ನ್ಯೂಟನ್ ಗುರುತ್ವಾಕರ್ಷಣೆಯ ನಿಯಮ ಕಂಡುಹಿಡಿದ ರೋಚಕ ಕತೆಯನ್ನು ಕಲಿಸಲಾಗುತ್ತದೆ. ಆದರೆ ನಿಜದಲ್ಲಿ ಆದದ್ದು ಬೇರೆಯೇ ಸಂಕೀರ್ಣ ಸಂಗತಿ… | ಚಿದಂಬರ ನರೇಂದ್ರ
ನಮ್ಮ ಶಾಲೆಗಳ ಪಠ್ಯ ಪುಸ್ತಕಗಳಲ್ಲಿ ಐಸಾಕ್ ನ್ಯೂಟನ್ ಮರದ ಕೆಳಗೆ ಕುಳಿತಿರುವಾಗ ಅವನ ತಲೆ ಮೇಲೆ ಸೇಬು ಬೀಳುವುದು ಮತ್ತು ಇದರಿಂದ ಪ್ರೇರಿತನಾಗಿ ಅವನು ಗುರುತ್ವಾಕರ್ಷಣೆಯ ನಿಯಮ ಕಂಡುಹಿಡಿದ ರೋಚಕ ಕತೆಯನ್ನು ಕಲಿಸಲಾಗುತ್ತದೆ. ಆದರೆ ನಿಜದಲ್ಲಿ ಆದದ್ದು ಬೇರೆಯೇ ಸಂಕೀರ್ಣ ಸಂಗತಿ.
1683 ಯ ಸಂಜೆ ಲಂಡನ್ ನ ಕಾಫೀ ಹೌಸ್ ನಲ್ಲಿ ಮೂವರು ವಿಜ್ಞಾನಿಗಳು ಕ್ರಿಸ್ಟೋಫರ್ ರೆನ್, ಎಡ್ಮಂಡ್ ಹ್ಯಾಲಿ ಮತ್ತು ರಾಬರ್ಟ್ ಹುಕ್ ಕಾಫೀ ಕುಡಿಯುತ್ತ, ಚರ್ಚಿಸುತ್ತ ಕುಳಿತಿದ್ದರು. ಆಗ ಒಂದು ವಿಷಯ ಚರ್ಚೆಗೆ ಬಂತು, ಗ್ರಹಗಳು ಸೂರ್ಯನ ಸುತ್ತ ಎಲಿಪ್ಟಿಕಲ್ ಪಥದಲ್ಲಿಯೇ ಯಾಕೆ ಸುತ್ತುತ್ತವೆ? ಎನ್ನುವುದು ಆ ಪ್ರಶ್ನೆ. ರಾಬರ್ಟ ಹುಕ್ ಸೊಕ್ಕಿನಿಂದ ಹೇಳಿದ, “ಈ ಪ್ರಶ್ನೆಯ ಉತ್ತರ ನನಗೆ ಗೊತ್ತು ಆದರೆ ಈಗಲೇ ನಾನು ಈ ಬಗ್ಗೆ ಏನೂ ಹೇಳುವುದಿಲ್ಲ”. ಎಡ್ಮಂಡ್ ಹ್ಯಾಲಿಗೆ ಗೊತ್ತಿತ್ತು ರಾಬರ್ಟ್ ಹುಕ್ ಗೆ ಸುಮ್ಮನೇ ಕ್ರೆಡಿಟ್ ತೆಗೆದುಕೊಳ್ಳುವ ಚಟ ಇದೆಯೆಂದು, ಮತ್ತು ಈ ಬಗ್ಗೆ ಎಡ್ಮಂಡ್ ಮತ್ತೆ ಹುಕ್ ನ ಪ್ರಶ್ನೆ ಮಾಡಲು ಹೋಗಲಿಲ್ಲ.
ಮುಂದಿನ ವರ್ಷ ಎಡ್ಮಂಡ್ ಇದೇ ಪ್ರಶ್ನೆಯೊಂದಿಗೆ ನ್ಯೂಟನ್ ನ ಭೇಟಿ ಮಾಡಿದ. ಆದರೆ ನ್ಯೂಟನ್ ನ ಸಮಸ್ಯೆಗಳು ಬೇರೆಯೇ ಇದ್ದವು. ಅವನು ಜಿನಿಯಸ್ ಏನೋ ಇದ್ದ ಆದರೆ ಬಹಳ ವಿಚಿತ್ರ ವ್ಯಕ್ತಿಯಾಗಿದ್ದ. ಇದರ ಹಿಂದಿನ ಕಾರಣವೆನೆಂದರೆ, ನ್ಯೂಟನ್ ಹುಟ್ಟುವ ಮೊದಲೇ ಅವನ ತಂದೆ ತೀರಿಕೊಂಡಿದ್ದ ಮತ್ತು ಅವನ ತಾಯಿ ಅವನನ್ನು ಚಿಕ್ಕಂದಿನಲ್ಲಿಯೇ ಮಲತಂದೆಯ ಸುಪರ್ದಿಗೆ ಬಿಟ್ಟಿದ್ದಳು. ಹಾಗಾಗಿ ನ್ಯೂಟನ್ ಎಲ್ಲರನ್ನೂ ತನ್ನ ವೈರಿಗಳೆಂದು ತಿಳಿದುಕೊಂಡಿದ್ದ ಮತ್ತು ಯಾವಾಗಲೂ ಅವನನ್ನು ಒಂಟಿತನ ಕಾಡುತ್ತಿತ್ತು. ಒಮ್ಮೆ ಅವನು ರಾಯಲಿ ಸೊಸೈಟಿಯಲ್ಲಿ ಸಂಶೋಧನಾ ಪೇಪರ್ ಒಂದನ್ನ ಮಂಡಿಸಲು ಪ್ರಯತ್ನ ಮಾಡಿದ ಆದರೆ ರಾಬರ್ಟ ಹುಕ್ ಅಲ್ಲಿಗೆ ಬಂದು ಆ ಸಂಶೋಧನೆಯ ಕ್ರೆಡಿಟ್ ತೆಗೆದುಕೊಳ್ಳಲು ಪ್ರಯತ್ನ ಮಾಡಿದ್ದ. ಹಾಗಾಗಿ ನ್ಯೂಟನ್, ರಾಬರ್ಟ್ ಹುಕ್ ನೊಂದಿಗೂ ಜಗಳಾಡಿದ್ದ. ಆದ್ದರಿಂದ ಅವನು ತನ್ನ ಎಲ್ಲ ಸಂಶೋಧನೆಯನ್ನು ಬಚ್ಚಿಡುತ್ತಿದ್ದ. ಅವನು ಕ್ಯಾಲ್ಕುಲಸ್ ನ ಅವಿಷ್ಕಾರ ಮಾಡಿದ್ದ ಆದರೆ, ಅದನ್ನು ಇಡೀ ಜಗತ್ತಿನಿಂದ ಮುಚ್ಚಿಟ್ಟ. ಆಪ್ಟಿಕ್ಸ್ ವಿಷಯದಲ್ಲಿ ಬಹಳ ಮೂಲಭೂತ ಸಂಶೋಧನೆಯನ್ನು ಮಾಡಿದ ಆದರೆ ಅದನ್ನೂ ಎಲ್ಲರಿಂದ ಮುಚ್ಚಿಟ್ಟ. ಅಲ್ಕೆಮಿಯಲ್ಲಿಯೂ ಅವನಿಗೆ ವಿಶೇಷ ಪರಿಣಿತಿಯಿತ್ತು, ಪಾದರಸದಿಂದ ಚಿನ್ನ ತಯಾರಿಸುವ ದಿಕ್ಕಿನಲ್ಲಿ ಬಹಳಷ್ಟು ಪ್ರಯೋಗಗಳನ್ನು ಮಾಡಿದ್ದ, ಅದನ್ನು ಕೂಡ ಜನರ ಕಣ್ಣಿಂದ ಮುಚ್ಚಿಟ್ಟಿದ್ದ.
ಇಂಥ ವಿಚಿತ್ರ ವ್ಯಕ್ತಿಯ ಬಳಿ ಹೋಗಿ ಎಡ್ಮಂಡ್ ಹ್ಯಾಲಿ ಗ್ರ್ಯಾವಿಟಿ, inverse square law ನ ಫಾಲೋ ಮಾಡಿದರೆ, ಗ್ರಹಗಳ ಪಥ ಹೇಗಿರುತ್ತದೆಯೆಂದು ಪ್ರಶ್ನೆ ಮಾಡಿದಾಗ, ನ್ಯೂಟನ್ “ಎಲಿಪ್ಸ್” ಎಂದು ಥಟ್ಟನೇ ಉತ್ತರ ನೀಡಿದ್ದ. ನ್ಯೂಟನ್ ನ ಉತ್ತರದಿಂದ ಚಕಿತನಾದ ಹ್ಯಾಲಿ, ನಿನ್ನ ಉತ್ತರಕ್ಕೆ ಪ್ರೂಫ್ ಏನು ಎಂದು ಕೇಳಿದಾಗ, ಹಿಂದೊಮ್ಮೆ ಈ ಬಗ್ಗೆ ಆಲೋಚನೆ ಮಾಡಿದ್ದೆ ಸ್ವಲ್ಪ ಸಮಯ ಕೊಟ್ಟರೆ ಇದನ್ನು ಪ್ರೂವ್ ಮಾಡುತ್ತೇನೆ ಎಂದು ಉತ್ತರಿಸಿದ್ದ.
ಮುಂದಿನ ಎರಡೂವರೆ ವರ್ಷಗಳ ಕಾಲ ಜಗತ್ತಿನಿಂದ ಮಾಯವಾಗಿ ಈ ವಿಷಯದ ಸಂಶೋಧನೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡ ನ್ಯೂಟನ್ ಈ ವಿಷಯ ಅಷ್ಟೇ ಅಲ್ಲ, laws of motion, Gravitational law ಗಳನ್ನೂ ರೂಪಿಸಿದ. ಮತ್ತು ಇದೇ ಅವಧಿಯಲ್ಲಿ ಅವನು ಪ್ರಿನ್ಸಿಪಿಯಾ ಎನ್ನುವ ಪುಸ್ತಕವನ್ನೂ ಬರೆದ. ಜನ ಅವನನ್ನು ಹೆಚ್ಚು ಪ್ರಶ್ನೆ ಮಾಡಬಾರದು ಎನ್ನುವ ಕಾರಣದಿಂದ ಅವನು ಬೇಕೆಂದೇ ಈ ಪುಸ್ತಕದಲ್ಲಿ ಸಂಕೀರ್ಣ ಗಣಿತದ ಸೂತ್ರಗಳನ್ನು ಮಂಡಿಸಿದ. ಈ ಥರದ ವಿಕ್ಷಿಪ್ತನಾಗಿದ್ದ ನ್ಯೂಟನ್.
ಪ್ರಿನ್ಸಿಪಿಯಾ ಪುಸ್ತಕವನ್ನು ಪ್ರಕಟಿಸುವ ಸಂಗತಿ ಎದುರಾದಾಗ ತನ್ನ ಬಳಿ ಹಣ ಇಲ್ಲವೆಂದು ರಾಯಲ್ ಸೊಸೈಟಿ ನಿರಾಕರಿಸಿಬಿಟ್ಟಿತು. ಆಗ ಸ್ವತಃ ಎಡ್ಮಂಡ್ ಹ್ಯಾಲಿ ತನ್ನ ಸ್ವಂತ ಹಣದಿಂದ ಈ ಪುಸ್ತಕವನ್ನು ಪ್ರಕಟಿಸಿದ. ಪುಸ್ತಕದ ಎರಡು volume ಪ್ರಕಟವಾದಾಗ ಕ್ರೆಡಿಟ್ ತೆಗೆದುಕೊಳ್ಳಲು ಮತ್ತೆ ರಾಬರ್ಟ್ ಹುಕ್ ಬಂದ. ಈ ಸಂಶೋಧನೆಯ ತಿರುಳನ್ನು ತಾನೇ ನ್ಯೂಟನ್ ಗೆ ಹೇಳಿದ್ದು ಎಂದು ಜಗಳ ತೆಗೆದ. ಇದರಿಂದಾಗಿ ಬೇಸರಗೊಂಡ ನ್ಯೂಟನ್ ಪುಸ್ತಕದ ಮೂರನೇ volume ಪ್ರಕಟನೆಗೆ ಕೂಡಲು ನಿರಾಕರಿಸಿದ. ಬಹಳ ಕಷ್ಟಪಟ್ಟು ಎಡ್ಮಂಡ್ ಹ್ಯಾಲಿ, ನ್ಯೂಟನ್ ನ ಒಪ್ಪಿಸಿ ಪ್ರಿನ್ಸಿಪಿಯಾದ ಮೂರನೇ volume ಪ್ರಕಟಿಸಿದ. ಈ ರೀತಿಯಿಂದ ಎಡ್ಮಂಡ್ ಹ್ಯಾಲಿ, ನ್ಯೂಟನ್ ನ laws of motion ಮತ್ತು Gravitational law ನ ಜಗತ್ತಿನ ಎದುರು ಪ್ರಸ್ತುತ ಪಡಿಸಿದ. ಮತ್ತು ಪ್ರಿನ್ಸಿಪಿಯಾ ಜಗತ್ತಿನ ಅತ್ಯಂತ ಪ್ರಸಿದ್ಧ ಪುಸ್ತಕವಾಗಿ ಹೆಸರುವಾಸಿಯಾಯಿತು. ಹಾಗೆ ನೋಡಿದರೆ ನ್ಯೂಟನ್ ಜೀನಿಯಸ್ ಆಗಿದ್ದ ನಿಜ; ಆದರೆ ಎಡ್ಮಂಡ್ ಹ್ಯಾಲಿ ಯಾವ ಹೀರೋಗಿಂತಲೂ ಕಡಿಮೆ ಇರಲಿಲ್ಲ.

