ವಚನಗಳು ಧಾರ್ಮಿಕ ಪಠ್ಯವಾಗಿ ಬದಲಾದಾಗ ಪೂಜೆಗೆ, ಪಾದಪೂಜೆಗೆ ಪ್ರಾಮುಖ್ಯ ಬಂದಿರಬಹುದು. ವಚನಗಳು ಅನುಭಾವದ ಅಭಿವ್ಯಕ್ತಿಯಾಗಿದ್ದ ಕಾಲದಲ್ಲಿ ರಚನೆಯಾದ ವಚನಗಳು ಯಜ್ಞ, ಯಾಗಾದಿಗಳನ್ನು ಮಾತ್ರವಲ್ಲ ಪೂಜೆಯನ್ನೂ ನಿರಾಕರಿಸಿದ್ದು ಕಾಣುತ್ತದೆ । ಓ.ಎಲ್.ನಾಗಭೂಷಣ ಸ್ವಾಮಿ
ಎನ್ನೊಳಗೆ ನೀನು ಪ್ರವೇಶ
ನಿನ್ನೊಳಗೆ ನಾನು ಪ್ರವೇಶ
ದೇವ ನೀನಿಲ್ಲದಿಲ್ಲ ಭಕ್ತ ನಾನಲ್ಲದಿಲ್ಲ
ಈ ಪರಿಯ ಮಾಡುವರಿನ್ನಾರು ಹೇಳಾ
ಎನಗೆ ನೀನೇ ಗತಿ
ನಿನಗೆ ನಾನೇ ಗತಿ
ಇನ್ನೇಕೆ ಜವನಿಕೆ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ (ಸಂ.೬,ವ.೧೩೩೬)
[ಜವನಿಕೆ-ತೆರೆ]
ನೀನು ನನ್ನ ಒಳಹೊಕ್ಕಿರುವೆ, ನಾನು ನಿನ್ನ ಒಳಹೊಕ್ಕಿರುವೆ. ನೀನಲ್ಲದ ದೇವರಿಲ್ಲ, ನಾನಲ್ಲದ ಭಕ್ತನಿಲ್ಲ. ಹೀಗೆ ಪೂಜೆ ಮಾಡುವವರು ಯಾರಿದ್ದಾರೆ? ನನಗೆ ನೀನೇ ಗತಿ, ನಿನಗೆ ನಾನೇ ಗತಿ. ಹೀಗಿರುವಾಗ ನಮ್ಮಿಬ್ಬರ ಮಧ್ಯೆ ಈ ತೆರೆ, ಅಡಚಣೆ ಯಾಕೆ?
ಭಕ್ತಿ ಎಂಬುದು ತೋರಿ ಉಂಬ ಲಾಭ (೨.೨೬೫) ಎಂಬ ಅಲ್ಲಮ ನುಡಿಯ ಮತ್ತೊಂದು ಮಗ್ಗುಲು ಎಂಬಂತೆ ಈ ವಚನವಿದೆ. ಭಕ್ತರಿಗೆ ದೇವರು ಅಗತ್ಯವಾಗಿ ಬೇಕಾಗಿರುವ ಹಾಗೆಯೇ ದೇವರಿಗೂ ಭಕ್ತರು ಅಗತ್ಯ. ದೇವರು ನನ್ನೊಳಗೆ ಇರುವಾಗ, ನಾನು ದೇವರೊಳಗೆ ಇರುವಾಗ ಇಂಥ ಪೂಜೆಯನ್ನು ಬೇರೆ ಯಾರು ಮಾಡಬಲ್ಲರು. ಮನುಷ್ಯರಿಗೆ ಹೀಗನ್ನಿಸಿದರೂ ದೇವರು ಮಾತ್ರ ಕೈಗೆ ಸಿಗುವುದೇ ಇಲ್ಲ. ಹಾಗಾಗಿ ಕೊನೆಯಲ್ಲಿ ಒಂದು ಪ್ರಶ್ನೆ ಮೂಡುತ್ತದೆ-ನಾವು ಒಬ್ಬರೊಳಗೊಬ್ಬರು ಆಗಿರುವಾಗ ನಡುವೆ ಈ ತೆರೆ ಏಕೆ?
ವಚನಗಳು ಧಾರ್ಮಿಕ ಪಠ್ಯವಾಗಿ ಬದಲಾದಾಗ ಪೂಜೆಗೆ, ಪಾದಪೂಜೆಗೆ ಪ್ರಾಮುಖ್ಯ ಬಂದಿರಬಹುದು. ವಚನಗಳು ಅನುಭಾವದ ಅಭಿವ್ಯಕ್ತಿಯಾಗಿದ್ದ ಕಾಲದಲ್ಲಿ ರಚನೆಯಾದ ವಚನಗಳು ಯಜ್ಞ, ಯಾಗಾದಿಗಳನ್ನು ಮಾತ್ರವಲ್ಲ ಪೂಜೆಯನ್ನೂ ನಿರಾಕರಿಸಿದ್ದು ಕಾಣುತ್ತದೆ. ದೈವಿಕ ಭಾವ ಇರುವುದು ಮುಖ್ಯ, ಅದನ್ನು ಗುರುತಿಸಲು ಬೇರೆಯದೇ ಕಣ್ಣು, ಬೇರೆಯದೇ ವಿಚಾರ ಬೇಕು ಎಂಬ ನಿಲುವುಗಳಿವೆ. ಭಕ್ತಿ ಎಂಬ ಭಾವವಿದ್ದರೆ ಕಣ್ಣಲ್ಲಿ ನೀರು ತುಂಬಿ, ದನಿ ಗದ್ಗದವಾಗಿ, ಮೈಯಲ್ಲಿ ನವಿರೆದ್ದು, ಮನ ಬೆರೆತು ತನು ಕರಗುವುದು ಭಕ್ತಿಗೆ ಚಿಹ್ನ ಎಂದು ಬಸವವಚನವೊಂದು ಹೇಳುತ್ತದೆ (೧.೩೭೯) ಪೂಜೆಯೆಂಬ ಆಚಾರಕ್ಕಿಂತ ವಿಚಾರ ಮುಖ್ಯ, ಆಚಾರವನೆ ಕಂಡರು, ವಿಚಾರವನೆ ಕಾಣರು ಎಂಬ ಮಾತು ಕೂಡ ಬರುತ್ತದೆ. ಭಾವದ ನಿಷ್ಠೆ, ಅಂತರಂಗದ ಶುದ್ಧಿಗಳ ಸಾಧನೆಗಿಂತ ಬಹಿರಂಗದಲ್ಲಿ ಪೂಜೆಯ ಆಚರಣೆ ನಡೆಸುವುದು ಸುಲಭವಾದಂತೆ ಸಮಾಜದ ಮೇಲೆ ಧರ್ಮದ, ಮಠಗಳ, ಗುರುಗಳ ಹಿಡಿತ ಬಲವಾಗುತ್ತದೆ.
ಉರಿಲಿಂಗದೇವನ ಶಿಷ್ಯ ಉರಿಲಿಂಗಪೆದ್ದಿ
ಆಂಧ್ರ ಪ್ರದೇಶದವ. ಪೂರ್ವಾಶ್ರಮದಲ್ಲಿ ಪೆದ್ದಣ್ಣನೆಂಬ ಹೆಸರು ಹೊಂದಿದ್ದ ಕಳ್ಳ. ಉರಿಲಿಂಗದೇವನ ಮನೆಗೆ ಕಳ್ಳತನಕ್ಕೆ ಹೋಗಿದ್ದಾಗ ನಂದವಾಡದ ಸೂರಯ್ಯನಿಗೆ ಉರಿಲಿಂಗ ದೇವ ಮಂತ್ರೋಪದೇಸಸ ಮಾಡುತ್ತಿರುವುದನ್ನು ನೋಡಿ ಅಂದಿನಿಂದ ಹನ್ನೆರಡು ವರ್ಷಕಾಲ ಉರಿಲಿಂಗದೇವನ ಮಠಕ್ಕೆ ಗುಪ್ತವಾಗಿ ಸೌದೆ ತಂದು ಹಾಕುತ್ತಿದ್ದನಂತೆ. ಉರಿಲಿಂಗದೇವನಿಗೆ ಸಿಕ್ಕಿಬಿದ್ದು ಉರುವಲಿನ ಬೆಲೆ ತೆಗೆದುಕೋ ಎಂದು ಒತ್ತಾಯಪಡಿಸಿದಾಗ ದೀಕ್ಷೆಯನ್ನು ನನಗೂ ಕೊಡಿ ಕಾಡಿದ, ಗುರುವಿಗೆ ಬೇಸರವಾಗಿ ಘೇದಗಡಿ ಜಾ ಜಾದಗಡಿ ಜೆ. ತೆಗೆದುಕೋ ಈ ಕಲ್ಲನ್ನು, ಹೊರಟು ಹೋಗು ಕಲ್ಲು ತೆಗೆದು ಎಸೆದನಂತೆ. ಪೆದ್ದಣ್ಣ ಆ ಮಾತೇ ಮಂತ್ರ, ಕಲ್ಲೇ ಲಿಂಗವೆಂದು ಪೂಜೆಯಲ್ಲಿ ಮುಳುಗಿದ. ಅರಸ ನಂದರಾಜ ಕೆರೆಯೊಂದನ್ನು ತೆಗೆಸುವಾಗ ಬಂಡೆಸಿಕ್ಕಿ ಅದನ್ನು ತೆಗೆಸಲು ಸಹಾಯ ಬೇಕೆಂದು ಉರಿಲಿಂಗದೇವನಿಗೆ ಶರಣಾದ. ಗುರುವಿನ ಅಪ್ಪಣೆಯಂತೆ ಪೆದ್ದಣ್ಣ ಇಷ್ಟಲಿಂಗವೆಂದು ಭಾವಿಸಿದ್ದಕಲ್ಲೇ ಆ ಬಂಡೆಯನ್ನು ಸೀಳಿತೆಂದು ಪ್ರತೀತಿ ಇದೆ. ಗುರು ಆತನಿಗೆ ಲಿಂಗದೀಕ್ಷೆ ಕೊಟ್ಟು ಉರಿಲಿಂಗ ಪೆದ್ದಿಯೆಂದು ನಾಮಕರಣ ಮಾಡಿ, ಮುಂದೆ ಆತನನ್ನೇ ತನ್ನ ಪೀಠಕ್ಕೆ ಗುರುವಾಗಿಸಿದರು. ಉರಿಲಿಂಗ ಪೆದ್ದಿಯ ಸಂಪ್ರದಾಯದ ಮಠಗಳು ಈಗಲೂ ಇವೆ. ಉರಿಲಿಂಗಪೆದ್ದಿಯ ರಚನೆಗಳಲ್ಲಿ ಸಂಸ್ಕೃತ ಉದ್ದರಣೆಗಳು ಹೇರಳವಾಗಿವೆ. ಉರಿಲಿಂಗಪೆದ್ದಿಯ ಪುಣ್ಯಸ್ತ್ರೀ ಕಾಳವ್ವೆಯ ವಚನಗಳೂ ದೊರೆತಿವೆ.

