ಇದು ಕೇವಲ ಶುರುವಾತು. ನೀವು ಇನ್ನೂ ಹೆಚ್ಚು ಹೆಚ್ಚು ಅಪರಿಚಿತ ಜಾಗಗಳ ಮೂಲಕ ಪ್ರಯಾಣ ಬೆಳೆಸಬೇಕಿದೆ. ನಮಗೆ ಸತ್ಯ, ಕಲ್ಪನೆಗಿಂತಲೂ ಹೆಚ್ಚು ಅಪರಿಚಿತ. ಆದರೆ ಧೈರ್ಯವಾಗಿರಿ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಸತ್ಯದ ಹಾದಿಯ ಮೇಲೆ
ನಮ್ಮನ್ನು ಕೈ ಹಿಡಿದು ಮುನ್ನಡೆಸುವುದು
ಹೃದಯವೇ ಹೊರತು
ಬುದ್ಧಿಯಲ್ಲ.
ಈ ಪ್ರಯಾಣದಲ್ಲಿ ಹೃದಯ
ನಿಮ್ಮ ಪ್ರಧಾನ ಮಾರ್ಗದರ್ಶಿಯಾಗಿರಲಿ.
‘ಅಹಂ’ ತಕರಾರು ಮಾಡಿದರೆ
ಮುಟ್ಟಿ ಮಾತನಾಡಿಸಿ, ಒಪ್ಪಿಸಿ
ಸಾಧ್ಯವಾಗದಿದ್ದರೆ ಸವಾಲು ಹಾಕಿ
ಭೀಕರ ಯುದ್ಧವಾದರೂ ಚಿಂತೆಯಲ್ಲ
ಹೃದಯ, ನಿಮ್ಮ ಸುಳ್ಳು ಅಹಂ ಮೇಲೆ
ವಿಜಯ ಸಾಧಿಸಲಿ.
ನಿಮ್ಮೊಳಗಿನ
‘ಅಹಂ’ ನ ಎಳೆಗಳನ್ನು ಸ್ಪಷ್ಟವಾಗಿ
ಗುರುತಿಸಬಲ್ಲಿರಾದರೆ,
ಸತ್ಯದ ಹಾದಿಯಲ್ಲಿನ ದೊಡ್ಡ ಆತಂಕವೊಂದನ್ನು
ಯಶಸ್ವಿಯಾಗಿ ನಿಭಾಯಿಸಿದಂತೆ.
~ ಶಮ್ಸ್
ನೀವು ನಿಮ್ಮ ಒಳಗನ್ನು ಪ್ರವೇಶಿಸುವುದಕ್ಕಿಂತ ಮುನ್ನ ನಿಮ್ಮ ಬಗ್ಗೆ ನಿಮಗೆ ಎಷ್ಟು ಗೊತ್ತಿಲ್ಲ ಎನ್ನುವುದು ತಿಳಿದಿರಲಾರದು. ನೀವು ನಿಮ್ಮ ಅಸ್ತಿತ್ವದ ಒಂದು ತುಣುಕನ್ನು ಮಾತ್ರ ಬದುಕುತ್ತಿದ್ದೀರಿ. ನೀರಿನ ಹನಿ ಮಾತ್ರದಂತೆ ಬದುಕುತ್ತಿದ್ದೀರಿ, ಆದರೆ ನಿಮ್ಮ ಅಸ್ತಿತ್ವ ಸಾಗರದಷ್ಟು ಅಪಾರ. ಇಡೀ ಮರವೇ ನಿಮ್ಮ ಅಸ್ತಿತ್ವವಾಗಿರುವಾಗ, ನೀವು ಕೇವಲ ಒಂದು ಎಲೆಯೊಂದಿಗೆ ಮಾತ್ರ ನಿಮ್ಮನ್ನು ಗುರುತಿಸಿಕೊಳ್ಳುತ್ತಿದ್ದೀರಿ.
ಹೌದು, ಇದು ವಿಚಿತ್ರ, ಅಕೆಂದರೆ ಮನುಷ್ಯ ಹಿಗ್ಗುತ್ತ ( expand) ಹೋಗುತ್ತಾನೆ. ಅವನು ಹೊಸ ವಾಸ್ತವಗಳನ್ನು ಹೀರಿಕೊಳ್ಳಬೇಕಾಗುತ್ತದೆ. ಪ್ರತಿ ಕ್ಷಣವೂ ನಾವು ನಮಗೆ ಪರಿಚಿತವಲ್ಲದ ಸಂಗತಿಗೆ ಎದುರಾಗಬೇಕಾಗುತ್ತದೆ. ಆದ್ದರಿಂದ ಪ್ರತಿ ಕ್ಷಣವೂ ಅನಿಶ್ಚಿತತೆಯಿಂದ ಕೂಡಿರುವಂಥದು, ಮತ್ತು ನಿರಂತರವಾಗಿ ಅವ್ಯವಸ್ಥೆ ( chaos) ಮುಂದುವರೆಯುತ್ತಿರುತ್ತದೆ. ನೀವು ಸ್ಥಿರವಾಗಿ ಸೆಟೆಲ್ ಆಗುವುದು ಸಾಧ್ಯವಿಲ್ಲ. ಯಾವುದರ ಬಗ್ಗೆಯೂ ನಿಶ್ಚಿತವಾಗಿರುವುದು ನಿಮಗೆ ಸಾಧ್ಯವಿಲ್ಲ, ಏಕೆಂದರೆ ಯಾರಿಗೆ ಗೊತ್ತು ನೀವು ಮುಂದಿನ ಕ್ಷಣ ಯಾವುದಕ್ಕೆ ತೆರೆದುಕೊಳ್ಳುತ್ತೀರಿ ಎನ್ನುವುದು.
ಆದ್ದರಿಂದ ಜನ ತಮ್ಮ ಒಳಗನ್ನು ಪ್ರವೇಶಿಸುವ ಸಾಹಸಕ್ಕೆ ಮುಂದಾಗುವುದಿಲ್ಲ. ಅವರು ಸ್ಥಿರವಾದ ಬದುಕನ್ನು ಬಾಳ ಬಯಸುತ್ತಾರೆ. ಅವರು ತಮ್ಮ ಇರುವಿಕೆಯ ಅಪಾರದಲ್ಲಿ ಒಂದು ಪುಟ್ಟ ಜಾಗೆಯನ್ನು ಹುಡುಕಿಕೊಂಡು ಅಲ್ಲಿಯೇ ಮನೆ ಕಟ್ಟಿಕೊಂಡು ವಾಸಿಸುತ್ತಿದ್ದಾರೆ. ಅವರು ತಾವೂ ಕಣ್ಣಿಗೆ ಪಟ್ಟಿ ಕಟ್ಟಿಕೊಂಡು ತಮ್ಮ ಮನೆಯ ಸುತ್ತಲೂ ಎತ್ತರದ ಬೇಲಿ, ಗೋಡೆಗಳನ್ನು ಕಟ್ಟಿಕೊಂಡಿದ್ದಾರೆ. ಅವರು ಇದನ್ನೇ ಜಗತ್ತು ಎಂದುಕೊಂಡಿದ್ದಾರೆ. ಆದರೆ ಈ ಗೋಡೆಗಳ ಆಚೆಯೇ ಅವರ ವಾಸ್ತವ, ಅವರ ಉತ್ಕಟ ಇರುವಿಕೆ ( wild being) ಅವರಿಗಾಗಿ ಕಾಯುತ್ತಿದೆ. ಇದು ಅವರ ಮುಂದಿರುವ ಸವಾಲು, ಅವರ ಉತ್ಕಟತೆಯ ಕರೆ ( call of the wild)
ಒಬ್ಬ ಝೆನ್ ಸಾಧಕನಿದ್ಧ, ಅವನು ಬಹಳ ನಿಷ್ಠುರ ಸತ್ಯಗಳನ್ನು ಹೇಳುವವನೂ, ಖಚಿತ ಮತಿಯೂ ಆಗಿದ್ದ. ಮತ್ತು ಈ ಕಾರಣಗಳಿಂದಾಗಿಯೇ ಸುತ್ತಮುತ್ತಲಿನ ಪ್ರದೇಶದಲ್ಲಿ ಬಹಳ ಹೆಸರುವಾಸಿಯಾಗಿದ್ದ. ಅವನ ಈ ಜನಪ್ರಿಯತೆ ಕೆಲವರಿಗೆ ಮಗ್ಗಲ ಮುಳ್ಳಾಗಿತ್ತು. ಆ ಪ್ರದೇಶದ ಪುರೋಹಿತಶಾಹಿ ಅವನನ್ನು ದ್ವೇಷಿಸುತ್ತಿತ್ತು.
ಅದು ಹೇಗೋ ಝೆನ್ ಸಾಧಕ ತನ್ನ ಜೋಳಿಗೆಯಲ್ಲಿ ಸದಾ ಒಂದು ಕನ್ನಡಿಯನ್ನಿಟ್ಟುಕೊಳ್ಳುವುದು ಒಬ್ಬ ಪುರೋಹಿತನಿಗೆ ಗೊತ್ತಾಗಿಹೋಯಿತು. ತನ್ನ ರೂಪ ಸೌಂದರ್ಯಗಳನ್ನು ಪ್ರೇಮಿಸುವುದು ಮತ್ತು ಇವುಗಳ ಸಲುವಾಗಿ ಸಮಯ ವ್ಯರ್ಥ ಮಾಡುವುದನ್ನ ಝೆನ್ ಒಪ್ಪುವುದಿಲ್ಲ, ಝೆನ್ ನಲ್ಲಿ ಅಂತರಂಗದ ಚೆಲುವಿಗೆ ಮಾತ್ರ ಪ್ರಾಧಾನ್ಯ ಮತ್ತು ಸಾಧಕ ವರ್ಷಗಟ್ಟಲೇ ತನ್ನ ಸಹಜ ಸೌಂದರ್ಯವನ್ನು ಕಂಡುಕೊಳ್ಳಲು ಸಾಧನೆ ಮಾಡುತ್ತಾನೆ. ಇಂಥದರಲ್ಲಿ ಈ ಝೆನ್ ಸಾಧಕ ಕನ್ನಡಿಯಂಥ ಅಲಂಕಾರದ ವಸ್ತುವನ್ನು ಸದಾ ಬಳಸುವುದನ್ನ ಜನರಿಗೆ ಎತ್ತಿ ತೋರಿಸಿ ಸಾಧಕನಿಗೆ ಅವಮಾನ ಮಾಡಬೇಕೆಂದು ತೀರ್ಮಾನಿಸಿ ಆ ಪುರೋಹಿತ, ಝೆನ್ ಸಾಧಕ ಉಪನ್ಯಾಸ ಮಾಡುತ್ತಿದ್ದ ಜಾಗಕ್ಕೆ ಬಂದು ಅವನಿಗೆ ಸವಾಲು ಹಾಕಿದ.
“ ಕನ್ನಡಿಯಂಥ ಅಲಂಕಾರಿಕ ಸಾಮಗ್ರಿಯನ್ನ ನೀನು ಸದಾ ನಿನ್ನ ಜೊತೆಯಲ್ಲಿಟ್ಟುಕೊಳ್ಳುವುದು ಝೆನ್ ಗೆ ಮತ್ತು ನೀನು ಉಪದೇಶ ಹೇಳುತ್ತಿರುವ ಮಾತುಗಳಿಗೆ ವಿರುದ್ಧ ಅಲ್ಲವೆ? ಈ ಸಂಗತಿಯಿಂದ ನೀನು ಎಂಥ ಸುಳ್ಳು ಮನುಷ್ಯ ಎನ್ನುವುದು ಗೊತ್ತಾಗುತ್ತದೆ. “
ಝೆನ್ ಸಾಧಕ ತನ್ನ ಜೋಳಿಗೆಯಿಂದ ಕನ್ನಡಿಯನ್ನು ಹೊರತೆಗೆದು ಪುರೋಹಿತನ ಎದುರು ಹಿಡಿದು ಹೇಳಿದ.
“ ಈ ಕನ್ನಡಿ ನನ್ನ ಅಲಂಕಾರದ ಸಲುವಾಗಿ ಅಲ್ಲ. ನಾನು ಈ ಕನ್ನಡಿಯನ್ನ ನನಗೆ ತುಂಬ ಗಂಭೀರ ಸಮಸ್ಯೆ ಎದುರಾದಾಗ ಬಳಸುತ್ತೇನೆ. ನನಗೆ ಯಾವುದೇ ಸಮಸ್ಯೆ ಎದುರಾದಾಗ ನಾನು ಈ ಕನ್ನಡಿಯಲ್ಲಿ ದಿಟ್ಟಿಸುತ್ತೇನೆ, ಆಗ ನನಗೆ ಕನ್ನಡಿಯಲ್ಲಿ ನನ್ನ ಸಮಸ್ಯೆಯ ಮೂಲ ಕಾರಣ ಮತ್ತು ನನ್ನ ಸಮಸ್ಯೆಯ ಪರಿಹಾರ ಎರಡೂ ಸ್ಪಷ್ಟವಾಗಿ ಕಾಣಿಸುತ್ತವೆ. ಹಾಗಾಗಿ ಇದೊಂದು ಜಾದು ಕನ್ನಡಿ. “
ಝೆನ್ ಸಾಧಕನ ಮಾತು ಕೇಳಿ ಪುರೋಹಿತ ನಾಚಿಕೊಂಡು ಸಭೆ ಬಿಟ್ಟು ಹೊರಟು ಹೋದ.
********************************

