ಸಂಗ್ರಹ – ಅನುವಾದ : ಚಿದಂಬರ ನರೇಂದ್ರ
ಒಂದು ದಿನ ಬೇರೆ ಯಾವ ರಿಕಾರ್ಡ್ಂಗ್ ಇಲ್ಲವಾದ್ದರಿಂದ ಲತಾ ಮಂಗೇಶ್ಕರ್ ಮತ್ತು ಸಂಗೀತ ನಿರ್ದೇಶಕ ಮದನ್ ಮೋಹನ್, ಉಸ್ದಾದ್ ಅಮೀರ್ ಖಾನ್ ರ ಸಂಗೀತ ಕೇಳಲು ಅವರ ಕಾನ್ಸರ್ಟ್ ಗೆ ಹೋಗುತ್ತಾರೆ. ಅವತ್ತು ಖಾನ್ ಸಾಹೇಬರು ನಂದ್ ರಾಗವನ್ನು ಅದ್ಭುತವಾಗಿ ಪ್ರಸ್ತುತಪಡಿಸುತ್ತಾರೆ. ಮದನ್ ಮೋಹನ್ ಮತ್ತು ಲತಾ ರ ಮನಸ್ಸಿನಲ್ಲಿ ಆ ರಾಗ ಅಚ್ಚೊತ್ತಿಬಿಡುತ್ತದೆ.
ಮರುದಿನ ಮೇರಾ ಸಾಯಾ ಸಿನೇಮಾದ ಹಾಡುಗಳ ರಿಕಾರ್ಡಿಂಗ್. ಎಷ್ಟು ಪ್ರಯತ್ನ ಮಾಡಿದರೂ ಮದನ್ ಮೋಹನ ರಿಗೆ ತಮ್ಮ ಟ್ಯೂನ್ ತೃಪ್ತಿಯಾಗುತ್ತಿಲ್ಲ. ಕೊನೆಗೆ ಲತಾ ಯಾಕೆ ನೀವು ನಂದ್ ರಾಗದಲ್ಲಿಯೇ ಟ್ಯೂನ್ ಮಾಡಬಾರದು ಅಂತ ಮದನ್ ಮೋಹನ್ ರನ್ನ ಪ್ರಶ್ನೆ ಮಾಡುತ್ತಾರೆ. “ನಿನಗೆಲ್ಲೋ ನಿನ್ನೆ ಹಿಡಿದ ಹುಚ್ಚು ಇನ್ನೂ ಬಿಟ್ಟಿಲ್ಲ ಅನ್ಸತ್ತೆ, ನಾವು ಅಮೀರ್ ಖಾನ್ ಸಾಹೇಬರ ಸರಿಸಮ ಹಾಡ ಬಹುದೇ?” ಅಂತ ಮದನ್ ಮೋಹನ್ ಲತಾರನ್ನ ತರಾಟೆಗೆ ತೆಗೆದುಕೊಳ್ಳುತ್ತಾರೆ. “ಇಲ್ಲ ಅಣ್ಣ ನನಗನಿಸತ್ತೆ ನಂದ್ ರಾಗದ ಛಾಯೇ ಈ ಹಾಡಿಗೆ ಬಹಳ ಒಪ್ಪತ್ತೆ, ಯಾಕೆ ನಾವು ಪ್ರಯತ್ನ ಮಾಡಬಾರದು?” ಲತಾ ಪಟ್ಟು ಹಿಡಿಯುತ್ತಾರೆ.
ಆಗ ಸೃಷ್ಟಿಯಾದ ಅದ್ಭುತ ಗೀತೆಯೇ “ತೂ ಜಹಾಂ ಜಹಾಂ ಚಲೇಗಾ, ಮೇರಾ ಸಾಯಾ ಸಾಥ್ ಹೋಗಾ”. ಮದನ್ ಮೋಹನ್ ರ ಸಂಗೀತ ನಿರ್ದೇಶನದ ಇತಿಹಾಸದಲ್ಲಿಯೇ ಪೂರ್ವ ನಿರ್ಧಾರಿತ ಟ್ಯೂನ್ ಬಿಟ್ಟು ಬೇರೊಂದು ಟ್ಯೂನ್ ಲ್ಲಿ ಅವರು ರಿಕಾರ್ಡಿಂಗ್ ಸಮಯದಲ್ಲಿ ಹೊಸ ಟ್ಯೂನ್ ಹುಟ್ಟು ಹಾಕಿ ರಿಕಾರ್ಡಿಂಗ್ ಮಾಡಿದ್ದು. ಇಂದಿಗೂ ಈ ಹಾಡು ಲತಾ ಅವರ ಅಮರ ಹಾಡುಗಳಲ್ಲಿ ಒಂದಾಗಿ ಅಮೀರ್ ಖಾನ್ ಸಾಹೇಬರ ನೆನಪನ್ನು ಜೀವಂತವಾಗಿಟ್ಟಿದೆ.

