ಅನುಭಾವ ಅನ್ನುತ್ತೇವಲ್ಲಾ ಅದು ಎಷ್ಟು ಅಪರೂಪದ್ದು, ಅನುಭಾವ ಆಗಿದ್ದರೆ ಅದನ್ನು ಹೇಳುವುದು ಎಷ್ಟು ಕಷ್ಟ ಅನ್ನುವುದನ್ನು ಈ ವಚನ ಹೇಳುವಂತಿದೆ…। ಓ.ಎಲ್.ನಾಗಭೂಷಣ ಸ್ವಾಮಿ
ಅಂಬರದಲಾಡುವ ತುಂಬಿಯ
ಬಿಂಬದ ಕಂಬನಿಯೊಳಗಣ ರತ್ನದ ಬಯಕೆಯಾದ್ಯಂತವನೇನೆಂಬೆನಯ್ಯಾ
ವೇದ ಶಾಸ್ತ್ರ ಶ್ರುತಿಸ್ಮೃತಿಗಳು ಸ್ತುತಿಸಲರಿಯವು
ನಾದವಲ್ಲ ಸುನಾದದ ನಿಲವಲ್ಲ
ಭೇದಿಸುವಡೆ ಅಗಮ್ಯ ನೋಡಾ
ಸೊಲ್ಲಿಲ್ಲದ ಸೊಮ್ಮಿಲ್ಲದ ಘನವನೇನೆಂಬೆನು
ಎಂತು ಮರೆವೆನಯ್ಯಾ ಎನ್ನ ಅಜಗಣ್ಣ ತಂದೆಯನು [೫.೧೦೯೮]
[ಅಂಬರ-ಆಕಾಶ; ಬಯಕೆಯಾದ್ಯಂತವನೇನೆಂಬೆನಯ್ಯಾ-ಬಯಕೆಯ ಆದಿ ಅಂತ್ಯವನ್ನು ಏನೆಂಬೆ ಅಯ್ಯಾ; ಅಗಮ್ಯ-ಹೋಗಲಾಗದ, ಹೋಗಲು ಸಾಧ್ಯವಿರದ ಸ್ಥಳ; ಸೊಲ್ಲು-ದನಿ, ಶಬ್ದ; ಸೊಮ್ಮು-ಸಂಪತ್ತು, ತೋರಬಲ್ಲ ಚೆಲುವು; ಘನ-ಗಟ್ಟಿಗೊಂಡದ್ದು, ಬ್ರಹ್ಮ, ಪರಶಿವ]
ಆಕಾಶದಲ್ಲಿ ಆಡುವ ತುಂಬಿ. ಆ ತುಂಬಿಯ ಬಿಂಬ. ತುಂಬಿಯ ಬಿಂಬದ ಕಣ್ಣಿನಲ್ಲಿ ಕಂಬನಿ. ಆ ಕಂಬನಿಯೊಳಗೆ ಇರುವ ರತ್ನದ ಬಯಕೆ. ಈ ಬಯಕೆ ಹೇಗೆ ಯಾವಾಗ ಹುಟ್ಟಿತು, ಯಾವಾಗ ಮುಗಿಯುವುದೋ ಹೇಗೆ ಹೇಳಲಿ? ಆ ರತ್ನವನ್ನು ವೇದ, ಶಾಸ್ತ್ರ, ಸ್ಮೃತಿಗಳು ಹೊಗಳಿ ಪೂರೈಸಲಾರವು. ಅದು ನಾದವಲ್ಲ, ಓಂಕಾರವೂ ಅಲ್ಲ. ಅದನ್ನು ಭೇದಿಸಿ ತಿಳಿಯಲು ಅದಿರುವಲ್ಲಿ ಹೋಗಲು ಆಗದು. ಅದು ಸದ್ದಿರದ, ಕಂಡರೂ ಕಾಣದ ಘನ. ಅದನ್ನು ಸಾಧಿಸಿದ ಅಜಗಣ್ಣನನ್ನು ಹೇಗೆ ಮರೆಯಲಿ.
ಮುಕ್ತಾಯಕ್ಕ ತನ್ನ ಅಣ್ಣ ಅಜಗಣ್ಣನನ್ನೇ ಗುರುವೆಂದು ನಂಬಿ ಸಾಧನೆ ಮಾಡಿದ ವ್ಯಕ್ತಿ. ಈ ವಚನವನ್ನು ಅಜಗಣ್ಣನ ವ್ಯಕ್ತಿತ್ವದ ವರ್ಣನೆಯಾಗಿಯೂ ನೋಡಬಹುದು, ಆಕೆ ಸಾಧಿಸಲು ಬಯಸುವ ಅನುಭಾವೀ ದರ್ಶನದ ವರ್ಣನೆಯಾಗಿಯೂ ನೋಡಬಹುದು. ಅಕ್ಷರಶಃ ಅರ್ಥಮಾಡಿಕೊಂಡರೂ ಈ ವಚನ ಬೆರಗು ಹುಟ್ಟಿಸುತ್ತದೆ. ವಿಶಾಲವಾದ ಆಕಾಶದಲ್ಲಿ ಒಂದು ದುಂಬಿ, ಅಥವಾ ದುಂಬಿಯ ಬಿಂಬ. ಆ ಬಿಂಬದ ಕಣ್ಣಲ್ಲಿ ರತ್ನದ ಹಾಗೆ ಇರುವ ಕಂಬನಿ. ಆ ಅಪೂರ್ವ ರತ್ನ ಬೇಕು ಅನ್ನುವ ಆಸೆ ನನ್ನಲ್ಲಿ ಯಾವಾಗ ಹುಟ್ಟಿತೋ, ಹೇಗೆ ಕೊನೆಯಾಗುವುದೋ ಹೇಗೆ ಹೇಳಲಿ? ಆ ಅಪೂರ್ವ ರತ್ನದ ಬಯಕೆ ನನ್ನ ಅಣ್ಣ/ಗುರು ಅಜಗಣ್ಣನಿಗೆ ಹೇಗೆ ಹುಟ್ಟಿತೋ, ಮುಗಿಯಿತೋ ಹೇಗೆ ಹೇಳಲಿ? ಆ ಅಪೂರ್ವ ರತ್ನವನ್ನು ವೇದ, ಶಾಸ್ತ್ರ, ಸ್ಮೃತಿ- ಯಾವುವೂ ವರ್ಣಿಸಲಾರವು. ಸೃಷ್ಟಿಗೂ ಮುನ್ನದ ಪರಶಿವನಲ್ಲಿ ಉಂಟಾಗುವ ಸ್ಫುರಣೆ ಅಥವ ನಾದವಾಗಲೀ, ಸುನಾದವಾಗಲೀ ಅಲ್ಲ ಅದು. ಅದನ್ನು ತಿಳಿಯಲಾದು. ಅದು ಇರುವಲ್ಲಿಗೆ ಹೋಗಲಾಗದು. ಮೌನವೇ ತಾನಾಗಿರುವ ಘನ ಅದು. ಅದು ಇದ್ದರೂ ತೋರಿಸಿಕೊಳ್ಳುವುದಿಲ್ಲ. ಅದನ್ನು ನಾನು ಹೇಗೆ ಮರೆಯಲಿ/ ಅದನ್ನು ಸಾಧಿಸಿದ ಅಜಗಣ್ಣನನ್ನು ಹೇಗೆ ಮರೆಯಲಿ?
ಅನುಭಾವ ಅನ್ನುತ್ತೇವಲ್ಲಾ ಅದು ಎಷ್ಟು ಅಪರೂಪದ್ದು, ಅನುಭಾವ ಆಗಿದ್ದರೆ ಅದನ್ನು ಹೇಳುವುದು ಎಷ್ಟು ಕಷ್ಟ ಅನ್ನುವುದನ್ನು ಈ ವಚನ ಹೇಳುವಂತಿದೆ. ಸೊಲ್ಲು ಇರದ, ಸೊಮ್ಮು ಇರದ ಎಂಬ ಎರಡು ಕನ್ನಡ ನುಡಿಗಳೇ ʻಘನʼ ಅಥವಾ ʻದೇವರುʼ ಅಥವಾ ʻಅನುಭಾವʼದ ಸ್ವರೂಪವನ್ನು ಹೇಳುತ್ತವೆ. ಇದರಲ್ಲಿ ಬರುವ ಎಲ್ಲ ಅಂಶಗಳಿಗೂ ಬೆಡಗಿನ ವಚನದ ರೀತಿಯಲ್ಲಿ ಅರ್ಥವಿವರಣೆ ಮಾಡಬಹುದು. ಆದರೆ ಅದು ನಿರ್ಜೀವವಾಗುತ್ತದೆ, ಇಂಥ ವಚನಗಳ ವಾಚ್ಯಾರ್ಥದ ಸುತ್ತಮುತ್ತಲಿನಲ್ಲೇ ಸುಳಿದಾಡುತ್ತ ವಚನದ ಅರ್ಥ ಮನಸಿನೊಳಗೆ ಬೆಳೆಯಲು ಬಿಡುವುದು ಸೂಕ್ತ ಅನಿಸುತ್ತದೆ.
ಮುಕ್ತಾಯಕ್ಕ
ಲಕ್ಕುಂಡಿ ಎಂಬ ಊರಿನ ವಚನಕಾರ್ತಿ. ಅಜಗಣ್ಣನ ತಂಗಿ. ಮುಕ್ತಾಯಕ್ಕ ರಚಿಸಿರುವ ೩೭ ವಚನಗಳು ದೊರೆತಿವೆ. ಶೂನ್ಯ ಸಂಪಾದನೆಗಳಲ್ಲಿ ಅಲ್ಲಮ ಮತ್ತು ಮುಕ್ತಾಯಕ್ಕನ ಸಂವಾದ ಆರಂಭದಲ್ಲೇ ಬರುತ್ತದೆ ಈಕೆ ತನ್ನಣ್ಣ ಅಜಗಣ್ಣನನ್ನೇ ಗುರುವೆಂದು ನಂಬಿ ಸಾಧನೆ ಮಾಡಿದ ಹೆಣ್ಣುಮಗಳು. ಅನುಭಾವವು ಮಾತಿನಲ್ಲಿ ಹೇಳುವಂಥದಲ್ಲ, ಅದು ಶುದ್ಧಾಂಗವಾಗಿ ವೈಯಕ್ತಿಕ ಎಂಬುದು ಆಕೆಯ ನಿಲುವು. ಅಲ್ಲಮನಷ್ಟೇ ಪ್ರಖರವಾಗಿ ವಿಷಯ ಮಂಡನೆ ಮಾಡಿರುವುದನ್ನು ಈಕೆಯ ವಚನಗಳಲ್ಲಿ ಕಾಣುತ್ತೇವೆ. ಅನುಭಾವವೂ ಜ್ಞಾನದ ಮಾರ್ಗ ಎಂದು ಅಲ್ಲಮ ಈಕೆಯ ಮನ ಒಲಿಸುತ್ತಾನೆ. ಈ ಮನವೊಲಿಸುವಿಕೆ ಇರದಿದ್ದರೆ ಶೂನ್ಯಸಂಪಾದನೆಗೆ ತಳಹದಿಯೇ ಇರುತ್ತಿರಲಿಲ್ಲ. ಅನುಭಾವವನ್ನು ಕುರಿತು ಮಾತಾಡುವ ಅಗತ್ಯವನ್ನು ಅಲ್ಲಮನ ವಚನಗಳಲ್ಲಿ ಕಂಡರೆ ಮಾತಿಗೆ ಒಗ್ಗದ ತೀವ್ರಾನುಭವ ಮುಕ್ತಾಯಕ್ಕನವರ ರಚನೆಗಳಲ್ಲಿದೆ.

