ಬಹಳಷ್ಟು ವಚನಕಾರರು ಜನ್ಮಾಂತರಗಳನ್ನು ನಂಬುವವರಲ್ಲ. ಇರುವುದೊಂದೇ ಬದುಕು ಅನ್ನುವ ನಂಬಿಕೆಯವರು. ಅದನ್ನು ದೃಢಗೊಳಿಸದಿದ್ದರೆ ಭಕ್ತಿಯ ಅನುಷ್ಠಾನವೂ ಕೇಡು ಎಂದು ಈ ವಚನ ಹೇಳುತ್ತಿರಬಹುದು । ಓ.ಎಲ್.ನಾಗಭೂಷಣ ಸ್ವಾಮಿ
ಆರಂಬವ ಮಾಡಿ ಸಂಸಾರಸ್ಥಿತಿ ಕಳೆಯದಿದ್ದರೆ
ಆ ಆರಂಬವೆ ಕೇಡು
ವ್ಯವಹಾರವ ಮಾಡಿ ಸಂಸಾರಸ್ಥಿತಿ ಕಳೆಯದಿದ್ದರೆ
ಆ ವ್ಯವಹಾರವೆ ಕೇಡು
ಓಲಗವ ಮಾಡಿ ಸಂಸಾರಸ್ಥಿತಿ ಕಳೆಯದಿದ್ದರೆ
ಆ ಓಲಗವೆ ಕೇಡು
ಭಕ್ತಿಯ ಮಾಡಿ ಜನನ ಮರಣ ವಿರಹಿತನಾಗದಿದ್ದರೆ
ಆ ಭಕ್ತಿಯೆ ಕೇಡು ಕೂಡಲಚೆನ್ನಸಂಗಮದೇವಾ (ಸಂ.೩,ವ.೯೯೯)
ಬೇಸಾಯ ಮಾಡಿದರೂ ಸಂಸಾರದ ಸ್ಥಿತಿ ಸುದಾರಿಸದಿದ್ದರೆ ಬೇಸಾಯವೇ ಕೇಡು. ವ್ಯವಹಾರ ಮಾಡಿ ಸಂಸಾರ ಸ್ಥಿತಿ ಕಳೆಯದಿದ್ದರೆ ವ್ಯವಹಾರವೇ ಕೇಡು. ದರ್ಬಾರು ನಡೆಸುವಂತ ಅಧಿಕಾರ ಚಲಾಯಿಸಿದರೂ ಸಂಸಾರ ಸ್ಥಿತಿ ಕಳೆಯದಿದ್ದರೆ ಅಂಥ ದರ್ಬಾರು ಕೇಡು. ಅದೇ ರೀತಿಯಲ್ಲಿ ಭಕ್ತಿಯನ್ನು ಅಳವಡಿಸಿಕೊಂಡರೂ ಹುಟ್ಟು ಸಾವುಗಳಿಂದ ಬಿಡುಗಡೆ ದೊರೆಯದಿದ್ದರೆ ಭಕ್ತಿಯೆ ಕೇಡು.
ಸಂಸಾರ ಮತ್ತು ಕಳೆ ಎಂಬ ಎರಡು ಪದಗಳನ್ನು ಬೇರೆ ಬೇರೆ ಅರ್ಥದಲ್ಲಿ ಬಳಸಿರುವ ಹಾಗೆ ಕಾಣುತ್ತದೆ. ಸಂಸಾರವೆಂದರೆ ಫ್ಯಾಮಿಲಿ ಅನ್ನುವ ಸೀದಾ ಸಾದಾ ಅರ್ಥವಿರುವ ಹಾಗೆ ಲೋಕದ ಜಂಜಡದ ಬದುಕು ಅನ್ನುವ ಅರ್ಥವೂ ಇದೆ. ಕಳೆ ಎಂಬುದಕ್ಕೆ ಇಲ್ಲವಾಗು ಮತ್ತು ಕಳೆದುಕೋ ಎಂಬ ಅರ್ಥಗಳೂ ಹೊಳೆಯುತ್ತವೆ. ಬೇಸಾಯ, ವ್ಯವಹಾರ, ಅಧಿಕಾರ ಇವು ಮೂರೂ ಕೂಡ ಇನ್ನೇನು ಮಾಡದಿದ್ದರೂ ಕುಟುಂಬದ ಜಂಜಡವನ್ನು ಕಳೆಯಬೇಕು. ಇಲ್ಲದಿದ್ದರೆ ಈ ಮೂರು ದಾರಿಗಳೇ ಕೆಟ್ಟವು, ಕೇಡು ತರುವಂಥವು ಆಗುತ್ತವೆ. ಹಾಗೆಯೇ ಅಧ್ಯಾತ್ಮದಲ್ಲಿ ಭಕ್ತಿಯನ್ನು ಆಯ್ಕೆ ಮಾಡಿಕೊಂಡರೆ ಹುಟ್ಟು ಸಾವುಗಳಿಂದ ಬಿಡುಗಡೆ ದೊರೆಯದಿದ್ದರೆ ಅದು ಭಕ್ತಿಯನ್ನೇ ಕೇಡು ಅನಿಸುವಂತೆ ಮಾಡುತ್ತದೆ.
ಸಂಸಾರದ ಕಷ್ಟ ಇಲ್ಲವಾಗುವುದು ಅರ್ಥವಾಗುತ್ತದೆ. ಹುಟ್ಟು ಸಾವುಗಳನ್ನು ಕಳೆದುಕೊಳ್ಳುವುದನ್ನು ಅರ್ಥಮಾಡಿಕೊಳ್ಳುವುದು ಹೇಗೆ? ಹುಟ್ಟು ಸಾವುಗಳ ಚಕ್ರ ನಿರಂತರವೆಂಬ ಕಲ್ಪನೆಯಿಂದ ಬಿಡುಗಡೆ ಪಡೆಯುವುದಲ್ಲದೆ ಬೇರೇನೂ ಆಗಿರಲು ಸಾಧ್ಯವಿಲ್ಲ. ಬಹಳಷ್ಟು ವಚನಕಾರರು ಜನ್ಮಾಂತರಗಳನ್ನು ನಂಬುವವರಲ್ಲ. ಇರುವುದೊಂದೇ ಬದುಕು ಅನ್ನುವ ನಂಬಿಕೆಯವರು. ಅದನ್ನು ದೃಢಗೊಳಿಸದಿದ್ದರೆ ಭಕ್ತಿಯ ಅನುಷ್ಠಾನವೂ ಕೇಡು ಎಂದು ಈ ವಚನ ಹೇಳುತ್ತಿರಬಹುದು.
ಚೆನ್ನಬಸವಣ್ಣ
ಬಸವಣ್ಣನವರ ಸೋದರಳಿಯ, ಅಂದರೆ ಬಸವಣ್ಣನವರ ಸಹೋದರಿ ಅಕ್ಕನಾಗಮ್ಮನವರ ಮಗ. ಇವರ ೧೭೬೩ ವಚನ ದೊರೆತಿವೆ. ಕೂಡಲಚೆನ್ನಸಂಗ ಎಂಬುದು ಅವರ ವಚನಾಂಕಿತ.ಲಿಂಗಾಯತ/ವೀರಶೈವ ಮತಧರ್ಮಶಾಸ್ತ್ರದ ತಾತ್ವಿಕ ಅಂಶಗಳನ್ನು ನಿರೂಪಿಸಿದ್ದು ಇವರ ಹೆಚ್ಚುಗಾರಿಕೆ. ಆಗಮಗಳಲ್ಲಿರುವ ಷಟ್‌ಸ್ಥಲಗಳ ಚಿಂತನೆಯನ್ನು ಸಮನ್ವಯಗೊಳಿಸಿ ಲಿಂಗಾಯತ/ವೀರಶೈವ ಮತಧರ್ಮ ಸಿದ್ಧಾಂತವನ್ನು ನಿರೂಪಿಸಿದ ಖ್ಯಾತಿ ಚೆನ್ನಬಸವಣ್ಣನವರದ್ದು.

