Sex ಮತ್ತು gender ಗಳ ವ್ಯತ್ಯಾಸವೇ ಇನ್ನೂ ಸ್ಪಷ್ಟವಾಗದಿರುವ ಈ ಕಾಲಮಾನಕ್ಕೆ ಈ ವಚನದ ಧೋರಣೆ ಅಚ್ಚರಿ ಹುಟ್ಟಿಸಬಹುದು.… । ಓ.ಎಲ್.ನಾಗಭೂಷಣ ಸ್ವಾಮಿ
ಮೊಲೆ ಮುಡಿ ಬಂದಡೆ ಹೆಣ್ಣೆಂಬರು
ಮೀಸೆಕಾಸೆ ಬಂದಡೆ ಗಂಡೆಂಬರು
ಈ ಉಭಯದ ಜ್ಞಾನ ಹೆಣ್ಣೂ ಗಂಡೊ ನಾಸ್ತಿನಾಥಾ
[ಕಾಸಿ-ಗಂಡಸರು ಸೊಂಟಕ್ಕೆ ಕಟ್ಟಿಕೊಳ್ಳುವ ವಸ್ತ್ರ; ಕೀಸು-ನುಣುಪಾಗಿ ಮೂಡು, ಸವರಿಕೊ]
ಗಂಡು ಮತ್ತು ಹೆಣ್ಣು ಎಂಬುದಕ್ಕೆ ಕಣ್ಣಿಗೆ ಕಾಣುವ ದೇಹದ ವ್ಯತ್ಯಾಸಗಳಷ್ಟೇ ಕಾರಣ. ಅದರ ಆಧಾರದ ಮೇಲೆ ಉಳಿದೆಲ್ಲ ಸ್ವಭಾವ, ಕಟ್ಟುಪಾಡು, ಒಡೆತನ, ಇತ್ಯಾದಿಗಳೆಲ್ಲವೂ ನಿರ್ಧಾರವಾಗುತ್ತದೆ. ಗಂಡು ಹೆಣ್ಣು ಇಬ್ಬರೂ ಭಿನ್ನ ಎಂಬ ವ್ಯತ್ಯಾಸದ ಜ್ಞಾನ ಸಮಾನವಲ್ಲವೇ? ಬೇರೆತನದ ಅರಿವಿಗೆ ಗಂಡು ಹೆಣ್ಣು ಅನ್ನುವ ಭೇದವಿಲ್ಲ. ಈ ಮೂಲ ಜ್ಞಾನ ತೀರ ಸಮಾನ್ಯ ಜ್ಞಾನವಲ್ಲವೇ? ಗಂಡು-ಹೆಣ್ಣು ಎಂಬ ಸಹಜ ವ್ಯತ್ಯಾಸ, ಅದಕ್ಕೆ ಇರುವ ಪ್ರತ್ಯಕ್ಷ ಪ್ರಮಾಣ ಮತ್ತು ಗಂಡುತನ, ಹೆಣ್ಣುತನವೆಂಬ ಕಲ್ಪಿತ ವಾದ ಅಧಿಕಾರ/ಅಧೀನತೆ, ಮೇಲು/ಕೀಳು ಧೋರಣೆ ಇವನ್ನೆಲ್ಲ ಸಹಜ ಮಾತಿನ ಧಾಟಿಯಲ್ಲೇ ಈ ವಚನ ಅಲ್ಲಗಳೆಯುತ್ತದೆ. Sex ಮತ್ತು gender ಗಳ ವ್ಯತ್ಯಾಸವೇ ಇನ್ನೂ ಸ್ಪಷ್ಟವಾಗದಿರುವ ಈ ಕಾಲಮಾನಕ್ಕೆ ಈ ವಚನದ ಧೋರಣೆ ಅಚ್ಚರಿ ಹುಟ್ಟಿಸಬಹುದು.
ಗೊಗ್ಗವ್ವೆ
ಶಿವಭಕ್ತರಿಗೆ ಧೂಪ ಒದಗಿಸುವ ಕೆಲಸ ಮಾಡುತ್ತಿದ್ದ ಮಹಿಳೆ. ಕೇರಳದ ಆವಲೂರು ಈಕೆಯ ಸ್ಥಳ. ತಂದೆತಾಯಿಯರು ಗೊಗ್ಗವ್ವೆಯ ಮದುವೆಗೆ ಸಿದ್ಧಮಾಡಿಕೊಳ್ಳುತ್ತಿರುವಾಗ ಹುಟ್ಟಾ ವಿರಾಗಿಣಿಯಾದ ಆಕೆ ಶಿವಾಲಯಕ್ಕೆ ಹೋಗಿ ಅಡಗಿದಳು. ತಂದೆತಾಯಿಯರು ಅವಳ ಇಚ್ಛೆಗೆ ಮಣಿದರು. ಸ್ವತಃ ಶಿವನೇ ಮದುವೆಯ ಗಂಡಾಗಿ ಬಂದರೂ ಗೊಗ್ಗವ್ವೆ ಒಪ್ಪಲಿಲ್ಲ. ಭಕ್ತಿರಿಗೆ ಧೂಪ ಒದಗಿಸುತ್ತ ಬಾಳು ಎಂದು ಹರಸಿದ. ಮುಂದೆ ಆಕೆಯ ಧೂಪದ ಹೊಗೆಯ ದಾರಿಯನ್ನೇ ಹಿಡಿದು ಕೋಡುಗಲ್ಲೂರಿನ ದೊರೆ ಚೇರಮರಾಯ ಕೈಲಾಸ ಸೇರಿದ ಎಂಬ ಕಥೆಗಳಿವೆ. ಗೊಗ್ಗವ್ವೆ ರಚಿಸಿರುವ, ನಾಸ್ತಿನಾಥ ಎಂಬ ಅಂಕಿತದ ೬ ವಚನಗಳು ಪ್ರಕಟವಾಗಿವೆ.

