ಬದುಕಿನ ಅರ್ಥ ಏನು ಎಂದು ಜನ Wittgenstein ನ ಕೇಳಿದಾಗ, ನಿಮ್ಮ ಬದುಕು ನಿಮ್ಮ ಭಾಷೆಯ ಮೇಲೆ ಅವಲಂಬಿತವಾಗಿದೆ ಎಂದು Wittgenstein ಉತ್ತರಿಸುತ್ತಿದ್ದ. ನಿಮ್ಮ ಭಾಷೆ ಎಷ್ಟು ವಿಸ್ತಾರಗೊಳ್ಳುತ್ತದೆಯೋ ನಿಮ್ಮ ಬದುಕು ಅಷ್ಟು ವಿಸ್ತಾರಗೊಳ್ಳುತ್ತದೆ ಎನ್ನುತ್ತಿದ್ದ! ~ ಚಿದಂಬರ ನರೇಂದ್ರ
Ludwig Wittgenstein ಇಪ್ಪತ್ತನೇ ಶತಮಾನದ ಪ್ರತಿಭಾಶಾಲಿ ತತ್ವಜ್ಞಾನಿಗಳಲ್ಲೊಬ್ಬ. Bertrand Russel ನ ಜೊತೆ ಗಲಾಟೆ ಮಾಡಿಕೊಂಡಿದ್ದ. ಇಂಗ್ಲೆಂಡಿನಲ್ಲಿ ಪಾಠ ಮಾಡುತ್ತಿದ್ದ ರಸೇಲ್ ನ ಬಳಿ ಕಲಿಯಲು ಹೋಗಿದ್ದ Wittgenstein ನ ಮಾತುಗಳನ್ನ ಕೇಳಿ ಸ್ವತಃ ರಸೆಲ್ ದಂಗಾಗಿ ಹೋಗಿದ್ದ. ನಿನಗೆ ಕಲಿಸುವುದು ನನ್ನಿಂದ ಸಾಧ್ಯವಿಲ್ಲ ಎಂದು ರಸೆಲ್ ಕಳಚಿಕೊಂಡಿದ್ದ.
ಬದುಕಿನ ಅರ್ಥ ಏನು ಎಂದು ಜನ Wittgenstein ನ ಕೇಳಿದಾಗ, ನಿಮ್ಮ ಬದುಕು ನಿಮ್ಮ ಭಾಷೆಯ ಮೇಲೆ ಅವಲಂಬಿತವಾಗಿದೆ ಎಂದು Wittgenstein ಉತ್ತರಿಸುತ್ತಿದ್ದ. ನಿಮ್ಮ ಭಾಷೆ ಎಷ್ಟು ವಿಸ್ತಾರಗೊಳ್ಳುತ್ತದೆಯೋ ನಿಮ್ಮ ಬದುಕು ಅಷ್ಟು ವಿಸ್ತಾರಗೊಳ್ಳುತ್ತದೆ ಎನ್ನುತ್ತಿದ್ದ. ಅವನು ಆತ್ಮ ಪರಮಾತ್ಮದಂಥ ಮಾತುಗಳನ್ನಾಡುತ್ತಿರಲಿಲ್ಲ. ಅವನು ಭಾಷೆಯ ಕುರಿತು ಮಾತನಾಡುತ್ತಿದ್ದ. ಅವನ ಮಾತಿನ ಅರ್ಥ ಏನು? ಯಾವಾಗ ನಿಮಗೆ ಒಂದು ಪದ ಅರ್ಥವಾಗುತ್ತದೆಯೋ ಆಗ ನಿಮಗೆ ಒಂದು ಪರಿಕಲ್ಪನೆ (concept) ಅರ್ಥವಾಗುತ್ತದೆ. ಆ ಪದದ ಹೊರತಾಗಿ ನಿಮಗೆ ಆ ಪರಿಕಲ್ಪನೆ ಅರ್ಥವಾಗುವುದು ಸಾಧ್ಯವೇ ಇಲ್ಲ.
ಉದಾಹರಣೆಗೆ, ನಿಮಗೆ ಡೆಮಾಕ್ರಸಿ ಎನ್ನುವ ಪದವೇ ಗೊತ್ತಿಲ್ಲದಿದ್ದರೆ ನಿಮಗೆ ಡೆಮಾಕ್ರಸಿ ಎಂದರೇನು ಎನ್ನುವುದು ನಿಮಗೆ ಗೊತ್ತೇ ಆಗುವುದಿಲ್ಲ. ಎಲ್ಲಿಯವರೆಗೆ ನಿಮಗೆ ಡೆಮಾಕ್ರಸಿ ಪದದ ಅರ್ಥ ಗೊತ್ತಿರುವುದಿಲ್ಲವೋ ಅಲ್ಸಿಯವರೆಗೆ ನೀವು ಡಿಕ್ಟೇಟರ್ ಶಿಪ್ ನ ಸಹಜ ಎಂದುಕೊಂಡು ಬಿಟ್ಟಿರುತ್ತೀರಿ. ಎಲ್ಲಿಯತನಕ ನಿಮಗೆ ಸ್ವಾತಂತ್ರ್ಯ ಎನ್ನುವ ಪದದ ಅರ್ಥ ಗೊತ್ತಿರುವುದಿಲ್ಲವೋ ಅಲ್ಲಿಯವರೆಗೆ ನಿಮಗೆ ಸ್ವಾತಂತ್ರ್ಯ ಅರ್ಥವೇ ಆಗುವುದಿಲ್ಲ. ಹಾಗೆಯೇ ಯಾವಾಗ ನೀವು, ನನಗೆ ವಿಷಾದವಾಗುತ್ತಿದೆ, ನನಗೆ ಖುಶಿಯಾಗುತ್ತಿದೆ, ನನಗೆ ಉದ್ರೇಕವಾಗುತ್ತಿದೆ ಮುಂತಾಗಿ ಹೇಳುತ್ತೀರೋ, ಇವು ಕೇವಲ ಪದಗಳು, ಈ ಪದಗಳ ಅರ್ಥ ನಿಮಗೆ ಗೊತ್ತಿರದಿದ್ದರೆ ನಿಮಗೆ ನಿಮ್ಮ ಭಾವನೆಗಳು ಅರ್ಥವೇ ಆಗುವುದಿಲ್ಲ.
ಇದನ್ನು ಅಳವಡಿಸಿಕೊಳ್ಳುವುದು ಹೇಗೆ? ಬೇರೆ ಬೇರೆ ವಿಷಯಗಳ ಮೂಲಭೂತ ಪದಗಳು ಯಾವುದಿರುತ್ತವೆಯೋ ಅವನ್ನು ಅರ್ಥಮಾಡಿಕೊಳ್ಳಿ. ಇದು ಡಿಕ್ಷನರಿ ಓದಿ ಪದಗಳನ್ನು ಅರ್ಥಮಾಡಿಕೊಳ್ಳುವ ಬಗ್ಗೆ ಅಲ್ಲ. ನಮಗೆ ಆ ಪದ ಯಾವ ಪರಿಕಲ್ಪನೆಯನ್ನು ವಿವರಿಸುತ್ತದೆ ಎನ್ನುವುದನ್ನ ಅರ್ಥ ಮಾಡಿಕೊಳ್ಳಬೇಕಿದೆ. ಉದಾಹರಣೆಗೆ ಫಿಲೊಸೊಫಿಯಲ್ಲಿನ ಪದ Existential emptiness, ಸೈಕಾಲಜಿಯಲ್ಲಿನ ಪದ Confirmation Bias, ಅರ್ಥಶಾಸ್ತ್ರದ ಪದ Game theory, ಜೀವಶಾಸ್ತ್ರದಲ್ಲಿ Evolution, ಭೌತಶಾಸ್ತ್ರದಲ್ಲಿ Quantum, ಈ ಪದಗಳನ್ನು ಅರ್ಥ ಮಾಡಿಕೊಳ್ಳುತ್ತ ಆಯಾ ಪರಿಕಲ್ಪನೆಗಳನ್ನು ಅರ್ಥ ಮಾಡಿಕೊಳ್ಳಿ. ಹೊಸ ಹೊಸ ಭಾಷೆಗಳನ್ನ, ಹೊಸ ಹೊಸ ಪದಗಳನ್ನ ಅದರ ಹಿಂದಿನ ಪರಿಕಲ್ಪನೆಗಳನ್ನ explore ಮಾಡಿ.
ಪ್ರತಿ ಭಾಷೆಯಲ್ಲಿಯೂ ಕೆಲವು ಶಕ್ತಿಶಾಲಿ ಪದಗಳಿರುತ್ತವೆ. ಅಂಥವು ಎಲ್ಲ ಭಾಷೆಗಳಲ್ಲಿರುವುದಿಲ್ಲ. ಉದಾಹರಣೆಗೆ, ಕರ್ಮ ಎನ್ನುವ ಪದ. ಯಾವುದೇ ಪಾಶ್ಚಾತ್ಯನಿಗೆ ಕರ್ಮದ ಪರಿಕಲ್ಪನೆಯನ್ನು ನೀವು ವಿವರಿಸಿ ಹೇಳಿದರೆ ಅವನು ದಂಗಾಗಿ ಹೋಗುತ್ತಾನೆ. ಏಕೆಂದರೆ ಪಶ್ಚಿಮದ ಭಾಷೆಗಳಲ್ಲಿ ಕರ್ಮ ವನ್ನು ವಿವರಿಸುವ ಪದಗಳೇ ಇಲ್ಲ. ಪ್ರತಿ ಭಾಷೆಯಲ್ಲಿಯೂ ಇಂಥ ಶಕ್ತಿಶಾಲಿ ಅನನ್ಯ ಪದಗಳು ಇರುತ್ತವೆ. ಯಾವಾಗ ಇವು ನಿಮಗೆ ಅರ್ಥವಾಗುತ್ತವೆಯೋ ಆಗ ನಿಮಗೆ ಹೊಸ ಜಗತ್ತೊಂದು ತೆರೆದುಕೊಳ್ಳುತ್ತದೆ.
ಬದುಕಿನ ಅರ್ಥ ಏನು? ಎಂದು ಜನ ಕೇಳಿದಾಗ Wittgenstein ನೀಡಿದ ಉತ್ತರದ ಅರ್ಥ ಇದು. ನಿಮ್ಮ ಪದ ಭಂಡಾರವನ್ನು ಬೆಳೆಸಿಕೊಳ್ಳಿ, ಇದರೊಂದಿಗೆ ನಿಮ್ಮ ಜಗತ್ತೂ ವಿಸ್ತಾರಗೊಳ್ಳುತ್ತ ಹೋಗುತ್ತದೆ.
********************************

