ನೀವು person ನಿಂದ presence ಗೆ ಬದಲಾದಾಗ ಮಾತ್ರ ನಿಮಗೆ ಪ್ರೇಮ ಗೊತ್ತಾಗುತ್ತದೆ. ಪ್ರೇಮ, presence ನ ನೆರಳು ಇದ್ದ ಹಾಗೆ… | ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಪ್ರೇಮಿಯ ಖಾಸಗೀತನ
ತನ್ನ ಸುತ್ತ ಚಾಚಿಕೊಂಡಿರುವುದು
ಗೊತ್ತಾಯಿತೆಂದರೆ
ಪ್ರೇಮದಲ್ಲಿ ಮುಳುಗಿದವರಿಗೆ
ನಿದ್ದೆ ಸಾಧ್ಯವಾಗುವುದೇ ಇಲ್ಲ.
ಕೊಂಚ ಬಾಯಾರಿದ ಪ್ರೇಮಿ
ಸ್ವಲ್ಪ ಹೊತ್ತು ಮಲಗಬಹುದೇನೋ,
ಆದರೆ ಅವರಿಗೆ ನಿದ್ದೆಯಲ್ಲೂ
ನೀರಿನ ಕನಸು,
ತುಂಬಿ ಹರಿಯುವ ಹಳ್ಳದ ಪಕ್ಕ
ತಂಬಿಗೆ ತುಂಬ ನೀರು
ಅಥವಾ
ಆ ಇನ್ನೊಬ್ಬರ ಎದೆಯಿಂದ
ಚಿಮ್ಮುತ್ತಿರುವ ಆರ್ದ್ರ ಅಂತಃಕರಣ.
ಇಡೀ ರಾತ್ರಿ
ಈ ಅಪರೂಪದ ಸಂಭಾಷಣೆಗೆ ಕಿವಿಯಾಗಿರಿ,
ಇದೊಂದೇ ಕ್ಷಣ
ನಿಮಗೆ ದಕ್ಕಬಹುದಾದದ್ದು, ದಕ್ಕಬೇಕಾದದ್ದು.
~ ರೂಮಿ
ಹಮೀದೋ ಎನ್ನುವುದು ಭಗವಂತನ ಸೂಫೀ ಹೆಸರು. ಸೂಫೀಸಂ ನಲ್ಲಿ ಈ ಪದದ ಅರ್ಥ ಪ್ರಶಂಸೆಗೆ ಅರ್ಹನಾದವನು. ಸೂಫಿಗಳು ನಿರಂತರವಾಗಿ ದೇವರನ್ನು ಪ್ರಶಂಸಿಸುತ್ತಾರೆ. ಅವರು ಇದನ್ನ ಜಿಕ್ರ್ – ನೆನಪಿಸಿಕೊಳ್ಳುವುದು ಎನ್ನುತ್ತಾರೆ. ಅವರು ತಮ್ಮ ಒಳಗೆ ನಿರಂತರವಾಗಿ ದೇವರಿಗೆ ತಲೆಬಾಗುತ್ತಿರುತ್ತಾರೆ. ಇದು ನಿಮ್ಮನ್ನು ನಿಮ್ಮಿಂದ ಹೊರಹಾಕುವಿಕೆಯ ವಿಧಾನ. ಇದು ಅಹಂ ನ ನಾಶ ಮಾಡುವ, ನಿಮ್ಮೊಳಗಿನ ವ್ಯಕ್ತಿಯನ್ನು ಮಾಯವಾಗಿಸುವ ವಿಧಾನ. ಯಾವಾಗ ನಿಮ್ಮೊಳಗಿನ person (ವ್ಯಕ್ತಿ) ಸಂಪೂರ್ಣವಾಗಿ ಹೊರಹಾಕಲ್ಪಡುತ್ತಾನೋ ಆಗ ನೀವು presence ಆಗುತ್ತೀರಿ. ಮತ್ತು ಈ presence ನ್ನೇ ಸೂಫಿಗಳು ಪ್ರೇಮ ಎನ್ನುತ್ತಾರೆ.
ನೀವು person ನಿಂದ presence ಗೆ ಬದಲಾದಾಗ ಮಾತ್ರ ನಿಮಗೆ ಪ್ರೇಮ ಗೊತ್ತಾಗುತ್ತದೆ. ಪ್ರೇಮ, presence ನ ನೆರಳು ಇದ್ದ ಹಾಗೆ. ನೀವು ಕೇವಲ person ಆಗಿಯೇ ಉಳಿದಿರುವಾಗ ಪ್ರೇಮದ ಹೆಸರಿನಲ್ಲಿ ಸಾವಿರಾರು ಸಂಗತಿಗಳು ನಿಮ್ಮನ್ನು ಕಾಡುತ್ತಿರುತ್ತವೆ. ಪೊಸೆಸ್ಸಿವ್ ನೆಸ್, ಅಸೂಯೆ, ಪ್ರಾಬಲ್ಯ, ರಾಜಕೀಯ, ಅಧಿಕಾರ……. ಹಲವಾರು. ನೀವು person ಆಗಿಯೇ ಉಳಿದಿರುವಾಗ, ಹಾಗೆಂದರೆ ನಿಮ್ಮೊಳಗೆ ಇನ್ನೂ “ನಾನು” ಎನ್ನುವ ಅಹಂ ಉಳಿದಿರುವಾಗ, ನಿಮ್ಮ ಮೈಂಡ್ ಪ್ರೇಮಕ್ಕೆ ಈ ಸಾವಿರಾರು ಅರ್ಥಗಳನ್ನು ಸೂಚಿಸುತ್ತ ನಿಮ್ಮನ್ನು ಆಟ ಆಡಿಸುತ್ತಿರುತ್ತದೆ. ಹೀಗೆ ನೀವು ಅಸ್ತಿತ್ವದೊಂದಿಗೆ ಬೇರೆಯಾಗಿ ಬದುಕುತ್ತಿರುವಾಗ ನಿರಂತರವಾಗಿ ಗೊಂದಲದಲ್ಲಿರುತ್ತೀರಿ. ನಿಮ್ಮ ಬದುಕಿನ ಶೈಲಿಯೇ ಗೊಂದಲಮಯವಾಗಿರುತ್ತದೆ. ಇಂಥ ಜನ ಪ್ರೇಮಿಸಿದಾಗ, ಪ್ರೇಮ ಅವರಿಗಾಗಿ ದುಃಖವನ್ನು ಹೊತ್ತು ತರುತ್ತದೆ, ಪ್ರೇಮದ ಭರವಸೆಗಳು ಪೂರ್ಣಗೊಳ್ಳುವುದೇ ಇಲ್ಲ.
ಇನ್ನೊಂದು ಬಗೆಯ ಪ್ರೇಮ ವಿದೆ – ಇದು ನೈಜ ಪ್ರೇಮ – ಎಲ್ಲಿಯವರೆಗೆ ನೀವು person ಆಗಿರುತ್ತೀರೋ ಅಲ್ಲಿಯವರೆಗೆ ಈ ಪ್ರೇಮ ಸಂಭವಿಸುವುದಿಲ್ಲ. ನೀವು presence ಆಗಿ ಬದಲಾವಣೆ ಹೊಂದಿದ ಗಳಿಗೆಯಲ್ಲಿಯೇ ಈ ಪ್ರೇಮ ನಿಮಗೆ ದಕ್ಕುತ್ತದೆ. ಪ್ರೇಮದ ದಾರಿಯ ಪ್ರಯಾಣ ಮತ್ತು ನಿಮ್ಮೊಳಗೆ ಪ್ರೇಮದ ಸಾಮರ್ಥ್ಯವನ್ನು ಸೃಷ್ಟಿಸುವ ವಿಧಾನವೆಂದರೆ ಅಹಂ ನ ನಿರಾಕರಿಸುವುದು. ಮತ್ತು ಅಹಂ ನ ನಿರಾಕರಿಸಲು ಸೂಫೀಗಳು ಬಳಸುವ ವಿಧಾನವೆಂದರೆ ಭಗವಂತನನ್ನು ನಿರಂತರವಾಗಿ ಹಲವಾರು ಬಗೆಗಳಲ್ಲಿ ಸ್ತುತಿಸುವುದು. ಅವರು ಭಗವಂತನನ್ನು ಸ್ತುತಿಸುವ ಯಾವ ಅವಕಾಶವನ್ನೂ ತಪ್ಪಿಸಿಕೊಳ್ಳುವುದಿಲ್ಲ. ಉದಾಹರಣೆಗೆ ಸೂಫೀ ಗುಲಾಬಿ ಹೂವನ್ನು ಕಂಡಾಗ ತಕ್ಷಣ ಉದ್ಗರಿಸುತ್ತಾನೆ ಅಲ್ಹಮ್ದುಲಿಲ್ಹಾ ( ಭಗವಂತನಿಗೆ ಧನ್ಯವಾದಗಳು – God be praised). ಏಕೆಂದರೆ ಭಗವಂತ ಈ ಕ್ಷಣದಲ್ಲಿ ನನಗೆ ಸುಂದರ ಗುಲಾಬಿಯ ದರ್ಶನದ ಭಾಗ್ಯವನ್ನು ಕರುಣಿಸಿದ್ದಾನೆಂದು. ಸೂಫೀ ಗೆ ಆಕಾಶದಲ್ಲಿ ನಕ್ಷತ್ರ ಕಂಡರೆ ತಕ್ಷಣ ಅವನು ಅಲ್ಹಮ್ದುಲಿಲ್ಹಾ ಎನ್ನುತ್ತ ಭಾವಪರವಶನಾಗುತ್ತಾನೆ.
ಮನುಷ್ಯನನ್ನ ಅತ್ಯುಚ್ಚ ಮನುಷ್ಯನನ್ನಾಗಿ ಮಾಡುವ ಏಕೈಕ ರಸವಿದ್ಯೆ, ಪ್ರೇಮ. ಮತ್ತು ನಮ್ಮ ಕೆಲಸ ಇಂಥದೊಂದು ಸಂದರ್ಭವನ್ನು ಸೃಷ್ಟಿಸಿ ಪ್ರೇಮ ಹರಿಯಲು ಅವಕಾಶ ಮಾಡಿಕೊಡುವುದೇ ಆಗಿದೆ. ಪ್ರತಿಯೊಬ್ಬರಲ್ಲೂ ಪ್ರೇಮ ಇರುತ್ತದೆ ಆದರೆ ಬಹುತೇಕರಲ್ಲಿ ಅದು ಮರಗಟ್ಟಿದ ಸ್ಥಿತಿಯಲ್ಲಿರುತ್ತದೆ. ಅದಕ್ಕೆ ನಿಮ್ಮ ಬೆಚ್ಚಗಿನ ಸ್ಪರ್ಶ ಸಾಕು, ಪ್ರೇಮ ಕರಗಿ ಹರಿಯಲು ಶುರು ಮಾಡುತ್ತದೆ. ಹೀಗೆ ನಿಮ್ಮನ್ನು ಬೆಚ್ಚಗೆ ಸ್ಪರ್ಶಿಸುತ್ತ ನಿಮ್ಮೊಳಗೆ frozen ಸ್ಥಿತಿಯಲ್ಲಿರುವ ಪ್ರೇಮವನ್ನು ಕರಗಿಸಿ ಅದು ಪ್ರವಹಿಸುವಂತೆ ಮಾಡುವುದೇ ಮಾಸ್ಟರ್ ನ ಕೆಲಸ.
ಭಗವಂತನ ಸಾಧ್ಯತೆ ಪ್ರತಿಯೊಬ್ಬರಿಗೂ ಉಂಟು, ಇದು ವಾಸ್ತವವೂ ಆಗಬೇಕು. ಈ ಸಾಧ್ಯತೆ ವಾಸ್ತವವಾಗಿ ಬದಲಾಗುವ ತನಕ ಮನುಷ್ಯ ದುಗುಡದಲ್ಲಿಯೇ ಮುಳುಗಿರುತ್ತಾನೆ. ಮತ್ತು ಈ ಸಾಧ್ಯತೆ ವಾಸ್ತವವಾಗಿ ಬದಲಾದ ಕ್ಷಣದಲ್ಲಿಯೇ ಪರಮ ಆನಂದ ಅವನನ್ನು ತುಂಬಿಕೊಳ್ಳುತ್ತದೆ. ಒಮ್ಮೆ ಇದು ಸಾಧ್ಯವಾದರೆ, ಮುಂದೆ ಇದು ಸಾಧ್ಯವಾಗುತ್ತಲೇ ಹೋಗುತ್ತದೆ, ಆಗ ಈ ಹರಿವಿಗೆ ಯಾವ ಕೊನೆಯೂ ಇಲ್ಲ. ಹೌದು ಪ್ರೇಮಕ್ಕೆ ಶುರುವಾತು ಇದೆ ಆದರೆ ಕೊನೆ ಎನ್ನುವುದು ಇಲ್ಲವೇ ಇಲ್ಲ.
- Osho, “God’s Got a Thing About you, #29”

