ವಚನ ವೈವಿಧ್ಯ#23: ಕಳವಳವಳಿದಲ್ಲದೆ ತಿಳಿಯಲು ಬಾರದು: ಮುಳುಬಾವಿಯ ಸೋಮಣ್ಣ

ಕಳವಳಗಳನ್ನು ನೀಗಿಕೊಳ್ಳದೆ ಇದ್ದರೆ ಇಷ್ಟ ದೈವವನ್ನು ಕುರಿತ ಚಿಂತನೆ, ಧ್ಯಾನಗಳೂ ಸಾಧ್ಯವಿಲ್ಲ… । ಓ.ಎಲ್.ನಾಗಭೂಷಣ ಸ್ವಾಮಿ

ಆಗಿಲ್ಲದ ಸಿರಿ
ಆಯುಷ್ಯವಿಲ್ಲದ ಬದುಕು
ಸುಖವಿಲ್ಲದ ಸಂಸಾರ
ಎಳತಟೆಗೊಂಬ ಕಾಯದ ಸಂಗ
ಬಳಲಿಸುವ ಜೀವಭಾವ
ಇವರ ಕಳವಳವಳಿದಲ್ಲದೆ
ಮಳುಬಾವಿಯ ಸೋಮನ ತಿಳಿಯಬಾರದು (ಸಂ.೮,ವ.೧೧೫೪)

(ಆಗಿಲ್ಲದ-ಬೆಳೆಯದ; ಎಳತಟೆಗೊಂಬ-ಎಳೆತ, ಸೆಳೆತಗಳಿಗೆ ಒಳಪಡಿಸುವ; ಕಳವಳವಳಿದಲ್ಲದೆ-ಕಳವಳವು ಅಳಿಯದೆ ಇದ್ದರೆ)

ಬೆಳೆಯದ ಸಂಪತ್ತು, ಆಯುಷ್ಯವಿರದ ಬದುಕು, ಮೈಯ ಸಂಬಂಧದ ಸೆಳೆತ ಈ ಇಂಥ ಕಳವಳಗಳು ಇಲ್ಲವಾಗದೆ ಮುಳುಬಾವಿಯ ಸೋಮನನ್ನು ತಿಳಿಯಲು ಆಗದು.

ಸುಖಕ್ಕೆ ಕಾರಣವೆಂದು ನಂಬಿರುವ ಸಂಪತ್ತು, ಬದುಕು, ಸಾವಿನ ಭಯ, ಇನ್ನೊಂದು ಮೈಯಿಂದ ಪಡೆಯುವ ಸುಖ ಇವೆಲ್ಲವೂ ಗಾಢವಾದ ಕಳವಳಕ್ಕೂ ಕಾರಣವಾಗಬಲ್ಲವು. ಸಂಪತ್ತು ಬೆಳೆಯದಿದ್ದರೂ ಕಳವಳ, ಸತ್ತೇನು, ಆಯುಷ್ಯ ಮುಗಿದೀತು ಎಂಬ ಭಯವಿದ್ದರೂ ಕಳವಳ, ಇನ್ನೊಂದು ಮೈಯಿಂದ ಸುಖವನ್ನು ಪಡೆಯಲು ಆಗಲಿಲ್ಲವೆಂದೋ, ದೊರೆತ ಸುಖ ಸಾಕಾಗಲಿಲ್ಲವೆಂದೋ ಕಳವಳ. ಇಂಥ ಕಳವಳಗಳನ್ನು ನೀಗಿಕೊಳ್ಳದೆ ಇದ್ದರೆ ಇಷ್ಟ ದೈವವನ್ನು ಕುರಿತ ಚಿಂತನೆ, ಧ್ಯಾನಗಳೂ ಸಾಧ್ಯವಿಲ್ಲ.

ʻಆಗಿಂಗೆ ಮುಯ್ಯಾನದಿರು, ಚೇಗಿಂಗೆ ಬೆಂಬೀಳದಿರುʼ ಎಂದು ಆರಂಭವಾಗುವ ನೀಲಮ್ಮನವರ ವಚನದಲ್ಲೂ ಇದೇ ಬಗೆಯ ಭಾವ ವ್ಯಕ್ತವಾಗಿದೆ. ಏನೋ ಆಗಲೆಂದು ಹಂಬಲಿಸುವುದು, ಏನೋ ಅದದ್ದಕ್ಕೆ ಸೇಡು ತೀರಿಸಿಕೊಳ್ಳಲು ಹಾತೊರೆಯುವುದು ಎರಡೂ ಸರಿಯಲ್ಲ. ʻ ಆಗೆಂದಡೆ ನಿನ್ನ ವಶವಲ್ಲ, ಹೋಗೆಂದಡೆ ನಿನ್ನಿಚ್ಫೆಯಲ್ಲʼ ಎಂದು ಆ ವಚನ ಹೇಳುತ್ತದೆ. ನಿರೀಕ್ಷೆ, ಮತ್ತು ತನ್ನ ಇಚ್ಛೆ ನಡೆಯದಿದ್ದರೆ ಸೇಡು ತೀರಿಸಿಕೊಳ್ಳುವ ಹಂಬಲ ಇವೆರಡೂ ಕಳವಳ ಹುಟ್ಟಿಸಿ ಮನಸಿನ ನೆಮ್ಮದಿಯನ್ನು ಹಾಳುಮಾಡುತ್ತವೆ. ದೇವರ ಧ್ಯಾನ ಕೂಡ ಸಾಧ್ಯವಾಗದು. ಮನುಷ್ಯರು ತಮ್ಮ  ಮಿತಿಗಳನ್ನು ಒಪ್ಪಿಕೊಳ್ಳುವ ಅಗತ್ಯವನ್ನು ಸೋಮಣ್ಣ, ನೀಲಮ್ಮ ಇಬ್ಬರೂ ಹೇಳುತಿದ್ದಾರೆಂದು ಅನ್ನಿಸುತ್ತದೆ.


ಮುಳುಬಾವಿಯ ಸೋಮಣ್ಣ

ಬದುಕಿನ ವಿವರಗಳು ತಿಳಿದಿಲ್ಲ. ಕಾಲ, ಸು. ೧೬೫೦ ಎಂದು ಊಹಿಸಲಾಗಿದೆ. ಮುಳುಬಾವಿಯ ಸೋಮ ಅಂಕಿತದ ಒಂದು ವಚನ ಮಾತ್ರ ದೊರೆತಿದೆ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.