ವಚನ ವೈವಿಧ್ಯ#35 : ನಡೆದದ್ದನ್ನು ನುಡಿದು ಹೇಳಿದರೆ ಅದು ಹುಸಿ-ಮುಕ್ತಾಯಕ್ಕ

ಅರಿವು ವೈಯಕ್ತಿಕ, ಅನುಭವ ವೈಯಕ್ತಿಕ, ಅದನ್ನು ತಮ್ಮಷ್ಟಕೆ ಅನುಭವಿಸಬಹುದೇ ಹೊರತು ಮಾತಿನಲ್ಲಿ ಇನ್ನೊಬ್ಬರಿಗೆ ತಿಳಿಸಲಾಗದು. ಮಾತು ಅನ್ನುವುದು ಅನುಭವಕ್ಕೆ ಅಡ್ಡಿಯಾಗುತ್ತದೆ ಅಥವಾ ಅಂದುಕೊಂಡದ್ದಕ್ಕಿಂತ ಬೇರೆಯ ಅರ್ಥ ಕೊಡುತ್ತದೆ । ಓ.ಎಲ್.ನಾಗಭೂಷಣ ಸ್ವಾಮಿ

ನಡೆದು ನಡೆದು ನಡೆಯ ಕಂಡವರು
ನುಡಿದು ನುಡಿದು ಹೇಳುತ್ತಿಹರೆ
ನುಡಿದು ನುಡಿದು ಹೇಳುವನ್ನಕ್ಕರ
ನಡೆದುದೆಲ್ಲಾ ಹುಸಿಯೆಂಬೆನು

ಮಾತಿನ ಮಥನದಿಂದಾದ ಅರಿವು
ಕರಣಮಥನದಿಂದಾದುದಲ್ಲದೆ
ಅನುಪಮ ಸ್ವರಭೇದವಾದ ಪರಿ ಎಂತು ಹೇಳಾ

ಇದಿರ ಗೆಲಬೇಕೆಂದು ನುಡಿದುಕೊಂಡಡೇನು
ಮನಕ್ಕೆ ಮನವೆ ಸಾಕ್ಷಿಯಾಗಿ ನಿಃಪತಿಯಲ್ಲ ನೋಡಾ

ಎನ್ನ ಅಜಗಣ್ಣತಂದೆ ಶಬುದಕ್ಕೆ ಹೇಸಿ ಮುಗುದನಾದನು [೫.೧೧೨೦]

[ಹೇಳುತ್ತಿಹರೆ-ಹೇಳುತ್ತಿದ್ದರೆ; ಹೇಳುವನ್ನಕ್ಕರ-ಹೇಳುತ್ತಿರುವವರೆಗೆ; ಕರಣ-ಮನಸ್ಸು, ಮಾತು, ದೇಹಗಳ ಕೂಟ; ಅನುಪಮ-ಹೋಲಿಸಲು ಸಾಧ್ಯವಿರದ;ನಿಃಪತಿ-ನಿರ್‌ (ಇಲ್ಲದ) ಪತಿ (ಯಜಮಾನ) ಯಾರ ಒಡೆತನಕ್ಕೂ ಒಳಪಡದ, ಪರಿಪೂರ್ಣ, ಪರಮ]

ಯಾರು ನಡೆದು ನಡೆದು ಕಂಡಿರುತ್ತಾರೋ ಅವರು ತಮ್ಮ ನಡೆಯನ್ನು ನುಡಿದು ಹೇಳುತ್ತಾರೆಯೇ? ಹಾಗೆ ಹೇಳಿದರೆ ನಡೆದದ್ದೇ ಹುಸಿ. ಮಾತು ಮಾತು ಮಥಿಸಿ ಹುಟ್ಟಿತು ಅಂದುಕೊಂಡ ಅರಿವು ಮನಸ್ಸು, ಮಾತು, ದೇಹಗಳೆಂಬ ಕರಣಗಳ ಮಥನದಿಂದ ಹುಟ್ಟಿದ ಸದ್ದು ಮಾತ್ರವೇ ಹೊರತು ಬೇರೆ ಯಾವುದಕ್ಕೂ ಹೋಲಿಸಲಾಗದ ಸ್ವರವಲ್ಲ, ಪರಶಿವನ ಸ್ಫುರಣೆಯಂತ ನಾದವಲ್ಲ. ಎದುರಿಗೆ ಇರುವವರನ್ನು ಮಾತಿನಲ್ಲಿ ಗೆಲ್ಲಬೇಕೆಂದು ಹೇಳಿಕೊಂಡರೆ ಏನು ಫಲ. ಮನಕ್ಕೆ ಮನವೇ ಸಾಕ್ಷಿ. ಹೀಗೆ ನುಡಿಯುವುದು ನಿಃಪತಿ-ಯಾರ ಒಡೆತನಕ್ಕೂ ಸಲ್ಲುವವನಲ್ಲದ ಪರಮ ಆತ್ಮನಲ್ಲ. ನನ್ನ ಅಜಗಣ್ಣ ತಂದೆ ಶಬ್ದಕ್ಕೆ ನಾಚಿ ಶಬ್ದಮುಗ್ಧನಾದ.

ಅರಿವು ವೈಯಕ್ತಿಕ, ಅನುಭವ ವೈಯಕ್ತಿಕ, ಅದನ್ನು ತಮ್ಮಷ್ಟಕೆ ಅನುಭವಿಸಬಹುದೇ ಹೊರತು ಮಾತಿನಲ್ಲಿ ಇನ್ನೊಬ್ಬರಿಗೆ ತಿಳಿಸಲಾಗದು. ಮಾತು ಅನ್ನುವುದು ಅನುಭವಕ್ಕೆ ಅಡ್ಡಿಯಾಗುತ್ತದೆ ಅಥವಾ ಅಂದುಕೊಂಡದ್ದಕ್ಕಿಂತ ಬೇರೆಯ ಅರ್ಥ ಕೊಡುತ್ತದೆ. ಹಾಗಿರುವಾಗ ನಡೆದು ಅನುಭವ ಪಡೆಯಬೇಕೇ ಹೊರತು ನಡೆದು ಅನುಭವಿಸಿದ್ದನ್ನು ಹೇಳಿ ಪೂರೈಸುವುದು ಅಸಾಧ್ಯ. ಮಾತು ಅನ್ನುವುದು ನಮ್ಮ ನುಡಿ, ಶರೀರ, ಮನಸುಗಳು ಮಥಿಸಿ ಹುಟ್ಟಿದ್ದೇ ಹೊರತು ಅದು ಯಾವ ಒಡೆತನಕ್ಕೂ ಒಳಪಡದ ಪರಿಪೂರ್ಣ ಅನುಭವವೇ ಅಲ್ಲ. ಅದಕ್ಕೇ ನನ್ನಣ್ಣ ಅಜಗಣ್ಣ ಶಬ್ದಮುಗ್ಧನಾದ, ಮೌನಿಯಾದ.

ಶೂನ್ಯಸಂಪಾದನೆಯಲ್ಲಿ ಈ ಮಾತು ಅಲ್ಲಮನೊಡನೆ ನಡೆದ ಸಂವಾದ ಎಂಬ ಅರ್ಥದಲ್ಲಿ ಬಳಕೆಯಾಗಿದೆ. ಅನುಭಾವ, ದೈವಿಕ ಅನುಭವ ಇವನ್ನೆಲ್ಲ ಮಾತಿನಲ್ಲಿ ತಿಳಿಸಲು ಸಾಧ್ಯ, ಅನುಭವ ಪಡೆದವರು ಮಾತಿನ ಮೂಲಕ ಹಂಚಿಕೊಳ್ಳುವುದು ಸಾಧ್ಯ ಎಂಬ ನಂಬಿಕೆಯಲ್ಲಿ ಶೂನ್ಯಸಂಪಾದನೆ ರೂಪುಗೊಂಡಿದೆ. ಅಲ್ಲಮ ಆ ನಿಲುವಿನ ಪ್ರತಿನಿಧಿ. ಅನುಭವ ನುಡಿಯ ಆಚಿನದು ಅನ್ನುವ ನಿಲುವು ಮುಕ್ತಾಯಕ್ಕಳದು.


ಮುಕ್ತಾಯಕ್ಕ

ಲಕ್ಕುಂಡಿ ಎಂಬ ಊರಿನ ವಚನಕಾರ್ತಿ. ಅಜಗಣ್ಣನ ತಂಗಿ. ಮುಕ್ತಾಯಕ್ಕ ರಚಿಸಿರುವ ೩೭ ವಚನಗಳು ದೊರೆತಿವೆ. ಶೂನ್ಯ ಸಂಪಾದನೆಗಳಲ್ಲಿ ಅಲ್ಲಮ ಮತ್ತು ಮುಕ್ತಾಯಕ್ಕನ ಸಂವಾದ ಆರಂಭದಲ್ಲೇ ಬರುತ್ತದೆ ಈಕೆ ತನ್ನಣ್ಣ ಅಜಗಣ್ಣನನ್ನೇ ಗುರುವೆಂದು ನಂಬಿ ಸಾಧನೆ ಮಾಡಿದ ಹೆಣ್ಣುಮಗಳು. ಅನುಭಾವವು ಮಾತಿನಲ್ಲಿ ಹೇಳುವಂಥದಲ್ಲ, ಅದು ಶುದ್ಧಾಂಗವಾಗಿ ವೈಯಕ್ತಿಕ ಎಂಬುದು ಆಕೆಯ ನಿಲುವು. ಅಲ್ಲಮನಷ್ಟೇ ಪ್ರಖರವಾಗಿ ವಿಷಯ ಮಂಡನೆ ಮಾಡಿರುವುದನ್ನು ಈಕೆಯ ವಚನಗಳಲ್ಲಿ ಕಾಣುತ್ತೇವೆ. ಅನುಭಾವವೂ ಜ್ಞಾನದ ಮಾರ್ಗ ಎಂದು ಅಲ್ಲಮ ಈಕೆಯ ಮನ ಒಲಿಸುತ್ತಾನೆ. ಈ ಮನವೊಲಿಸುವಿಕೆ ಇರದಿದ್ದರೆ ಶೂನ್ಯಸಂಪಾದನೆಗೆ ತಳಹದಿಯೇ ಇರುತ್ತಿರಲಿಲ್ಲ. ಅನುಭಾವವನ್ನು ಕುರಿತು ಮಾತಾಡುವ ಅಗತ್ಯವನ್ನು ಅಲ್ಲಮನ ವಚನಗಳಲ್ಲಿ ಕಂಡರೆ ಮಾತಿಗೆ ಒಗ್ಗದ ತೀವ್ರಾನುಭವ ಮುಕ್ತಾಯಕ್ಕನವರ ರಚನೆಗಳಲ್ಲಿದೆ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.