ಅಕ್ಕಮಹಾದೇವಿಯಂತೆ ಗಜೇಶ ಮಸಣಯ್ಯ ಮತ್ತು ಉರಿಲಿಂಗದೇವ ಹೆಣ್ಣುಪಾತ್ರವನ್ನು ತೊಟ್ಟು ತಮ್ಮ ಅನುಭವವನ್ನು ಹೇಳಿಕೊಳ್ಳುತ್ತಾರೆ... । ಓ.ಎಲ್.ನಾಗಭೂಷಣ ಸ್ವಾಮಿ
ಇಂಬಿನ ಚುಂಬನ ಅಮೃತಾಹಾರ
ಆಲಿಂಗನವೆ ಆಭರಣ
ಸೋಂಕೆ ವಸ್ತ್ರ
ನೋಟವೆ ಕೂಟ
ಒಡನಾಟವೆ ಅಷ್ಟಭೋಗವೆನಗೆ
ಉರಿಲಿಂಗದೇವನ ಕೂಟವೆ
ಪರಾಪರ ವಾಜ್ಞ್ಮನಾತೀತ ಪರಮಸುಖ (ಸಂ.೬, ವ.೧೨೬೬)
(ಇಂಬಿನ-ಹಿತವಾದ; ಅಷ್ಟಭೋಗ-ಭಕ್ಷ್ಯ (ವಿಶೇಷವಾದ ಸಿಹಿ ಇತ್ಯಾದಿ), ಭೋಜ್ಯ (ಮುಖ್ಯ ಆಹಾರ), ಲೇಹ್ಯ (ನೆಕ್ಕಿ ರುಚಿ ನೋಡುವಂಥವು) ಪೇಯ (ಹಾಲು,ಮಜ್ಜಿಗೆ, ಪಾನಕ ಇಂಥವು), ಚೋಷ್ಯ (ಚೀಪಿ ತಿನ್ನುವ ಹಣ್ಣು) ಸುಗಂಧ ದ್ರವ್ಯ, ಮಾಲ್ಯ (ಹೂವು, ಹಾರ), ವಿಲೇಪನ (ಮೈಗೆ ಲೇಪಿಸುವ ಗಂಧ ಇಂಥವು); ಪರಾಪರ-ಪರ ಮತ್ತು ಅದರಾಚೆಗೆ ಇರುವ; ವಾಜ್ಞಯಾತೀತ-ವಾಕ್ಕು ಮನಸುಗಳಿಗೆ ಅತೀತ, ಮಾತು, ಮನಸುಗಳಿಗೆ ಮಿರಿದ)
ಹಿತವಾದ ಚುಂಬನವು ಸಾವನ್ನು ಇಲ್ಲವಾಗಿಸುವ ಆಹಾರ, ಅಪ್ಪುಗೆಯೇ ಆಭರಣ, ಸ್ಪರ್ಶವೇ ವಸ್ತ್ರ, ನೋಟವೇ ಮಿಲನ, ಒಡನಾಟವೇ ಎಂಟು ಬಗೆಯ ಭೋಗ, ಇನ್ನು ನಿಜವಾಗಿ ಉರಿಲಿಂಗದೇವನ ಕೂಡಿದರೆ ಅದು ಪರವನ್ನೂ ಮೀರುವ, ಮಾತು ಮನಸುಗಳ ಗ್ರಹಿಕೆಗೆ ಸಿಗದ ಪೂರ್ಣ ಸುಖ.
ಅಕ್ಕಮಹಾದೇವಿಯಂತೆ ಗಜೇಶ ಮಸಣಯ್ಯ ಮತ್ತು ಉರಿಲಿಂಗದೇವ ಹೆಣ್ಣುಪಾತ್ರವನ್ನು ತೊಟ್ಟು ತಮ್ಮ ಅನುಭವವನ್ನು ಹೇಳಿಕೊಳ್ಳುತ್ತಾರೆ. ದೇವರೊಬ್ಬನೇ ಗಂಡ, ಒಡೆಯ; ಇನ್ನು ಎಲ್ಲ ಜೀವಗಳೂ ಆ ಗಂಡನೊಡನೆ ಮಿಲವನ್ನು ಅನುಭವಿಸುವ ಹೆಣ್ಣುಗಳು ಎಂಬ ಕಲ್ಪನೆ ಅನೇಕ ಧರ್ಮಗಳಲ್ಲಿದೆ. ಕೃಷ್ಣನ ರಾಸಲೀಲೆಯನ್ನು ವರ್ಣಿಸುವ ಜಯದೇವ ಕವಿಯ ರಚನೆಯೂ, ವಿದ್ಯಾಪತಿಯ ಹಾಡುಗಳೂ ಅಂಥವೇ. ಕ್ರಿಶ್ಚಿಯನ್ ಧರ್ಮದಲ್ಲೂ ಭಕ್ತರು ವಧುವೆಂಬ ಕಲ್ಪನೆ ಇದೆ. ಬೇಂದ್ರೆಯವರ ಪ್ರಸಿದ್ಧ ಕವಿತೆಯಲ್ಲೂ ಅವನು ಮೈಯ ಸೋಕೆ ನವಿರು ಬಟ್ಟೆ ಅನ್ನುವ ರೂಪಕ ಬಳಕೆಯಾಗಿರುವುದನ್ನು ನೋಡಬಹುದು. ಹಳೆಯ ಕಾವ್ಯಗಳಲ್ಲಿ ಶೃಂಗಾರವು ವೀರರಸದೊಡನೆ ಕಂಡರೆ ಭಕ್ತಿ ಕಾವ್ಯದಲ್ಲಿ ಶೃಂಗಾರ, ಮತ್ತು ವೀರಗಳೆರಡೂ ಭಕ್ತಿಯ ಅನುಭವಕ್ಕೆ ರೂಪಕವಾಗಿ ಬರುತ್ತವೆ.
ಉರಿಲಿಂಗದೇವ
ಉರಿಲಿಂಗದೇವ ಅಂಕಿತದ ೪೮ ವಚನಗಳು ಪ್ರಕಟವಾಗಿವೆ. ಕಾಶ್ಮೀರದಿಂದ ಬಂದು ಕಲ್ಯಾಣದಲ್ಲಿ ನೆಲೆಸಿದ ಮಹಾಪಂಡಿತ ಶಿವಲೆಂಕಮುಂಚಣ್ಣನ ಮಗನೆಂದು ಉರಿಲಿಂಗದೇವ ಎಂದು ತಿಳಿಯಲಾಗಿದೆ. ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯಲ್ಲಿರುವ ಕಂದಹಾರ್ ಪಟ್ಟಣದಲ್ಲಿ ಮಠಾಧಿಪತಿ. ಕ್ರಾಂತಿಕಾರಿ. ಪೆದ್ದಣ್ಣ ಮತ್ತು ಕಾಳವ್ವೆಯರೆಂಬ ಅಸ್ಪೃಶ್ಯರಿಗೆ ದೀಕ್ಷೆ ನೀಡಿದ. ಉರಿಲಿಂಗಪೆದ್ದಿಗೆ ಮಠಾಧ್ಯಕ್ಷ ಪದವಿಯನ್ನೂ ನೀಡಿದ. ಈಗ ದೊರೆತಿರುವ ವಚನಗಳಲ್ಲಿ ಹೆಣ್ಣುತನದ ಭಾವವನ್ನು ಆವಾಹಿಸಿಕೊಂಡು ನುಡಿದಿರುವುದು ಕಾಣುತ್ತದೆ.

