ್ಸಿಂಗ್ ಹೋಂ ಗೆ ಕರೆದುಕೊಂಡು ಬಂದಿದ್ದ ಎಪ್ಪತೈದು ವರ್ಷ ವಯಸ್ಸಿನ ನಸ್ರುದ್ದೀನ್.
“ ಡಾಕ್ಟರ್, ನನ್ನ ಅಪ್ಪ ಯಾಕೋ ಇತ್ತೀಚಿಗೆ ಹುಚ್ಚುಚ್ಚಾಗಿ ಆಡುತ್ತಾನೆ. ಕಳೆದ ಹದೈನೈದು ದಿನಗಳಿಂದ ಬಾತ್ ಟಬ್ ನಲ್ಲಿ ರಬ್ಬರ್ ಡೋನಾಲ್ಡ್ ಡಕ್ ಜೊತೆ ಆಟ ಆಡುತ್ತ ಕೂತು ಬಿಡುತ್ತಿದ್ದಾನೆ. ದಯವಿಟ್ಟು ಇವನನ್ನು ನಿಮ್ಮ ಆಸ್ಪತ್ರೆಗೆ ಸೇರಿಸಿಕೊಳ್ಳಿ “
“ಬಹುಶಃ, ಇದು ವಯೋಸಹಜ ನೆನಪಿನ ಸಮಸ್ಯೆ. ಅವನ ವರ್ತನೆಯಿಂದ ಯಾರಿಗೂ ತೊಂದರೆ ಇಲ್ಲ ತಾನೆ? ಮನೆಯಲ್ಲಿಯೇ ಆರೈಕೆ ಮಾಡು “
ಮನೋವೈದ್ಯರು ನಸ್ರುದ್ದೀನ್ ಗೆ ತಿಳಿಹೇಳಿದರು.
“ಆದರೆ, ಅದು ನನ್ನ ಡೋನಾಲ್ಡ್ ಡಕ್ “
ನಸ್ರುದ್ದೀನ್ ನಿಧಾನಕ್ಕೆ ತನ್ನ ಸಮಸ್ಯೆ ಹೇಳಿಕೊಂಡ.
********************************

