ನೀವು ಎಲ್ಲೇ ಇದ್ದರೂ ಅದೇ ಶುರುವಾತು. ಆದ್ದರಿಂದಲೇ ಬದುಕು ಇಷ್ಟು ಸುಂದರ, ಇಷ್ಟು ಯಂಗ್, ಮತ್ತು ಇಷ್ಟು ತಾಜಾ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಭಗವಂತ
ಸದಾ ನಮ್ಮ ಕೆಲಸದಲ್ಲಿಯೇ ಮಗ್ನ.
ಮನುಷ್ಯನ ವಿಕಾಸ ಯಾವತ್ತಿದ್ದರೂ
ಪ್ರಗತಿಯಲ್ಲಿರುವ ಪ್ರಕ್ರಿಯೆ.
ಕೆಲಸ ನಿಧಾನವಾಗಿರಬಹುದು
ಆದರೆ ಮುಂದುವರೆಯುತ್ತಿದೆ ನಿರಂತರವಾಗಿ.
ಪ್ರತಿಯೊಬ್ಬ ಮನುಷ್ಯನೂ
ಪೂರ್ಣವಾಗಲು
ಕಾಯುತ್ತಿರುವ, ತಹತಹಿಸುತ್ತಿರುವ
ಅಪೂರ್ಣ ಕಲಾಕೃತಿಗಳು.
ಭಗವಂತ
ಪ್ರತೀ ಮನುಷ್ಯನನ್ನು
ಪ್ರತ್ಯೇಕ ಕಲಾಕೃತಿಯಂತೆ
ಅನನ್ಯವಾಗಿ ಚಿತ್ರಿಸುತ್ತಾನೆ.
ಮನುಷ್ಯತ್ವ
ಒಂದು ಸೂಕ್ಷ್ಮ ಕಲಾಪ್ರಕಾರ,
ಪ್ರತೀ ಚುಕ್ಕೆಯೂ
ಪೂರ್ಣ ಚಿತ್ರದ ಅತ್ಯಂತ ಮುಖ್ಯ ಭಾಗ.
~ ಶಮ್ಸ್ ತಬ್ರೀಝಿ
ಒಮ್ಮೆ ನೀವು ಮುಕ್ತಾಯವೆಂದು ಆಲೋಚಿಸಲು ಶುರು ಮಾಡಿದರೆ, ನೀವು ಸಾಯಲು ಶುರುವಾದಂತೆ. ಪರಿಪೂರ್ಣತೆ ಎನ್ನುವುದು ಸಾವು, ಆದ್ದರಿಂದ ಪರಿಪೂರ್ಣತಾ ಪ್ರಿಯರು ಆತ್ಮಹತ್ಯಾತ್ಮಕರು. ಪರಿಪೂರ್ಣತೆಯನ್ನು ಬಯಸುವುದು , ಸುತ್ತಿ ಬಳಸಿ ಆತ್ಮಹತ್ಯೆ ಮಾಡಿಕೊಂಡಂತೆ. ಯಾವತ್ತೂ, ಯಾವುದೂ ಪರಿಪೂರ್ಣವಲ್ಲ. ಇದು ಸಾಧ್ಯವಿಲ್ಲ, ಏಕೆಂದರೆ ಬದುಕು ಶಾಶ್ವತವಾದದ್ದು. ಯಾವತ್ತೂ ಯಾವುದೂ ಮುಗಿಯುವುದಿಲ್ಲ; ಬದುಕಿಗೆ ಯಾವ ಮುಕ್ತಾಯವೂ ಇಲ್ಲ – ಕೇವಲ ಎತ್ತರೆತ್ತರದ ಶಿಖರಗಳು. ಆದರೆ ನೀವು ಒಂದು ಶಿಖರವನ್ನು ತಲುಪಿದಾಗ , ಇನ್ನೊಂದು ಶಿಖರ ನಿಮಗೆ ಸವಾಲು ಹಾಕುತ್ತಿರುತ್ತದೆ, ಆಹ್ವಾನಿಸುತ್ತಿರುತ್ತದೆ, ಸ್ವಾಗತಿಸುತ್ತಿರುತ್ತದೆ.
ಆದ್ದರಿಂದ ನಿಮಗೆ ಸದಾ ನೆನಪಿರಲಿ, ನೀವು ಎಲ್ಲಿ ಇರುವಿರೋ ಅದೇ ಶುರುವಾತು. ಆಗ ಮನುಷ್ಯ ಯಾವಾಗಲೂ ಮಗುವಾಗಿಯೇ ಇರುತ್ತಾನೆ, ವರ್ಜಿನ್ ಆಗಿಯೇ ಇರುತ್ತಾನೆ. ಮತ್ತು ಇದುವೇ ಬದುಕಿನ ಕಲೆ – ವರ್ಜಿನ್ ಆಗಿಯೇ ಇರುವುದು, ತಾಜಾ ಆಗಿಯೇ ಇರುವುದು, ಯಂಗ್ ಆಗಿಯೇ ಇರುವುದು, ಬದುಕಿನ ಭ್ರಷ್ಟತೆಯನ್ನು ಅಂಟಿಸಿಕೊಳ್ಳದಂತೆ, ಹಿಂದಿನದರಿಂದ ಭೃಷ್ಟಗೊಳ್ಳದಂತೆ, ಇಂಥ ಪ್ರಯಾಣದ ದಾರಿಯ ಧೂಳು ತಗುಲಿಸಿಕೊಳ್ಳದಂತೆ. ನೆನಪಿರಲಿ, ಪ್ರತಿ ಕ್ಷಣ ಹೊಸ ಬಾಗಿಲೊಂದು ತೆರೆದುಕೊಳ್ಳುವುದು.
ಇದು ಬಹಳ ತರ್ಕಹೀನವಾದದ್ದು, ಏಕೆಂದರೆ ನಮ್ಮ ಪ್ರಕಾರ ಶುರುವಾತು ಇದೆಯೆಂದ ಮೇಲೆ ಮುಕ್ತಾಯವೂ ಇರಲೇ ಬೇಕು. ಆದರೆ ಬದುಕು ತರ್ಕಹೀನವಾದದ್ದು, ಈ ಕುರಿತು ಏನೂ ಮಾಡುವುದೂ ಸಾಧ್ಯವಿಲ್ಲ. ಬದುಕಿಗೆ ಶುರುವಾತು ಇದೆ ಆದರೆ ಮುಕ್ತಾಯ ಇಲ್ಲ. ನಿಜವಾಗಿ ಜೀವಂತಿಕೆಯಿಂದ ನಳನಳಿಸುವ ಯಾವುದೂ ಕೊನೆಯಾಗುವುದಿಲ್ಲ. ಅದು ಮುಂದುವರೆಯುತ್ತಲೇ ಇರುತ್ತದೆ ನಿರಂತರವಾಗಿ.
ಪರಿಪೂರ್ಣತೆಯೆಂಬುದು ಒಂದು ಮಹಾ ಸುಳ್ಳು. ನಮ್ಮನ್ನು ಮನುಷ್ಯರನ್ನಾಗಿಸುವುದು, ಸುಂದರವಾಗಿಸುವುದು ನಮ್ಮ ಪರಿಪೂರ್ಣತೆಗಳಲ್ಲ ಬದಲಾಗಿ ನಮ್ಮ ಅಪರಿಪೂರ್ಣತೆಗಳು. ಪರಿಪೂರ್ಣತೆ ಒಂದು ಮಹಾ ಬೋರಿಂಗ್ ವಿಷಯ ಇದು ಪ್ರೇಮವನ್ನು ಚಾಲೇಂಜ್ ಮಾಡುವುದಿಲ್ಲ. ಚಾಲೆಂಜ್ ಇಲ್ಲದಾಗ ಪ್ರೇಮ ಕೂಡ ಪೂರ್ಣವಾಗಿ ಅನಾವರಣಗೊಳ್ಳುವುದಿಲ್ಲ.
ಒಬ್ಬ ಮನುಷ್ಯ ತನ್ನ ಇಡೀ ಬದುಕನ್ನ ಮದುವೆಯಿಲ್ಲದೆ ಕಳೆದ. ಅವನಿಗೆ ತೊಂಭತ್ತು ವರ್ಷ ವಯಸ್ಸಾಗಿ ಆತ ಸಾವಿನ ಹಾಸಿಗೆಯಲ್ಲಿದ್ದಾಗ ಅವನನ್ನು ಪ್ರಶ್ನೆ ಮಾಡಲಾಯಿತು.
“ ನೀನು ನಿನ್ನ ಇಡೀ ಜೀವನವನ್ನ ಮದುವೆಯಿಲ್ಲದೆ ಕಳೆದೆಯಲ್ಲ , ಆದರೆ ಯಾಕೆ ಹೀಗೆ ಅಂತ ನೀನು ಎಲ್ಲೂ ಯಾವಾಗಲೂ ಹೇಳಿಯೇ ಇಲ್ಲ. ಯಾಕೆ ಮದುವೆ ಆಗಲಿಲ್ಲ ನೀನು? ಈಗಲಾದರೂ ನಿಜ ಕಾರಣ ಹೇಳು. ಇನ್ನೇನು ನಿನ್ನ ಸಾವು ಹತ್ತಿರವಾಗಿದೆ, ಈ ರಹಸ್ಯವನ್ನು ಮುಚ್ಚಿಡಬೇಡ. ಈ ರಹಸ್ಯ ಈಗ ಯಾರಿಗಾದರೂ ಗೊತ್ತಾದರೆ ಅದರಿಂದ ನಿನಗೇನೂ ತೊಂದರೆ ಇಲ್ಲ”.
ಆ ವಯಸ್ಸಾದ ವ್ಯಕ್ತಿ ಉತ್ತರಿಸತೊಡಗಿದ….
“ ಹೌದು ಖಂಡಿತ ರಹಸ್ಯ ಇದೆ. ನಾನೇನು ಮದುವೆಗೆ ವಿರುದ್ಧವಾಗಿರಲಿಲ್ಲ. ಆದರೆ ನಾನು ಪರಿಪೂರ್ಣ ಹೆಣ್ಣೊಬ್ಬಳನ್ನ ಹುಡುಕುತ್ತಿದ್ದೆ ಮದುವೆಯಾಗಲು. ಈ ಹುಡುಕಾಟದಲ್ಲಿಯೇ ನನ್ನ ಇಡೀ ಆಯುಷ್ಯ ಕಳೆದು ಹೋಯಿತು.”
“ ಇಂಥ ವಿಶಾಲ ಜಗತ್ತಿನಲ್ಲಿ ಲಕ್ಷಾಂತರ ಜನ ಇದ್ದಾರೆ. ಅವರಲ್ಲಿ ಅರ್ಧಕ್ಕರ್ಧ ಜನ ಹೆಂಗಸರು. ಅವರಲ್ಲಿ ನಿನಗೆ ಒಬ್ಬಳೂ ಪರಿಪೂರ್ಣ ಹೆಣ್ಣು ಸಿಗಲಿಲ್ಲವೆ ಮದುವೆಯಾಗಲು?” ಅವನನ್ನು ಮತ್ತೆ ಪ್ರಶ್ನೆ ಮಾಡಲಾಯಿತು.
“ಬಹಳ ಹುಡುಕಾಟದ ನಂತರ ಒಬ್ಬಳು ಸಿಕ್ಕಳು” ಆ ವೃದ್ಧ ವ್ಯಕ್ತಿಯ ಕಣ್ಣಲ್ಲಿ ಕಣ್ಣೀರು ಕಾಣಿಸಿಕೊಂಡಿತು.
“ಮತ್ತೆ ಏನಾಯಿತು? ಯಾಕೆ ನೀನು ಅವಳನ್ನು ಮದುವೆಯಾಗಲಿಲ್ಲ?”
“ ಅವಳೂ ಸಹ ಮದುವೆಗೆ ಒಬ್ಬ ಪರಿಪೂರ್ಣ ಗಂಡಸನ್ನ ಹುಡುಕುತ್ತಿದ್ದಳು”
ಆ ವ್ಯಕ್ತಿ ತಾನು ಮದುವೆ ಆಗದ ಕಾರಣವನ್ನು ನಿರಾಸೆಯಿಂದ ಬಿಚ್ಚಿಟ್ಟ.

