ವಚನ ವೈವಿಧ್ಯ#22: ಪಕ್ವವಾದಲ್ಲದೆ ಪರಿಣಾಮ ಕಾಣಿಸದು: ಜೇಡರ ದಾಸಿಮಯ್ಯ

ಈ ವಚನವು ಬಲು ದೊಡ್ಡ ತಾತ್ವಿಕ ಸತ್ಯವನ್ನು ತಿಳಿಸುತ್ತಿದೆ. ಪಕ್ವಕ್ಕಲ್ಲದೆ ಕಾಣಿಸದು ಪರಿಣಾಮ. ಇದನ್ನು ಸ್ಪಷ್ಟಗೊಳಿಸಲು ಹೆಣ್ಣುಮಗುವಿನ ನಿದರ್ಶನ ಬಳಕೆಯಾಗಿದೆ । ಓ.ಎಲ್.ನಾಗಭೂಷಣ ಸ್ವಾಮಿ

ಸಣ್ಣ ನನೆಯೊಳಗಣ ಪರಿಮಳವ ಹೊರಸೂಸಿ
ಇದಿರಿಂಗೆ ಅರುಹಿಸಬಲ್ಲುದೆ ವಾಯು
ಕೊಡಗೂಸಿನೊಳಗಣ ಮೊಲೆ ಮುಡಿಯ
ಹಡೆದ ತಾಯಿ ತಂದೆಗಳೆಂದಡೆ ಕಾಣಿಸಿಕೊಡಬಲ್ಲರೆ
ಕಾಬವರ ಕಣ್ಣಿಗೆ ಪಕ್ವಕ್ಕಲ್ಲದೆ ಪರಿಣಾಮ ಕಾಣಿಸದು ರಾಮನಾಥ (ಸಂ.೭, ವ.೮೫೯)

[ನನೆ-ಮೊಗ್ಗು; ಅರುಹಿಸು-ತಿಳಿಸು; ಕೊಡಗೂಸು-ಹದಿಹರೆಯದ ಹೆಣ್ಣುಮಗು; ಕಾಬವರ-ಕಾಣುವವರ]

ಪುಟ್ಟ ಮೊಗ್ಗಿನೊಳಗೆ ಇರುವ ಪರಿಮಳವನ್ನು ಹೊರಗೆ ಎಲ್ಲರಿಗೂ ತಿಳಿಸುವಂತೆ ಮಾಡುವುದು ಗಾಳಿ. ಹೆಣ್ಣು ಮಗುವನ್ನು ಹೆತ್ತವರಾದರೂ ಹದಿ ಹರೆಯದ ಹೆಣ್ಣಾದಾಗ, ದೇಹ ಪಕ್ವವಾದಾಗ, ಅವಳ ಮೊಲೆ ಮುಡಿಗಳನ್ನು ಕಾಣುವವರ ಕಣ್ಣಿಗೆ ತೋರಿಸಿಕೊಡಬಲ್ಲರೇ?  ಇಡಿಯಾಗಿ ಕಾಣುವುದು ʻಕಾಣುವವರʼ ಪಕ್ವವಾದ ಕಣ್ಣಿಗೆ ಮಾತ್ರ.

ಈ ವಚನವು ಬಲು ದೊಡ್ಡ ತಾತ್ವಿಕ ಸತ್ಯವನ್ನು ತಿಳಿಸುತ್ತಿದೆ. ಪಕ್ವಕ್ಕಲ್ಲದೆ ಕಾಣಿಸದು ಪರಿಣಾಮ. ಇದನ್ನು ಸ್ಪಷ್ಟಗೊಳಿಸಲು ಹೆಣ್ಣುಮಗುವಿನ ನಿದರ್ಶನ ಬಳಕೆಯಾಗಿದೆ. ಹೆತ್ತವರೇ ಆದರೂ ತಮ್ಮ ಹೆಣ್ಣುಮಗುವಿನ ಮೊಲೆ ಮುಡಿಗಳ ವಿವರ ಕಾಣಲಾರರು, ಇತರರಿಗೆ ಕಾಣಿಸಲಾರರು. ಹೆಣ್ಣತನದ ದೇಹ ಲಕ್ಷಣ ಕಾಣಲು ದೇಹವು ಪಕ್ವವಾಗಿ ಕೊಡಗೂಸು, ಹದಿಹರೆಯದ ದೇಹವಾಗಬೇಕು, ಮತ್ತು ಅದು ಕಾಣುವುದು ಕೂಡ ಕಾಣಬಲ್ಲವರಿಗೆ ಮಾತ್ರ. ಕಾಣುವವರಿಗೂ ಪಕ್ವತೆ ಬೇಕು. ಇನ್ನೊಂದು ನಿದರ್ಶನ ಮೊಗ್ಗಿನೊಗಿನ ಪರಿಮಳ. ಮೊಗ್ಗು ಕೂಡ ಪಕ್ವವಾಗಿ ಅರಳಿದಾಗ, ಗಾಳಿ ಬೀಸಿದಾಗ, ಅಲ್ಲಿ ಸುಳಿದಾಡುವವರಲ್ಲಿ ಗ್ರಹಿಕೆಯ ಪಕ್ವತೆ ಇರುವ ಇತರ ಮನುಷ್ಯರಿಗೆ ಅದರ ಪರಿಮಳ ತಿಳಿಯುತ್ತದೆ. ವ್ಯಕ್ತವಾಗುವುದಕ್ಕೂ ಅರಿಯುವುದಕ್ಕೂ ಪಕ್ವತೆ ಬೇಕು ಎಂದು ಜೇಡರ ದಾಸಿಮಯ್ಯ ಹೇಳುವಂತಿದೆ.

ʻಪರಿಣಾಮʼ ಎಂಬ ಪರಿಭಾಷೆಗೆ ಮತ್ತೆ ಮೊದಲಿನ ಸ್ಥಿತಿಗೆ ಮರಳಲಾಗದಂಥ ಬದಲಾವಣೆ ಎಂಬ ಅರ್ಥವೂ ಇದೆ. ದೇಹದ ಬದಲಾವಣೆ ಕಾಣಲು ತಕ್ಕ ಕಾಲ ಬರಬೇಕು, ಹಾಗೇ ಮನಸಿನಲ್ಲಿ ಆದ ಬದಲಾವಣೆ ತಿಳಿಯಲು ನೋಡುವ ಕಣ್ಣು ಕೂಡ ಪ್ರಕ್ವವಾಗಿರಬೇಕು, ಮೆಚೂರಿಟಿ ಹೊಂದಿರಬೇಕು. ʻಮರನೊಳಗಣ ಪತ್ರೆ ಫಲಂಗಳು, ಮರಕಾಲವಶದಲ್ಲಿ ತೋರುವಂತೆʼ ಎಂದು ಆರಂಭವಾಗುವ ಅಲ್ಲಮ ವಚನವನ್ನು ನೋಡಿ (ಸಂ.೨, ವ.೧೪೫) ಎಲೆ ಹಣ್ಣುಗಳು ಮರದಲ್ಲಿ ಮೂಡುವುದು ಕೂಡ ಮರ-ಕಾಲ-ವಶದಲ್ಲಿ.


ಜೇಡರ ದಾಸಿಮಯ್ಯ

ವಚನ ಯುಗದ ಹಿರಿಯರ ರಚನೆಕಾರರಲ್ಲಿ ಒಬ್ಬರಾದ ಜೇಡರ ದಾಸಿಮಯ್ಯ ಕಲಬುರ್ಗಿ ಜಿಲ್ಲೆಯ ಮುದನೂರಿನವರು. ನೇಯ್ಗೆ ಇವರ ವೃತ್ತಿ  ಇವರ ೧೭೬ ವಚನಗಳು ಪ್ರಕಟವಾಗಿವೆ. ರಾಮನಾಥ ಎಂಬುದು ವಚನಾಂಕಿತ. ತ್ರಿಪದಿಗಳು ವಚನವಾಗಿ ರೂಪಾಂತರ ಹೊಂದುತ್ತಿದ್ದ ಬಗೆಯನ್ನು ದಾಸಿಮಯ್ಯ ವಚನಗಳಲ್ಲಿ ಕಾಣಬಹುದು. ವಚನ ಯುಗದ ಮುಖ್ಯ ಚಿಂತನೆಗಳು ದಾಸಿಮಯ್ಯ ವಚನಗಳಲ್ಲಿ ಬೀಜರೂಪದಲ್ಲಿ ಕಾಣಿಸಿಕೊಳ್ಳುತ್ತವೆ. ವಚನ ಪ್ರಕಾರದ ಮುಖ್ಯಗುಣಗಳಾದ ಸಂಕ್ಷಿಪ್ತತೆ, ಸರಳತೆ ಹಾಗೂ ಅರ್ಥಪ್ರಚುರತೆ ದಾಸಿಮಯ್ಯ ವಚನಗಳಲ್ಲಿ ಎದ್ದು ಕಾಣುತ್ತದೆ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.