ವಚನ ವೈವಿಧ್ಯ#33 – ಹೀಗಿರಬೇಕು ಯೋಗ: ಮುಕ್ತಾಯಕ್ಕ

ಪರಮಾತ್ಮನೇ ಆಗಿರಲಿ, ಬಯಕೆಯ ವಸ್ತು ಯಾವುದೇ ಆಗಿರಲಿ, ಅದರೊಡನೆ ಒಂದಾಗುವುದು ಯೋಗ. ಅಂಥ ಯೋಗದ ವಿಚಿತ್ರ ಗುಣಲಕ್ಷಣಗಳನ್ನು ಮುಕ್ತಾಯಕ್ಕನ ವಚನ ವರ್ಣಿಸುತ್ತಿದೆ । ಓ.ಎಲ್.ನಾಗಭೂಷಣ ಸ್ವಾಮಿ

ಅಲರೊಳಡಗಿದ ಪರಿಮಳದಂತೆ
ಪತಂಗದೊಳಡಗಿದ ಅನಲನಂತೆ
ಶಶಿಯೊಳಡಗಿದ ಷೋಡಶಕಳೆಯಂತೆ
ಉಲುಹಡಗಿದ ವಾಯುವಿನಂತೆ
ಸಿಡಿಲೊಳಡಗಿದ ಗಾತ್ರದ ತೇಜದಂತೆ
ಇರಬೇಕಯ್ಯಾ ಯೋಗ
ಎನ್ನ ಅಜಗಣ್ಣತಂದೆಯಂತೆ [೫.೧೧೦೦]

[ಅಲರ್-ಹೂವು; ಅನಲ-ಬೆಂಕಿ; ಷೋಡಶ ಕಳೆ-ಚಂದ್ರನ ಹದಿನಾರು ಭಿನ್ನ ಅವಸ್ಥೆಗಳು; ಉಲುಹಡಗಿದ-ಉಲುಹು (ಸದ್ದು) ಅಡಗಿದ; ತೇಜ-ತೀಕ್ಷ್ಣತೆ, ಬೆಳಕು, ಪ್ರಭೆ]

ಹೂವಿನೊಳಗೆ ಅಡಗಿರುವ ಪರಿಮಳದ ಹಾಗೆ, ಪತಂಗದೊಳಗೆ ಅಡಗಿರುವ ಬೆಂಕಿಯ ಹಾಗೆ, ಚಂದ್ರನೊಳಗೆ ಇರುವ ಹದಿನಾರು ಕಳೆಯ ಹಾಗೆ, ಸದ್ದು ಅಡಗಿರುವ ಗಾಳಿಯ ಹಾಗೆ, ಸಿಡಿಲಿನೊಳಗೆ ಅಡಗಿರುವ ತೀಕ್ಷ್ಣವಾದ ಬೆಳಕಿನ ಪ್ರಭೆಯ ಹಾಗೆ ಇರಬೇಕು, ನನ್ನ ಅಜಗಣ್ಣ ಇದ್ದ ಹಾಗಿರಬೇಕು ಯೋಗ.

ಯೋಗವೆಂಬ ಮಾತಿಗೆ ಹಲವು ಅರ್ಥಗಳಿವೆ. ಆ ಎಲ್ಲ ಅರ್ಥಗಳಲ್ಲೂ ʻಕೂಡುವುದುʼ ಅಥವಾ ʻಒಂದಾಗುವುದುʼ ಎಂಬ ಕ್ರಿಯೆಯ ಛಾಯೆ ಇದ್ದೇ ಇದೆ. ಪರಮಾತ್ಮನೇ ಆಗಿರಲಿ, ಬಯಕೆಯ ವಸ್ತು ಯಾವುದೇ ಆಗಿರಲಿ, ಅದರೊಡನೆ ಒಂದಾಗುವುದು ಯೋಗ. ಅಂಥ ಯೋಗದ ವಿಚಿತ್ರ ಗುಣಲಕ್ಷಣಗಳನ್ನು ಮುಕ್ತಾಯಕ್ಕನ ವಚನ ವರ್ಣಿಸುತ್ತಿದೆ. ಹೂವಿನೊಳಗಿನ ಪರಿಮಳವೆಂಬ ಒಂದು ಹೋಲಿಕಯಷ್ಟೇ ಸೌಮ್ಯವಾದದ್ದು. ಪತಂಗದೊಳಗೇ ಅಡಗಿ ಇರುವ ಸುಟ್ಟುಕೊಳ್ಳುವ ಆಸೆಯ ಬೆಂಕಿ, ಚಂದ್ರನೊಳಗೆ ಇರುವ, ಅಮಾವಾಸ್ಯೆಯಿಂದ ಹುಣ್ಣಿಮೆಯವರೆಗೆ ಹೆಚ್ಚುತ್ತ ಹೋಗುವ, ಮತ್ತೆ ತಗ್ಗುತ್ತ ಹೋಗುವ ಬೆಳಕಿನ ʻಕಲೆʼ ಇವು ಯೋಗಕ್ಕೆ ಇರುವ ಸುಡುವ, ಹೆಚ್ಚುವ, ತಗ್ಗುವ ಲಕ್ಷಣಗಳನ್ನು ಹೇಳುತ್ತಿವೆ. ಕೊನೆಯ ಎರಡಂತೂ ಅಪೂರ್ವವಾಗಿವೆ. ಸದ್ದು ಅಡಗಿರುವ ಗಾಳಿಯ ಹಾಗೆ, ಸಿಡಿಲಿನೊಳಗೆ ಇರುವ ತೀಕ್ಷ್ಣ ಬೆಳಕಿನ ಪ್ರಭೆಯ ಹಾಗೆ ಯೋಗ. ಅಂದರೆ ಒಂದಾಗುವ ಯೋಗದ ತೀವ್ರತೆ, ಸ್ಫೋಟ, ಉರಿ, ತಂಪು, ಹಿಗ್ಗು, ಕುಗ್ಗು ಎಲ್ಲವೂ ಯೋಗಿಗೆ ಮಾತ್ರ ಅರಿವಾಗುವ, ಬೇರೆಯವರಿಗೆ ತಿಳಿಸಲಾಗದ ಸಂಗತಿ. ನನ್ನ ಅಣ್ಣ ಅಜಗಣ್ನ ಹೀಗಿದ್ದ ಅನ್ನುವುದು ಮುಕ್ತಾಯಕ್ಕನ ವಿವರಣೆ.


ಮುಕ್ತಾಯಕ್ಕ

ಲಕ್ಕುಂಡಿ ಎಂಬ ಊರಿನ ವಚನಕಾರ್ತಿ. ಅಜಗಣ್ಣನ ತಂಗಿ. ಮುಕ್ತಾಯಕ್ಕ ರಚಿಸಿರುವ ೩೭ ವಚನಗಳು ದೊರೆತಿವೆ. ಶೂನ್ಯ ಸಂಪಾದನೆಗಳಲ್ಲಿ ಅಲ್ಲಮ ಮತ್ತು ಮುಕ್ತಾಯಕ್ಕನ ಸಂವಾದ ಆರಂಭದಲ್ಲೇ ಬರುತ್ತದೆ ಈಕೆ ತನ್ನಣ್ಣ ಅಜಗಣ್ಣನನ್ನೇ ಗುರುವೆಂದು ನಂಬಿ ಸಾಧನೆ ಮಾಡಿದ ಹೆಣ್ಣುಮಗಳು. ಅನುಭಾವವು ಮಾತಿನಲ್ಲಿ ಹೇಳುವಂಥದಲ್ಲ, ಅದು ಶುದ್ಧಾಂಗವಾಗಿ ವೈಯಕ್ತಿಕ ಎಂಬುದು ಆಕೆಯ ನಿಲುವು. ಅಲ್ಲಮನಷ್ಟೇ ಪ್ರಖರವಾಗಿ ವಿಷಯ ಮಂಡನೆ ಮಾಡಿರುವುದನ್ನು ಈಕೆಯ ವಚನಗಳಲ್ಲಿ ಕಾಣುತ್ತೇವೆ. ಅನುಭಾವವೂ ಜ್ಞಾನದ ಮಾರ್ಗ ಎಂದು ಅಲ್ಲಮ ಈಕೆಯ ಮನ ಒಲಿಸುತ್ತಾನೆ. ಈ ಮನವೊಲಿಸುವಿಕೆ ಇರದಿದ್ದರೆ ಶೂನ್ಯಸಂಪಾದನೆಗೆ ತಳಹದಿಯೇ ಇರುತ್ತಿರಲಿಲ್ಲ. ಅನುಭಾವವನ್ನು ಕುರಿತು ಮಾತಾಡುವ ಅಗತ್ಯವನ್ನು ಅಲ್ಲಮನ ವಚನಗಳಲ್ಲಿ ಕಂಡರೆ ಮಾತಿಗೆ ಒಗ್ಗದ ತೀವ್ರಾನುಭವ ಮುಕ್ತಾಯಕ್ಕನವರ ರಚನೆಗಳಲ್ಲಿದೆ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.