ಗಾಲಿಬ್ ಮತ್ತು ನಸೀರ್: Coffeehouse ಕತೆಗಳು

ಕನ್ನಡಕ್ಕೆ: ಚಿದಂಬರ ನರೇಂದ್ರ

ಬಹಳ ವರ್ಷಗಳ ಹಿಂದೆ ಗಾಲೀಬ್ ನ ಜೀವನ ಮತ್ತು ಅವನ ಕೆಲವು ಗಝಲ್ ಗಳನ್ನು ಆಧರಿಸಿ ಒಂದು ಮೂರು ಘಂಟೆಗಳ ಸಿನೇಮಾ ಮಾಡಬೇಕು ಎನಿನುವ ಯೋಚನೆ ನನ್ನ ತಲೆಯಲ್ಲಿ ಬಂತು. ಮತ್ತು ಗಾಲೀಬ್ ನ ಪಾತ್ರಕ್ಕೆ ನನ್ನ ಅಚ್ಚುಮೆಚ್ಚಿನ ನಟ ಸಂಜೀವ್ ಕುಮಾರ್ ನ ಹೊರತಾಗಿ ಬೇರೆ ಯಾರೂ ಸರಿ ಹೊಂದುವುದಿಲ್ಲ ಎನ್ನುವುದು ನನ್ನ ಅಭಿಮತವಾಗಿತ್ತು. ಆದರೆ ಕಾರಣಾಂತರಗಳಿಂದ ನನಗೆ ಆಗ ಆ ಸಿನೇಮಾ ಮಾಡಲಾಗಲಿಲ್ಲ. ಆದರೂ ನಾನು ಗಾಲೀಬ್ ನ ಮೇಲೆ ಕೆಲಸ ಮಾಡುವುದನ್ನ ಮುಂದುವರೆಸಿದೆ. ಸುಮಾರು ಹನ್ನೆರಡು ವರ್ಷಗಳ ಕಾಲ ನಾನು ಗಾಲೀಬ್ ನ ಮೇಲೆ ಕೆಲಸ ಮಾಡಿದೆ.

ಮುಂದೊಮ್ಮೆ ಮಿರ್ಜಾ ಗಾಲೀಬ್ ನ ಕಥೆಯನ್ನ ಟಿ ವಿ ಗಾಗಿ ಸೀರಿಯಲ್ ಮಾಡಬೇಕು ಎನ್ನುವ ಪ್ರಸ್ತಾಪ ಬಂದಾಗ, ನನ್ನ ಪ್ರೀತಿಯ ನಟ ಸಂಜೀವ್ ಕುಮಾರ್ ಬದುಕಿರಲಿಲ್ಲ. ಈಗ ಯಾರಾದರೂ ಆ ಪಾತ್ರ ಮಾಡಬಲ್ಲರಾದರೆ ಅದು ನಸೀರುದ್ದೀನ್ ಶಾ ಮಾತ್ರ ಎಂದು ನಾನು ನನ್ನ ಆಯ್ಕೆಯನ್ನು ನಿರ್ಮಾಪಕರಿಗೆ ತಿಳಿಸಿದೆ. ಆದರೆ ಅವರಿಗೆ ಯಾಕೋ ನನ್ನ ಆಯ್ಕೆ ಹಿಡಿಸಲಿಲ್ಲ, ಆ ಕಾಲದಲ್ಲಿ ಚಾಲ್ತಿಯಲ್ಲಿದ್ದ ಸುಂದರ ನಟ ಅವರ ಮನಸ್ಸಲ್ಲಿದ್ದ. ಆದರೂ ನನ್ನ ಹಟಕ್ಕೆ ಮಣಿದು ಅವರು ಈ ಪಾತ್ರಕ್ಕಾಗಿ ನಸೀರ್ ನ ಸಂಪರ್ಕಿಸಿದರು. ಪಾತ್ರ ಮಾಡಲು ನಸೀರ್ ಒಪ್ಪಿಕೊಂಡನೇನೋ ನಿಜ  ಆದರೆ ಆ ಪಾತ್ರಕ್ಕಾಗಿ ಬಹಳ ದೊಡ್ಡ ಮೊತ್ತವನ್ನು ಬೇಡಿದ. ಆ ಕಾಲಕ್ಕೆ ಆ ಮೊತ್ತ ನಟರಿಗೆ ಸಿಗದ ಬಹು ದೊಡ್ಡ ಸಂಭಾವನೆಯಾಗಿತ್ತು. ನಿರ್ಮಾಪಕರು ಹತಾಶೆಯಿಂದ ಈ ಸುದ್ದಿಯನ್ನು ನನಗೆ ತಿಳಿಸಿದರು.

ಒಂದು ದಿನ ನಾನು ನನ್ನ ಆಫೀಸಿನಲ್ಲಿ ಆ ನಿರ್ಮಾಪಕರೊಂದಿಗೆ ಮಾತನಾಡುತ್ತ ಕುಳಿತಿದ್ದೆ. ಧಿಡೀರನೇ ನಸಿರುದ್ದೀನ್ ಶಾ ಒಳಗೆ ಬಂದ. “ಗುಲ್ಜಾರ್ ಭಾಯಿ ನೀವು ಮಿರ್ಜಾ ಗಾಲೀಬ್ ಸೀರಿಯಲ್ ಮಾಡ್ತಿದಿರಂತೆ,  ನಿಮಗೆ ಗೊತ್ತಾ ನಾನು ಸೆಂಟ್ ಸ್ಟೀಫನ್ ಕಾಲೇಜಿನಲ್ಲಿ ಓದ್ತಾ ಇದ್ದಾಗ ನಿಮಗೊಂದು ಪತ್ರ ಬರೆದಿದ್ದೆ. ಸಂಜೀವ್ ಕುಮಾರ್ ಬಹಳ ದಪ್ಪ ಇದ್ದಾನೆ. ಅವ ಒಳ್ಳೆಯ ನಟನಾದರೂ ಈ ಪಾತ್ರಕ್ಕೆ  ಸೂಟ್ ಆಗಲ್ಲ, ಸ್ವಲ್ಪ ವರ್ಷ ಕಾಯಿರಿ, ನಾನು ಹಿಂದೀ ಸಿನೇಮಾಕ್ಕೆ ಆದಷ್ಟು ಬೇಗ ಎಂಟ್ರಿ ಕೊಡ್ತೀನಿ, ನಾನೇ ಆ ಪಾತ್ರ ಮಾಡಬೇಕು”. 

“ನನಗೆ ಅಂಥ ಯಾವ ಪತ್ರವೂ ಸಿಕ್ಕಿಲ್ಲ” ನಾನು ಹೇಳಿದಾಗ, “ಬಹುಶ ಆ ಪತ್ರ ನಿಮ್ಮ ಫ್ಯಾನ್ ಲೆಟರ್ ಗಳ ಮಧ್ಯೆ ಕಳೆದು ಹೋಗಿರಬಹುದು. ಆದರೆ  ನಾನು ಇವತ್ತು ಹೇಳ್ತೀನಿ ಕೇಳಿ, ಈ ಪಾತ್ರ ನಾನೇ ಮಾಡಬೇಕು. ಬೇರೆ ಯಾರಿಗೂ ಈ ಪಾತ್ರ ಮಾಡಲುಟ ನಾನು ಬಿಡುವುದಿಲ್ಲ. ಮತ್ತು ಇನ್ನೊಂದು ಮಾತು ಈ ಪಾತ್ರ ನಾನೇ ಮಾಡೋದು ಮತ್ತು ನಾನು ಕೇಳಿರುವ ಸಂಭಾವನೆಯಲ್ಲಿ ನಾನು ಒಂದು ಪೈಸಾ ಕೂಡ ಕಡಿಮೆ ಮಾಡುವುದಿಲ್ಲ” ಹೀಗೆ ಹೇಳಿದವನೇ ನಸೀರ್ ಅಲ್ಲಿಂದ ಹೊರಟು ಬಿಟ್ಟ.

“ಎಂಥ ಧಿಮಾಕು ಇದು” ನಿರ್ಮಾಪಕರು ಗಾಬರಿಯಾದರು. ಆಗ ನಾನು ಹೇಳಿದೆ, “ಹೀಗೆ ಧಿಮಾಕು ಕೇವಲ ಗಾಲೀಬ್ ಮಾಡಬಲ್ಲ, ಈಗ ಮಾತಾಡಿದವ ನಸೀರ್ ಅಲ್ಲ, ಅದು ಗಾಲೀಬ್. ಬೇಕಾದರೆ ನನಗೆ ಕೊಡಬೇಕಾದ ಹಣ ಕೊಡಬೇಡಿ, ಎಲ್ಲ ಹಣವನ್ನು ಅವನಿಗೇ ಕೊಡಿ. ನಸೀರ್ ನೇ ಗಾಲೀಬ್ ಪಾತ್ರ ಮಾಡಬೇಕು, ಇಲ್ಲವಾದರೆ ನಾನು ಈ ಸೀರಿಯಲ್ ಮಾಡಲ್ಲ”.

********************************

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.