ಈ ವಚನವು ಎಲ್ಲರಲ್ಲೂ ಹುಟ್ಟುವ ಮನಸು-ದೇಹ-ಸಹಜತೆಗಳ ಪ್ರಶ್ನೆಯನ್ನು ಪರಿಶೀಲಿಸುವಂತೆ ತೋರುತ್ತದೆ… । ಓ.ಎಲ್.ನಾಗಭೂಷಣ ಸ್ವಾಮಿ
ನಾನಾ ವ್ರತಂಗಳ ಪಿಡಿವುದೆಲ್ಲವು ಮನದ ಶಂಕೆ
ಮನ ಹರಿದಾಡುವುದೆಲ್ಲವು ತನುವಿನ ಶಂಕೆ
ಮನ ತನು ಕೂಡಿ ನಡೆವುದೆಲ್ಲವು ಪ್ರಕೃತಿಯ ಶಂಕೆ
ಮನ ತನು ಪ್ರಕೃತಿ ಮೂರೊಂದಾದಲ್ಲಿ ಶೀಲವೆಂಬ ಪಾಶ
ಜೀವನ ಕೊರಳ ಸುತ್ತಿತ್ತು
ಬಹಿರಂಗದ ವ್ರತ ಅಂತರಂಗದ ಅರಿವು
ಉಭಯವು ಕಟ್ಟುವಡೆದಲ್ಲಿ
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವೆಂಬ ಗೊತ್ತಾಯಿತ್ತು (ಸಂ.೫, ವ ೫೧೧)
[ಶಂಕೆ-ಸಂದೇಹ, ಹಿಂಜರಿಕೆ, ನಂಬಿಕೆ ಎಂಬ ಅರ್ಥಗಳಿವೆ]
ವ್ರತಗಳನ್ನು ಹಿಡಿಯುವುದಕ್ಕೆ ಮನಸಿನ ಶಂಕೆ ಕಾರಣ. ಮನಸು ಅತ್ತಿತ್ತ ಹರಿದಾಡುವುದಕ್ಕೆ ದೇಹದ ಹಿಂಜರಿಕೆ ಕಾರಣ. ಮನಸು, ದೇಹ ಕೂಡಿ ನಡೆಯುವುದು ಪ್ರಕೃತಿಯ ನಂಬಿಕೆ, ಮನಸು, ದೇಹ, ಪ್ರಕೃತಿ ಮೂರೂ ಒಂದಾದಲ್ಲಿ ಶೀಲವೆನ್ನುವ ಪಾಶ ಜೀವನ್ನು ಸುತ್ತಿದೆ. ಹೊರಗೆ ಕಾಣುವ ವ್ರತ, ಒಳಗೆ ಇರುವ ಅರಿವು ಎರಡೂ ಒಂದು ಕಟ್ಟು, ಒಕ್ಕಟ್ಟು, ಆದರಲ್ಲಿ ಅದು ಆಚಾರವೇ ಪ್ರಾಣವಾದ ಇಷ್ಟದೈವದ ನೆಲೆ.
ಅಕ್ಕಮಹಾದೇವಿ, ಸತ್ಯಕ್ಕ, ಗಜೇಶ ಮಸಣಯ್ಯ, ಉರಿಲಿಂಗದೇವರಂತಲ್ಲದೆ ಬೇರೆಯ ದಾರಿಯನ್ನು ಹಿಡಿದು ಸಾಗುವುದನ್ನು ಅಕ್ಕಮ್ಮನವರ ವಚನಗಳು ಹೇಳುತ್ತವೆ. ಇದು ಆ ಬಗೆಯ ಅನೇಕ ವಚನಗಳ ಪ್ರತಿನಿಧಿಯಂತೆ ಇವೆ. ಆಚಾರವೆಂಬುದು ಹೊರಗಿನ ಸಂಗತಿ, ಲೋಕದ ಕಣ್ಣಿಗೆ ಕಾಣುವ ವ್ರತ, ನೇಮ ಇತ್ಯಾದಿ. ಅಂಥವನ್ನು ಮಾಡುವುದೇಕೆ ಅಂದರೆ ಮನಸು ಬಲಹೀನ ಅನ್ನುವ ಸಂದೇಹದ ಕಾರಣ. ಸ್ವತಂತ್ರವಾಗಿ ವರ್ತಿಸಲು ದೇಹ ಹಿಂಜರಿಯುವುದರಿಂದ ಮನಸು ಎಲ್ಲೆಲ್ಲೋ ಅಲೆದಾಡುವ ಬಲಹೀನತೆ ತೋರುತ್ತದೆ. ಮನಸ್ಸು, ದೇಹ ಒಟ್ಟಿಗೆ ಇರಬೇಕಾದದ್ದು ಪ್ರಕೃತಿ. ಹಾಗೆ ಒಂದಾಗಿ ಇರಬೇಕು ಅನ್ನುವ ಒತ್ತಾಯವೇ ಶೀಲವಾಗಿ ಪ್ರಾಣ ಹಿಂಡುವ ಪಾಶ. ಒಳಗಿನ ಅರಿವು, ಹೊರಗಿನ ಆಚಾರ ಒಂದೇ ಆದರೆ ಅದು ಇಷ್ಟ ದೈವ ನೆಲೆಸುವ ತಾವು. ಈ ವಚನವು ಎಲ್ಲರಲ್ಲೂ ಹುಟ್ಟುವ ಮನಸು-ದೇಹ-ಸಹಜತೆಗಳ ಪ್ರಶ್ನೆಯನ್ನು ಪರಿಶೀಲಿಸುವಂತೆ ತೋರುತ್ತದೆ.
ಆಚರಣೆಗಳ ಹಿಂದೆ ಇರುವುದು ಮನಸ್ಸು ದೇಹಗಳ ದ್ವಂದ್ವವನ್ನು ನೀಗುವ ಉದ್ದೇಶವಿರಬಹುದು. ಅದು ವ್ರತದ ಕಟ್ಟು ಪಾಡು,ಹೇರಿದ ಶೀಲವಾದಲ್ಲಿ ಫಲವಿಲ್ಲ. ದ್ವಂದ್ವವಿರದ ಸ್ಥಿತಿ ಇದ್ದರೆ ಅದು ದೈವತ್ವ ಅನ್ನುವಂತೆ ತೋರುತ್ತದೆ. ಹಟ ಹಿಡಿದಾದರೂ ಅ-ಖಂಡವಾಗುವ ಆಸೆ ಇದು.
ಅಕ್ಕಮ್ಮ
ಈಕೆಯ ಹೆಸರು ರೆಮ್ಮವ್ವೆ ಇರಬಹುದೇ? ಈಕೆ ಏಲೇಶ್ವರ ಕೇತಯ್ಯ ಎಂಬ ವಚನಕಾರನ ಪತ್ನಿಯೋ, ಪುಣ್ಯಸ್ತ್ರೀಯೋ ಇರಬಹುದೇ? ಎಂಬಂಥ ಪ್ರಶ್ನೆಗಳಿವೆ, ಈಕೆಯ ಬದುಕನ್ನು ಕುರಿತು ಖಚಿತ ವಿವರಗಳು ದೊರೆತಿಲ್ಲ. ಅಕ್ಕಮ್ಮನ ೧೫೪ ವಚನ ರಚನೆಗಳು ʻಆಚಾರವೆ ಪ್ರಾಣವಾದ ರಾಮೇಶ್ವರ ಲಿಂಗʼ ಎಂಬ ಅಂಕಿತದೊಡನೆ ಪ್ರಕಟವಾಗಿವೆ. ಆಚಾರ,ವ್ರತ,ಶೀಲಗಳ ಬಗ್ಗೆ ಬಹಳವಾಗಿ ಚಿಂತಿಸುವ ಅಕ್ಕಮ್ಮ ಅಕ್ಕಮಹಾದೇವಿ ಹಿಡಿದ ದಾರಿಯ ಬಗ್ಗೆ ಒಲವಿಲ್ಲದ ವ್ಯಕ್ತಿ ಎಂಬ ಸೂಚನೆ ಅಲ್ಲಲ್ಲಿ ದೊರೆಯುತ್ತದೆ.

